ಒಮ್ಮೆ ಧೀರ್ಘ ಉಸಿರೆಳೆದುಕೊಂಡುಬಿಟ್ಟರೆ ಸಾಕು, ಆ ವಾಸನೆ ಅವನ ಮೂಗಿನಲ್ಲಿ ರಿಜಿಸ್ಟರ್ ಆಗಿಬಿಟ್ಟಿರುತ್ತದೆ. ಆ ನಂತರ ಆ ವಾಸನೆಯನ್ನು ಫಾಲೋ ಮಾಡುತ್ತಾನೆ. ಆ ವಾಸನೆಯ ಒಡತಿಯ ಹಿಂದೆ ಬೀಳುತ್ತಾನೆ. ಅವಳನ್ನು ಒಂದೇ ಏಟಿಗೆ ಹೊಡೆದು ಸಾಯಿಸುತ್ತಾನೆ. ನಂತರ ಆಕೆಯ ವಾಸನೆಯನ್ನು ಆಘ್ರಾಣಿಸುತ್ತಾನೆ. ಅವಳ್ಯಾರೋ ಗೊತ್ತೇ ಇಲ್ಲ ಎಂದು ತಣ್ಣಗೆ ನಡೆದು ಬರುತ್ತಾನೆ.
ದಿನೇಶ್ ಬಾಬು ನಿರ್ದೇಶನದ “ನನಗಿಷ್ಟ’ ಚಿತ್ರದ ಕಥೆ ಇದು. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಪ್ರಯತ್ನ ಎಂದರೆ ತಪ್ಪಲ್ಲ. ತಣ್ಣಗಿನ ಕ್ರೌರ್ಯವನ್ನು ಅಷ್ಟೇ ಸೂಕ್ಷ್ಮವಾಗಿ ಹೇಳುವುದರಲ್ಲಿ ಬಾಬು ನಿಸ್ಸೀಮರು. ಈ ಹಿಂದೆ ಅವರು ಅಂತಹ ಕೆಲವು ಪ್ರಯತ್ನಗಳನ್ನು ಮಾಡಿದ್ದಾರೆ. ಈ ಬಾರಿ ಅವರು ಇಷ್ಣು ಎಂಬ ಯುವಕನ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಇಷ್ಣುವಿನ ದೊಡ್ಡ ಶಕ್ತಿ ಎಂದರೆ ಅದು ವಾಸನೆ.
ಆ ಶಕ್ತಿ ಅವನಿಗೆ ಹುಟ್ಟಿನಿಂದಲೇ ಬಂದಿದ್ದು. ಹುಟ್ಟಿದ ಸ್ವಲ್ಪ ಹೊತ್ತಿಗೇ, ತಾಯಿ ಕಸದ ತೊಟ್ಟಿಗೆ ಹಾಕುತ್ತಾಳೆ. ಅಲ್ಲಿಂದ ಅವನನ್ನು ಪಾರು ಮಾಡುವ ಭಿಕ್ಷುಕರು, ಎರಡು ಸಾವಿರ ರೂಪಾಯಿಗಳಿಗೆ ಮೀನು ಮಾರುವವಳಿಗೆ ಮಾರುತ್ತಾರೆ. ಮೀನಿನ ಮಾರುಕಟ್ಟೆಯಲ್ಲೇ ಬೆಳೆಯುವ ಅವನಿಗೆ ಆ ವಾಸನೆಯೇ ಒಂದು ದೊಡ್ಡ ಶಕ್ತಿ ಎಂದರೆ ತಪ್ಪಿಲ್ಲ. ಆದರೆ, ಕ್ರಮೇಣ ಅವನ ಶಕ್ತಿಯೇ ಮುಳುವಾಗುತ್ತದೆ.
ಅವನಲ್ಲೊಬ್ಬ ರಾಕ್ಷಸ ಹುಟ್ಟಿಕೊಳ್ಳುತ್ತಾನೆ ಮತ್ತು ಅವನನ್ನು ಕೊಲೆಗಾರನನ್ನಾಗಿ ಮಾಡುತ್ತಾನೆ. ಇದೆಲ್ಲಾ ಯಾಕಾಗಿ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಕಥೆ ಕೇಳಿದರೆ, ಜರ್ಮನಿಯ “ಪರ್ಫ್ಯೂಮ್’ ಚಿತ್ರ ನೆನಪಿಗೆ ಬರಬಹುದು. “ನನಗಿಷ್ಟ’ ಚಿತ್ರವು “ಪರ್ಫ್ಯೂಮ್’ನ ಯಥಾವತ್ತು ರೀಮೇಕ್ ಅಲ್ಲದಿದ್ದರೂ, ಆ ಚಿತ್ರವನ್ನು ನೆನಪಿಸುವಂತಹ ಚಿತ್ರ ಎಂದರೆ ತಪ್ಪಿಲ್ಲ. ಆ ಚಿತ್ರದ ಒಂದೆಳೆಯನ್ನು ತೆಗೆದುಕೊಂಡು, ಇಲ್ಲಿನ ನೇಟಿವಿಟಿಗೆ ತಕ್ಕ ಹಾಗೆ ಚಿತ್ರವನ್ನು ಕಟ್ಟಿಕೊಡಲಾಗಿದೆ.
ಮೈಸೂರಿನ ಬಳಿಯ ಹಳ್ಳಿಯೊಂದರ ಕಳೆಮಧ್ಯಮ ಕುಟುಂಬವೊಂದರಲ್ಲಿ ಕಥೆ ಇಟ್ಟಿರುವ ಬಾಬು, ಆ ಪರಿಸರವನ್ನು ಈ ಕಥೆಗೆ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇನ್ನು ಕಥೆಯನ್ನು ಅವರು ಹೆಚ್ಚು ಎಳೆಯುವುದಕ್ಕೂ ಹೋಗಿಲ್ಲ. ಪ್ರೇಕ್ಷಕರನ್ನು ಕೂರಿಸುವುದಕ್ಕೆ ಎಷ್ಟು ಸಾಧ್ಯವೋ ಅಷ್ಟನ್ನು ತೋರಿಸಲಾಗಿದೆ. ಆದರೂ ಆ ಮಧ್ಯೆ ಎರಡು ಬೇಡದ ಕಾಮಿಡಿ ದೃಶ್ಯಗಳು ಬರುತ್ತವೆ ಎಂಬ ಬೇಸರ ಕಾಡುವುದೂ ಉಂಟು. ಅದು ಬಿಟ್ಟರೆ, ಚಿತ್ರದಲ್ಲಿ ತಪ್ಪುಗಳನ್ನು ಹುಡುಕುವುದು ಕಷ್ಟ.
ಇಂಥದ್ದೊಂದ್ದು ವಿಚಿತ್ರ ವಿಕ್ಷಿಪ್ತ ಮತ್ತು ವಿಲಕ್ಷಣ ಪಾತ್ರವನ್ನು ಅಶ್ವಿನ್ ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಇಡೀ ಚಿತ್ರದುದ್ದಕ್ಕೂ ನಿರ್ಲಿಪ್ತವಾಗಿ ನಟಿಸಿರುವ ಅಶ್ವಿನ್, ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ. ಇನ್ನು ರಾಜೇಶ್ ನಟರಂಗ ಈ ಚಿತ್ರದ ಇನ್ನೊಂದು ಶಕ್ತಿ ಎಂದರೆ ತಪ್ಪಿಲ್ಲ. ರಚನಾ ಗೌಡ, ಜಯಶ್ರೀ, ಕರಿಸುಬ್ಬು ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದಲ್ಲಿರುವುದು ಒಂದೇ ಹಾಡು. “ಯಾರೋ ಈ ಭೂಮಿಗೆ ಹೊರೆ ಯಾರೋ …’ ಎಂದು ಸಾಗುವ ಹಾಡು ಚಿತ್ರದುದ್ದಕ್ಕೂ ಕಾಡುತ್ತದೆ.
ಚಿತ್ರ: ನನಗಿಷ್ಟ
ನಿರ್ಮಾಣ: ಯುವರಾಜ್ ರಚಕೊಂಡ
ನಿರ್ದೇಶನ: ದಿನೇಶ್ ಬಾಬು
ತಾರಾಗಣ: ಅಶ್ವಿನ್ ದೇವಾಂಗ್, ರಚನಾ ಗೌಡ, ರಾಜೇಶ್ ನಟರಂಗ, ಕರಿಸುಬ್ಬು, ತನುಜ ಜಯಶ್ರೀ ಮುಂತಾದವರು
* ಚೇತನ್ ನಾಡಿಗೇರ್