Advertisement

ಬೀದಿನಾಯಿ ಹಾವಳಿ: ದಿನನಿತ್ಯ ಜನರ ಮುಗಿಯದ ಗೋಳು

09:39 PM Jul 01, 2019 | Lakshmi GovindaRaj |

ಸಕಲೇಶಪುರ: ಪಟ್ಟಣದಲ್ಲಿ ಬೀದಿನಾಯಿಗಳ ಕಾಟದಿಂದ ಜನತೆ ಕಂಗಾಲಾಗಿದ್ದು, ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ಪುರಸಭೆಯವರಿಗೆ ಕಿರುಕುಳ ನೀಡುತ್ತಿರುವುದರಿಂದ ನಾಯಿ ಸಮಸ್ಯೆ ಉಂಟಾಗಲು ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇತ್ತೀಚೆಗೆ ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು ನಾಗರಿಕರು ಇದರಿಂದ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಪಟ್ಟಣದ ಪೋಲಿಸ್‌ ವಸತಿ ಬಡಾವಣೆಯ ಸಮೀಪ ನಾಯಿಗಳ ಕಾಟ ಹೆಚ್ಚಾಗಿದ್ದು ಪ್ರೇಮ ನಗರ ಬಡಾವಣೆಯ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುವ ಮಹಿಳೆಯೊಬ್ಬರಿಗೆ ನಾಯಿಗಳು ಕಚ್ಚಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗ್ರಾಮಾಂತರ ಠಾಣೆಯ ಪೋಲಿಸ್‌ ಅಧಿಕಾರಿಯೊಬ್ಬರ 5 ವರ್ಷದ ಮಗನಿಗೆ ನಾಯಿ ಕಚ್ಚಿದ ಪರಿಣಾಮ ಬಾಲಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಇನ್ನು ಹಲವು ಬಡಾವಣೆಗಳಲ್ಲಿ ಸಹ ನಾಯಿಗಳು ಸಾರ್ವಜನಿಕರಿಗೆ ಕಚ್ಚಿರುವ ಉದಾಹರಣೆ ಇದೆ.

ಮಾಂಸ ಮಾರಾಟ ಅಂಗಡಿಗಳ ನಿರ್ಲಕ್ಷ್ಯ: ಆಜಾದ್‌ ರಸ್ತೆಯಲ್ಲಿ ಮಾಂಸದ ಮಾರಾಟದ ಅಂಗಡಿಗಳು ಹೆಚ್ಚಾಗಿದ್ದು, ಇಲ್ಲಿ ಮಾಂಸದ ತ್ಯಾಜ್ಯಗಳನ್ನು ಹೇಮಾವತಿ ನದಿ ದಂಡೆಯ ಸಮೀಪ ಖಾಲಿ ಜಾಗದಲ್ಲಿ ಬಿಸಾಡುವುದರಿಂದ ನಾಯಿಗಳು ಈ ತ್ಯಾಜ್ಯಗಳನ್ನು ತಿನ್ನಲು ಬರುತ್ತದೆ. ಇದರಿಂದ ಗುಂಪು ಗುಂಪಿನಲ್ಲಿ ನಾಯಿಗಳು ಇಲ್ಲಿ ಸಂಚರಿಸುತ್ತಿದೆ.

ಮಕ್ಕಳನ್ನು ಹೊರಗೆ ಕಳುಹಿಸಲು ಭಯ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಾಯಿಗಳ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಲಾಗಿದ್ದರೂ ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ಬಿಟ್ಟರೆ ನಾಯಿಗಳ ಹಾವಳಿ ನಿಯಂತ್ರಿಸಲು ಯಾವ ಕ್ರಮವನ್ನು ಕೈಗೊಳ್ಳದಿರುವುದು ಜನರ ಭಯ ಹೆಚ್ಚಿಸಿದೆ.

Advertisement

ಭಯದ ವಾತಾವರಣ: ಪ್ರತಿದಿನವೂ ಜನರು ಮನೆಯಿಂದ ಹೊರಬರುವಾಗ ಅಥವ ತೆರಳುವಾಗ ದಾರಿಯಲ್ಲಿ ಭಯಬೀತರಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ವಿದ್ಯುತ್‌ ಕಡಿತವಾದ ಸಂದರ್ಭದಲ್ಲಿ ರಸ್ತೆಗಳಲ್ಲಿ ಓಡಾಡುವಾಗ ಬೀದಿನಾಯಿಗಳು ದಾಳಿ ಮಾಡುತ್ತವೆ ಎಂದು ಅನೇಕ ನಾಗರಿಕರು ದೂರುತ್ತಿದ್ದಾರೆ.

ವಾಹನ ಸವಾರರಿಗೂ ನಾಯಿಗಳ ಕಾಟ: ಬೆಳಗ್ಗೆ ಮತ್ತು ಸಂಜೆ ವಾಕಿಂಗ್‌ ಹೋಗುವ ಅನೇಕರು ಇದೀಗ ಕೈಯಲ್ಲಿ ಲಾಠಿ ಹಿಡಿದು ಒಡಾಡಬೇಕಿದೆ. ಶ್ವಾನಗಳಿಂದ ಮುಕ್ತಿ ಪಡೆಯಲು ಜನರು ನರಕಯಾತನೆ ಅನುಭವಿಸುವಂತಾಗಿದೆ. ಪಾದಚಾರಿಗಳಿಗೆ ಮಾತ್ರ ಈ ನಾಯಿಗಳ ಕಾಟ ಸೀಮಿಗೊಂಡಿಲ್ಲ. ದ್ವಿಚಕ್ರವಾಹನ ಚಾಲಕರಿಗೂ ಬೆನ್ನಟ್ಟಿಬಂದು ಕಚ್ಚುತ್ತಿವೆ.

