ಗುಂಡ್ಲುಪೇಟೆ: ತಾಲೂಕಿನ ಹುತ್ತೂರಿನಿಂದ ಮುಂದುವರಿದ ಯೋಜನೆಯಲ್ಲಿ ವಡ್ಡಗೆರೆ ಕೆರೆಗೆ ಕಬಿನಿ ನದಿ ನೀರು ಸರಾಗವಾಗಿ ಹರಿದುಬರುವಂತೆ ಮಾಡಲು ಕರಕಲಮಾದಹಳ್ಳಿ ಗ್ರಾಮಸ್ಥರೇ ಶ್ರಮದಾನ ಮಾಡಿದರು.
ತೀವ್ರ ಒತ್ತಾಯದ ನಂತರ ಕೆರೆಗಳಿಗೆ ನೀರು ತುಂಬಿಸುವುದನ್ನು ಹೊರತುಪಡಿಸಿ, ಸಣ್ಣನೀರಾವರಿ ಇಲಾಖೆ, ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸೇರಿದಂತೆ ಯಾವುದೇ ಇಲಾಖೆಯ ಅಧಿಕಾರಿಗಳು ಯೋಜನೆ ವ್ಯಾಪ್ತಿಯ ಕೆರೆಗಳ ದುರಸ್ತಿಗೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ತಮ್ಮ ಸ್ವಂತ ಹಣವನ್ನು ಹಾಕುವ ಮೂಲಕ ಜೆಸಿಬಿ ಹಾಗೂ ಶ್ರಮದಾನದಿಂದ ಹತ್ತಾರು ವರ್ಷಗಳಿಂದ ನಿರ್ವಹಣೆಯಿಲ್ಲದೆ ಮುಚ್ಚಿಕೊಂಡಿದ್ದ ಕಾಲುವೆ ನಿರ್ಮಿಸಿಕೊಂಡರು.
ಅಧಿಕಾರಿಗಳು ಹೇಳಿಕೆಗೆ ಬೇಸರ: ಸಾರ್ವಜನಿಕರು ಹಲವು ಬಾರಿ ಒತ್ತಾಯಿಸಿದರೂ ಯೋಜನೆಯಲ್ಲಿ ಸೇರಿರುವ ಯಾವುದೇ ಕೆರೆಗಳಲ್ಲಿಯೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ವಡ್ಡಗೆರೆ ಬಳಿ ಚೇಂಬರ್ ನಿರ್ಮಾಣ ಬಿಟ್ಟರೆ ಹೂಳೆತ್ತಿಸುವುದು, ಗಿಡಗಂಟಿಗಳ ತೆರವು, ಕಾಲುವೆ ಹಾಗೂ ಏರಿಗಳ ದುರಸ್ತಿ ಮಾಡಿಸಿಲ್ಲ. ಇವು ನಮ್ಮ ವಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದರಿಂದ ಬೇಸತ್ತ ಕರಕಲಮಾದಹಳ್ಳಿ ರೈತರು,
ಮೂರು ದಿನಗಳ ಕಾಲ ತಾವೇ ಶ್ರಮದಾನ ಮಾಡುವ ಮೂಲಕ ಕಾಲುವೆಗಳಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡಿದರು. ನೀರು ಹರಿಯಲು ಅಡ್ಡಿಯಾಗಿದ್ದ ಬಂಡೆಗಳು, ಕಲ್ಲುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು. ಈ ವರ್ಷವೇ ಮುಂದುವರಿದ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲು ಕ್ರಮ ಕೈಗೊಳ್ಳುವ ಮೂಲಕ ಪಾತಾಳಕ್ಕಿಳಿದ ಅಂತರ್ಜಲ ಮಟ್ಟ ವೃದ್ಧಿಸಲು ನೆರವಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹತ್ತು ಕೆರೆಗಳಿಗೆ ನದಿ ನೀರು: ಡಿ.14ರಂದು ಹುತ್ತೂರಿನಿಂದ ವಡ್ಡಗೆರೆ ಹಾಗೂ ಇತರ 10 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸದ್ಯ ವಡ್ಡಗೆರೆ ಕೆರೆಯ ಮುಕ್ಕಾಲು ಭಾಗ ತುಂಬಿಕೊಂಡು ಕೆಲವೇ ದಿನಗಳಲ್ಲಿ ಕೋಡಿ ಬೀಳುವ ಹಂತದಲ್ಲಿದೆ. ಸಮೀಪದ ಕರಕಲಮಾದಹಳ್ಳಿ ಕೆರೆಗೂ ನೀರು ಹರಿಸಲಾಗುತ್ತಿದೆ. ಎರಡೂ ಕೆರೆಗಳಿಂದ ಕೋಡಿ ಬಿದ್ದ ನೀರು ದಾರಿಬೇಗೂರು ಕೆರೆಗೆ ಸೇರುವುದರಿಂದ ಇದೂ ತುಂಬಲಿದೆ. ನಂತರ ಯರಿಯೂರು, ವಡೆಯನಪುರ, ಬೊಮ್ಮಲಾಪುರ, ಶಿವಪುರ, ಅಣ್ಣೂರುಕೇರಿ ಹಾಗೂ ವಿಜಯಪುರ ಅಮಾನಿ ಕೆರೆಗಳಿಗೆ ನೀರು ಹರಿಯಲಿದೆ.
ಹುತ್ತೂರು ಕೆರೆಯಿಂದ ಕೇವಲ ಎರಡು ಮೋಟಾರುಗಳಲ್ಲಿ ಮಾತ್ರ ನೀರೆತ್ತಲಾಗುತ್ತಿರುವುದರಿಂದ ಎಲ್ಲಾ ಕೆರೆಗಳಿಗೂ ನೀರು ತುಂಬುವುದು ವಿಳಂಬವಾಗುತ್ತಿದೆ. ಆದ್ದರಿಂದ ಇನ್ನೂ ಒಂದು ಮೋಟಾರು ಚಾಲನೆಗೊಳಿಸುವ ಮೂಲಕ ಶೀಘ್ರವೇ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲು ಕ್ರಮಕೈಗೊಳ್ಳಬೇಕು.
-ನಾಗಪ್ಪ, ವಡ್ಡಗೆರೆ
ಹುತ್ತೂರು ಪಂಪ್ ಹೌಸಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಆದರೆ, ಅದಕ್ಕೆ ಬಳಕೆ ಮಾಡಿದ ಯೂನಿಟ್ ಗಣತಿಗೆ ಮೀಟರ್ ಅಳವಡಿಸಲಾಗಿದೆ. ಆದರೆ, ವಿದ್ಯುತ್ ವ್ಯತ್ಯಯವಾದರೆ ಮೋಟಾರು ಹಾಗೂ ಯಂತ್ರಗಳನ್ನು ಸುರಕ್ಷಿತವಾಗಿಡಲು ಅಗತ್ಯವಾದ ಬ್ರೇಕರ್‌ಗಳನ್ನು ಅಳವಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಏಕಕಾಲದಲ್ಲಿ ಮೂರು ಮೋಟಾರುಗಳನ್ನು ಚಾಲನೆಗೊಳಿಸಿದರೂ ಯಾವುದೇ ಅಪಾಯವಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
-ಕೆ.ಎಂ.ಸಿದ್ದಲಿಂಗಪ್ಪ, ಸೆಸ್ಕ್ ಎಇಇ