ಲಕ್ನೋ: ಉತ್ತರಪ್ರದೇಶದಲ್ಲಿ ರಕ್ಕಸ ಬೀದಿ ನಾಯಿಗಳ ಹಾವಳಿಗೆ ಕಳೆದ ಮೂರು ದಿನಗಳಲ್ಲಿ 28 ದಿನದ ಹಸುಗೂಸು ಸೇರಿದಂತೆ ಎರಡು ಪುಟಾಣಿ ಮಕ್ಕಳನ್ನು ಕೊಂದು ತಿಂದಿರುವ ಭೀಭತ್ಸ ಘಟನೆ ಸಹರಾನ್ ಪುರದಲ್ಲಿ ವರದಿಯಾಗಿದೆ.
ಶುಕ್ರವಾರ ಮುಂಜಾನೆ ರಾಮ್ ಕರಣ್ ಎಂಬಾತನ ವಿಕಲಚೇತನ ಪತ್ನಿ 28 ದಿನದ ಗಂಡು ಮಗುವನ್ನು ಪಕ್ಕದಲ್ಲಿ ಮಲಗಿಸಿ ನಿದ್ರಿಸುತ್ತಿದ್ದ ವೇಳೆ ಬೀದಿ ನಾಯಿ ಮಗುವನ್ನು ಕಚ್ಚಿಕೊಂಡು ಹೋಗಿತ್ತು. ಮಗು ಇಲ್ಲದಿರುವುದನ್ನು ಗಮನಿಸಿ ಆಕೆ ಬೊಬ್ಬೆಹೊಡೆದಾಗ ನೆರೆಮನೆಯವರು ಹುಡುಕಾಟ ನಡೆಸಿದಾಗ ಹೊರವಲಯದಲ್ಲಿ ಕಚ್ಚಿ ತಿಂದಿರುವ ಮಗುವಿನ ಅರ್ಧಂಬರ್ಧ ದೇಹದ ತುಂಡುಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಮತ್ತೊಂದು ಘಟನೆಯಲ್ಲಿ ರಜನೀಶ್ ಕುಮಾರ್ ಎಂಬಾತನ ಮೂರು ತಿಂಗಳ ಮಗು ಅಭಿಮನ್ಯುವನ್ನು ರಕ್ಕಸ ನಾಯಿಗಳು ಗುರುವಾರ ರಾತ್ರಿ ಹೊತ್ತೊಯ್ದಿದ್ದವು. ಆ ಸಂದರ್ಭದಲ್ಲಿಯೂ ಮನೆಯವರು ಎಷ್ಟೇ ಹುಡುಕಾಟ ನಡೆಸಿದ್ದರು ಮಗು ಸಿಕ್ಕಿರಲಿಲ್ಲವಾಗಿತ್ತು. ಶುಕ್ರವಾರ ಬೆಳಗ್ಗೆ ಹೊರವಲಯದಲ್ಲಿ ಮಗುವಿನ ಶವ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಬಳಿಕ ಮನೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12ಕ್ಕೂ ಅಧಿಕ ಮಕ್ಕಳು ಬಲಿಯಾಗಿರುವ ಘಟನೆ ಸಿತಾಪುರ್ ಜಿಲ್ಲೆಯ ಖೈರಾಬಾದ್ ಪ್ರದೇಶದಲ್ಲಿ ನಡೆದಿತ್ತು. ಈ ಘಟನೆ ನಂತರ ಜನರು ಮಕ್ಕಳನ್ನು ಶಾಲೆಗಾಗಲಿ, ಹೊರಗಾಗಲಿ ಕಳುಹಿಸುವುದನ್ನು ನಿಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಬೀದಿನಾಯಿಗಳ ಹಾವಳಿಯಿಂದ ರೋಸಿ ಹೋಗಿರುವ ಜನರು ಇದೀಗ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹರಾನ್ ಪುರ್ ನ ಬೆಹಾಟ್ ಸರ್ಕಲ್ ಇನ್ಸ್ ಪೆಕ್ಟರ್ ವಿಜಯ್ ಪೌಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.