Advertisement
ಆಕಾಶವೇ ತಲೆಯ ಮೇಲೆ ಬಿದ್ದಾಗ ಎಲ್ಲಿ ಹೋಗುವುದು ಎನ್ನುವಂತಹ ಸ್ಥಿತಿ ನನ್ನದು. ಒಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡಿರುವೆ ಮತ್ತೂಂದು ಕೈಯಲ್ಲಿ ಅವಳ ಕೈಯನ್ನು ಅಪ್ಪಿ ಹಿಡಿದಿರುವೆ. ಹೃದಯ ಉಮ್ಮಳಿಸಿ ಬರುತ್ತಿದೆ. ಡಾಕ್ಟರ್‌ಗಳು ಸ್ಕ್ಯಾನಿಂಗು, ಎಕ…ರೇ ಮತ್ತಿತರ ಅನೇಕ ಪರೀಕ್ಷೆಗಳಿಗೆ ಅವಳನ್ನು ಒಳಪಡಿಸುತ್ತಿದ್ದರೆ ದಿಗ್ಭ್ರಮೆಗೊಂಡ ಮನಸ್ಸು ಮೌನವಾಗಿದೆ. ಬದುಕಿನ ಅತ್ಯದ್ಭುತ ಖುಷಿ ಕೆಲವೇ ಕೆಲವು ಗಂಟೆಗಳಲ್ಲಿ ಮಾಯವಾಗಿದೆ. ಅನೀರೀಕ್ಷಿತ ಆಘಾತದ ನಡುವೆಯೂ ನಾನು ಎಲ್ಲವ ನಿರ್ವಹಿಸುವ, ಎದುರಿಸುವ ಧೈರ್ಯ ಮಾಡಲೇಬೇಕು. ನಮ್ಮ ನಾಳೆಗಳಿಗಾಗಿ. ರೇಖಾ ಕಲ್ಲು ಮನಸ್ಸಿನವಳು. ಮಾನಸಿಕವಾಗಿ ನನಗಿಂತ ಶಕ್ತಿವಂತಳು. ನನ್ನ ಅನೇಕ ನೋವುಗಳಲಿ ಹೆಗಲು ಕೊಟ್ಟು ಸಾಂತ್ವನ ಹೇಳಿದ್ದವಳು. “”ನಾನಿದ್ದೇನೆ ನಿನ್ನೊಟ್ಟಿಗೆ ನೀನು ಹೆದರುವ ಆವಶ್ಯಕತೆ ಇಲ್ಲ” ಎಂದು ಎಲ್ಲಾ ಕಷ್ಟಗಳಲ್ಲಿ ಎದೆಕೊಟ್ಟು ನಿಂತವಳು. ಆದರೆ ಈಗ ನಾನು ಅವಳಿಲ್ಲದೆ, ಅವಳಿಗಾಗಿ ಧೈರ್ಯ ತಂದುಕೊಳ್ಳಬೇಕಿದೆ. ಬದುಕಿನ ದಾರಿ ಅಸ್ತವ್ಯಸ್ತವಾಗಿ ಗೋಚರಿಸುತ್ತಿದೆ. ನಮ್ಮ ಜೀವನದ ಕೆಟ್ಟ ಮತ್ತು ದುರ್ಬಲ ಗಳಿಗೆಗಳಿವು. ಅವನ್ನು ಮೆಟ್ಟಿ ನಿಲ್ಲಲೇ ಬೇಕು.
