ವ್ಯಾಪಾರಿಗಳ ವಿರುದ್ಧ ಮಂಗಳೂರು ಪಾಲಿಕೆ ಕಾರ್ಯಾಚರಣೆ ಬುಧವಾರವೂ ಮುಂದುವರಿದಿದೆ. ಲೇಡಿಗೋಷನ್ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಪಾಲಿಕೆ ಬುಧವಾರ ಮುಂದಾದಾಗ, ವ್ಯಾಪಾರಸ್ಥರು ಪ್ರತಿರೋಧ ತೋರಿ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಪಾಲಿಕೆ ಕಾರ್ಯಾಚರಣೆ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಬೆಳಗ್ಗಿನ ಸಮಯದಲ್ಲಿ ಪೊಲೀಸರ ಭದ್ರತೆಯೊಂದಿಗೆ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಂಗಳವಾರ ಸ್ಟೇಟ್ ಬ್ಯಾಂಕ್, ಸೆಂಟ್ರಲ್ ಮಾರ್ಕೆಟ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆದಿದ್ದು, ಬುಧವಾರ ಲೇಡಿಗೋಷನ್ ಮುಂಭಾಗದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಏಕಾಏಕಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ಪ್ರತಿಭಟಿಸಿ ಬೀದಿ ಬದಿ ವ್ಯಾಪಾರಿಗಳು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು. ಕಾರ್ಯಾಚರಣೆಗೆ ಆಗಮಿಸಿದ್ದ ಲಾರಿಯ ಮುಂಭಾಗದಲ್ಲಿ ವ್ಯಾಪಾರಿಗಳು ಮಲಗಿ ಪ್ರತಿಭಟನೆ ನಡೆಸಿದರು. ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನೆಡಸಲಾಯಿತು. ಈ ಕುರಿತಂತೆ ‘ಸುದಿನ’ ಜತೆಗೆ ಮಾತನಾಡಿದ ಹೋರಾಟಗಾರ ಬಿ.ಕೆ. ಇಮಿ¤ಯಾಝ್ ಅವರು, ‘ಟೌನ್ ಪ್ಲ್ಯಾನಿಂಗ್ ಸಮಿತಿಯ ಸಭೆ ನಡೆಸದೆ ಬೀದಿ ಬದಿ ವ್ಯಾಪಾರಿಗಳ ತೆರವು ಮಾಡುತ್ತಿರುವುದು ನಿಯಮ ಬಾಹಿರ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಸೂಕ್ಷ್ಮವಾಗಿ ಅವಲೋಕಿಸಬೇಕು’ ಎಂದರು.
ಕಾರ್ಯಾಚರಣೆ ಮುಂದುವರಿಕೆ
ಬೀದಿ ಬದಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗುವ ರೀತಿಯಲ್ಲಿ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಪಾಲಿಕೆ ಕಾರ್ಯಾಚರಣೆ ಮುಂದುವರಿಯುತ್ತದೆ. ತೆರವು ಮಾಡಿದ ಬಳಿಕ ಆ ಪ್ರದೇಶದಲ್ಲಿ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆಯೂ ನೋಡಿಕೊಳ್ಳಬೇಕು.
– ಮಹಮ್ಮದ್ ನಝೀರ್,
ಆಯುಕ್ತರು ಮನಪಾ