Advertisement
ಇತ್ತೀಚೆಗೆ ವಿಭೂತಿಪುರದಲ್ಲಿ ಪ್ರವೀಣ್ ಎಂಬ ಬಾಲಕನ ಮೇಲೆ ಹತ್ತಾರು ನಾಯಿಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕ ಸಾವನ್ನಪ್ಪಿದ್ದನು. ಆ ನಂತರವೂ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪರಿಣಾಮ ನಗರದಲ್ಲಿ ನಾಯಿ ದಾಳಿ ಪ್ರಕರಣಗಳು ಮರುಕಳಿಸುತ್ತಿದ್ದು, ಗುರುವಾರ ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Related Articles
Advertisement
ಕಚ್ಚಿದ ಬಳಿಕ ಕಾರ್ಯಾಚರಣೆ: ಬೀದಿ ನಾಯಿಗಳ ಹಾವಳಿಯ ಬಗ್ಗೆ ಎಷ್ಟು ದೂರು ನೀಡಿದರೂ ಕಾರ್ಯಾಚರಣೆಗೆ ಪಾಲಿಕೆಯ ಸಿಬ್ಬಂದಿ ಮುಂದಾಗದೆ, ಜನರಿಗೆ ಕಚ್ಚಿ ಸುದ್ದಿಯಾದಾಗ ಮಾತ್ರವೇ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ವಿಭೂತಿಪುರದಲ್ಲಿ ನಾಯಿ ಹಾವಳಿ ಬಗ್ಗೆ ಹಲವು ಬಾರಿ ದೂರು ನೀಡಿದರೂ ಮುಂದಾಗದ ಪಾಲಿಕೆ ಸಿಬ್ಬಂದಿ, ನಾಯಿ ದಾಳಿಯಿಂದ ಬಾಲಕ ಮೃತಪಟ್ಟ ನಂತರದಲ್ಲಿ ಅಲ್ಲಿನ ನಾಯಿಗಳನ್ನು ಸೆರೆ ಹಿಡಿದಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ವಾದವೇನು?: ಪಾಲಿಕೆಯಿಂದ ನಗರದ ಎಲ್ಲ ವಲಯಗಳಲ್ಲಿ ಸಂತನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ನಂತರ ನಾಯಿಗಳು ಕಚ್ಚುವುದಿಲ್ಲ ಎಂದು ಹೇಳಲಾಗುವುದಿಲ್ಲ. ಪಾಲಿಕೆಯಿಂದ ಈಗಾಗಲೇ ರಾಜಾಜಿನಗರದಲ್ಲಿ ಮಕ್ಕಳ ಮೇಲೆ ದಾಳಿ ನಡೆಸಿದ ನಾಯಿಗಳನ್ನು ಸೆರೆ ಹಿಡಿದಿದ್ದು, ಸುತ್ತಮುತ್ತಲಿನ ನಾಯಿಗಳನ್ನು ವಶಕ್ಕೆ ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಪಾಲಿಕೆಯ ಪಶುಪಾಲನ ವಿಭಾಗದ ಜಂಟಿ ಆಯುಕ್ತ ಆನಂದ್ ಹೇಳಿದರು.
ಈ ಮೊದಲು ಅತ್ಯಂತ ವ್ಯಾಘ್ರವಾಗಿರುವ ಹಾಗೂ ವಾಹನಗಳನ್ನು ಬೆನ್ನಟ್ಟುವಂತಹ ನಾಯಿಗಳನ್ನು ಹಿಡಿದು ನಾಯಿ ಗೂಡುಗಳಲ್ಲಿ ಇರಿಸಿ ಅವುಗಳನ್ನು ನೋಡಿಕೊಳ್ಳಲಾಗುತ್ತಿತ್ತು. ಆದರೆ, ಕೆಲವು ಪ್ರಾಣಿ ಪ್ರಿಯರು ಸುಪ್ರೀಂ ಕೋರ್ಟ್ ಮೊರೆ ಹೋಗಿ, ನಾಯಿಗಳನ್ನು ಕೂಡಿ ಹಾಕುವ ನಿಯಮಕ್ಕೆ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಪಾಲಿಕೆಯಿಂದ ನಾಯಿಗಳಿಗೆ ಎಸಿಬಿ ಚಿಕಿತ್ಸೆ ಮಾಡಲಾಗುತ್ತದೆಯೇ ಹೊರತು, ಅವುಗಳನ್ನು ಕೂಡಿ ಹಾಕುತ್ತಿಲ್ಲ ಎಂದರು.