Related Articles
Advertisement
ನಾವಿಬ್ಬರು ಒಬ್ಬರಿಗೊಬ್ಬರಿಗೆ ಹನ್ನೆರಡು ವರ್ಷಗಳಿಂದ ಗೊತ್ತು. ಸ್ನೇಹದಿಂದ ಶುರುವಾದ ಸಂಬಂಧ ಪ್ರೀತಿಗೆ ತಿರುಗಿ, ಹೆತ್ತವರ ಎದುರು ಹಾಕಿಕೊಂಡು ಓಡಿ ಹೋಗುವ ದಾರಿ ತೋರಿ, ಮದುವೆಯಲ್ಲಿ ಹೊಸ ತಿರುವು ಪಡೆದುಕೊಂಡಿತು. ಹೊರಗಿನ ನೋಟಕ್ಕೆ ಎಲ್ಲವೂ ಚೆನ್ನಾಗಿತ್ತು, ನಾವು ಒಟ್ಟಿಗೆ ಒಂದೇ ಮನೆಯಲ್ಲಿ ಜೀವಿಸುತ್ತಿ¨ªೆವು. ಆದರೆ, ನಿಧಾನಗತಿಯಲ್ಲಿ ನಮ್ಮ ಸಂಬಂಧ ಅವನತಿಯೆಡೆಗೆ ಜಾರುತ್ತಿತ್ತು. ಪರಸ್ಪರ ಮಾತನಾಡಲೂ ನಮ್ಮಿಬ್ಬರಲ್ಲಿ ಸಮಯವಿರಲಿಲ್ಲ. ಇಲ್ಲ, ಇಲ್ಲ, ನಾನು ಅವಳೊಟ್ಟಿಗೆ ಮಾತು ನಿಲ್ಲಿಸಿದೆ. ಹೌದು, ಅವಳಿಗಾಗಿ ಒಂದೈದು ನಿಮಿಷ ಸಮಯವ ಮೀಸಲಿಡಲು ಕೂಡ ನನ್ನಿಂದ ಸಾಧ್ಯವಾಗಲಿಲ್ಲ.
ನಾನು ಯಾವಾಗಲೂ ಅಂತರ್ಮುಖೀ, ಕಡಿಮೆ ಮಾತನಾಡುವವನು. ರೇಖಾ ನನಗೆ ತದ್ವಿರುದ್ಧ. ಯಾವಾಗಲೂ ಮಾತು… ಮಾತು… ಮಾತು… ಈ ರೇಡಿಯೋ ಜಾಕಿಗಳು ವಟಗುಟ್ಟುತ್ತಾರಲ್ಲಾ ಹಾಗೆ. ಕೆಲಸದಿಂದ ಮನೆಗೆ ಬಂದ ನಂತರ ಕೂಡ ನನ್ನ ಬಹುತೇಕ ಸಮಯವನ್ನು ಲ್ಯಾಪ್‌ಟಾಪ್ ಮತ್ತು ಮೊಬೈಲ…ಗಳ ಜೊತೆ ಕಳೆಯುತ್ತಲಿದ್ದೆ. ಇದು ಅವಳಿಗೆ ಒಂಚೂರು ಇಷ್ಟವಿರಲಿಲ್ಲ. ಮದುವೆಯಾದ ಹೊಸದರಲ್ಲಿ ಎದೆಗೆ ಒರಗಿಸಿಕೊಂಡು ಚಿಕ್ಕ ಮಗುವಿಗೆ ಅರ್ಥ ಮಾಡಿಸುವ ಹಾಗೆ ತಿಳಿ ಹೇಳಿದಳು. ಧ್ವನಿ ಎತ್ತರಿಸಿ ತಾಕೀತು ಮಾಡಿದಳು. ಜಗಳ ಆಡಿದಳು. ಕೊನೆಗೆ ಮಾತು ಬಿಟ್ಟು ಮನದಟ್ಟು ಮಾಡಲು ಪ್ರಯತ್ನಿಸಿದಳು. ಇವ್ಯಾವುವೂ ನನ್ನ ವ್ಯಕ್ತಿತ್ವವನ್ನು ಅಥವಾ ಚಾಳಿಯನ್ನು ಬದಲಿಸಲೇ ಇಲ್ಲ. ಕೊನೆಗೆ ಅವಳೇ ನನ್ನ ಮೌನದ ದಾರಿ ಹಿಡಿದಳು.
ನನ್ನ ಪ್ರಕಾರ ಎಲ್ಲಾ ದಂಪತಿಗಳೂ ಹೀಗೇನೇ. ನೀನೊಬ್ಬಳೇ ಬದುಕನ್ನು ಸಿನೆಮಾ ಅಂದುಕೊಂಡಿರುವುದು. ಜೀವನ ಸಿನೆಮಾ ಅಲ್ಲ. ಪ್ರಾಕ್ಟಿಕಲ… ಆಗಿ ಯೋಚಿಸುವುದ ಕಲಿ ಎಂದು ಅವಳ ಯಾವ ಮಾತನ್ನೂ ತಲೆಗೆ ಹಾಕಿಕೊಳ್ಳದೆ ಶಾಂತರೀತಿಯಲ್ಲಿ ಉತ್ತರಿಸುತ್ತಲಿದ್ದೆ. ಮದುವೆಯ ನಂತರ ನಮ್ಮ ಅಭಿವೃದ್ಧಿಯೆಡೆಗೆ ಗಮನಹರಿಸದೆ ಪ್ರಣಯಪಕ್ಷಿಗಳ ಹಾಗೆ ಹಾರಾಡುತ್ತಿದ್ದರೆ ನಾಳೆಗಳು ಹದಗೆಡುತ್ತವೆ ಎನ್ನುವುದು ನನ್ನ ವಾದವಾಗಿತ್ತು.
