ತಿಪಟೂರು: ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹದಗೆಡುವುದಲ್ಲದೆ ತಮ್ಮ ಜೀವಿತಾವಧಿಯ ಆಯಸ್ಸನ್ನು ಕಸಿದುಕೊಳ್ಳುತ್ತದೆ. ಆದ್ದರಿಂದ ದುರಾಭ್ಯಾಸಗಳಿಂದ ದೂರ ಉಳಿದು ಉತ್ತಮ ಜೀವನವನ್ನು ಕಂಡುಕೊಳ್ಳಬೇಕೆಂದು ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ರಾಜ್ಯ ಸಂಯೋಜಕರಾದ ಶೈಲಜಾ ತಿಳಿಸಿದರು.
ನಗರದ ಎಸ್‌ವಿಪಿ. ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಎನ್‌ಎಸ್‌ಎಂ ಬಾಲಿಕಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆರ್‌ಆರ್‌ಟಿಸಿ ಹಾಗೂ ಹರಿಹರ ಶಕ್ತಿ ಅಸೋಸಿಯೇಟ್ ಸಂಯುಕ್ತಾಶ್ರಯದಲ್ಲಿ ಮಕ್ಕಳಿಗೆ ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವ್ಯಸನದಿಂದ ದೂರವಿರಿ: ಮಕ್ಕಳು ಮಾದಕ ವ್ಯಸನದಿಂದ ದೂರ ಇರಬೇಕು. ತಮ್ಮ ಸುತ್ತಮುತ್ತ ಅಥವಾ ಕುಟುಂಬದಲ್ಲಿ ಯಾರಾದರೂ ಮಾದಕ ವ್ಯಸನಿಗಳು ಕಂಡು ಬಂದರೆ ಅದರ ದುಷ್ಪರಿಣಾಮವನ್ನು ಅವರಿಗೆ ತಿಳಿಸಿ ಮಾದಕ ವ್ಯಸನದಿಂದ ಮುಕ್ತ ಮಾಡಲು ಪ್ರಯತ್ನಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಶೋಕಿಗಾಗಿ ಹಾಗೂ ಕಷ್ಟಗಳನ್ನು ಮರೆಯಬಹುದು ಎಂಬ ನೆಪದಿಂದ, ಇನ್ನೂ ಕೆಲವರು ಸ್ನೇಹಿತರ ಒತ್ತಾಯಕ್ಕೆ ಹೀಗೆ ನಾನಾ ಕಾರಣಗಳಿಂದ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇಂತಹವರು ಕಂಡುಬಂದರೆ ಅವರ ಮನ ಪರಿವರ್ತನೆ ಮಾಡಿ ಮಾದಕ ವ್ಯಸನದಿಂದ ದೂರ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಸಮಾಜಮುಖೀ ಕಾರ್ಯದಲ್ಲಿ ತೊಡಗಿದಂತಾಗುತ್ತದೆ ಎಂದರು.
ಸ್ವತ್ಛ ಭಾರತಕ್ಕೆ ಸಹಕರಿಸಿ: ಮಾದಕ ವ್ಯಸನ ಮುಕ್ತ ಭಾರತ ಮಾಡುವುದು ಎಲ್ಲಾ ಮಕ್ಕಳ ಕನಸಾಗಿದೆ. ಅಲ್ಲದೆ ಮಹಾತ್ಮ ಗಾಂಧೀಜಿಯವರ ಆಕಾಂಕ್ಷೆ ಸ್ವತ್ಛ ಭಾರತ ನಿರ್ಮಾಣ ಇದರ ಸಾಕಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದರಲ್ಲಿ ಮಕ್ಕಳ ಪಾತ್ರ ಬಹಳ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಮಾದಕ ವ್ಯಸನ ಕುರಿತು ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜನ ಶಿಕ್ಷಣ ಸಂಸ್ಥೆಯ ಸಂಯೋಜಕ ಬಿ.ಜಗದೀಶ್, ಕಾರ್ಯ ಕ್ಷೇತ್ರಾಧಿಕಾರಿಗಳಾದ ರವಿಕಾಂಬಳೆ, ಪುಂಡಲೀಕ ಗೋಗಿಹಾಳ,
ಶಿವಕುಮಾರ್, ಎಸ್‌ವಿಪಿ ಪ್ರೌಢಶಾಲೆ ಹಿರಿಯ ಶಿಕ್ಷಕ ಬಿ.ಎಸ್. ಸಿದ್ದರಾಮಯ್ಯ, ಎನ್‌ಎಸ್‌ಎಂ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಚ್.ಕೆ.ಪದ್ಮಾಕ್ಷಮ್ಮ, ಸಹ ಶಿಕ್ಷಕರಾದ ಜುಂಜಯ್ಯ, ಎಸ್.ಜಿ. ಬಸವರಾಜು, ಶಿವಕುಮಾರ್, ಸಿದ್ದೇಶ್ ಮತ್ತಿತರರಿದ್ದರು.