Advertisement

ಒತ್ತಡ, ಗೊಂದಲ ಸೃಷ್ಟಿಯಾಗುವುದು ಬೇಡ: ಪರೀಕ್ಷೆ ಸುಸೂತ್ರ ನಡೆಸಿ 

09:25 AM Mar 08, 2017 | Team Udayavani |

ಈಗ ಶಾಲಾ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಯಲ್ಲ. ಅವರ ಜತೆಗೆ ಹೆತ್ತವರಿಗೆ ಮತ್ತು ಪರೀಕ್ಷೆ ನಡೆಸುವ ಮಂಡಳಿಗೂ ಅಗ್ನಿಪರೀಕ್ಷೆ. ಕಳೆದ ವರ್ಷ ಎರಡೆರಡು ಸಲ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ರಾಷ್ಟ್ರಮಟ್ಟದಲ್ಲಿ ಮುಜಗರ ಅನುಭವಿಸಿದ ಬಳಿಕ ಸರಕಾರ ಶಾಲಾ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಗುರುವಾರದಿಂದ ಪ್ರಾರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ವ್ಯಾಪಕವಾದ ತಯಾರಿ ನಡೆಸಲಾಗಿದೆ. ಕಳೆದ ವರ್ಷದ ಕಹಿ ಅನುಭವದ ಬಳಿಕ ಪರೀಕ್ಷಾ ನಿಯಮಗಳನ್ನು ಇನ್ನಷ್ಟು ಬಿಗುಗೊಳಿಸುವ ಸಲುವಾಗಿ ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕವನ್ನು ಸಿದ್ಧಪಡಿಸಿದ್ದರೂ ಅದಕ್ಕಿನ್ನೂ ಅಂಗೀಕಾರ ಸಿಕ್ಕಿಲ್ಲ. ಹೀಗಾಗಿ ಈ ವರ್ಷ ಹಳೆ ನಿಯಮಗಳಡಿಯಲ್ಲೇ ಸುಸೂತ್ರವಾಗಿ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿ ಶಿಕ್ಷಣ ಸಚಿವ ತನ್ವೀರ್‌ ಸೇs… ಮೇಲಿದೆ. ಪಿಯುಸಿ ಪರೀಕ್ಷೆ ಸಂದರ್ಭದಲ್ಲೇ ವಿಧಾನಮಂಡಲ ಅಧಿವೇಶನವೂ ನಡೆಯಲಿದ್ದು, ಪರೀಕ್ಷೆಯಲ್ಲಿ ಲೋಪವಾದರೆ ಸರಕಾರವನ್ನು ಟೀಕಿಸಲು ವಿಪಕ್ಷದ ಕೈಗೆ ಬ್ರಹ್ಮಾಸ್ತ್ರ ಸಿಗುತ್ತದೆ. ಈ ಅಂಶವನ್ನೂ ಸರಕಾರ ಗಮನದಲ್ಲಿಟ್ಟುಕೊಂಡಿದೆ. 

Advertisement

ಪರೀಕ್ಷೆ ಸಂದರ್ಭದಲ್ಲಿ ಎದುರಾಗುವ ವಿವಿಧ ಬಗೆಯ ಗೊಂದಲಗಳಿಂದ ಕಡೇ ಕ್ಷಣದಲ್ಲಿ ವಿದ್ಯಾರ್ಥಿಗಳು ಅಧೀರರಾಗುವುದನ್ನು ತಪ್ಪಿಸುವ ಸಲುವಾಗಿ ಸರಕಾರ ಪರೀಕ್ಷೆಗಿಂತ ಮೂರು ದಿನ ಮೊದಲೇ ಸಹಾಯವಾಣಿ ಪ್ರಾರಂಭಿಸಿದೆ. ಇದೊಂದು ಉತ್ತಮ ಕ್ರಮ. ಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಾಲೇಜು, ಶಿಕ್ಷಣ ಕಚೇರಿ ಎಂದು ಅಲೆದಾಡಿ ಸಮಯ ವ್ಯರ್ಥವಾಗುವುದು ತಪ್ಪುತ್ತದೆ. 

