“ಸಿಗದೇ ಇರೋಕೆ ಆತ ಏನ್ ದೇವ್ರ, ಸಿಕ್ಕೇ ಸಿಕ್ತಾನೆ …’ ತನಿಖಾಧಿಕಾರಿ ಹೀಗೆ ಹೇಳಿ ಸಿಗರೇಟಿನ ಹೊಗೆ ಬಿಡುತ್ತಾನೆ. ಅಷ್ಟೊತ್ತಿಗಾಗಲೇ ಕೊಲೆಗಾರ ಒಂಭತ್ತು ಕೊಲೆಗಳನ್ನು ಮಾಡಿ ಮುಗಿಸಿರುತ್ತಾನೆ. ಎಲ್ಲಾ ಕೊಲೆಗಳಲ್ಲೂ ಒಂದು ಸಾಮ್ಯತೆ ಇರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖಾಧಿಕಾರಿ ಈತ ಒಬ್ಬ ಸೈಕೋ ಕಿಲ್ಲರ್ ಎಂಬ ನಿರ್ಧಾರಕ್ಕೆ ಬರುತ್ತಾನೆ. ತನಿಖೆ ತೀವ್ರವಾಗುತ್ತಾ ಹೋಗುತ್ತದೆ.
ಹಾಗಾದರೆ ಆ ಕೊಲೆಗಾರ ಸಿಗುತ್ತಾನಾ, ಆತನ ಹಿನ್ನೆಲೆಯೇನು ಎಂಬ ಕುತೂಹಲ ನಿಮಗಿದ್ದರೆ ನೀವು “ಅಟೆಂಪ್ಟ್ ಟು ಮರ್ಡರ್’ ಸಿನಿಮಾ ನೋಡಬಹುದು. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಎಟಿಎಂ ದರೋಡೆ ಹಾಗೂ ಹಲ್ಲೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಅಮರ್ “ಎಟಿಎಂ’ ಸಿನಿಮಾ ಮಾಡಿದ್ದಾರೆ. ಮಹಿಳೆಯೊಬ್ಬರ ಮೇಲೆ ಎಟಿಎಂನೊಳಗೆ ನಡೆಯುವ ಹಲ್ಲೆಯಿಂದ ಚಿತ್ರದ ಕಥೆ ತೆರೆದುಕೊಳ್ಳುತ್ತದೆ.
ಹಾಗೆ ನೋಡಿದರೆ ಇಲ್ಲಿ ಎಟಿಎಂ ದರೋಡೆ ಅಂಶ ಚಿತ್ರದ ಕಥೆಗೊಂದು ಲೀಡ್ ಕೊಟ್ಟಿದೆಯಷ್ಟೇ. ಉಳಿದಂತೆ ನಿರ್ದೇಶಕರು ತಮ್ಮದೇ ಕಲ್ಪನೆಯೊಂದಿಗೆ ಸಿನಿಮೀಯ ಅಂಶ ಸೇರಿಸಿ ಕಥೆ ಬೆಳೆಸಿದ್ದಾರೆ. ಕಥೆಯ ಮುಖ್ಯ ಉದ್ದೇಶ ಎಟಿಎಂ ದರೋಡೆಕೋರನನ್ನು ಬಂಧಿಸೋದು. ಹಾಗೆ ನೋಡಿದರೆ, ನಿರ್ದೇಶಕರು ಆಯ್ಕೆಮಾಡಿಕೊಂಡಿರುವ ಕಥೆ ತುಂಬಾ ರೋಚಕವಾಗಿದೆ. ಇಡೀ ಸಿನಿಮಾದಲ್ಲಿ ಹೈಲೈಟ್ ಆಗಬೇಕಾದ ವಿಷಯ ಕೂಡಾ ತನಿಖೆ.
ಪೊಲೀಸರು ಅಪರಾಧಿಯ ಜಾಡನ್ನು ಹೇಗೆ ಹಿಡಿಯುತ್ತಾರೆ ಮತ್ತು ಆ ಅಪರಾಧಿ ಹೇಗೆ ತಪ್ಪಿಸಿಕೊಳ್ಳುತ್ತಿರುತ್ತಾನೆಂಬುದು. ಚಿತ್ರದಲ್ಲಿ ಈ ಅಂಶವನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. ಆದರೆ, ಆ ತನಿಖೆಗೆ ಇನ್ನಷ್ಟು ಸತ್ವ ಇದ್ದಿದ್ದರೆ ಥ್ರಿಲ್ಲರ್ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕನಿಗೆ “ಎಟಿಎಂ’ ಇಷ್ಟವಾಗುತ್ತಿತ್ತು. ಆದರೆ, ಇಲ್ಲಿನ ತನಿಖೆ ಸದ್ದಿಲ್ಲದೇ ತುಂಬಾ ತಣ್ಣಗೆ ಮತ್ತು ಸುಲಭವಾಗಿ ಸಾಗುತ್ತದೆ.