ಆದರೆ ಈಗ ಅರಿವಾಗುತ್ತಿದೆ, ನನ್ನ ಯೋಚನೆಗಳೇ ತಪ್ಪು. ಬದುಕಿನ ಬಂಡಿಯಲಿ ಜೋಡೆತ್ತುಗಳು ಒಂದೇ ರೀತಿಯಲ್ಲಿ ಯೋಚಿಸುತ್ತಾ ಯೋಜಿಸುತ್ತಾ ಸಾಗಬೇಕು. ಮಾತಿನ ಅರಮನೆಯಲ್ಲಿ ಒಬ್ಬರನ್ನೊಬ್ಬರು ಅರಿಯಬೇಕು, ಹತ್ತಿರವಾಗಬೇಕು. ಕಷ್ಟ ಬಂದಾಗ ಹಂಚಿಕೊಳ್ಳಬೇಕು. ಸುಖದ ದಾರಿ ಸಿಕ್ಕಾಗ ಸಂಭ್ರಮಿಸಬೇಕು. ಕಣ್ಣೀರು ಹಾಕುವಾಗ ಬಿಕ್ಕಳಿಸಲೊಂದು ಹೆಗಲು ಬೇಕು. ಇಳಿಸಂಜೆಯ ಹಾದಿಗೆ ರಂಗನು ತುಂಬಲು ಚುಕ್ಕಿಚಂದ್ರಮರು ಬೇಕು. ಬೆಳಗಿನ ಉದಯಕೆ ಮಲ್ಲಿಗೆಯ ಮಂಪರು ಆವರಿಸಬೇಕು. ಇದೆಲ್ಲವ ಸತ್ಯವಾಗಿಸಲು ನಾನು ಅವಳೊಡನೆ ಮಾತನಾಡಬೇಕಿತ್ತು, ಅವಳ ಇಚ್ಛೆಯ ಬಿಳಿ ಕುದುರೆಯನೇರಿ ಬರುವ ರಾಜಕುಮಾರನ ಹಾಗೆ. ಆದರೆ ನಾನು ಯಾವುದನ್ನೂ, ಏನನ್ನೂ ಅವಳಿಗೆ ಹೇಳುತ್ತಲೇ ಇರಲಿಲ್ಲ. ಅದು ಅವಳಿಂದ ಮುಚ್ಚಿಡುವ ಉದ್ದೇಶದಿಂದಲ್ಲ. ಹೇಳುವ ಆವಶ್ಯಕತೆ ಏನಿದೆ? ಅದನ್ನು ತಿಳಿದ ಮೇಲೆ ಅವಳೇನು ಮಾಡಿಯಾಳು? ಎನ್ನುವುದೇ ನನ್ನ ಬೇಡದ ಧೋರಣೆ. ಅದಕ್ಕೇ ಇರಬೇಕು ನಮ್ಮಿಬ್ಬರ ನಡುವೆ ಮಾತುಗಳೇ ಬೆಳೆಯುತ್ತಿರಲಿಲ್ಲ. ಬೆಳೆಯುವುದಿರಲಿ ಮೊಳಕೆ ಕೂಡ ಆಗುತ್ತಿರಲಿಲ್ಲ.
