Advertisement
“”ನಮ್ಮ ಜನರಿಗೆ ಇಲ್ಲಿನದೇ ಯಾವ ನೈಸರ್ಗಿಕ ಪೇಯ ಹೇಗೆ ಪರಿಚಯಿಸಲಿ” ಪ್ರಶ್ನೆ ಮನದಲ್ಲಿ ರಿಂಗಣಿಸಲು ಶುರು. ಆಗ ನೆನಪಾದುದು ಪುನರ್ಪುಳಿ (ಮುರುಗಲು, ಕೋಕಂ, ಗಾರ್ಸಿನಿಯಾ ಇಂಡಿಕಾ) ಹಣ್ಣು. 1977ರಲ್ಲಿ ದೇಶದಲ್ಲಿ ಕೋಲಾ ನಿಷೇಧವಾಯಿತು. ಡೇವಿಡರ ಆಸಕ್ತಿ ಗರಿಗೆದರಿತು. ತರಕಾರಿ ಖರೀದಿಗೆ ಬರುವ ಗ್ರಾಹಕರಿಗೆ ಪುನರ್ಪುಳಿ ಹಣ್ಣನ್ನು ಪರಿಚಯಸತೊಡಗಿದರು. “”ಇದರ ಜ್ಯೂಸ್ ಮಾಡಿ ನೋಡಿ. ಸ್ಕ್ವಾಷ್ ಮಾಡಿಟ್ಟೂ ಬಳಸಬಹುದು. ಆರೋಗ್ಯ ಭಾಗ್ಯವಾಗುತ್ತದೆ” ಅಂತ ಹೇಳತೊಡಗಿದರು.
Related Articles
Advertisement
ಹಿಂದೆ ಕುಡುಬಿಯವರು ನಗರದ ಹೋಟೆಲ್‌ಗಳಿಗೂ ಪುನರ್ಪುಳಿ ಒದಗಿಸುತ್ತಿದ್ದರಂತೆ. ಪ್ರತಿಷ್ಠಿತ ತಾಜ್‌ಮಹಲ್ ಹೋಟೆಲಿನಲ್ಲಿ ಗ್ರಾಹಕರ ಕಣ್ಣೆದುರೇ ಹಣ್ಣಿನ ತಾಜಾ ಜ್ಯೂಸ್ ಮಾಡಿಕೊಡುತ್ತಿದ್ದರು. ವಿಶೇಷ ವಿತ್ತವಲಯ ಬಂದ ಮೇಲೆ ಕಾಡುನಾಶವಾಗಿದೆ. ಬೇಕಾದಷ್ಟು ಹಣ್ಣು ಸಿಗುತ್ತಿಲ್ಲ. ನಗರಕ್ಕೆ ಬರುವ ಹಣ್ಣು ಕಡಿಮೆಯಾಗಿದೆ. ಡೇವಿಡ್ ಸೇರಿದಂತೆ ತರಕಾರಿ-ಹಣ್ಣಗಳ ಜತೆ ತಾಜಾ ಪುನರ್ಪುಳಿ ಮಾರುವವರು ಹಲವರಿದ್ದಾರೆ.
ಮೊದಲು ಉಳಿದ ಅಂಗಡಿಯವರಿಗೆ ಅಷ್ಟೊಂದು ಒಲವಿರಲಿಲ್ಲವಂತೆ. ಇವರು ಪುನರ್ಪುಳಿಗೆ ದನಿಯಾಗತೊಡಗಿದಾಗ ಗಿರಾಕಿಗಳು ಹೆಚ್ಚಾದರು. ಉಳಿದ ಮಾರಾಟಗಾರರಿಗೂ ಉತ್ತೇಜನ ಸಿಕ್ಕಿತು. ಸೀಸನ್ನಿನಲ್ಲಿ ಡೇವಿಡ್ ಸರಾಸರಿ ಐವತ್ತು ಕಿಲೋ ಪುನರ್ಪುಳಿಯ ತಾಜಾ ಹಣ್ಣನ್ನು ಮಾರುತ್ತಾರೆ. ಅಂದರೆ ವರುಷಕ್ಕೆ ನಾಲ್ಕು ಟನ್. ಉಳಿದವರೂ ಹೆಚ್ಚುಕಡಿಮೆ ಇದೇ ಮಟ್ಟದಲ್ಲಿದ್ದಾರೆ. ಸೆಂಟ್ರಲ್ ಮಾರ್ಕೆಟ್ಟಿನಲ್ಲೇ ವರುಷಕ್ಕೆ 30-35 ಟನ್ ತಾಜಾ ಹಣ್ಣಿನ ವ್ಯವಹಾರ ನಡೆಯಬಹುದು ಎಂದು ಅಂದಾಜು. “”ದಶಕದ ಹಿಂದೆ ಮಂಗಳೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ಜರುಗಿತ್ತು. ಒಂದೇ ದಿನ 3 ಕ್ವಿಂಟಾಲ್ ಹಣ್ಣು ಮಾರಿದ್ದೆ” ಎಂದು ನೆನಪಿಸುತ್ತಾರೆ. ಹಣ್ಣನ್ನು 3 ದಿವಸ ಬಿಸಿಲಲ್ಲಿ ಒಣಗಿಸಿದರೆ ಒಣ ಸಿಪ್ಪೆ ಸಿದ್ಧ. ಒಂದು ಕಿಲೋ ಒಣ ಸಿಪ್ಪೆ ಆಗಲು ಐದು ಕಿಲೋ ಹಣ್ಣು ಬೇಕು. ಒಣ ಸಿಪ್ಪೆಗೆ ಈಗ ಕಿಲೋಗೆ ನೂರೈವತ್ತು ರೂಪಾಯಿಯ ಆಜೂಬಾಜು.
