Advertisement

ಬಾಲ್ಯವಿವಾಹ ನಿರ್ಮೂಲನೆಗೆ ಶ್ರಮಿಸಿ

09:13 AM Jan 17, 2019 | Team Udayavani |

ಚಳ್ಳಕೆರೆ: ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹವನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವುದು ಕಾನೂನು ಪ್ರಕಾರ ಅಪರಾಧ. ಅಂಥವರಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಆದ್ದರಿಂದ ಬಾಲ್ಯವಿವಾಹವನ್ನು ತಡೆಗಟ್ಟಲು ಬೆಂಬಲ ನೀಡಬೇಕು ಎಂದು ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌ ಹೇಳಿದರು.

Advertisement

ಇಲ್ಲಿನ ತಾಲೂಕು ಕಚೇರಿ ಕಾರ್ಯಾಲಯದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ತಡೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 2016ರಲ್ಲಿ ಬಾಲ್ಯವಿವಾಹ ತಡೆ ಕಾನೂನು ಜಾರಿ ಮಾಡಲಾಗಿದೆ. ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವೆಂದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿ ವೆಂಕಟರತ್ನಮ್ಮ ಮಾತನಾಡಿ, ಬಾಲ್ಯವಿವಾಹ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗಾಗಿ ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಉದ್ದೇಶವನ್ನು ಇಲಾಖೆ ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲಾ ಹಂತಗಳಲ್ಲೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲರೂ ಈ ಕಾರ್ಯಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಕೆ. ಗಿರಿಜಾಂಬ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯವಿವಾಹ ತಡೆ ಅರಿವು ಕಾರ್ಯಕ್ರಮವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕು ಮಟ್ಟದ ಪೂರ್ವಭಾವಿ ಸಭೆಗೆ ನಗರದ ವಿವಿಧ ಕಲ್ಯಾಣಮಂಟಪಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ದೇವಸ್ಥಾನಗಳ ಪೂಜಾರಿಗಳು ಹಾಗೂ ವಿವಾಹ ದಿನಾಂಕವನ್ನು ಗೊತ್ತು ಪಡಿಸುವ ಜ್ಯೋತಿಷಿಗಳನ್ನು ಕರೆಸಿ ತಿಳಿವಳಿಕೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಶ್ಯಾಮಲಮ್ಮ, ವೀರಶೈವ ಕಲ್ಯಾಣಮಂಟಪದ ಗಂಗಣ್ಣ, ವಾಸವಿ ಮಹಲ್‌ನ ರಾಮಮೋಹನ್‌, ನಾಗೇಶ್‌ ಮೊದಲಾದವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next