ಸಾಲಿಗ್ರಾಮ ಪ.ಪಂ. ದಾರಿದೀಪ ನಿರ್ವಹಣೆಗಾಗಿ ವರ್ಷಕ್ಕೆ ಸುಮಾರು 14 ಲಕ್ಷ ರೂ. ವೆಚ್ಚ ಮಾಡುತ್ತದೆ. ಆದರೂ ಎಲ್ಲ ದೀಪ ಸರಿಯಾಗಿ ಉರಿಯುವುದಿಲ್ಲ. ಹಾಳಾದ ದೀಪಗಳು ದುರಸ್ತಿಗೊಳ್ಳಲು ಹಲವು ತಿಂಗಳು ಬೇಕು. ಈ ಬಗ್ಗೆ ದೂರು ಕೇಳಿಬಂದರೂ ಸಾಮಾನ್ಯ ಸಭೆಯ ಚರ್ಚೆಗಷ್ಟೇ ಸೀಮಿತ. ಆಮೇಲೆ ವ್ಯವಸ್ಥೆ ಸರಿಪಡಿಸಬೇಕಾದ ಅಧಿಕಾರಿಗಳು ತಣ್ಣಗಿರುತ್ತಾರೆ, ಜನರು ಕತ್ತಲೆಯಲ್ಲಿರುತ್ತಾರೆ. ಈ ಬಾರಿಯಾದರೂ ವ್ಯವಸ್ಥೆ ಸರಿಯಾಗುತ್ತದೋ ಕಾದು ನೋಡಬೇಕು.
ಕೋಟ: ಬೀದಿ ದೀಪದ ನಿರ್ವಹಣೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ವೈಫಲ್ಯಗಳಲ್ಲಿ ಒಂದು. ಈ ಬಗ್ಗೆ ಹಲವು ಬಾರಿ ದೂರುಗಳು ಕೇಳಿಬಂದಿವೆ. ಸದಸ್ಯರೂ ಹಲವು ಸಾಮಾನ್ಯಸಭೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ವ್ಯವಸ್ಥೆ ಇದುವರೆಗೂ ಸುಧಾರಣೆಗೊಂಡಿಲ್ಲ.
ಇದೇ ಕಾರಣಕ್ಕೆ ನಿರ್ವಹಣಾ ಗುತ್ತಿಗೆದಾರರನ್ನು ಮತ್ತೆ-ಮತ್ತೆ ಬದಲಾಯಿಸಲಾಗುತ್ತದೆ. ಇದೀಗ ಎಪ್ರಿಲ್ 1ರಿಂದ ಮತ್ತೆ ಗುತ್ತಿಗೆದಾರರನ್ನು ಬದಲಾಯಿಸಿದ್ದು, ಇವರ ಕಾರ್ಯ ನಿರ್ವ ಹಣೆಯನ್ನು ಕಾದು ನೋಡಬೇಕಿದೆ.
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಒಟ್ಟು 1,308 ದಾರಿದೀಪಗಳಿವೆ. ಪ್ರತಿ ತಿಂಗಳು 55 ಸಾವಿರ ರೂ.ಗಳಂತೆ ಒಟ್ಟು 6.60 ಲಕ್ಷ ರೂ. ಗಳನ್ನು ನಿರ್ವಹಣೆಗಾಗಿ ಗುತ್ತಿಗೆದಾರರಿಗೆ ಪಾವತಿಸಲಾಗುತ್ತದೆ. ಒಂದು ವರ್ಷ ಅಥವಾ ಆರು ತಿಂಗಳ ಅವಧಿಗೆ ನಿರ್ವಹಣೆ ನೀಡಲಾಗುತ್ತದೆ.
ಪ್ರತಿ ತಿಂಗಳು 70 ಸಾವಿರ ರೂಗಳಂತೆ 8.40 ಲಕ್ಷ ರೂ. ಗಳನ್ನು ವಿದ್ಯುತ್ ಬಿಲ್‌ಗಾಗಿ ವ್ಯಯಿಸಲಾಗುತ್ತಿದ್ದು, ವಾರ್ಷಿಕವಾಗಿ ಸುಮಾರು 15 ಲಕ್ಷ ರೂ. ಗಳನ್ನು ನಿರ್ವಹಣೆಗಾಗಿ ಖರ್ಚು ಮಾಡಲಾಗುತ್ತದೆ. ಹಾಳಾದ ದೀಪಗಳ ದುರಸ್ತಿ ಮತ್ತು ಬೀದಿದೀಪಗಳನ್ನು ಪ್ರತಿ ದಿನ ಆನ್-ಆಫ್ ಮಾಡುವ ಹೊಣೆಗಾರಿಕೆ ಗುತ್ತಿಗೆದಾರರದ್ದು.
ಬಿಲ್ ತಡೆ ಹಿಡಿಯಿರಿ
ಗುತ್ತಿಗೆದಾರರು ಸರಿಯಾಗಿ ನಿರ್ವಹಿಸದಿದ್ದರೆ ಬಿಲ್ ತಡೆ ಹಿಡಿಯಬೇಕು. ಅದರೊಂದಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲೇ ಸರಿಯಾದ ಷರತ್ತುಗಳನ್ನು ವಿಧಿಸಬೇಕು ಎನ್ನುವ ಸಲಹೆಯೂ ಸದಸ್ಯರಿಂದ ಹಿಂದೆ ವ್ಯಕ್ತವಾಗಿದೆ. ಆದರೂ ಅಧಿಕಾರಿಗಳು ಅದಕ್ಕೆ ಮನಸ್ಸು ಮಾಡದಿರುವುದು ನಿಗೂಢವಾಗಿದೆ.
ಪ್ರತಿ ಬಾರಿ ದೂರು
ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಎಂಬ ಆರೋಪ ಇದೆ. ಹೀಗಾಗಿಯೇ ದಾರಿ ದೀಪಗಳು ಆಗಾಗ್ಗೆ ಹಾಳಾಗುತ್ತವೆ. ಕೂಡಲೇ ಹಾಳಾದ ಟ್ಯೂಬ್‌ಗಳನ್ನು ಬದಲಾಯಿಸುವುದಿಲ್ಲ. ಕೆಲವೊಮ್ಮೆ ನಿರ್ವಹಣೆಗೆ ತಿಂಗಳುಗಟ್ಟಲೆ ತೆಗೆದುಕೊಳ್ಳಲಾಗುತ್ತದೆ ಎನ್ನುವ ದೂರು ಇದೆ. ಈ ಬಗ್ಗೆ ಸಾಮಾನ್ಯ ಸಭೆಗಳಲ್ಲೂ ಚರ್ಚೆ ನಡೆದಿದೆ. ಆದರೂ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಮಾಡಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬುದು ಕೇಳಿಬರುತ್ತಿರುವ ಅಭಿಪ್ರಾಯ.