Advertisement
ಜಾಖಂìಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ. 2014ರಲ್ಲಿ 37 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಸಲ 25 ಸ್ಥಾನಗಳಲ್ಲಷ್ಟೇ ಗೆಲ್ಲಲು ಶಕ್ತವಾಗಿದೆ.
Related Articles
Advertisement
ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಶಿವಸೇನೆ ಕೈಗೊಟ್ಟ ಕಾರಣ ಅಧಿಕಾರ ವಂಚಿತವಾಗಿದೆ. ಹೀಗೆ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿಯೇ ಈಗ ಬಿಜೆಪಿ ಅಧಿಕಾರದಿಂದ ದೂರವುಳಿದಿದೆ.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಜಾರ್ಖಂಡ್ ದೊಡ್ಡ ರಾಜ್ಯವೇನೂ ಅಲ್ಲ. ಆದರೆ ಗಣಿ ಸಮೃದ್ಧವಾಗಿರುವ ಈ ರಾಜ್ಯದ ಫಲಿತಾಂಶ ಉಳಿದೆಲ್ಲ ಪಕ್ಷಗಳಿಗಿಂತ ಬಿಜೆಪಿಗೆ ಮುಖ್ಯವಾಗಿತ್ತು. ಅಯೋಧ್ಯೆ ತೀರ್ಪು ಪ್ರಕಟವಾದ ಬಳಿಕ ನಡೆದ ಮೊದಲ ಚುನಾವಣೆಯಿದು. ಐದು ಹಂತದ ಚುನಾವಣಾ ಪ್ರಕ್ರಿಯೆಯ ನಡುವೆಯೇ ಕೇಂದ್ರ ಪೌರತ್ವ ಕಾಯಿದೆಯನ್ನು ಜಾರಿಗೊಳಿಸಿತು. ಈ ಎರಡು ಬೆಳವಣಿಗೆಗಳ ಲಾಭವನ್ನು ಚುನಾವಣೆಯಲ್ಲಿ ಎತ್ತಿಕೊಳ್ಳಲು ಬಿಜೆಪಿ ಶಕ್ತಿಮೀರಿ ಪ್ರಯತ್ನಿಸಿದೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಚುನಾವಣಾ ರ್ಯಾಲಿಗಳಲ್ಲಿ ಈ ವಿಚಾರಗಳನ್ನೇ ಪ್ರಧಾನವಾಗಿ ಎತ್ತಿದ್ದರು. ಅದಾಗ್ಯೂ ಜಾರ್ಖಂಡ್ ಮತದಾರರು ಬಿಜೆಪಿಯತ್ತ ಒಲವು ತೋರಿಸಲಿಲ್ಲ.ಇದು ಏಕೆ ಎನ್ನುವುದರ ಕುರಿತು ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.
ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತದಾರರ ಆದ್ಯತೆ ಬೇರೆಯಾಗುತ್ತಿದೆಯೇ ಎಂಬ ಅಂಶ ಜಾರ್ಖಂಡ್ ಫಲಿತಾಂಶದಿಂದ ಮತ್ತೂಮ್ಮೆ ಚರ್ಚೆಯ ವಸ್ತುವಾಗಿದೆ. ಲೋಕಸಭೆ ಚುನಾವಣೆ ಬಳಿಕ ನಡೆದಿರುವ ವಿಧಾನಸಭೆ ಫಲಿತಾಂಶಗಳೆಲ್ಲ ಬಿಜೆಪಿಗೆ ವಿರುದ್ಧವಾಗಿ ಬಂದಿರುವುದು ಈಗ ಮತದಾರರು ಪ್ರಬುದ್ಧರಾಗಿದ್ದಾರೆ ಎಂಬುದರ ಸಂಕೇತವಾಗಿದ್ದರೆ ಇದೊಂದು ಧನಾತ್ಮಕ ಬೆಳವಣಿಗೆಯೇ ಸರಿ. ಏಕೆಂದರೆ ಪ್ರಜಾತಂತ್ರಕ್ಕೆ ಬೇಕಾಗಿರುವುದು ಇಂಥ ಪ್ರಬುದ್ಧ ಮತದಾರರು. ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ವಿಚಾರಗಳು ಮುಖ್ಯವಾಗಬೇಕು ಎಂಬ ಸಂದೇಶ ಮತದಾರ ನೀಡಿದ್ದಾನೆಂದರೆ ಈ ಮತದಾರ ಅಭಿನಂದನೆಗೆ ಅರ್ಹನಾಗುತ್ತಾನೆ.
ಸ್ಥಳೀಯ ಚುನಾವಣೆಗಳಿಗೆ ಬೇರೆಯದ್ದೇ ಕಾರ್ಯತಂತ್ರವನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂಬುದನ್ನು ಜಾರ್ಖಂಡ್ ಸೇರಿದಂತೆ ಇತ್ತೀಚೆಗೆ ನಡೆದಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ತೋರಿಸಿಕೊಟ್ಟಿವೆ. ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಇದನ್ನು ಅರ್ಥ ಮಾಡಿಕೊಂಡಿವೆ.
ಅರ್ಥವಾಗದಿರುವುದು ಬಿಜೆಪಿಗೆ. ಎಲ್ಲ ಚುನಾವಣೆಗೂ ರಾಷ್ಟ್ರೀಯ ವಿಚಾರವನ್ನು ಎಳೆದು ತರುವುದರಿಂದ ಲಾಭವಾಗದು ಎನ್ನುವುದನ್ನು ಪಕ್ಷದ ನಾಯಕರು ತಿಳಿದುಕೊಳ್ಳಬೇಕು. ಮುಂದಿನ ವರ್ಷ ದಿಲ್ಲಿ ವಿಧಾನಸಭೆ ಚುನಾವಣೆೆಯಲ್ಲಿ ಪಕ್ಷ ಮತ್ತೂಮ್ಮೆ ಅಗ್ನಿಪರೀಕ್ಷೆಯನ್ನು ಎದುರಿಸಲಿದೆ. ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಂದದಂತೆ ನೋಡಿಕೊಳ್ಳಲು ಬಿಜೆಪಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುವ ಅಗತ್ಯವಿದೆ.