ಇದರಿಂಗ ಗಲಿಬಿಲಿಗೊಂಡ ಅನೇಕ ದ್ವಿಚಕ್ರ ವಾಹನ ಚಾಲಕರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗಳಾದ ಉದಾಹರಣೆಗಳು ಬಹಳಷ್ಟು ಇದೆ. ಸಣ್ಣ ಮಕ್ಕಳು ಸೇರಿದಂತೆ ಹಲವಾರು ಜನರ ಮೇಲೆ ಬಹಳಷ್ಟು ಬಾರಿ ಬೀದಿನಾಯಿ ದಾಳಿಮಾಡಿದ್ದು, ಇಲ್ಲಿಯ ಸರಕಾರಿ ಅಸ್ಪತ್ರೆಯಲ್ಲಿ ಅದಕ್ಕೆ ಬೇಕಾದ ಚುಚ್ಚು ಮದ್ದು, ಔಷದಿ ದೊರಕದೆ ಬಹಳಷ್ಟು ಮಂದಿ ತೊಂದರೆ ಅನುಭವಿಸಿದ್ದಾರೆ.

ಪ್ರಾಣಿದಯಾ ಸಂಘದ ಕಿರುಕುಳ: ಪುರಸಭೆಯ ಮುಖ್ಯಾಧಿಕಾರಿ ವಿಲ್ಸನ್‌ ಅವರು ನಾಯಿಗಳನ್ನು ಹಿಡಿಸಿ ನಿಯಮದಂತೆ ಸಂತಾನ ಶಕ್ತಿ ಹರಣ ಪ್ರಯತ್ನ ಮಾಡಿದಾಗ ನಾಯಿಗಳನ್ನು ಕೊಂದು ಸುಭಾಷ್‌ ಮೈದಾನದಲ್ಲಿ ಹೂಳಲಾಗಿದೆ ಎಂದು ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ಕೆಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಇದರಿಂದ ನಾಯಿ ಹಿಡಿಸಿದ ತಪ್ಪಿಗೆ ಪುರಸಭಾ ಮುಖ್ಯಾಧಿಕಾರಿ ವಿಲ್ಸನ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಬೇಕಾಯಿತು. ಆದರೆ ಅಂತಿಮವಾಗಿ ಪ್ರಕರಣದಲ್ಲಿ ಪುರಸಭೆ ಪರ ತೀರ್ಪು ಬಂದಿದ್ದರಿಂದ ವಿಲ್ಸನ್‌ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಈ ಹಿನ್ನೆಲೆಯಲ್ಲಿ ಅವರು ನಾಯಿ ಹಿಡಿಸುವ ಗೋಜಿಗೆ ಹೋಗುತ್ತಿಲ್ಲ.

ನಾಯಿಗಳ ಹಾವಳಿ ತಪ್ಪಿಸಿ: ನಿಯಮದ ಪ್ರಕಾರ ಬೀದಿನಾಯಿಗಳನ್ನು ಹಿಡಿದು ಅದಕ್ಕೆ ಸಂತನಹರಣ ಚಿಕಿತ್ಸೆ ಮಾಡಿಸಿ ಪುನಃ ಅದು ಇದ್ಧ ಸ್ಥಳದಲ್ಲಿ ಬಿಡಬೇಕು. ಆದರೆ ಕೇವಲ ಸಂತನಹರಣ ಚಿಕಿತ್ಸೆ ಮಾಡಿದಲ್ಲಿ ನಾಯಿಗಳ ಸಂಖ್ಯೆ ತುಸು ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ, ಆದರೆ ನಾಯಿಗಳು ಸಾರ್ವಜನಿಕರಿಗೆ ಕಚ್ಚುವುದನ್ನು ಮಾತ್ರ ತಪ್ಪಿಸಲಾಗುವುದಿಲ್ಲ. ಆದ್ದರಿಂದ ಸಂಭಂಧಪಟ್ಟವರು ಇನ್ನಾದರು ಈ ಬಗ್ಗೆ ಗಮನ ಹರಿಸಿ ಬೀದಿ ನಾಯಿಗಳ ಹಾವಳಿಯನ್ನು ತಡೆಯಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಹೈಕೋರ್ಟ್‌ ಆದೇಶದಂತೆ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತದೆ. ಆದರೆ ನಾಯಿಗಳನ್ನು ಹಿಡಿಯಲು ಮುಂದಾದರೆ ಕೆಲವರು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಅಳವಡಿಸಿಕೊಂಡಿರುವ ಕೆಲವೊಂದು ಪ್ರಾಣಿ ದಯಾಳು ಸಂಘಗಳ ಸಹಯೋಗದಲ್ಲಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗುವುದು.
-ವಿಲ್ಸನ್‌, ಪುರಸಭಾ ಮುಖ್ಯಾಧಿಕಾರಿ

ಬೀದಿ ನಾಯಿಗಳ ಹಾವಳಿ ಪಟ್ಟಣದಲ್ಲಿ ಮಿತಿಮೀರಿದೆ. ಮಕ್ಕಳು, ವೃದ್ಧರನ್ನು ಹೊರಗೆ ಕಳುಹಿಸುವುದಕ್ಕೆ ಆತಂಕವಾಗುತ್ತಿದೆ. ಕೂಡಲೇ ನಾಯಿ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿ ಪಟ್ಟಣದ ನಾಗರಿಕರಿಗೆ ನಾಯಿಗಳಿಂದ ರಕ್ಷಣೆ ನೀಡಬೇಕು.
-ಕಸ್ತೂರಿ, ಪಟ್ಟಣ ನಿವಾಸಿ

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next