ಸಾಗರ: ಇಲ್ಲಿನ ಗಾಂಧಿನಗರದ ಬೆಳಲಮಕ್ಕಿ ಭಾಗದಲ್ಲಿ ಇಬ್ಬರು ಮಕ್ಕಳಿಗೆ ಬೀದಿನಾಯಿ ಕಚ್ಚಿದ ಘಟನೆ ಶನಿವಾರ ನಡೆದಿದ್ದು, ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಲಮಕ್ಕಿಯ ಕೇಶವ ಎಂಬುವವರ 8 ವರ್ಷದ ಪುತ್ರ ಧನುಷ್ ಎಂಬುವವರು ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಯಿ ಕುತ್ತಿಗೆ, ಕೆನ್ನೆ ಇನ್ನಿತರ ಕಡೆ ಕಚ್ಚಿದೆ. ಜೊತೆಗೆ ರೋಷನ್ ಎಂಬುವವರ ಪುತ್ರಿ 5 ವರ್ಷದ ರಿಸೆಲ್ ಅವರಿಗೂ ನಾಯಿ ಕೈ ಮತ್ತು ಕಾಲಿಗೆ ಕಚ್ಚಿದೆ. ಗಂಭೀರವಾಗಿ ಗಾಯಗೊಂಡ ಮಕ್ಕಳನ್ನು ಉಪವಿಭಾಗೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗಾಂಧಿನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಬೀದಿ ನಾಯಿ ಮತ್ತು ಹಂದಿ ಕಾಟ ವಿಪರೀತವಾಗಿದೆ. ಜನರು ರಸ್ತೆಯ ಮೇಲೆ ತಿರುಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯವರು ನಾಯಿ ನಿಯಂತ್ರಣಕ್ಕೆ ಟೆಂಡರ್ ಕರೆದಿದ್ದೇವೆ ಎಂದು ಹೇಳುತ್ತಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ.
ನಾಯಿ ಕಾಟ ನಿಯಂತ್ರಿಸಿ: ಗಾಂಧಿನಗರ ಭಾಗದಲ್ಲಿ ನಾಯಿ ಕಾಟ ವಿಪರೀತವಾಗಿದ್ದು, ನಗರಸಭೆ ನಾಯಿ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಾರ್ಡ್ ಸದಸ್ಯ ಗಣಪತಿ ಮಂಡಗಳಲೆ ತಿಳಿಸಿದ್ದಾರೆ.
ಈಗಾಗಲೇ ನಗರಸಭೆಗೆ ನಾಯಿ ಹಿಡಿದು ಅದನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ, ನಾಯಿಕಾಟ ನಿಯಂತ್ರಿಸುವಂತೆ ಮನವಿ ಮಾಡಿದ್ದಾಗ್ಯೂ ಸ್ಪಂದಿಸುತ್ತಿಲ್ಲ. ಈ ಭಾಗದಲ್ಲಿ ಮಕ್ಕಳು ಮತ್ತು ದೊಡ್ಡವರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.