ಪ್ರಶ್ನೆಪತ್ರಿಕೆ ಸೋರಿಕೆ ಈಗ ಅತಿ ದೊಡ್ಡ ಪಿಡುಗು. ಪರೀಕ್ಷೆಯ ಪಾವಿತ್ರ್ಯವನ್ನು ಉಳಿಸುವ ಸಲುವಾಗಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಸಣ್ಣ ಅನುಮಾನ ಇದ್ದರೂ ಮರುಪರೀಕ್ಷೆ ನಡೆಸಬೇಕೆಂದು ಕೆಲ ವರ್ಷಗಳ ಹಿಂದೆ ಸುಪ್ರೀಂ ಕೋರ್ಟು ತೀರ್ಪಿತ್ತಿದೆ. ಈ ಸಲ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸರಕಾರ ಭಾರೀ ಮುಂಜಾಗರೂಕತಾ ಕ್ರಮ ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಎಲ್ಲ ಜೆರಾಕ್ಸ್‌ ಅಂಗಡಿಗಳನ್ನು ಮುಚ್ಚಲು ಆದೇಶಿಸಿದೆ. ಆದರೆ ಜೆರಾಕ್ಸ್‌ ಮಾಡಿ ಪ್ರಶ್ನೆಪತ್ರಿಕೆ ಹಂಚುವ ಕಾಲ ಇದಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಣಾರ್ಧದಲ್ಲಿ ಪ್ರಶ್ನೆಪತ್ರಿಕೆಗಳು ರವಾನೆಯಾಗುತ್ತವೆ. 

ಈ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆರಂಭದಲ್ಲೇ ಸರಕಾರ ಗೊಂದಲ ಮಾಡಿಕೊಂಡಿದೆ. ಹೊಸ ಪದ್ಧತಿಯಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದ ಸರಕಾರ ಪೂರ್ವಭಾವಿ ಪರೀಕ್ಷೆಯನ್ನು ಮಾತ್ರ ಹಳೇ ಪದ್ಧತಿಯಲ್ಲಿ ನಡೆಸಿದೆ. ಇದರಿಂದಾಗಿ ಸೋಮವಾರ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಗಲಿಬಿಲಿಗೊಂಡಿದ್ದಾರೆ. ಎಸ್‌ಎಲ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಪೂರ್ವಭಾವಿ ಪರೀಕ್ಷೆ ಮಾದರಿ. ಹೊಸ ಪರೀಕ್ಷಾ ಪದ್ಧತಿಯನ್ನು ಅಳವಡಿಸುವುದಾಗಿ ಹೇಳಿರುವ ಶಿಕ್ಷಣ ಇಲಾಖೆ ಪೂರ್ವಭಾವಿ ಪರೀಕ್ಷೆಯನ್ನು ಹಳೇ ಪದ್ಧತಿಯಲ್ಲಿ ನಡೆಸುತ್ತಿರುವುದು ಯಾವ ನ್ಯಾಯ? ಇದರಿಂದ ವಿದ್ಯಾರ್ಥಿಗಳಿಗಾಗುವ ಗೊಂದಲಕ್ಕೆ ಯಾರು ಹೊಣೆ? 

ಮಾರ್ಚ್‌ನಿಂದ ಜೂನ್‌ ತನಕದ ದಿನಗಳು ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ನಿರ್ಣಾಯಕ. ಇದು ಅವರ ಭವಿಷ್ಯದ ಬದುಕನ್ನು ನಿರ್ಧರಿಸುವ ದಿನಗಳು. ವಿದ್ಯಾರ್ಥಿಗಳ ಜತೆಗೆ ಅವರ ಹೆತ್ತವರೂ ಬಹಳ ಒತ್ತಡದಲ್ಲಿರುತ್ತಾರೆ. ಪರೀಕ್ಷೆ ಎದುರಿಸಲು ಸಮರೋಪಾದಿಯ ಸಿದ್ಧತೆಗಳಾಗುತ್ತವೆ. ಮನೆಯಲ್ಲಿ ಅನೇಕ ನಿರ್ಬಂಧಗಳು ಹೇರಲ್ಪಡುತ್ತವೆ. ದೈನಿಕ ಚಟುವಟಿಕೆಗಳಿಗೆ ಬ್ರೇಕ್‌ ಬೀಳುತ್ತದೆ. ಹೆತ್ತವರು ಸತತವಾಗಿ ಒತ್ತಡ ಹಾಕುತ್ತಾರೆ. ಆದರೆ ಈ ವಿಧಾನದಿಂದ ಅಂಕಗಳನ್ನು ಹೆಚ್ಚಿಸಿಕೊಳ್ಳುವುದು ಅಸಾಧ್ಯ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ ಎದುರಿಸಬೇಕು. ಪರೀಕ್ಷೆಗಾಗಿ ನಿತ್ಯದ ಚಟುವಟಿಕೆಗಳ ನಿಗ್ರಹಿಹ ಸರಿಯಲ್ಲ. ಪ್ರಸ್ತುತ ಸಂದರ್ಭದಲ್ಲಿ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗಿಂತ ಅವರ ಹೆತ್ತವರಿಗೆ ತರಬೇತಿ ನೀಡುವ ಅಗತ್ಯವಿದೆ. ಜೀವನದ ಪಥ ಬದಲಾಯಿಸುವ ಪರೀಕ್ಷೆ ಜೀವ ಕಸಿಯಬಾರದು. ಈ ಬಗೆಗೂ ಎಚ್ಚರ ಎಲ್ಲರಲ್ಲಿ ಇರಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next