Advertisement

ಡ್ರಗ್ಸ್‌  ವಿರುದ್ಧ ಕಠಿನ ಕ್ರಮ

01:28 PM Aug 06, 2018 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಬೇಕು ಹಾಗೂ ಮಾದಕದ್ರವ್ಯ ಸಾಗಾಟ ಮತ್ತು ಮಾರಾಟ ಚಟುವಟಿಕೆಗಳ ಬಗ್ಗೆ ಕಠಿನ ಕ್ರಮ ಜರಗಿಸಬೇಕು. ಈ ವಿಷಯದಲ್ಲಿ ಪೊಲೀಸ್‌ ಇಲಾಖೆ ಕೈಗೊಳ್ಳುವ ಕ್ರಮಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಅವರು ರವಿವಾರ ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಪೊಲೀಸ್‌ ಕಮಿಷನರೆಟ್‌ ಮತ್ತು ದ.ಕ. ಜಿಲ್ಲಾ ಪೊಲೀಸ್‌ ಇಲಾಖೆಯ ಅಧಿಕಾರಿಗಳ ಜತೆ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕುರಿತು ಸಭೆ ನಡೆಸಿದರು.
ಮಂಗಳೂರು ನಗರ ಸಹಿತ ದ.ಕ. ಜಿಲ್ಲೆಯಲ್ಲಿ ಯಾವುದೇ ಕೋಮು ಪ್ರಚೋದಿತ ಘಟನೆಗಳಿಗೆ ಅವಕಾಶ ನೀಡಬಾರದು. ಅಂತಹ ಘಟನೆಗಳು ನಡೆಯುವ ಲಕ್ಷಣಗಳು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪ್ರವಾಸ, ಶಿಕ್ಷಣ ಹಾಗೂ ಬಂಡವಾಳ ಹೂಡಿಕೆಗೆ ಬರುವವರಿಗೆ ದಕ್ಷಿಣ ಕನ್ನಡ ಸುರಕ್ಷಿತ ಅಲ್ಲ ಎಂಬ ಭಾವನೆ ಬರಬಾರದು. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸದಾ ಜಾಗೃತ ಸ್ಥಿತಿಯಲ್ಲಿರಬೇಕು ಎಂದು ಸಲಹೆ ನೀಡಿದರು.
ಮಾದಕದ್ರವ್ಯ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರ ಮೂಲ ಪತ್ತೆಯಾದರೆ ಮಾತ್ರ ಮೂಲೋತ್ಪಾಟನೆ ಸಾಧ್ಯ. ಗಾಂಜಾ ಹಾವಳಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಖಾದರ್‌ ಸೂಚಿಸಿದರು.

ಸಾಮಾಜಿಕ ಜಾಲ ತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಹಾಗೂ ಜನರ ತೇಜೋವಧೆ ಮಾಡುವ ಮೂಲಕ ಸಮಾಜದ ಶಾಂತಿ ಕೆಡಿಸುವಂತಹ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರು ಕಣ್ಗಾವಲು ಇರಿಸಬೇಕು; ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಡಿಶನಲ್‌ ಎಸ್ಪಿ ವಿ.ಜೆ. ಸಜಿತ್‌, ಮಂಗಳೂರಿನ ಡಿಸಿಪಿ ಉಮಾ ಪ್ರಶಾಂತ್‌, ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಖಾಲಿ ಹುದ್ದೆ  ಭರ್ತಿಗೆ ಕ್ರಮ
ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ಇರುವ ಖಾಲಿ ಹುದ್ದೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ತಲಾ ಒಂದು ಎಸಿಪಿ, ಡಿಸಿಪಿ -ಸಿಎಆರ್‌, 21 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆ ಭರ್ತಿಗೊಳ್ಳಬೇಕಿದೆ. ಕಂಕನಾಡಿ, ಎಸಿಪಿ ದಕ್ಷಿಣ, ಸಂಚಾರ ಉತ್ತರ ಮತ್ತು ದಕ್ಷಿಣ, ನಗರ ಸಶಸ್ತ್ರ ಮೀಸಲು ಪಡೆ ಠಾಣೆಗಳಿಗೆ ಸ್ವಂತ ಕಟ್ಟಡ ಆಗಬೇಕಾಗಿದೆ ಎಂದರು. ಈ ಕುರಿತು ಸರಕಾರದ ಗಮನ ಸೆಳೆಯುವುದಾಗಿ ಖಾದರ್‌ ಭರವಸೆ ನೀಡಿದರು. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಇರುವ ಖಾಲಿ ಹುದ್ದೆ ಭರ್ತಿ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next