Advertisement

ಬೀದಿಬದಿ ವ್ಯಾಪಾರಸ್ಥ ಸಮಿತಿ ಚುನಾವಣೆ

02:18 PM Nov 11, 2019 | Team Udayavani |

ಹಾವೇರಿ: ನಗರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರ ಸಮಿತಿಗೆ ಸರ್ಕಾರ ಇದೇ ಮೊದಲ ಬಾರಿಗೆ ಚುನಾವಣೆ ಮೂಲಕ ಆಯ್ಕೆ ಮಾಡಲು ಮುಂದಾಗಿದ್ದು ಸ್ಥಳೀಯ ನಗರಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಚುನಾವಣೆಗೆ ನಗರಸಭೆ 822 ಬೀದಿಬದಿ ವ್ಯಾಪಾರಸ್ಥರರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಮತದಾರರ ಪಟ್ಟಿಯನ್ನು ಸರ್ಕಾರಕ್ಕೂ ಕಳುಹಿಸಿದೆ. ನಗರದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 2ರಲ್ಲಿ ಮತದಾನ ನಡೆಸಲು ಸಹ ತೀರ್ಮಾನಿಸಿದೆ.

Advertisement

ಕೇಂದ್ರ ಸರ್ಕಾರ 2014-15ರಲ್ಲಿ ಜಾರಿಗೊಳಿಸಿರುವ ಈ ಸಮಿತಿಗೆ ಪೌರಾಯುಕ್ತರು ಅಧ್ಯಕ್ಷರಾಗಿದ್ದು, ಬೀದಿ ಬದಿ ವ್ಯಾಪಾರಸ್ಥರನ್ನು ಒಳಗೊಂಡಂತೆ 10 ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿತ್ತು. ಬಳಿಕ ಕರ್ನಾಟಕ ಬೀದಿ ವ್ಯಾಪಾರಿಗಳ (ಜೀವನೋಪಾಯ ಮತ್ತು ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) 2019ರ ನಿಯಮದನ್ವಯ ಹಾಗೂ ಅನುಸೂಚಿ (ಷೆಡ್ನೂಲ್‌) ಕ್ರಮ ಸಂಖ್ಯೆ 2ರ ಅನ್ವಯ ಬೀದಿ ಬದಿ ವ್ಯಾಪಾರಸ್ಥರ ಪಟ್ಟಣ ಮಾರಾಟ ಸಮಿತಿಗೆ 10 ಜನ (ಬೀದಿ ಬದಿ ವ್ಯಾಪಾರಸ್ಥರ ಪ್ರತಿನಿಧಿ ಗಳನ್ನು) ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಉದ್ದೇಶಿಸಿದೆ.

ನಗರದ ಪಿ.ಬಿ. ರಸ್ತೆ, ಬಸ್‌ನಿಲ್ದಾಣ ಎದುರಿನ ಹಾನಗಲ್ಲ ರಸ್ತೆ, ಎಂ.ಜಿ. ರಸ್ತೆ, ಜೆ.ಎಚ್‌.ಪಟೇಲ್‌ ರಸ್ತೆ, ಹುಕ್ಕೇರಿಮಠ ರಸ್ತೆ ಸೇರಿದಂತೆ ನಗರದ ವಿವಿಧ ವಾರ್ಡ್‌, ಬಡಾವಣೆಗಳಲ್ಲಿ ಹಣ್ಣು, ಹೂವು, ಬಟ್ಟೆ, ತರಕಾರಿ, ಲಘು ತಿನಿಸು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವ್ಯಾಪಾರಿಗಳಿದ್ದಾರೆ. ಅವರೆಲ್ಲರೂ ತಳ್ಳುವ ಗಾಡಿ, ತಾತ್ಕಾಲಿಕ ಗೂಡು, ಶೆಡ್‌, ಮರದ ನೆರಳುಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇವರೆಲ್ಲರೂ ನಗರಸಭೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಸ್ಥರ ಸಮಿತಿಯ ಸದಸ್ಯರಾಗಬಹುದಾಗಿದ್ದು ಇದಕ್ಕಾಗಿ ಚುನಾವಣೆ ನಡೆಯಲಿದೆ.

ನಗರಸಭೆಯಿಂದ ಈಗಾಗಲೇ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನಚೀಟಿ ನೀಡಲಾಗಿದ್ದು, ಗುರುತಿನಚೀಟಿ ಇರುವ ಬೀದಿ ಬದಿ ವ್ಯಾಪಾರಸ್ಥರು ಮಾತ್ರ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ 2000ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರು ಇದ್ದರೂ ಇವರಲ್ಲಿ 822 ಜನ ಮಾತ್ರ ಗುರುತಿನಚೀಟಿ ಪಡೆದು ತಮ್ಮ ವ್ಯಾಪಾರ ವೃತ್ತಿಯನ್ನು ಅಧಿಕೃತಗೊಳಿಸಿಕೊಂಡಿದ್ದಾರೆ. ಹೀಗಾಗಿ ಈ 822 ಬೀದಿ ಬದಿ ವ್ಯಾಪಾರಸ್ಥರು ಮಾತ್ರ ಈ ಚುನಾವಣೆಯಲ್ಲಿ ಮತದಾನ ಮಾಡುವ ಹಾಗೂ ಸ್ಪಧಿಸುವ ಹಕ್ಕು ಹೊಂದಿದ್ದಾರೆ.

ಬೀದಿಬದಿ ವ್ಯಾಪಾರಸ್ಥರ ಸಮಿತಿಗೆ ಆಯ್ಕೆಯಾಗುವ ಸದಸ್ಯರ ಅಧಿಕಾರಾವ  ಐದು ವರ್ಷಗಳ ವರೆಗೆ ಇರುತ್ತದೆ. ಬೀದಿಬದಿ ವ್ಯಾಪಾರಸ್ಥರ ಬೇಡಿಕೆ, ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಮಿತಿ ಇದಾಗಿದ್ದು, ಇದರಲ್ಲಿ ನಗರಸಭೆ ಪೌರಾಯುಕ್ತರು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಹ ಇರುತ್ತಾರೆ.

Advertisement

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next