ಮಂಗಳೂರಿನ ಬಹುತೇಕ ಜೀನಸು ಅಂಗಡಿಗಳಲ್ಲಿ ವರುಷಪೂರ್ತಿ ಒಣ ಸಿಪ್ಪೆ ಲಭ್ಯ. ಪ್ರತಿ ಅಂಗಡಿಗಳಲ್ಲೂ ಐದಾರು ಕ್ವಿಂಟಾಲ್ ಮಾರಾಟ ಖಚಿತ. ಡೇವಿಡ್ ಪುನರ್ಪುಳಿ ಹಣ್ಣಿನ ಮೌಲ್ಯವರ್ಧನೆ ಕುರಿತು ಅಧ್ಯಯನಕ್ಕಾಗಿ ಮೈಸೂರಿನ ಸಿಎಫ್ಟಿಆರ್‌ಐಗೆ ಹೋಗಿದ್ದರು. ಆ ವರುಷ ಹಣ್ಣೂ ಸರಿಯಾಗಿ ಮಾರುಕಟ್ಟೆಗೆ ಬಾರದೆ ಅವರ ಯೋಜನೆ ಬಿದ್ದು ಹೋಗಿತ್ತು.
ಹಣ್ಣು ಮಾರಾಟದ ಬದ್ಧತೆಯ ಹಿನ್ನೆಲೆಯಲ್ಲಿ ಕೆಲವು ಸೂಕ್ಷ್ಮಗಳನ್ನು ಕೃಷಿಕರಿಗೆೆ ಹೇಳುತ್ತಾರೆ. “”ಪೂರ್ತಿ ಹಣ್ಣಾಗುವ ತನಕ ಕಾಯಬೇಡಿ. ಒಂದೆರಡು ದಿನಗಳಲ್ಲಿ ಹಣ್ಣಾಗಬಹುದಾದ, ಅರೆ ಮಾಗಿದ ಕಾಯಿಯನ್ನು ಕೊಯಿದು ತನ್ನಿ. ಚಿಕ್ಕ ಬಾಕ್ಸ್ ಗಳಲ್ಲಿ ತಂದರೆ ಗೀರು ಆಗುವುದಿಲ್ಲ”. ತರುವಾಗಲೇ ಹಣ್ಣಾಗಿದ್ದರೆ ಎರಡೇ ದಿನದಲ್ಲಿ ಮುಗಿಸಬೇಕು. ಹಣ್ಣಿನ ಸಿಪ್ಪೆ ಮೃದು. ಮೇಲ್ಮೆ„ ಮೇಲೆ ಸಣ್ಣ ಗೀರು ಆದರೂ ಹೆಚ್ಚು ತಾಳಿಕೊಳ್ಳುವುದಿಲ್ಲ.
