ಬೈಂದೂರು: ಕಾರವಾರ -ಕುಂದಾಪುರ ಚತುಷ್ಪಥ ಹೆದ್ದಾರಿ ಆರಂಭಗೊಂಡು ಒಂದು ವರ್ಷ ಕಳೆದಿದೆ. ಈ ಹೆದ್ದಾರಿಗೆ ಅಳವಡಿಸಿದ ಬಹುತೇಕ ಬೀದಿ ದೀಪಗಳು ಬೆಳಗುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಕಂಪೆನಿ ಈ ಬಗ್ಗೆ ಗಮನಹರಿಸದೆ ದಿನದೂಡು ತ್ತಿದೆ. ಹೆದ್ದಾರಿ ರಾತ್ರಿ ವೇಳೆ ಭೀತಿ ಹುಟ್ಟಿಸುತ್ತಿದೆ.
ಹಿಂದೆ ಹಳೆಯ ಹೆದ್ದಾರಿಯಲ್ಲಿ ಪ್ರತಿ ಊರಿಗೆ ಆಯಾ ಪಂಚಾಯತ್ ವತಿಯಿಂದ ಬೀದಿ ದೀಪ ಅಳವಡಿಸಲಾಗಿತ್ತು. ಮಾತ್ರವಲ್ಲದೆ ಇದರ ನಿರ್ವಹಣೆ ಜವಾಬ್ದಾರಿ ಕೂಡ ಗ್ರಾ.ಪಂ. ವಹಿಸಿಕೊಂಡಿತ್ತು. ಇದಾದ ಬಳಿಕ 2014-15ರಲ್ಲಿ ಚತುಷ್ಪಥ ಕಾಮಗಾರಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಅಳವಡಿಸಿದ್ದ ಬೀದಿ ದೀಪಗಳನ್ನು ತೆರವು ಮಾಡಲಾಯಿತು. ಜನರಿಂದ ಪ್ರತಿಭಟನೆ ಮತ್ತು ಆಕ್ಷೇಪ ವ್ಯಕ್ತವಾದ ಬಳಿಕ ಹೆದ್ದಾರಿ ಹಾಗೂ ಕಂಪೆನಿ ಅಧಿಕಾರಿಗಳು ಗ್ರಾ.ಪಂ.ಗೆ
ಬಂದು ಕಾಮಗಾರಿ ಮುಗಿಯುವ ವೇಳೆ ಹೆದ್ದಾರಿ ಸಂಪೂರ್ಣವಾಗಿ ಬೀದಿದೀಪ ವ್ಯವಸ್ಥೆ ಕಲ್ಪಿಸಲಾಗು ವುದು ಎಂದಿದ್ದರು. ಆದರೆ ಕಾಮಗಾರಿ ಮುಗಿದ ಬಳಿಕ ಹೆದ್ದಾರಿಯಲ್ಲಿ ಅಲ್ಲಲ್ಲಿ ಮಾತ್ರ ಸಾಲು ಸಾಲು ಕಂಬಗಳು ಕಾಣುತ್ತದೆ ಬಿಟ್ಟರೆ ರಾತ್ರಿ ಬೆಳಗುತ್ತಿಲ್ಲ.
ಹೆದ್ದಾರಿಯಲ್ಲಿ ಬೆಳಕು ವ್ಯವಸ್ಥೆ ಸರಿಪಡಿಸ ದಿರುವುದರಿಂದ ರಾತ್ರಿ ವೇಳೆ ವಾಹನದ ಬೆಳಕು ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಕೇವಲ ಕರ್ಗತ್ತಲು ಆವರಿಸಿರುತ್ತದೆ. ಹೆದ್ದಾರಿ ಇಲಾಖೆ ಕೇವಲ ಆಯ್ದ ಕಡೆಗಳಲ್ಲಿ ಮಾತ್ರ ದೀಪ ಅಳವಡಿಸಿರುವುದು. ಉಳಿದ ಕಡೆ ಗ್ರಾ.ಪಂ. ಅಳವಡಿಸಬೇಕಾಗಿದೆ. ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.
ಪಂ.ವತಿಯಿಂದ ಈಗಾಗಲೇ ಎರಡೆರಡು ಬಾರಿ ಪತ್ರ ಬರೆಯಲಾಗಿದೆ.ಅಧಿಕಾರಿಗಳು ದುರಸ್ತಿ ಮಾಡುವ ಭರವಸೆ ಮಾತ್ರ ನೀಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ಲಕ್ಷ್ಯ ಈ ರೀತಿಯ ಅಪಘಾತಗಳಿಗೆ ಕಾರಣವಾಗುತ್ತಿದೆ.
-ಮಂಜುನಾಥ ಶೆಟ್ಟಿ , ಅಭಿವೃದ್ಧಿ ಅಧಿಕಾರಿ ಶಿರೂರು ಗ್ರಾ.ಪಂ.
ಹೆದ್ದಾರಿಯ ಎಲ್ಲ ಕಡೆಗಳಲ್ಲಿ ಬೀದಿದೀಪ ಅಳವಡಿಸದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಕಳೆದ 2 ತಿಂಗಳುಗಳಿಂದ ಹೆದ್ದಾರಿಯ ಬಹುತೇಕ ಬೀದಿ ದೀಪಗಳು ಬೆಳಗುತ್ತಿಲ್ಲ. ಅಧಿಕಾರಿಗಳಿಗೆ ಕೇಳಿದರೆ ದುರಸ್ತಿಯಲ್ಲಿದೆ ಎನ್ನುವ ಉತ್ತರ. ಶೀಘ್ರವಾಗಿ ದುರಸ್ತಿ ಮಾಡಿದ್ದರೆ ಸಾರ್ವಜನಿಕರಿಗೆ ಉಪಕಾರವಾಗುತ್ತಿತ್ತು.
-ಚಂದ್ರ ಬೈಂದೂರು, ಸ್ಥಳೀಯರು