ತನಿಖಾಧಾರಿತ ಸಿನಿಮಾಗಳ ಮುಖ್ಯ ಸರಕು ಎಂದರೆ ಅದು ರೋಚಕತೆ ಮತ್ತು ಪ್ರೇಕ್ಷಕನ ಕುತೂಹಲ ಹೆಚ್ಚಿಸುತ್ತಾ ಹೋಗುವುದು. ಆದರೆ “ಎಟಿಎಂ’ನಲ್ಲಿ ಆ ಅಂಶಗಳ ಕೊರತೆ ಕಾಡುತ್ತದೆ. ತನಿಖಾ ಅಂಶಗಳಿಗೆ ಹೆಚ್ಚು ಮಹತ್ವ ಕೊಟ್ಟಿದ್ದರೆ “ಎಟಿಎಂ’ನ ಖದರ್ ಹೆಚ್ಚುತ್ತಿತ್ತು. ಆದರೆ, ನಿರ್ದೇಶಕರು ತನಿಖಾ ಅಂಶದ ಜೊತೆಗೆ ಲವ್‌ಸ್ಟೋರಿಯೊಂದನ್ನು ಸೇರಿಸಿದ್ದಾರೆ. ಕೆಲವೊಮ್ಮೆ ಈ ಟ್ರ್ಯಾಕ್ ಮೊಸರಿನಲ್ಲಿ ಕಲ್ಲು ಸಿಕ್ಕಂತಾಗುತ್ತದೆ.
ನಿರೂಪಣೆಯ ವಿಷಯಕ್ಕೆ ಬರುವುದಾದರೆ ನಿರ್ದೇಶಕರು ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಎಲ್ಲೂ ಲಿಂಕ್ ಮಿಸ್ ಆಗದಂತೆ ನೋಡಿಕೊಂಡಿದ್ದಾರೆ. ನಿರೂಪಣೆ ಇನ್ನಷ್ಟು ವೇಗದಿಂದ ಕೂಡಿರಬೇಕಿತ್ತು. ಜೊತೆಗೆ ಈ ಹಿಂದೆ ನಿರ್ದೇಶಕರೇ ಹೇಳಿದಂತೆ ಚಿತ್ರದ ವಿಲನ್ ಪಾತ್ರ ಹೈಲೈಟ್ ಅಂದಿದ್ದರು. ಆದರೆ, ಚಿತ್ರದಲ್ಲಿ ವಿಲನ್ ಪಾತ್ರ ಇಂಟ್ರೋಡಕ್ಷನ್ ಸಾಂಗ್ ಹಾಗೂ ಕೆಲವೇ ಕೆಲವು ದೃಶ್ಯಗಳಿಗೆ ಸೀಮಿತವಾಗಿದೆ.
ಹಾಗೆ ಬಂದು ಹೀಗೆ ಮುಗಿದು ಹೋಗುತ್ತದೆ ಕೂಡಾ. ಅದು ಬಿಟ್ಟರೆ ಹೊಸಬರ ಮೊದಲ ಪ್ರಯತ್ನವಾಗಿ “ಎಟಿಎಂ’ ಅನ್ನು ಮೆಚ್ಚಿಕೊಳ್ಳಬಹುದು. ಕೆಲವೇ ಕೆಲವು ಪಾತ್ರಗಳನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ನಟಿಸಿರುವ ವಿನಯ್ ಗೌಡ, ಸೂರ್ಯ, ಚಂದು, ಶೋಭಿತಾ, ಹೇಮಲತಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರ: ಅಟೆಂಪ್ಟ್ ಟು ಮರ್ಡರ್
ನಿರ್ಮಾಣ: ನಾರಾಯಣ್
ನಿರ್ದೇಶನ: ಅಮರ್
ತಾರಾಗಣ: ವಿನಯ್ ಗೌಡ, ಸೂರ್ಯ, ಚಂದು, ಶೋಭಿತಾ, ಹೇಮಲತಾ ಮುಂತಾದವರು
* ರವಿ ಪ್ರಕಾಶ್ ರೈ