ಡೇವಿಡ್ ಹಿಂದೊಮ್ಮೆ ಗೋವಾದಲ್ಲಿ ಜರುಗಿದ ಕೋಕಂ ಕಾರ್ಯಾಗಾರಕ್ಕೆ ಹೋಗಿದ್ದರು. ಆಗ “”ಹೀಗೆ ದೊಡ್ಡ ಮಟ್ಟದ ತಾಜಾ ಕೋಕಂ ಮಾರಾಟ ಬೇರೆ ಯಾವ ನಗರದಲ್ಲೂ ಇರುವುದು ಗೊತ್ತಿಲ್ಲ. ಇದು ಮಹತ್ವದ ವಿಚಾರ” ಎಂದು ಅಜಿತ್ ಶಿರೋಡ್ಕರ್ ಶ್ಲಾ ಸಿದ್ದರು. ಇವರು ಪಶ್ಚಿಮಘಟ್ಟ ಕೋಕಂ ಫೌಂಡೇಶನ್ನಿನ ಅಧ್ಯಕ್ಷರು. ಆಯ್ದ ಅರೆ ಮಾಗಿದ ಹಣ್ಣುಗಳನ್ನು ಮೊಟ್ಟೆ ಟ್ರೇಯಂತಹ ಟ್ರೇಗಳಲ್ಲಿಟ್ಟು ದೂರ ಸಾಗಾಟ ಮಾಡಲು ಅಗುತ್ತದೆಯೋ ಎನ್ನುವುದನ್ನು ಪರೀಕ್ಷೆ ಮಾಡಿ ನೋಡಬೇಕಾಗಿದೆ. ಇದು ಸಾಧ್ಯವಾದರೆ ಬೆಂಗಳೂರು ಮತ್ತು ಮುಂಬಯಿಯಂತಹ ಪುನರ್ಪುಳಿ ರುಚಿ ತಿಳಿದ ಗ್ರಾಹಕರಿರುವ ನಗರಕ್ಕೆ ಒಯ್ದು ಮಾರಬಹುದು. ಇದು ತಾಜಾ ಹಣ್ಣಿಗೆ ಒಳ್ಳೆಯ ಬೇಡಿಕೆ ತರಬಹುದು ಎಂದು ಸಲಹೆ ನೀಡಿದ್ದರು.ತಮ್ಮ 13ನೇ ವಯಸ್ಸಿಗೇ ತರಕಾರಿ ವ್ಯಾಪಾರಕ್ಕೆ ಹೆಗಲು ನೀಡಿದ ಡೇವಿಡರಿಗೀಗ 55 ವಯಸ್ಸು. ಬೆಳಿಗ್ಗೆ ಆರು ಗಂಟೆಗೆ ಅಂಗಡಿಗೆ ಬಂದರೆ 16 ಗಂಟೆ ಬ್ಯುಸಿ. ಈ ಮಧ್ಯೆಯೂ ಪತ್ರಿಕೆಗಳ ಓದು. ಅವುಗಳಲ್ಲಿನ ಕೃಷಿ, ಪರಿಸರ, ಆರೋಗ್ಯ ವಿಚಾರಗಳ ಪ್ರತಿಗಳನ್ನು ಮಿತ್ರರಿಗೆ ಹಂಚುವುದು ಹವ್ಯಾಸ. ಪುನರ್ಪುಳಿ ಸಹವಾಸದಿಂದ ಅದರ ಜಾತಕವನ್ನು ಪೋಸ್ಟ್‌ಮಾರ್ಟಂ ಮಾಡುತ್ತಾರೆ, “”ಪುನರ್ಪುಳಿ ಹೆಚ್ಚು ಇಳುವರಿ ಕೊಡುವುದು ಮೂರು ವರುಷಕ್ಕೊಮ್ಮೆ. ಹೆಚ್ಚು ಇಳುವರಿ ಬಂದ ಅನಂತರದ 2 ವರುಷ ಅದರರ್ಧ ಮಾತ್ರ ಬೆಳೆ.” ಬಂಟ್ವಾಳ ತಾಲೂಕಿನ ಅಳಿಕೆ ಸಮೀಪದ ಮುಳಿಯದಲ್ಲಿ ಜರುಗಿದ ಒಂದು ದಿವಸದ “ಪುನರ್ಪುಳಿ ಪ್ರಪಂಚದೊಳಕ್ಕೆ’ ಎನ್ನುವ ಕಾರ್ಯಾಗಾರದಲ್ಲಿ ಡೇವಿಡ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕರು ಡೇವಿಡ್ – “”ಪುನರ್ಪುಳಿಗೆ ಭಾರತ ಮಾತ್ರವಲ್ಲ, ವಿದೇಶದಲ್ಲೂ ಬೇಡಿಕೆಯಿದೆ. ಒಣಸಿಪ್ಪೆ ರಫ್ತಾಗುತ್ತಿದೆ. ಅದರ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆಗೆ ಬಂದಿರುವುದು ವಿರಳ. ಹಣ್ಣಿನಿಂದ ಪ್ರತ್ಯೇಕಿಸುವ ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್ ವಿದೇಶಗಳಿಗೆ ರಫ್ತಾಗುತ್ತಿದೆ. ಬೊಜ್ಜು ಬೆಳೆಯಲು ಬಿಡದೆ, ಕೊಲೆಸ್ಟರಾಲ್ ನಿಯಂತ್ರಣದ ಗುಣ ಹೊಂದಿದೆ” ಎನ್ನುತ್ತಾರೆ. ತರಕಾರಿ ವ್ಯಾಪಾರಿ ವೃತ್ತಿಯಲ್ಲಿರುವ ಡೇವಿಡ್ ಡಿ’ಸೋಜರಲ್ಲಿ ಒಂದು ವೃತ್ತಿಧರ್ಮವಿದೆ. ಜತೆಗೆ ಅದಕ್ಕೆ ಭೂಷಣವಾಗಿ ಸಾಮಾಜಿಕ ಕಳಕಳಿಯಿದೆ. ಜನರ ಆರೋಗ್ಯದ ಕಾಳಜಿಯಿದೆ. ಈ ಎಲ್ಲ ಗುಣಗಳಿಂದಾಗಿ ಡೇವಿಡ್ ಗ್ರೇಟ್ ಆಗಿ ಕಾಣುತ್ತಾರೆ. – ನಾ. ಕಾರಂತ ಪೆರಾಜೆ