ಬೆಳೆಗ್ಗೆ ಆಫೀಸಿಗೆ ಹೊರಟಾಗ “ಬರುತ್ತೇನೆ’ ಎಂದು ಹೇಳಿ ಹೊರಟರೆ ಸಂಜೆ ಬಂದಾಗ ಕೂಡ ಯಾವುದೇ ಮಾತಿಲ್ಲ ಕಥೆಯಿಲ್ಲ- ನಮ್ಮಿಬ್ಬರ ಮಧ್ಯೆ. ಅವಳು ಬಹಳಷ್ಟು ಬಾರಿ “ಅಕ್ಕಪಕ್ಕದ, ಸ್ನೇಹಿತರ ಗಂಡನ ನೋಡಿ ಕಲಿ’ ಎಂದಳು, ಹಂಗಿಸಿದಳು, “ನನಗೆ ಅಂತದ್ದೇ ಹುಡುಗ ಬೇಕಿತ್ತು ನಿನ್ನಂತವನಲ್ಲ’ ಎಂದು ಅತ್ತಳು, ಗೋಗರೆದಳು. ಅದೆಂತಹ ಕಲ್ಲು ಮನಸ್ಸು ನನ್ನದು? ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ ಹೀಗೆಲ್ಲಾ ಮಾತನಾಡುವುದು ನಿನಗೆ ಶೋಭಿಸುವುದಿಲ್ಲ. ಅದೇ ತಟಸ್ಥ ದನಿಯ ಉತ್ತರ ನನ್ನದು.
ನಾನು ಮೊದಲು ಹೀಗಿರಲಿಲ್ಲ. ಅವಳ ಹಿಂದೆಮುಂದೆ ರೋಮಿಯೋ ತರಹ ಸುತ್ತಿಯೇ ಪ್ರೀತಿಸಿದ್ದು. ನಿಜಹೇಳಬೇಕೆಂದರೆ, ನನ್ನ ನಾನ್‌ಸ್ಟಾಪ್ ಮಾತಿಗೇನೆ ಅವಳು ಪ್ರೇಮದಲ್ಲಿ ಬಿದ್ದದ್ದು. ಆದರೆ ಯಾವಾಗ ಮದುವೆಯಾದೆವೋ ಅಲ್ಲಿಂದ ನನ್ನ ಯೋಚನೆಗಳೇ ಬದಲಾದವು. ಮದುವೆಗೆ ಮುಂಚೆಯಾದರೆ ಎಲ್ಲಿ ಕೈತಪ್ಪಿ ಹೋಗುವಳ್ಳೋ ಎನ್ನುವ ಭಯ ಇತ್ತು. ಮದುವೆಯಾದ ಮೇಲೆ ಅವಳಿಗೆ ನನ್ನ ಬಿಟ್ಟರೆ ಗತಿ ಇಲ್ಲ ಎನ್ನುವ ಧೋರಣೆ ನನ್ನಂತಹ ಎಲ್ಲಾ ಗಂಡಸರದು. ಅದರ ಪರಿಣಾಮ ಮಾತ್ರ ತನ್ನವರನ್ನೆಲ್ಲಾ ಬಿಟ್ಟು ನೀನೇ ಎಂದು ಬಂದ ಹೆಣ್ಣು ಜೀವ ಎದುರಿಸಬೇಕು.
ಒಂದು ವರ್ಷದ ಹಿಂದೆ ನಾವು ನ್ಯೂಯಾರ್ಕ್‌ಗೆ ಶಿಫr… ಆದೆವು. ನಮ್ಮವರು ಎಂದು ಯಾರೂ ಇಲ್ಲದ ಮಾನವ ಕಾಡು ಇದು. ಇಲ್ಲಿಗೆ ಬಂದ ಮೇಲೆ ಅವಳಿಗೆ ನಾನು, ನನಗೆ ಅವಳು ಬಿಟ್ಟರೆ ಯಾರೂ ಇಲ್ಲದ ಕಾರಣ ಪರಸ್ಪರ ನಿಧಾನವಾಗಿ ಬಹಳಷ್ಟು ಹತ್ತಿರವಾಗತೊಡಗಿ¨ªೆವು. ಎಂಟು ವರ್ಷಗಳಲ್ಲಿ ನಾನೇನು ಕಳೆದುಕೊಂಡೆ ಅನ್ನುವ ಅರಿವಾಗತೊಡಗಿದ್ದೇ ಆಗ. ನನ್ನ ಹತ್ತಿರ ರೇಖಾಳಂತಹ ಅದ್ಭುತ ಸಂಗಾತಿ ಇದ್ದಳು. ಆತ್ಮೀಯ ಗೆಳತಿ ನನ್ನ ಮನೆಯಲ್ಲಿಯೇ ಇದ್ದಳು. ಆದರೆ ಭಾವನೆಗಳಿಗೆ ಬೆಂಬಲ ಪಡೆಯಲು ನಾನು ಊರೆಲ್ಲ ಹುಡುಕಿದ್ದೆ. ನನ್ನ ಲ್ಯಾಪ್‌ಟಾಪ್ ಮತ್ತು ಮೊಬೈಲ… ಪಕ್ಕಕ್ಕಿಟ್ಟು ಬಾಯ್ಬಿಟ್ಟು ಅವಳೊಟ್ಟಿಗೆ ಮಾತನಾಡಿದ್ದರೆ ಸಾಕಿತ್ತು, ಇನ್ನೂ ಮುಂಚೆಯೇ ನಮ್ಮ ಬಾಳಲಿ ಬೆಳಕು ಮೂಡುತ್ತಿತ್ತು.