ಶಾಲೆಗೆ ಹೋಗಲು ಆಟೋದಿಂದ ಇಳಿದ ಕೂಡಲೇ ಹಿಂದಿನಿಂದ ನಾಯಿ ಬಂದು ದಾಳಿ ನಡೆಸಿದೆ. ಕಾಲಿನ ತೊಡೆ, ಕೈ ಸೇರಿ ಕೆಲ ಭಾಗಗಳಲ್ಲಿ ನಾಯಿ ಕಚ್ಚಿದ್ದು, ಹೆಚ್ಚು ನೋವು ಅನುಭವಿಸುತ್ತಿದ್ದಾನೆ. ಆಸ್ಪತ್ರೆಯಲ್ಲಿ ರೇಬಿಸ್ ನಿರೋಧಕ ಚುಚ್ಚುಮದ್ದು ಹಾಕಿದ್ದು, ವಿಶಾಂತ್ರಿ ಪಡೆಯಲು ವೈದ್ಯರು ಹೇಳಿದ್ದಾರೆ. -ಸೆಲ್ವಿ, ಆಕಾಶ್ ತಾಯಿ ಎನ್‌ಜಿಓಗಳ ವಾದವೇನು?: ಹೆಣ್ಣು ನಾಯಿಗಳು ಮರಿ ಹಾಕಿದಾಗ ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ಕೋಪಗೊಳ್ಳುವುದಿದೆ. ಅದೇ ರೀತಿ ಗಂಡು-ಹೆಣ್ಣು ನಾಯಿಗಳು ಕೂಡುವ ಸಂದರ್ಭದಲ್ಲಿಯೂ ಇತರೆ ನಾಯಿಗಳು ಬಂದಾಗ ಗಂಡು ನಾಯಿಗಳು ಅತ್ಯಂತ ವ್ಯಾಘ್ರವಾಗುತ್ತವೆ. ಆದರೆ, ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ನಾಯಿಗಳು ತಮ್ಮ ಬಲ ಕಳೆದುಕೊಂಡು ದಾಳಿಗೆ ಮುಂದಾಗುವುದು ತೀರಾ ಕಡಿಮೆ. ಸಮರ್ಪಕ ವ್ಯವಸ್ಥೆಯಿಂದ ವ್ಯಾಘ್ರವಾಗಿರುವ ಹಾಗೂ ಬೆನ್ನಟ್ಟುವ ನಾಯಿಗಳನ್ನು ಹಿಡಿದು ಸಾಕಲು ಸರ್ಕಾರ ಕ್ರಮ ಕೈಗೊಳ್ಳಲು ನಮ್ಮದೇನು ಅಭ್ಯಂತರವಿಲ್ಲ ಎಂದು ಕ್ಯೂಪ ಸಂಸ್ಥೆಯ ಅಧ್ಯಕ್ಷೆ ಶೀಲಾರಾವ್ ತಿಳಿಸುತ್ತಾರೆ. ನಮ್ಮ ಗೋಳು ಕೇಳುವವರ್ಯಾರು?: ಬೀದಿ ನಾಯಿಗಳನ್ನು ಸಂತನ ಹರಣ ಶಸ್ತ್ರ ಚಿಕಿತ್ಸೆಗಾಗಿ ಹಿಡಿದೊಯ್ದರೆ ನಾಯಿಗಳು ಕಾಣೆಯಾಗಿವೆ ಎಂದು ಆರೋಪಿಸಿ, ಪಾಲಿಕೆಯ ಅಧಿಕಾರಿಗಳ ಮೇಲೆ ಪ್ರಾಣಿ ಪ್ರಿಯರು ದೂರು ದಾಖಲಿಸುತ್ತಾರೆ. ಇನ್ನು ನಾಯಿಗಳು ಸಾರ್ವಜನಿಕರನ್ನು ಕಚ್ಚಿದಾಗ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಎಬಿಸಿ ನಡೆಸಿದ ನಂತರವೂ ನಾಯಿಗಳು ಕಚ್ಚಿದರೆ ನಾವೇನು ಮಾಡಲು ಸಾಧ್ಯ ಎಂದು ಪಶುಪಾಲನೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.