ಯಾದಗಿರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದ ಬೈತುಲ್ ಮಹಲ್‌ನಲ್ಲಿ ನಡೆದ ವಿವಿಧ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಿ ಅವರ ಋಣ ತೀರಿಸುತ್ತೇನೆ. ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಯಾದಗಿರಿ ಮತಕ್ಷೇತ್ರದ ಅಭ್ಯರ್ಥಿ ಎ.ಸಿ. ಕಾಡ್ಲೂರ ಅವರನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಬಲಪಡಿಸಬೇಕು. ಚುನಾವಣೆ ಮುನ್ನ ಮತಕ್ಷೇತ್ರದಲ್ಲಿ ಇನ್ನೊಂದು ದೊಡ್ಡ ಸಮಾವೇಶ ಮಾಡವುದಾಗಿ ಅವರು ಘೋಷಿಸಿದರು. ಜಿಲ್ಲೆಯಲ್ಲಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜೆಡಿಎಸ್ ಪಕ್ಷದ ಸಾಧನೆಗಳನ್ನು ಅರಿವು ಮೂಡಿಸುವ ಮೂಲಕ ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೊಡ್ಡಪ್ಪಗೌಡ ಕಳಗಿನಮನಿ, ಗುಂಡಪ್ಪ ಕಲಬುರಗಿ, ಡಾ| ಶಫಿ ತುನ್ನೂರ, ರಮೇಶ ಸಾಹು ಸೇರಿದಂತೆ ಬಹುತೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಮಾರಂಭದಲ್ಲಿ ಜೆಡಿಎಸ್ ಮುಖಂಡರಾದ ಬಸವರಾಜ ಹೊರಟ್ಟಿ, ಬಂಡೆಪ್ಪ ಖಾಶಂಪುರ, ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಸಿ. ಕಾಡ್ಲೂರ, ನಾಗರತ್ನಾ ಕುಪ್ಪಿ, ಆರೀಫ್ ಕಾಡ್ಲೂರ, ಪರ್ವೇಜ್ ಕಾಡ್ಲೂರ, ಶೇಖ್ ಜಕೀರುದ್ದೀನ್, ಶರಣಪ್ಪ ಗುಳಗಿ ಇದ್ದರು.