ಮಗುವಿನ ಆಗಮನ ಸುದ್ದಿ ನಮ್ಮನ್ನು ಮತ್ತಷ್ಟು ಹತ್ತಿರಗೊಳಿಸಿತು. ಅವಳೆಡೆಗಿನ ಮೊದಲ ಪ್ರೀತಿಯನ್ನು ನಾನು ಮತ್ತೆ ಪಡೆದುಕೊಂಡಿದ್ದೆ. ಇಷ್ಟು ವರ್ಷಗಳ ನನ್ನ ನಿರ್ಲಕ್ಷ್ಯವನ್ನು ಭುವಿಯ ಪಾತಾಳದೊಳಗೆ ಹಾಕಿ ನಿಧಾನವಾಗಿ ಮುಚ್ಚುತ್ತಲಿದ್ದೆ. ಆಗಲೇ ಈ ಆಘಾತ ಮಿಂಚಿನಂತೆ ಎರಗಿತ್ತು. ಮತ್ತೆ ಒಂದಾದ ಮನಸುಗಳಲಿ ಹೃದಯವೀಣೆ ಮಿಡಿಯುತಾ ಹೊಸ ತಿರುವಿಗೆ ಕರೆದೊಯ್ಯುತ್ತಲಿದೆ ಅಲ್ಲಿ ಬದುಕಿನ ಸಂಭ್ರಮ ಬಿಟ್ಟರೆ ಮತ್ತೇನಕೂ ಜಾಗ ಇಲ್ಲ ಎನ್ನುವಾಗಲೇ ಖುಷಿ ನಮ್ಮಿಂದ ಶಾಶ್ವತವಾಗಿ ಕಣ್ಮರೆಯಾಗುವ ಲಕ್ಷಣಗಳು ಕಾಣುತ್ತಿವೆ.
ಅವಳಿಗೆ ಬರಿ ಸನಿಹ ಬೇಕಿರಲಿಲ್ಲ. ನನ್ನ ಮಾತು ಬೇಕಿತ್ತು, ಕಾಳಜಿ ಬೇಕಿತ್ತು, ಪ್ರೀತಿ ಬೇಕಿತ್ತು, ಬೈಗುಳ ಬೇಕಿತ್ತು, ಪ್ರೋತ್ಸಾಹ ಬೇಕಿತ್ತು, ಅವಳ ಇರುವಿಕೆಗೆ ನನ್ನಿಂದ ಪುರಾವೆ ಬೇಕಿತ್ತು, ತಪ್ಪು ಮಾಡಿದಾಗ ಕಿವಿ ಹಿಡಿದು ಜಗ್ಗ ಬೇಕಿತ್ತು, ಲೇಟಾಗಿ ತಿಂಡಿ ಕೊಟ್ಟಾಗ ಬೈಯಬೇಕಿತ್ತು, ಬರಸೆಳೆದು ಅಪ್ಪಿ$ಸುಮ್ಮನೆ ಎದೆ ಬಡಿತವ ಕೇಳಿಸಬೇಕಿತ್ತು, ಎಲ್ಲಾ ಚಿಕ್ಕ ಚಿಕ್ಕ ವಿಷಯಗಳನ್ನೂ ಅವಳೊಟ್ಟಿಗೆ ಹಂಚಿಕೊಳ್ಳಬೇಕಿತ್ತು. ಅದಕ್ಕಾಗಿ ನಾನು ಒಂದಷ್ಟು ಹೊತ್ತು ಮೊಬೈಲನ್ನು ಸ್ವಿಚ್‌ಆಫ್ ಮಾಡಿ ಅವಳ ಮಾತುಗಳಿಗೆ ಕಿವಿಯಾಗಬೇಕಿತ್ತು. ಟಿವಿ ಆಫ್ ಮಾಡಿ ಅವಳೊಟ್ಟಿಗೆ ಬಾಲ್ಕನಿಯಲ್ಲಿ ಕುಳಿತು ಚುಕ್ಕಿಚಂದ್ರಮರ ನಾಚಿಸಬೇಕಿತ್ತು. ಆಫೀಸಿನ ಈಮೇಲಿಗೆ ಉತ್ತರಿಸುವುದರ ಬದಲು ಒಂಟಿಯಾಗಿ ಅಂದಿನ ದಿನವ ಹೇಗೆ ದೂಡಿದಳು ಅಂತ ಕೇಳಬೇಕಿತ್ತು ಅಥವಾ ಫೇಸ್‌ಬುಕ್ಕಿನ ಲೈಕು ಕಮೆಂಟುಗಳ ಬಿಟ್ಟು ಅವಳೊಟ್ಟಿಗೆ ನಿಂತು ಅಡುಗೆಮನೆಯನ್ನು ಸ್ವತ್ಛಗೊಳಿಸಬೇಕಿತ್ತು. ಹೀಗೆ ಆ ದಿನಗಳ ಮತ್ತೆ ಪಡೆಯಬೇಕಿದ್ದರೆ ನಾನು ಏನೇನು ಮಾಡಬೇಕಿತ್ತು ಎನ್ನುವುದರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ ಮನದಲ್ಲಿ.
ಮನೆಯೇ ಅವಳ ಪ್ರಪಂಚ. ಅಲ್ಲಿ ನಾನೇ ಅವಳ ರೇಡಿಯೋ. ಆದರೆ ಆ ರೇಡಿಯೋ ಹೇಳದೆ ಕೇಳದೆ ತಾನಾಗಿಯೇ ಕೆಡಿಸಿ ಕೊಂಡಿತ್ತು. ರಿಪೇರಿ ಆಗಲೇ ಇಚ್ಛಿಸದ ರೇಡಿಯೋನ ಸರಿಪಡಿಸುವುದಾದರೂ ಅವಳ ಕೈಲಿ ಹೇಗೆ ಸಾಧ್ಯ? ಕಳೆದುಹೋದ ಮೇಲೆ ವಸ್ತುವಿನ ಬೆಲೆಯ ಅರಿವಾಗುವುದು, ವಿಷಾದಿಸುವುದು ಜೀವನದಲ್ಲಿ ಸಾಮಾನ್ಯವಿರಬಹುದು. ಆದರೆ ಕಳೆಯುವುದಕ್ಕೆ ಮುಂಚೆಯೇ ನಾನು ಮತ್ತಷ್ಟು ಎಚ್ಚೆತ್ತುಕೊಳ್ಳಬೇಕಿದೆ.
ಎಲ್ಲಾ ಟೆ…ಗಳ ಮುಗಿಸಿ ಬಂದ ಡಾಕ್ಟರ್ ಮುಖ ನೋಡಲು ನನ್ನ ಹೃದಯ ಢವಗುಡುತ್ತಿದೆ. ಅದು ಅವರ ಕರ್ತವ್ಯ. ಯಾವುದೇ ಹಿಂಜರಿಕೆ ಇಲ್ಲದೆ ಹೇಳಿದರು. ಹೌದು, ರೇಖಾಳ ಪರಿಸ್ಥಿತಿ ತುಂಬಾ ಗಂಭೀರವಾಗಿದೆಯಂತೆ, ಆದರೆ ವಾಸಿ ಮಾಡಬಹುದೆಂದು ಡಾಕ್ಟರ್ ಕೊಟ್ಟ ಭರವಸೆ ಸ್ವಲ್ಪಮಟ್ಟಿಗೆ ಸಮಾಧಾನ ತಂದರೂ ಎದೆಯೊಳಗೆ ಕೋಲಾಹಲವೇ ನಡೆಯುತ್ತಲಿದೆ. ನನ್ನ ಜೀವನದ ಅತ್ಯಂತ ಅದ್ಭುತ ಮಹಿಳೆಯನ್ನು ಕಳೆದುಕೊಂಡುಬಿಡುತ್ತೇನೆ ಎಂದು ಭಯಭೀತನಾಗಿದ್ದೇನೆ.
