Advertisement

ದಾಖಲೆಯ ಮತದಾನಕ್ಕೆ ಕಾರ್ಯತಂತ್ರ

01:37 AM Dec 07, 2021 | Team Udayavani |

ಮಂಗಳೂರು: ದ್ವಿಸದಸ್ಯತ್ವದ ದ. ಕ. ಸ್ಥಳೀಯಾಡಳಿತ ಚುನಾವಣ ಕ್ಷೇತ್ರಕ್ಕೆ 2015ರ ಡಿ. 27ರಂದು ನಡೆದಿದ್ದ ಚುನಾವಣೆಯಲ್ಲಿ ಶೇ. 99.59 ಮತದಾನದ ಮೂಲಕ ದಾಖಲೆ ಸೃಷ್ಟಿಸಿತ್ತು. ಈ ದಾಖಲೆಯನ್ನು ಮುರಿದು ಶೇ. 100 ಮತದಾನವಾಗುವ ನಿಟ್ಟಿನಲ್ಲಿ ಇದೀಗ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ.

Advertisement

ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಮತ್ತು ಮತಗಳು ಅಸಿಂಧುವಾಗದಂತೆ ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಸಭೆಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿವೆ. ಈ ನಿಟ್ಟಿನಲ್ಲಿ ಮತದಾರರನ್ನು ಸಂಪರ್ಕಿಸಿ ಮತ ಚಲಾವಣೆಯಾಗುವಂತೆ ಮಾಡುವ ಹೊಣೆಗಾರಿಕೆಯನ್ನು ಕಾರ್ಯಕರ್ತರಿಗೆ ನೀಡಲಾಗಿದೆ.

ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿದ್ದ ಒಟ್ಟು 6,560 ಮತದಾರರಲ್ಲಿ 6,533 ಮತದಾರರು ಮತ ಚಲಾಯಿಸಿದ್ದರು. ಇದರಲ್ಲಿ 231 ಮತಗಳು ಅಸಿಂಧುವಾಗಿತ್ತು ಮತ್ತು ಇಬ್ಬರು ನೋಟಾ ಮತವನ್ನು ಚಲಾಯಿಸಿದ್ದರು. ಕಾಂಗ್ರೆಸ್‌ನ ಇಬ್ಬರು ಬಂಡಾಯ ಅಭ್ಯರ್ಥಿಗಳ ಸಹಿತ 8 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಯವರು 2,977 ಹಾಗೂ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿಯವರು 2,237 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಯಪ್ರಕಾಶ ಹೆಗ್ಡೆ 872 ಮತ ಪಡೆದಿದ್ದರು. 2010ರ ಚುನಾವಣೆಯಲ್ಲಿ ಕೋಟಶ್ರೀನಿವಾಸ ಪೂಜಾರಿ ಹಾಗೂ ಪ್ರತಾಪಚಂದ್ರ ಶೆಟ್ಟಿಯವರು ಅವಿರೋಧವಾಗಿ ಆಯ್ಕೆ
ಯಾಗಿದ್ದರು.

2008ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಕಾಂಗ್ರೆಸ್‌ನ ಬ್ಲೇಸಿಯಸ್‌ ಎಂ. ಡಿ’ಸೋಜಾ ಅವರು ನಿಧನರಾದ ಹಿನ್ನೆಲೆಯಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ ಜಯ ಗಳಿಸುವ ಮೂಲಕ ವಿಧಾನ ಪರಿಷತ್‌ಗೆ ಪ್ರವೇಶಿಸಿದ್ದರು.

ಶೇ.100 ಮತದಾನ
2015ರ ಚುನಾವಣೆಯಲ್ಲಿ ಪುತ್ತೂರು ಹಾಗೂ ಸುಳ್ಯ ತಾಲೂಕು ಶೇ.100 ಮತದಾನದ ದಾಖಲೆಯನ್ನು ಹೊಂದಿದೆ. ಮನಪಾದಲ್ಲಿದ್ದ ಒಟ್ಟು 64 ಮತಗಳು ಸಂಪೂರ್ಣ ಚಲಾವಣೆಯಾಗಿ ಶೇ.100 ಮತದಾನವಾಗಿತ್ತು.

Advertisement

ಇದನ್ನೂ ಓದಿ:ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸದಿದ್ದರೆ ಅಸಿಂಧು
ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತವನ್ನು ಗುರುತು ಮಾಡದಿದ್ದರೆ ಮತಪತ್ರ ತಿರಸ್ಕೃತಗೊಳ್ಳುತ್ತದೆ. ಹೀಗಾಗಿ, ಈ ಮತವನ್ನು ಚಲಾಯಿಸುವುದು ಅತ್ಯಗತ್ಯವಾಗಿದೆ.

ಪ್ರಾಶಸ್ತ್ಯವನ್ನು ಅಂಕೆಯಲ್ಲಿ ಮಾತ್ರ ಗುರುತು ಮಾಡಬೇಕು. ಅಕ್ಷರ ಅಥವಾ ಬೇರೆ ರೀತಿಯಲ್ಲಿ ಗುರುತು ಮಾಡಬಾರದು. ಗುರುತುಗಳನ್ನು ಅಭ್ಯರ್ಥಿಗಳ ಹೆಸರುಗಳ ಎದುರು ಇರುವ ಅಂಕಣಗಳಲ್ಲೇ ಮಾಡಬೇಕು. ಅಂಕಣದ ಹೊರಗಡೆ ಅಥವಾ ಎರಡು ಅಂಕ‌ಣಗಳ ನಡುವೆ ಗುರುತು ಮಾಡಿದರೆ ಅದನ್ನು ಅಸಿಂಧು ಮತವೆಂದು ಪರಿಗಣಿಸಲಾಗುತ್ತದೆ. ಮತಪತ್ರದಲ್ಲಿ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬಾರದು. ಸಹಿ ಅಥವಾ ಹೆಬ್ಬರಳ ಗುರುತು ಹಾಕಬಾರದು. ಒಂದೇ ಅಭ್ಯರ್ಥಿಗೆ ಒಂದಕ್ಕಿಂತ ಹೆಚ್ಚು ಆದ್ಯತೆಗಳನ್ನು ಸೂಚಿಸುವುದರಿಂದ ಮತ ಅಸಿಂಧುಗೊಳ್ಳುತ್ತದೆ.

ಮತ ನೀಡುವ ಉದ್ದೇಶಕ್ಕಾಗಿ ಮತಗಟ್ಟೆ ಅಧಿಕಾರಿ ನೀಡಿದ ಸಾಧನದಿಂದ ಮಾತ್ರವೇ ಗುರುತು ಮಾಡಬೇಕು. ಮತದಾರ ತನ್ನದೇ ಆದ ಪೆನ್ನು, ಪೆನ್ಸಿಲ್‌, ಬಾಲ್‌ಪೆನ್‌ ಇತ್ಯಾದಿ ಯಾವುದೇ ಸಾಧನದಿಂದ ಗುರುತು ಮಾಡಿದರೆ ಆ ಮತವನ್ನು ಅಸಿಂಧು ಮತವೆಂದು ಪರಿಗಣಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next