ಮುಂಬಯಿ: ಇತ್ತೀಚೆಗೆ ಬಾಲಿವುಡ್ (Bollywood) ಹಾಸ್ಯ ನಟ ಸುನೀಲ್ ಪಾಲ್‌ನನ್ನು ಕೆಲ ಅಪರಿಚಿರು ಅಪಹರಣ ಮಾಡಿರುವ ಘಟನೆಯ ಕುರಿತು ಸುದ್ದಿಯಾಗಿತ್ತು. ಇದೀಗ ಅಂಥದ್ದೇ ಘಟನೆ ಮತ್ತೊಬ್ಬ ನಟನ ಜತೆ ಆಗಿದೆ.
ಬಾಲಿವುಡ್ ನಟ ಮುಷ್ತಾಕ್ ಖಾನ್ (Actor Mushtaq Khan) ಅವರನ್ನು ಕೆಲ ಅಪರಿಚಿತರ ತಂಡವೊಂದು ಅಪಹರಣ ಮಾಡಿ ಹಿಂಸೆ ನೀಡಿರುವ ಘಟನೆ ಕುರಿತು ವರದಿಯಾಗಿದೆ.
ಏನಿದು ಘಟನೆ?: ನಟ ಅಪಹರಣವಾದ ಕುರಿತು ಅವರ ಸ್ನೇಹಿತ ಶಿವಂ ಯಾದವ್ ʼಇಂಡಿಯಾ ಟುಡೇʼ ಜತೆ ಮಾತನಾಡಿದ್ದಾರೆ.
ಅವಾರ್ಡ್ ಕಾರ್ಯಕ್ರವವಿದೆ ಎಂದು ಮುಸ್ತಾಕ್ ಅವರಿಗೆ ನವೆಂಬರ್ 20ಕ್ಕೆ ಕರೆಯೊಂದು ಬಂದಿತ್ತು. ಸಂಘಟಕರು ಮುಂಗಡ ಹಣವನ್ನು ಅವರ ಖಾತೆಗೆ ವರ್ಗಾಯಿಸಿ, ವಿಮಾನ ಟಿಕೆಟ್‌ಗಳನ್ನು ಸಹ ನೀಡಿದ್ದರು. ಅವರು ದೆಹಲಿ ತಲುಪಿದಾಗ ಅವರನ್ನು ಕಾರಿನೊಳಗೆ ಕೂರಲು ಹೇಳಲಾಯಿತು. ಆ ಬಳಿಕ ಅವರನ್ನು ದೆಹಲಿಯ ಬಿಜ್ನೋರ್ ಬಳಿ ಕರೆದುಕೊಂಡು ಹೋಗಿದ್ದರು.
ಇದನ್ನೂ ಓದಿ: Most Searched Movies& Shows:ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ಹಾಗೂ ಶೋಗಳಿವು
ಅಲ್ಲಿಂದ ಅಪಹರಣಕಾರರು ಮುಸ್ತಾಕ್ ಅವರನ್ನು ಬೆದರಿಸಿ, ಹಿಂಸೆ ನೀಡಿದರು. 12 ಗಂಟೆಗಳ ಕಾಲ ಚಿತ್ರಹಿಂಸೆ ನೀಡಲಾಯಿತು. ನಟ ಮತ್ತು ಅವರ ಮಗನ ಖಾತೆಯಿಂದ 2 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸುಲಿಗೆ ಮಾಡಿದ್ದಾರೆ. ಅಪಹರಣಕಾರರು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ.
ಮುಂಜಾನೆ ಮಸೀದಿಯೊಂದರ ಅಜಾನ್ (ಬಾಂಗ್) ಕೇಳಿದಾಗ, ಪಕ್ಕದಲ್ಲಿ ಮಸೀದಿ ಇದೆ ಎಂದು ಅಪಹರಣಕಾರರ ಕಣ್ತಪ್ಪಿಸಿ ನಿಗೂಢ ಸ್ಥಳದಿಂದ ಓಡಿಹೋಗಿ ಮಸೀದಿ ತಲುಪಿ ಅಲ್ಲಿನ ಸ್ಥಳೀಯರ ಸಹಾಯ ಪಡೆದು ಪೊಲೀಸ್ ಠಾಣೆಗೆ ತಲುಪುತ್ತಾರೆ. ಅಲ್ಲಿಂದ ಮನೆಗೆ ಬಂದಿದ್ದಾರೆ ಎಂದು ಶಿವಂ ಹೇಳಿದ್ದಾರೆ.
ಶಿವಂ ಬಿಜ್ನೋರ್‌ಗೆ ತೆರಳಿ ಮುಷ್ತಾಕ್ ಪರವಾಗಿ ಎಫ್‌ಐಆರ್ ದಾಖಲಿಸಿದ್ದಾರೆ.. ವಿಮಾನ ಟಿಕೆಟ್‌ಗಳು, ಬ್ಯಾಂಕ್ ವಹಿವಾಟಿನ ವಿವರಗಳು ಮತ್ತು ವಿಮಾನ ನಿಲ್ದಾಣದ ಸಮೀಪವಿರುವ ಸಿಸಿಟಿವಿ ದೃಶ್ಯಗಳು ಸೇರಿದಂತೆ ಕೆಲ ಸಾಕ್ಷ್ಯಗಳೊಂದಿಗೆ ಅವರು ದೂರು ನೀಡಿದ್ದಾರೆ.
ಸದ್ಯ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟ ಸುನೀಲ್ ಪಾಲ್ ಅವರನ್ನು ಕೂಡ ಇದೇ ರೀತಿಯಾಗಿ ಅಪಹರಣ ಮಾಡಲಾಗಿತ್ತು.
ಸದ್ಯಮುಸ್ತಾಕ್ ಅವರು ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿದ್ದು, ಚೇತರಿಸಿಕೊಂಡ ಬಳಿಕ ಮಾಧ್ಯಮದೊಂದಿಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.
ʼವೆಲ್ ಕಂʼ , ʼಸ್ತ್ರೀ 2ʼ, ʼಗದರ್: ಏಕ್ ಪ್ರೇಮ್ ಕಥಾʼ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಮುಸ್ತಾಕ್ ನಟಿಸಿದ್ದಾರೆ.