ಆಗಲೇ ನಾನು ನಿರ್ಧರಿಸಿಬಿಟ್ಟಿದ್ದೇನೆ, ಆದvಗಲಿ ಬದುಕನ್ನು ಕೈಜಾರಲು ಬಿಡುವುದಿಲ್ಲ. ನನ್ನ ಬದುಕೇ ಅವಳು ಎಂದು ಸ್ವಗತದಿಂದ ಹೊರಬಂದ ಅಭಿ, ಕಣ್ತುಂಬಾ ನೀರ ತುಂಬಿಕೊಂಡು ಅವಳ ಮುಂದೆ ಕುಂತನು. ನಾವಿಬ್ಬರೂ ಗೆಲ್ಲಲೇ ಬೇಕು ಕಣೆ, ಗೆಲ್ಲಲೇ ಬೇಕು. ಈ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸ ಬೇಕು. ಮಗುವಿನ ಬೆಳವಣಿಗೆಯ ಕಣ್ತುಂಬಿಕೊಳ್ಳಬೇಕು. ಭುವಿ-ಭಾನು ನಡುಗಿದರೂ ಅದರ ಕೊನೆಯ ಅಸ್ತದವರೆಗೂ ನಾವು ಒಟ್ಟಿಗೆ ನಡೆಯಬೇಕು ಎಂದು ಭಾವುಕನಾಗಿ ನುಡಿಯುತ್ತಲಿದ್ದ. ಅವನ ಕಣ್ಣೀರನ್ನು ರೇಖಾ ಯಾವತ್ತೂ ನೋಡಿಯೇ ಇರಲಿಲ್ಲ. ಇಂದು ಅದರ ದರುಶನವೂ ಆಗಿ ಹೋಯಿತು. ರೇಖಾ ತನ್ನ ದುಗುಡವ ಒಳಗೇ ಅದುಮಿಕೊಳ್ಳುತ್ತಲಿದ್ದುದು ಅವನ ಅರಿವಿಗೆ ಬಂತು. ಅವಳಿಗೆ ಗೊತ್ತು ತನ್ನ ಕಣ್ಣೀರು ಅಭಿಯನ್ನು ಕುಗ್ಗಿಸಿಬಿಡುವುದೆಂದು. ಅದೆಷ್ಟೋ ಹೊತ್ತು ಅವಳ ತಬ್ಬಿ ಸ್ವಗತಕ್ಕೆ ಜಾರಿ ಅವನು ಬಿಕ್ಕುತ್ತಲಿದ್ದ.
ನನ್ನದು ಕಣ್ಣೀರಿನ ಜೊತೆಗಿನ ಹೋರಾಟ. ಆದರೆ ಸಾಧ್ಯವಾಗುತ್ತಿಲ್ಲ. ಇಗೋ ಇಲ್ಲಿ ನನ್ನ ಜೀವನದ ಪ್ರೀತಿ ಇನ್ನೇನು ಕೈಜಾರುವುದರಲ್ಲಿದೆ. ಅಗೋ ಇಲ್ಲಿ ನನ್ನ ಮಗ ತನ್ನ ಜೀವನದ ಅದ್ಭುತ ಮಹಿಳೆಯನ್ನೇ ಇನ್ನೂ ಕಣ್ಣರಳಿಸಿ ನೋಡಿಯೇ ಇಲ್ಲ. ಬದುಕೇ ಏನೆಂದು ಶಪಿಸಲಿ ನಿನ್ನ. ಈಗ ಅವಳು ನಾಲ್ಕು ಘಂಟೆಗಳ ದೀರ್ಘ ಮತ್ತು ಅತೀ ನೋವಿನ ಚಿಕಿತ್ಸೆಗೆ ಒಳಗೊಳ್ಳಬೇಕು. ಚಿಕಿತ್ಸೆಗೆ ತಯಾರಿ ಮಾಡುವಾಗ ಪಕ್ಕದಲ್ಲೇ ಕುಳಿತಿದ್ದೇನೆ ಯಾವುದೇ ಹಿಂಜರಿಕೆ ಇಲ್ಲದೆ. ನನಗೀಗ ಇದ್ಯಾವುದೂ ಬೋರ್ ಅನ್ನಿಸುತ್ತಿಲ್ಲ. ಅವಳೊಟ್ಟಿಗೆ ಹತ್ತು ನಿಮಿಷ ಕೂಡ ಕುಳಿತು ಮಾತನಾಡದ ನಿನ್ನೆಗಳ ನಾನು ದ್ವೇಷಿಸುತ್ತೇನೆ. ಕಣ್ಣೆದುರಿಗೇ ಜಾರಿದ ಎಂಟು ವರ್ಷಗಳ ಕಟ್ಟಿಕೊಡಲು ನನ್ನಿಂದ ಸಾಧ್ಯವಾಗದೆ ಇರಬಹುದು. ಆದರೆ ಇಂದಿನಿಂದ ಉತ್ತಮ ಸಂಗಾತಿಯಾಗಲು ಪ್ರಯತ್ನಿಸುವೆ. ಈಗ ಆಫೀಸಿನ ನನ್ನ ಕೆಲಸದಿಂದ ಸ್ವಲ್ಪ ದಿನಗಳವರೆಗೆ ದೂರ ಇದ್ದೀನಿ. ಯಾವುದೇ ಇ-ಮೇಲ…, ಫೋನ್‌ಗಳಿಗೆ ಉತ್ತರಿಸುವ ಗೋಜಿಗೆ ಹೋಗುತ್ತಿಲ್ಲ. ಟಿವಿ, ಫೇಸ್‌ಬುಕ್ ಅಕೌಂಟ… ನೋಡೇ ನಾಲ್ಕು ದಿನವಾಗುತ್ತಿದೆ. ಇನ್ನು ಮೇಲೆ ಇವ್ಯಾವಕ್ಕೂ ನನ್ನನ್ನು ಅವಳಿಂದ ಸೆಳೆಯುಲು ಸಾಧ್ಯವಿಲ್ಲ. ಅವೆಲ್ಲಕ್ಕೂ ಕಾಯಲು ತಾಕೀತು ಮಾಡಿರುವೆ, ನನ್ನ ಮಗನಿಗೂ ಕೂಡ. ಅವಳೇ ನನ್ನ ಇಂದಿನ ಆದ್ಯತೆ ನಾಳೆಗಳಲಿ ನಿನ್ನೆಗಳ ಸೃಷ್ಟಿಸಲು.
ಇನ್ನು ಮುಂದೆ ನನ್ನ ಸುತ್ತ ಸುತ್ತುವುದು ಎರಡೇ – ಮಗು ಮತ್ತು ರೇಖಾ. ಇಲ್ಲಿಯವರೆಗೆ ಮಗನ ಆಗಮನವ ಸಂಭ್ರಮಿಸಲು ಕೂಡ ಸಾಧ್ಯವಾಗಿಲ್ಲ. ನನಗೆ ಗೊತ್ತು ಈ ದಿನಗಳು ಬೇಗ ಕಳೆದುಬಿಡುವುವು. ನಮ್ಮದು ಜನುಮ ಜನುಮದ ಬಂಧ. ನಾವಿಬ್ಬರೂ ಬಹುದೂರ ಸಾಗಬೇಕಿದೆ. ನಡಿಗೆ ಮಾತ್ರ ಈಗ ನಿಧಾನವಾಗಿದೆ. ನನ್ನೊಳಗೆ ಅವಳು, ಅವಳೊಳಗೆ ನಾನು, ನಮ್ಮೊಳಗೆ ಮಗನ ನಾಳೆಯ ಕನಸು ಇರಬೇಕಾದರೆ ಯಾವ ಅವಘಡವೂ ನಡೆಯದು. ನಾವಿಬ್ಬರೂ ಇದೊಂದು ಆಟವ ಗೆಲ್ಲಲೇ ಬೇಕಿದೆ. ಅವಳು ನನ್ನೊಟ್ಟಿಗೆ ಮುಪ್ಪಿನಂಚಿನವರೆಗೆ ಸಾಗಲೇಬೇಕಿದೆ.
ಜಮುನಾರಾಣಿ ಎಚ್. ಎಸ್.