ಉಡುಪಿ: ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರ ಪ್ರಬಲ ಶಕ್ತಿಯಾಗಿದೆ. ಪ್ರಸ್ತುತ ಸಹಕಾರಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿದ್ದು, ಬ್ಯಾಂಕಿಂಗ್ ಕ್ಷೇತ್ರ ಪ್ರಸ್ತುತ ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ತಿಳಿಸಿದರು.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಲಿಕೋ ಬ್ಯಾಂಕ್, ಟೀಚರ್ ಕೋ-ಆಪರೇಟಿವ್ ಬ್ಯಾಂಕ್, ಜಿಲ್ಲಾ ಸಹಕಾರ ಇಲಾಖೆ ಆಶ್ರಯದಲ್ಲಿ ಲಿಕೋ ಬ್ಯಾಂಕ್‌ನ ಸಭಾಂಗಣದಲ್ಲಿ ಮಂಗಳವಾರ ನಡೆದ 70ನೇ ಅಖೀಲ ಭಾರತ ಸಹಕಾರಿ ಸಪ್ತಾಹವನ್ನು ಅವರು ಉದ್ಘಾಟಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಅವರು ಹಲವು ಬದಲಾವಣೆಗಳನ್ನು ತಂದ ಫಲವಾಗಿ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗಿದೆ. ಶೇ. 42ರಷ್ಟು ಯುವಜನತೆ ಸಹಕಾರಿ ಬ್ಯಾಂಕಿಂಗ್ ನೆಚ್ಚಿಕೊಂಡು ತಮ್ಮನ್ನು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿರುವಂತೆ ಮುಂದೆ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ವಿಧಾನ ಪರಿಷತ್‌ನಲ್ಲಿ ಒಂದು ಸ್ಥಾನ ನೀಡುವಂತೆ ಸರಕಾರಕ್ಕೆ ಮಾನವಿ ಮಾಡಿಕೊಂಡರು.
ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರು ಮತ್ತು ಸಿಇಒ ಅವರನ್ನು ಗೌರವಿಸಲಾಯಿತು. ಮೂಡುಬಿದಿರೆ ಧವಳಾ ಕಾಲೇಜಿನ ಉಪನ್ಯಾಸಕ ಸಂತೋಷ ಶೆಟ್ಟಿ ದಿಕ್ಸೂಚಿ ಭಾಷಣಗೈದರು. ಲಿಕೋ ಬ್ಯಾಂಕ್‌ನ ಅಧ್ಯಕ್ಷ ಕೆ. ಕೃಷ್ಣ, ಉಪಾಧ್ಯಕ್ಷ ದಯಾನಂದ ಎ., ಟೀಚರ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಸಿಇಒ ಮಂಜುನಾಥ ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ ಕುಮಾರ್ ಬಲ್ಲಾಳ್, ನಿರ್ದೇಶಕರಾದ ಅಲೆವೂರು ಹರೀಶ ಕಿಣಿ, ಶಂಕರ ಪೂಜಾರಿ ಕಟಪಾಡಿ, ಮನೋಜ್ ಕರ್ಕೇರ, ಉಭಯ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರು ಉಪಸ್ಥಿತರಿದ್ದರು.
ಯೂನಿಯನ್ ನಿರ್ದೇಶಕರಾದ ಶ್ರೀಧರ್ ಪಿ.ಎಸ್. ಸ್ವಾಗತಿಸಿ, ಸುಧಾಕರ ಶೆಟ್ಟಿ ನಿರೂಪಿಸಿದರು. ಲಿಕೋ ಬ್ಯಾಂಕ್‌ನ ಸಿಇಒ ಶಶಿಕಲಾ ವಂದಿಸಿದರು.