Advertisement

ಎಸ್‌ಟಿಪಿ-ಟಿಎಸ್‌ಪಿ ಆರ್ಥಿಕ ಪ್ರಗತಿಗೆ ಗಡು

06:08 PM Mar 18, 2021 | Team Udayavani |

ಕಲಬುರಗಿ: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ವಿವಿಧ ಇಲಾಖೆಯಿಂದ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳನ್ನೆಲ್ಲ ಪ್ರಸಕ್ತ
ಮಾರ್ಚ್‌ ಅಂತ್ಯದೊಳಗೆ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜೋತ್ಸ್ನಾ  ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬುಧವಾರ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ನಿಗದಿತ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಿದ ಕೆಲ ಇಲಾಖೆಗಳಿದ್ದು,
ಮಾರ್ಚ್‌ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಫೆಬ್ರವರಿ ಅಂತ್ಯದ ವರೆಗೆ ಸಾಧಿಸಿದ ಪ್ರಗತಿ ಮೆಚ್ಚುಗೆಗೆ ಅರ್ಹವಾಗಿದೆ. ಆದರೆ ಅನುದಾನ ಲ್ಯಾಪ್ಸ್‌ಆಗುವುದಿಲ್ಲವೆಂದು ಯೋಜನೆ ಅನುಷ್ಠಾನದಲ್ಲಿ ವಿಳಂಬ ಮಾಡಬಾರದು ಎಂದು
ಅನುಷ್ಠಾನ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಿಬಿರ ನಡೆಸಿ: ಜಿಲ್ಲೆಯಲ್ಲಿ ಗಿರಿಜನರ ಸಂಖ್ಯೆ ಕಡಿಮೆ ಇರುವುದರಿಂದ ಗಿರಿಜನ ಉಪಯೋಜನೆಯಡಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಫಲಾನುಭವಿಗಳ
ಕೊರತೆ ಕಾಣುತ್ತಿದ್ದು, ಮುಂದಿನ ವರ್ಷ ಈ ಸಮಸ್ಯೆ ಉದ್ಭವಿಸದಂತೆ ಗಿರಿಜನರು ಹೆಚ್ಚಾಗಿ ವಾಸವಿರುವ ತಾಂಡಾ, ಗೊಲ್ಲರಹಟ್ಟಿಯಂತ ಸ್ಥಳಗಳಲ್ಲಿ
ಕಾರ್ಯಾಗಾರ, ಕ್ಯಾಂಪ್‌ ಮಾಡುವ ಮೂಲಕ ಅರಿವು ಮೂಡಿಸಿ, ಸ್ಥಳದಲ್ಲಿಯೇ ಯೋಜನೆಗಳ ಸೌಲಭ್ಯ ನೀಡುವತ್ತ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು
ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷ ಅವರು ಪ್ರಸಕ್ತ 2020-21ನೇ ಸಾಲಿಗೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ರಾಜ್ಯ ವಲಯದಲ್ಲಿ
18997.84 ಲಕ್ಷ ರೂ., ಜಿಲ್ಲಾ ವಲಯದಲ್ಲಿ 3910.15 ಲಕ್ಷ ರೂ. ಸೇರಿದಂತೆ ಒಟ್ಟು 22907.99 ಲಕ್ಷ ರೂ. ಅನುದಾನ ಹಂಚಿಕೆಯಾಗಿದೆ. ಹಂಚಿಕೆ
ಪೈಕಿ ಎರಡು ವಲಯಗಳಲ್ಲಿ ಒಟ್ಟಾರೆ 16340.03 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಫೆಬ್ರವರಿ ಅಂತ್ಯಕ್ಕೆ 12666.89 ಲಕ್ಷ ರೂ. ಖರ್ಚು
ಮಾಡುವ ಮೂಲಕ ಬಿಡುಗಡೆಯಾದ ಅನುದಾನದಲ್ಲಿ ಶೇ.77ರಷ್ಟು ಪ್ರಗತಿ ಸಾಧಿಸಿದೆ. ಈ ಅನುದಾನದಲ್ಲಿ  461568 ಫಲಾನುಭವಿಗಳು ನೇರವಾಗಿ
ಪ್ರಯೋಜನ ಪಡೆಯಲಿದ್ದಾರೆ. 1250 ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ ಇದುವರೆಗೆ 729 ಕಾಮಗಾರಿಗಳನ್ನು
ಪೂರ್ಣಗೊಳಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಜಿಪಂ ಸಿಇಒ ಡಾ| ದಿಲೀಶ್‌ ಸಾಸಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು
ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next