ಕಾರಟಗಿ: ಪಟ್ಟಣದ ವಾರದ ಸಂತೆ ಮಾರುಕಟ್ಟೆಯಲ್ಲಿ ಸಂತೆಯ ದಿನವಾದ ಬುಧವಾರ ಬಿಡಾಡಿ ದನಗಳ ಹಾವಳಿಗೆ ತರಕಾರಿ ವ್ಯಾಪಾರಿಗಳು ಬೇಸತ್ತಿದ್ದು, ವ್ಯಾಪಾರ ಬಿಟ್ಟು ಬಿಡಾಡಿ ದನಗಳನ್ನು ಕಾಯಬೇಕಾದ ಸ್ಥಿತಿ ಬಂದೊದಗಿದೆ.
ಪಟ್ಟಣದ ವಾರದ ಸಂತೆ ಮಾರುಕಟ್ಟೆ ಸುಸಜ್ಜಿತವಾಗಿದ್ದರು ಕೂಡ ಸೂಕ್ತ ಸೌಕರ್ಯ ಇಲ್ಲ. ವ್ಯಾಪಾರಿ ಕಟ್ಟೆಗಳು ಇವೆ. ಆದರೆ ವ್ಯಾಪಾರಸ್ಥರು ಕಟ್ಟೆ ಬಳಸದೇ ನೆಲದಲ್ಲೇ ಕುಳಿತು ವ್ಯಾಪಾರ ಮಾಡಲು ಬಯಸುತ್ತಿದ್ದು, ಹೀಗಾಗಿ ಬೀಡಾಡಿ ದನಗಳಿಗೆ ಸಂತೆ ಬಂತೆಂದರೆ ಹಬ್ಬವಾಗುತ್ತದೆ.
ಆವರಣ ಗೋಡೆ ನಿರ್ಮಿಸಿದ್ದರೂ ಗೇಟ್ ವ್ಯವಸ್ಥೆ ಇಲ್ಲದೇ ಬೀದಿ ದನಗಳು ಸಂತೆ ಮಾರುಕಟ್ಟೆಗೆ ನುಗ್ಗುತ್ತವೆ. ವ್ಯಾಪಾರಿಗಳು ಹಾಕಿದ ತರಕಾರಿ ರಾಶಿಗೆ ಬಾಯಿ ಹಾಕಿ ತಿನ್ನಲು ಪ್ರಯತ್ನಿಸುತ್ತವೆ. ಇತ್ತ ವರ್ತಕರು ವ್ಯಾಪಾರದಲ್ಲಿ ಮಗ್ನರಾಗಿರುತ್ತಾರೆ. ಸಂತೆಗೆ ಬಂದ ಗ್ರಾಹಕರು ಕೂಗಿದಾಗ ವರ್ತಕರು ಎಚ್ಚೆತ್ತುಕೊಂಡು ದನಗಳನ್ನು ಓಡಿಸುತ್ತಾರೆ.
ಸಂತೆ ಮಾರುಕಟ್ಟೆಯ ಸುತ್ತಲಿನ ಆವರಣಕ್ಕೆ ಮೂರು ಕಡೆ ಮುಖ್ಯ ದ್ವಾರಗಳನ್ನು ಬಿಟ್ಟಿದ್ದು ಯಾವುದಕ್ಕೂ ಸೂಕ್ತವಾದ ಗೇಟ್ ಇಲ್ಲ. ಹೀಗಾಗಿ ಬೀಡಾಡಿ ದನಗಳ, ಹಂದಿಗಳ, ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಅಲ್ಲದೇ ಬೈಕ್‌ಗಳ ಬ್ಯಾಗ್‌ನಲ್ಲೂ ತರಕಾರಿ ಸೇರಿದಂತೆ ದಿನಸಿ ವಸ್ತು ಇಡುವಂತಿಲ್ಲಾ. ಇದರಿಂದ ಸಂತೆಗೆ ಬರುವವರು ಬೇಸತ್ತಿದ್ದಾರೆ.
ಸಂತೆ ಮಾರುಕಟ್ಟೆಯನ್ನು ಎಪಿಎಂಸಿ ವತಿಯಿಂದ ನಿರ್ಮಿಸಲಾಗಿದೆ. ಈ ಕುರಿತು ಮಾರುಕಟ್ಟೆಯ ಸುರಕ್ಷತೆ ಬಗ್ಗೆ ಅವಶ್ಯ ಸೌಕರ್ಯ ಒದಗಿಸುವಂತೆ ಎಪಿಎಂಸಿ ಕಾರ್ಯದರ್ಶಿಯವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ಪಶು ಇಲಾಖೆ ಸಭೆ ನಡೆಸಿ ಬಿಡಾಡಿ ಹಾಗೂ ಸಾಕು ದನಗಳನ್ನು ಗುರುತಿಸಿ ಅವುಗಳಿಗೆ ಗುರುತಿನ ಉಂಗುರ ಹಾಕಲು ನಿರ್ಧರಿಸಿದ್ದಾರೆ. ಆದರೆ ವ್ಯಾಪಾರಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅತಿ ಶೀಘ್ರದಲ್ಲೇ ಸಂತೆ ಮಾರುಕಟ್ಟೆ ಆವರಣಕ್ಕೆ ಗೇಟ್ ವ್ಯವಸ್ಥೆ ಕಲ್ಪಿಸುತ್ತೇನೆ. zರಡ್ಡಿರಾಯನಗೌಡ, ಪುರಸಭೆ ಮುಖ್ಯಾಧಿಕಾರಿ