Advertisement

ಪರಿಸರ ನಿಯಮಗಳನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ: ಯೋಗೇಶ್ವರ್

03:32 PM Jul 01, 2021 | Team Udayavani |

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆಯಲ್ಲಿರುವ ವಿವಿಧ ರೀತಿಯ ಕೈಗಾರಿಕೆಗಳು ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೇ ನದಿ-ಕೆರೆ ಸೇರಿದಂತೆ ಜಲ ಮೂಲಗಳಿಗೆ ನೇರವಾಗಿ ಹಾಕುತ್ತಿರುವುದು ಹಾಗೂ ಖಾಲಿ ಜಮೀನುಗಳಿಗೆ ತುಂಬುತ್ತಿರುವುದರ ಬಗ್ಗೆ ಅನೇಕ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ಮುಂದಿನ ವಾರದಿಂದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡುವುದಾಗಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

Advertisement

ಯಾವುದೇ ರೀತಿಯ ಕೈಗಾರಿಕೆಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯದ್ಯಂತ ಪ್ರವಾಸ ಮಾಡಿ ವಿವಿಧ ರೀತಿಯ ಕೈಗಾರಿಕೆಗಳನ್ನು ತಾವೇ ಖುದ್ದಾಗಿ ಪರಿಶೀಲಿಸುವುದಾಗಿ ಹೇಳಿದರು. ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯಲ್ಲಿ ಮರಳು, ಕಲ್ಲು, ಗ್ರ್ಯಾನೇಟ್‍ ಅನ್ನು ಸಾಗಿಸಲು ಪರ್ಮಿಟ್‍ ನೀಡುತ್ತಿದ್ದು, ಅದೇ ರೀತಿಯಲ್ಲಿ ಪರಿಸರ ಇಲಾಖೆಯಲ್ಲೂ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಿಖರವಾದ ತೂಕ ಮಾಡಿ ಪರ್ಮಿಟ್‍ ನೀಡುವ ವ್ಯವಸ್ಥೆ ಜಾರಿಗೆ ತರುವುದಾಗಿ ಸಚಿವರು ತಿಳಿಸಿದರು.

ಪರಿಸರ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆ ಯಾವುದೇ ಮುಲಾಜಿಲ್ಲದೇ ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ತಾವು ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕೆ.ಸಿ.ವ್ಯಾಲಿ ಯೋಜನೆಯಡಿ ಕೋಲಾರ ಜಿಲ್ಲೆಯ 129 ಕೆರೆಗಳನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, 84 ಕೆರೆಗಳನ್ನು ತುಂಬಿಸಲಾಗಿದೆ. ಆದರೆ ಮೊದಲ ಹಾಗೂ ಎರಡನೇ ಹಂತದಲ್ಲಿ ತ್ಯಾಜ್ಯ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೇ ಕೆರೆಗಳನ್ನು ತುಂಬಿಸಿರುವುದರಿಂದ ಆ ಭಾಗದ ಅಂತರ್ಜಲ ವಿಷವಾಗಿ ಮಾರ್ಪಾಡಾಗಿದೆ. ಹೀಗಾಗಿ ಇನ್ನುಮುಂದೆ ವೈಜ್ಞಾನಿಕವಾಗಿ ಮೂರನೇ ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಿದ ನಂತರವೇ ಕೆರೆಗಳಿಗೆ ನೀರು ತುಂಬಿಸಬೇಕು. ತಪ್ಪಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.

Advertisement

ನದಿಗಳ ಪುನಶ್ಚೇತನಕ್ಕೆ ಕ್ರಮ: ನಗರ-ಪಟ್ಟಣ ಹಾಗೂ ಹಳ್ಳಿಗಳ ಜನವಸತಿ ಪ್ರದೇಶದಿಂದ ಹಾಗೂ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೇ ನದಿಗಳಿಗೆ ನೀರು ಬಿಡಲಾಗಿದ್ದು, ಎಲ್ಲಾ ನದಿಗಳು ಕಲುಷಿತಗೊಂಡು ನೀರು ಬಳಸಲು ಯೋಗ್ಯವಲ್ಲದ ಪರಿಸ್ಥಿತಿಯಲ್ಲಿದೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಯೊಂದಿಗೆ ಸಭೆ ನಡೆಸಿ ಜನವಸತಿ ಪ್ರದೇಶ ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಣೆ ಮಾಡಿದ ನಂತರ ಉದ್ಯಾನವನ ಹಾಗೂ ಇತರೆ ಸೌಲಭ್ಯಗಳಿಗೆ ನೀರನ್ನು ಬಳಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದು ಸಚಿವ ಯೋಗೇಶ್ವರ್ ಹೇಳಿದರು.

ಇದನ್ನೂ ಓದಿ:ಚಿಕ್ಕೋಡಿ ಪೊಲೀಸರ ಕಾರ್ಯಾಚರಣೆ 3.60 ಕೋಟಿ ರೂ ಮೌಲ್ಯದ 12 ಲಾರಿ ವಶ

ಮೈಸೂರಿನ ಲಕ್ಷ್ಮಣತೀರ್ಥ ನದಿ ಮೀತಿ-ಮೀರಿ ಕಲುಷಿತಗೊಂಡಿದ್ದು, ಬಳಕೆಗೆ ಯೋಗ್ಯವಿಲ್ಲದಂತೆ ಆಗಿದೆ. ಇದೇ ರೀತಿಯಲ್ಲಿ ರಾಜ್ಯದ ಎಲ್ಲಾ ನದಿಗಳು ಸಹ ಕಲುಷಿತಗೊಂಡಿವೆ ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿನದಲ್ಲಿರುವ 9 ಲ್ಯಾಬೋರೇಟರಿಗಳನ್ನು ಮೇಲ್ದರ್ಜೆಗೆರಿಸಲು ನಿರ್ಧಾರ ಕೈಗೊಳ್ಳಲಾಯಿತು. ಬೆಂಗಳೂರು-ಮೈಸೂರು-ಹಾಸನ-ಮಂಗಳೂರು-ಬೆಳಗಾವಿ-ಧಾರವಾಡ-ಕಲಬುರಗಿ-ರಾಯಚೂರು ಹಾಗೂ ದಾವಣಗೆರೆಯಲ್ಲಿ ಎಲ್ಲಾ ಲ್ಯಾಬೋರೇಟರಿಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನ ಕೈಗೊಳ್ಳಲಾಯಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ 174 ಹುದ್ದೆಗಳನ್ನು ಮೊದಲ ಹಂತದಲ್ಲಿ ಭರ್ತಿ ಮಾಡಲು ನಿರ್ಧರಿಸಲಾಯಿತು. ಉಳಿದ 150ಕ್ಕೂ ಹೆಚ್ಚಿನ ಹುದ್ದೆಗಳನ್ನು ಎರಡನೇ ಹಂತದಲ್ಲಿ ಭರ್ತಿ ಮಾಡುವುದಾಗಿ ತಿಳಿಸಿದರು.

ಕೈಗಾರಿಕೆಗಳ ಸಮ್ಮತಿ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದ್ದು, ಶುಲ್ಕ ಪಾವತಿಗೆ ಮೂರು ತಿಂಗಳ ಸಮಯವನ್ನು ವಿಸ್ತರಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next