ಬೆಂಗಳೂರು: ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನಾಟಕ ಮತ್ತು ಸಾಹಿತ್ಯ ಸಹಾಯಕ ಎಂದು ಹಿರಿಯ ರಂಗಕರ್ಮಿ ಡಾ.ಬಿ.ವಿ ರಾಜಾರಾಂ ಅಭಿಪ್ರಾಯಪಟ್ಟಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ರೂಪಾಂತರ ಸಂಸ್ಥೆ ಆಯೋಜಿಸಿದ್ದ ಪುಂಸ್ತ್ರೀ, ಮತ್ಸಗಂಧಿ ಪುಸ್ತಕ ಬಿಡುಗಡೆ ಮತ್ತು ಮತ್ಸéಗಂಧಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಡಾ. ಪ್ರಭಾಕರ ಶಶಿಲ ಅವರ ಕಾದಂಬರಿಗಳು 14 ಭಾಷೆಗಳಿಗೆ ಅನುವಾದವಾಗುತ್ತಿದೆ. ಕನ್ನಡದ ಕಾದಂಬರಿಗಳಿಗೆ ಬೇರೆ ಭಾಷೆಗಳಿಂದಲೂ ಬೇಡಿಕೆ ಇರುವುದು ಖುಷಿಯ ವಿಚಾರ’ ಎಂದರು.
“ಅಂದಿನ ಕಾಲದ ಕಥಾವಸ್ತುವನ್ನು ಇಂದಿನ ಪೀಳಿಗೆಗೆ ಒಪ್ಪುವ ರೀತಿಯಲ್ಲಿ ಬರೆಯುತ್ತಿರುವುದು ಕೂಡ ಅವರ ಹೆಚ್ಚುಗಾರಿಕೆ. ಅವರ ಹಲವು ಪುಸ್ತಕಗಳು ನಾಟಕಕ್ಕೆ ರೂಪಾಂತರವಾಗಿದೆ’ ಎಂದು ತಿಳಿಸಿದರು.
ಸಾಹಿತಿ ಡಾ. ಪ್ರಭಾಕರ ಶಿಶಿಲ ಮಾತನಾಡಿ, ನಾಟಕ ಮಾಡುವವರು ಎಲ್ಲ ತ್ಯಾಗ ಮತ್ತು ಸವಾಲುಗಳನ್ನು ಎದುರಿಸುವುದಕ್ಕೆ ಸಿದ್ಧರಾಗಿರಬೇಕು. ನಾಟಕ ತಂಡವನ್ನು ಕಟ್ಟುವುದು ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುವುದು ಮೈತ್ರಿ ಸರ್ಕಾರ ನಡೆಸುವುದಕ್ಕಿಂತ ಸವಾಲಿನ ಕೆಲಸ ಎಂದರು.
ನನ್ನ ಬರಹ ಮತ್ತು ಕಾದಂಬರಿಗಳಲ್ಲಿ ಸ್ತ್ರೀ ವಾದಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇನೆ. ಆ ಮೂಲಕವಾರೂ ಅವರ ಮೇಲೆ ಆಗಿರುವ ಶೋಷಣೆ ನಮ್ಮ ಜನರಿಗೆ ಗೊತ್ತಾಗಲಿ ಎನ್ನುವ ಆಶಾಭಾವನೆಯೇ ಇದಕ್ಕೆ ಕಾರಣ ಎಂದು ಹೇಳಿದರು.
ರೂಪಾಂತರ ಸಂಸ್ಥೆಯ ಅಧ್ಯಕ್ಷ ವಿ. ಗಂಗಾಧರ, ಉಪಾಧ್ಯಕ್ಷ ಎನ್.ಟಿ ಪ್ರಸನ್ನ ಕುಮಾರ್, ಪ್ರಕಾಶಕ ಡಾ.ಎಂ ಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.