Advertisement

ಬೀದಿ ಪಾಲು ಮಾಡಿದ ಸರಕಾರ ;ಅತಿಥಿ ಉಪನ್ಯಾಸಕರ ಅಳಲು

07:35 AM Aug 10, 2017 | Team Udayavani |

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಬುಧವಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರ ಮೂಲಕ ಸರಕಾರಕ್ಕೆ ಪ್ರತಿಭಟನಾ ಮನವಿ ಸಲ್ಲಿಸಿದರು.
 
ನಮ್ಮಿಂದ  ಕೆಲಸ ಮಾಡಿಸಿಕೊಂಡು ಮನೆಗೆ ಹೋಗಿ ಎಂದು ಹೇಳುತ್ತಾರೆ. ನಮ್ಮ ಜೀವನಕ್ಕೆ ದಿಕ್ಕು ಬೇಡವೆ? ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ನಾವು ಕಾಲೇಜು ಶಿಕ್ಷಣ ಇಲಾಖೆ ಆದೇಶದಿಂದ ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದೇವೆ. ನಾವು ಮನುಷ್ಯರು, ನಮಗೂ ಜೀವನದ ಹಕ್ಕಿದೆ. ನಮ್ಮ ಬದುಕಿನಲ್ಲಿ ಆಟವಾಡಬೇಡಿ. ಮನಸ್ಸಿಗೆ ಬಂದಂತೆ ವರ್ತಿಸಿ ಕತ್ತು ಹಿಸುಕಬೇಡಿ ಎಂದು ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿಯವರ ಮುಂದೆ ತಮ್ಮ ದುಃಖ ತೋಡಿಕೊಂಡರು. 

Advertisement

ಕಾಲೇಜು ಆರಂಭವಾಗಿ 2 ತಿಂಗಳಾದರೂ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸರಕಾರ, ಇಲಾಖೆಗೆ ನಿರ್ಧಾರ ತೆಗೆದುಕೊಂಡಿಲ್ಲ. ಕೆಲಸ ಮಾಡುತ್ತಿರುವವರನ್ನು ಖಾಯಂಗೊಳಿಸಿ ಪಾಠಪ್ರವಚನ ನಡೆಯುವಂತೆಯೂ ಹೇಳುತ್ತಿಲ್ಲ.  ದಿನಕ್ಕೊಂದು ಸುತ್ತೋಲೆ ಕಳುಹಿಸಿ ಆಟವಾಡುತ್ತಿದ್ದಾರೆ ಎಂದರು. 

ಜು. 31 ರಂದು ಕಳುಹಿಸಿದ 3ನೇ ಸುತ್ತೋಲೆಯಲ್ಲಿ 10, 15 ವರ್ಷಗಳ ಸೇವೆ ಕೈಬಿಟ್ಟು 5 ವರ್ಷದ ಸೇವಾವಧಿ ಪರಿಗಣಿಸುವಂತೆ ಆದೇಶ ನೀಡಿದೆ. ಇದರಿಂದ ನೂರಾರು ಅತಿಥಿ ಉಪನ್ಯಾಸಕರು ಬೀದಿಗೆ ಬೀಳುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. 

10,000 ರೂ. ಸಂಬಳಕ್ಕೆ ದುಡಿಯುತ್ತಿರುವ ನಮ್ಮನ್ನು ಕಾಲೇಜು ಶಿಕ್ಷಣ ಇಲಾಖೆ ಏಕಾಏಕಿ ಮನೆಗೆ ಹೋಗುವಂತೆ ಮಾಡಿದೆ. ನಾವು ಲಕ್ಷಾಂತರ ರೂ. ವೇತನ ಕೇಳುತ್ತಿಲ್ಲ. ಬದುಕುವ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಎಂದು ಕೇಳಿದರೂ ಸರಕಾರ ಕ್ರೌರ್ಯ ತೋರಿಸುತ್ತಿದೆ.

ಪ್ರಾಂಶುಪಾಲರು, ವಿ.ವಿ.ಗಳು ಕೈ ಕಟ್ಟಿ ಕುಳಿತಿವೆ. ಸರಕಾರಿ ಕಾಲೇಜುಗಳನ್ನು ಮುಚ್ಚಿ, ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳುವ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ರಂಜಿತ್‌ ಕುಮಾರ್‌ ಶೆಟ್ಟಿ ಆರೋಪಿಸಿದರು. 

Advertisement

ಅತಿಥಿ ಉಪನ್ಯಾಸಕರಾದ ಅನಿಲ್‌ ಕುಮಾರ್‌, ಶ್ರೀನಿವಾಸ ಕೆ., ನಾಗೇಶ್‌ ಬೈಂದೂರು, ಶ್ರೀಲತಾ, ರವಿಚಂದ್ರ ಬಾಯರಿ, ಶುಭಾಶ್ರೀ , ತೃಪ್ತಿ, ಸುನೀತಾ, ಭವ್ಯಶ್ರೀ, ಜಯ ಕರ್ನಾಟಕ ಸಂಘಟನೆಯ ರಮೇಶ್‌ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್‌ ಅಹಮದ್‌, ಸಿಐಟಿಯುನ ಬಾಲಕೃಷ್ಣ ಶೆಟ್ಟಿ, ಕವಿರಾಜ್‌ ಉಪಸ್ಥಿತರಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next