ಈ ಬಾರಿ ಚುನಾವಣೆಯಲ್ಲಿ ರಾಜಧಾನಿಯ 28 ವಿಧಾನಸಭೆ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಸೀಟುಗಳನ್ನು ಗಳಿಸಲು ಜೆಡಿಎಸ್ ಹರಸಾಹಸ ಪಡುತ್ತಿದೆ.
ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚೆ ಅತಿ ದೊಡ್ಡ ಕ್ಷೇತ್ರಗಳಾಗಿದ್ದ ಹೊರವಲಯದ ವರ್ತೂರು, ಯಲಹಂಕ ಸೇರಿದಂತೆ ಹೃದಯ ಭಾಗದ ಬಿನ್ನಿಪೇಟೆ, ಮಲ್ಲೇಶ್ವರ, ಚಿಕ್ಕಪೇಟೆ, ಶಾಂತಿನಗರ, ಶಿವಾಜಿನಗರ, ಭಾರತಿನಗರ ಕ್ಷೇತ್ರಗಳಲ್ಲಿ ಜಯ ದಾಖಲಿಸಿದ್ದ ಜನತಾದಳ 1999, 2004, 2009, 2013 ಚುನಾವಣೆಗಳಲ್ಲಿ ಒಂದು-ಎರಡು -ಮೂರು ಸಂಖ್ಯೆಗೆ ಇಳಿಮುಖವಾಯಿತು.
ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿರುವಂತೆ ಸ್ಟಾರ್ ಪ್ರಚಾರಕರು ಇಲ್ಲದಿದ್ದರೂ ಪಕ್ಷದ ಬ್ರಾಂಡ್ ಅಂಬಾಸಿಡರ್‌ಗಳಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರೇ ಸಂವಾದ, ಸಮಾಲೋಚನೆ, ಯಾತ್ರೆ, ಸಮಾವೇಶಗಳ ಮೂಲಕ ಪಕ್ಷದ ಸಂಖ್ಯಾಬಲ ವೃದ್ಧಿಗೆ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ.
ರಾಜಧಾನಿಯ ಮತದಾರರ ಮನವೊಲಿಕೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದು, ನಮ್ಮ ಎಚ್‌ಡಿಕೆ ಆ್ಯಪ್‌ನಡಿ ಪಕ್ಷದ ಪ್ರಣಾಳಿಕೆ, ನಾಯಕರ ಭಾಷಣ, ವಿಕಾಸ ಪರ್ವ ಯಾತ್ರೆಯ ತುಣುಕು ರವಾನಿಸಲಾಗುತ್ತಿದೆ. ಮನೆ ಮನೆಗೆ ಕುಮಾರಣ್ಣ ಅಭಿಯಾನದ ಮೂಲಕ ಪಕ್ಷದ ಸಾಧನೆ ಪ್ರಚಾರ ಮಾಡಲಾಗುತ್ತಿದೆ.
ರಾಜಧಾನಿಯಲ್ಲಿ ಬಲತುಂಬಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಭಾವಿ ನಾಯಕರು, ಸ್ಥಳೀಯವಾಗಿ ವರ್ಚಸ್ಸು ಹೊಂದಿರುವ ಮುಖಂಡರಿಗೆ ಗಾಳ ಹಾಕಲಾಗಿದೆ. ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಸಕ್ರಿಯ ಕಾರ್ಯಕರ್ತರ ಪಡೆ ರಚಿಸಿ ಈಗಾಗಲೇ ಎರಡು ಸುತ್ತು ಸಭೆ ನಡೆಸಿ ಕಾರ್ಯಯೋಜನೆ ಸಹ ನೀಡಲಾಗಿದೆ.
ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಹೆಬ್ಟಾಳ, ಯಶವಂತಪುರ, ಬೆಂಗಳೂರು ದಕ್ಷಿಣ, ಚಾಮರಾಜಪೇಟೆ, ಪದ್ಮನಾಭನಗರ, ಪುಲಿಕೇಶಿನಗರ, ಬಸವನಗುಡಿ, ಮಹಾಲಕ್ಷ್ಮೀ ಲೇ ಔಟ್, ರಾಜಾಜಿನಗರ ಕ್ಷೇತ್ರಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
* ಎಸ್. ಲಕ್ಷ್ಮಿನಾರಾಯಣ