Advertisement

ರಾಜ್ಯದಲ್ಲಿ ಮತ್ತೆ ಜೆಡಿಎಸ್‌ ಅಧಿಕಾರಕ್ಕೇರಲು ಶ್ರಮಿಸಿ: ರಮೇಶ್‌

01:24 PM Jun 19, 2017 | |

ದಾವಣಗೆರೆ: ವಾಲ್ಮೀಕಿ ನಾಯಕ ಜನಾಂಗಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ನೀಡಿರುವ ಸಾಕಷ್ಟು ಕೊಡುಗೆಗೆ ಪ್ರತಿಯಾಗಿ 2018ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಾತ್ಯತೀತ ಜನತಾದಳದ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಅಧ್ಯಕ್ಷ ಹೊದಿಗೆರೆ ರಮೇಶ್‌ ತಿಳಿಸಿದರು.

Advertisement

ಜು. 1 ರಂದು ದಾವಣಗೆರೆಯ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ವಾಲ್ಮೀಕಿ ಜನತೋತ್ಸವದ ಅಂಗವಾಗಿ ಭಾನುವಾರ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಯಕ ಜನಾಂಗಕ್ಕೆ ಮೀಸಲಾತಿ ದೊರಕಿಸಿಕೊಡುವಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ದೇವೇಗೌಡರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. 

ನಾಯಕ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಧ್ವನಿ ಎತ್ತಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ಹಾಗಾಗಿಯೇ ನಾಯಕ ಸಮಾಜಕ್ಕೆ ಹಲವಾರು ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಜೆಡಿಎಸ್‌ ನಾಯಕ ಜನಾಂಗಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಿದೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು. 

ಹರಿಹರದ ರಾಜನಹಳ್ಳಿ ಬಳಿ ವಾಲ್ಮೀಕಿ ಗುರುಪೀಠ ಸ್ಥಾಪನೆಗೆ ಕುಮಾರಸ್ವಾಮಿ ಅವರು ರಾಜಕೀಯ ಪ್ರವೇಶಕ್ಕೂ ಮುನ್ನವೇ 8ರಿಂದ 10 ಎಕರೆ ಜಾಗ ನೀಡಿದ್ದಾರೆ. ನಮ್ಮ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಗಳನ್ನು ಮಾಡಿರುವ ಜೆಡಿಎಸ್‌ಯನ್ನು ಮತ್ತೆ ಅಧಿ ಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಮನವಿ ಮಾಡಿದರು. 

ದೇವೇಗೌಡರು ಮತ್ತು ಕುಮಾರಸ್ವಾಮಿ ನಾಯಕ ಸಮಾಜಕ್ಕೆ ನೀಡಿರುವ ಕಾಣಿಕೆ ಸ್ಮರಿಸುವ ಜೊತೆಗೆ ಇತರರಿಗೆ ತಿಳಿಸುವ ಉದ್ದೇಶದಿಂದ ಜು. 1ರಂದು ದಾವಣಗೆರೆಯ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ವಾಲ್ಮೀಕಿ ಜನತೋತ್ಸವ ಹಮ್ಮಿಕೊಳ್ಳಲಾಗಿದೆ.

Advertisement

ಪ್ರತಿ ಜಿಲ್ಲೆಯಿಂದ 2 ಲಕ್ಷಕ್ಕೂ ಹೆಚ್ಚಿನ ಜನರನ್ನು ಕರೆತರುವ ನಿಟ್ಟಿನಲ್ಲಿ ಮುಖಂಡರು ಮತ್ತು ಕಾರ್ಯಕರ್ತರು, ಅಭಿಮಾನಿಗಳು ಶ್ರಮಿಸಬೇಕು ಎಂದು ತಿಳಿಸಿದರು. ರಾಜ್ಯದ 224 ಕ್ಷೇತ್ರಗಳಲ್ಲಿ ವಾಲ್ಮೀಕಿ ಜನಾಂಗದವರು ದಿಟ್ಟ, ಸೂಕ್ತ ತೀರ್ಮಾನಕ್ಕೆ ಬಂದಲ್ಲಿ ಜೆಡಿಎಸ್‌ ಕನಿಷ್ಠ 160 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಸಮಾವೇಶಕ್ಕೆ ಸುಮ್ಮನೆ ಕುಳಿತುಕೊಂಡರೆ ಸಾಲದು. ಜನತೋತ್ಸವದ ಯಶಸ್ಸಿಗೆ ಪೂರ್ವ ತಯಾರಿ ಅಗತ್ಯ. ಹರಿಹರ ಶಾಸಕರು ಒಳಗೊಂಡಂತೆ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಸಹಕಾರದೊಂದಿಗೆ ಕೆಲಸ ಮಾಡಿದ್ದಲ್ಲಿ ಜನತೋತ್ಸವ ಯಶಸ್ವಿಯಾಗಿಯೇ ತೀರುತ್ತದೆ. 1994ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತೆ 2018ರ ಚುನಾವಣೆಯಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗತ್ತಿನ ಸರ್ವಶ್ರೇಷ್ಠ ಗ್ರಂಥ ರಾಮಾಯಣ ಬರೆದ ವಾಲ್ಮೀಕಿಯವರ ಜಯಂತಿ ಆಚರಣೆ ಪ್ರಾರಂಭವಾಗಿರುವುದು ಜೆಡಿಎಸ್‌ ಸರ್ಕಾರದ ಅವ ಧಿಯಲ್ಲಿ, ಆದರೆ, ಈಗ ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ನೀಡಿ ಊರ ತುಂಬಾ ಹೇಳಿಕೊಂಡು ಓಡಾಡುತ್ತಿದ್ದಾರೆ. ವಾಲ್ಮೀಕಿಯಂತಹ ಮಹಾತ್ಮರ  ಜಯಂತಿಗೆ ರಜೆ ನೀಡುವುದು ಬೇಡ ಎನ್ನುವುದು ನಮ್ಮ ನಿಲುವು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ಜಯಂತಿಗೆ ನೀಡಿರುವ ಸರ್ಕಾರಿ ರಜೆ ರದ್ಧುಪಡಿಸಲಿದೆ ಎಂದರು.

ಜಿಲ್ಲಾ ಅಧ್ಯಕ್ಷ ಎಸ್‌. ಚಿದಾನಂದಪ್ಪ, ಮಾಜಿ ಅಧ್ಯಕ್ಷ ಟಿ. ದಾಸಕರಿಯಪ್ಪ, ಯುವ ಜನತಾದಳ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌, ಅಶೋಕ್‌ ಗೌರಿಬಿದನೂರು, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್‌, ಮುನೇಗೌಡ, ಕೃಷ್ಣಮೂರ್ತಿ, ಶೀಲಾ ರಾಮಚಂದ್ರನಾಯ್ಕ, ಹೂವಿನಮಂಡು ಚಂದ್ರಪ್ಪ, ಟಿ. ಅಸರ್‌, ವೇಣುಗೋಪಾಲ್‌ನಾಯಕ್‌, ಕೆ. ಮಂಜುಳಾ, ದೇವಿರಮ್ಮ, ಸುನಂದಮ್ಮ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next