Advertisement
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ನೀವೊಮ್ಮೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಬೀದಿ ನಾಟಕವನ್ನೊಮ್ಮೆ ನೋಡಬೇಕು. ಅದಕ್ಕಾಗಿ ಒಮ್ಮೆ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಪಾಲ್ಗೊಳ್ಳಬೇಕು. ಪ್ಲಾಸ್ಟಿಕ್ ಎಂಬ ಬೃಹದ್ ರಾಕ್ಷಸ ಹಿಡಿತದಿಂದ ಜೀವಸಮೂಹ ವಿಮುಕ್ತಗೊಳ್ಳುವ ಮಾರ್ಗ ಗೊತ್ತಾಗುತ್ತದೆ.
Related Articles
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ಎಂದರೆ ಜನಸಾಗರವೇ ಸೇರಿರುತ್ತದೆ. ಅಂದ ಮೇಲೆ ಸ್ವಚ್ಛತೆ ಕಡೆಗೆ ಗಮನ ನೀಡಲೇಬೇಕು. ಒಂದಿಷ್ಟು ಜನರನ್ನು ನೇಮಿಸಿ ಗಮನ ನೀಡಿ ಎನ್ನುವುದರ ಬದಲಾಗಿ ಜನರಲ್ಲೇ ಜಾಗೃತಿ ಮೂಡಿಸಿದರೆ ಹೇಗೆ? ಈ ಭಿನ್ನ ಆಲೋಚನೆ ಹೊಳೆದಿದ್ದೇ ತಡ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ಬೀದಿನಾಟಕವೊಂದು ರೂಪುಗೊಂಡಿತು. ಅದುವೇ ’ನಾವು ಮತ್ತು ನಮ್ಮ ಪರಿಸರ’.
Advertisement
ಲಕ್ಷ ದೀಪಗಳ ಸಂಗಮಕ್ಕೆ ಇನ್ನಷ್ಟು ಮೆರುಗು ತುಂಬಲು ದಿನಾಂಕ 22ರಿಂದ 26ರವರೆಗೆ ’ನಾವು ಮತ್ತು ನಮ್ಮ ಪರಿಸರ’ ಬೀದಿನಾಟಕವನ್ನು ಎಸ್.ಕೆ.ಡಿ.ಆರ್.ಡಿ.ಪಿ.ಯ ಕಲಾವಿದರ ತಂಡ ಪ್ರದರ್ಶಿಸಲಿದೆ. ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಇರುವ ’ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯ ಕಾರ್ಯಕರ್ತರೇ ಪಾತ್ರಧಾರಿಗಳು. 15 ಜನರ ಈ ತಂಡ ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಪರಿಸರ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಲಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಶಿಕ್ಷಕ ಚಂದ್ರಹಾಸ ನಾಟಕ ರಚಿಸಿ ನಿರ್ದೇಶಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಎಲ್ಲಾ ಕ್ಷೇತ್ರಗಳಿಂದ ಒಬ್ಬೊಬ್ಬ ಸಿಬ್ಬಂದಿಯನ್ನು ಆಯ್ಕೆಮಾಡಿ, ಪುಟ್ಟ ತಂಡ ಕಟ್ಟಿಕೊಂಡು ಪರಿಸರ ರಕ್ಷಣೆಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮ, ಭೂಮಿಗೆ ಆಗುವ ಹಾನಿಗಳು, ಹಾಗೂ ಮಾನವರ ಜೀವಕ್ಕೆ ಆಗುವ ನಷ್ಟಗಳನ್ನು ಸರಳವಾಗಿ ಪ್ರಸ್ತುತಪಡಿಸಿದ್ದಾರೆ.
ನಾಟಕದ ಕಥಾವಸ್ತು ಮಾತ್ರವಲ್ಲ, ನಾಟಕದ ಪರಿಕರವೂ ವಿಶೇಷವಾಗಿದೆ. ಅನುಪಯುಕ್ತ ಪ್ಲಾಸ್ಟಿಕ್ ಬಾಲ್, ಚೊಂಬು, ಇವುಗಳನ್ನೇ ಉಪಯೋಗಿಸಿ, ಕಿರೀಟ, ಹಾರ ಇವುಗಳನ್ನು ತಯಾರಿಸಲಾಗಿತ್ತು. ಇವುಗಳನ್ನು ವಿನ್ಯಾಸ ಮಾಡಿದವರು ಮಹೇಶ್‌ಆಚಾರ್ಯ. ಇವರೂ ಗ್ರಾಮಾಭಿವದ್ಧಿ ಯೋಜನಾ ಸಿಬ್ಬಂದಿ.
ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಯಾವುದೇ ನಡೆಯಲಿ, ಅಲ್ಲಿ ಈ ತಂಡ ಹಾಜರಿದ್ದು ಜನರು ಜವಾಬ್ದಾರಿಮರೆಯದಂತೆ ನೆನಪಿಸುತ್ತದೆ. ಲಕ್ಷದೀಪೋತ್ಸವದ ಅಷ್ಟೂ ದಿನಗಳ ಕಾಲ ಸಂಜೆ 04ರಿಂದ ರಾತ್ರಿ 10 ಗಂಟೆಯವರೆಗೆ ಎಲ್ಲಾ ಕಡೆ ಸಂಚರಿಸಿ, ನಾಟಕದ ಜೊತೆಗೆ ಜಾಥಾ ನಡೆಯಲಿದೆ.
ವರದಿ: ಟಿ. ವರ್ಷಾ ಪ್ರಭು ; ಚಿತ್ರಗಳು: ಶಿವಪ್ರಸಾದ್ ಹಳುವಳ್ಳಿ