ಒಂದು ಕಾಲ ಇತ್ತು ಎಲ್ಲಿಗಾದರು ಪಯಣ ಬೆಳೆಸಬೇಕಾದ್ರೆ ನಮ್ಮ ಕಾಲೇ ದೂರವನ್ನು ಕ್ರಮಿಸಿಬೇಕಿತ್ತು. ಸದ್ಯ ಕಾಲ ಬೆಳೆಯುತ್ತಾ ಹೋದಂತೆ ಯಾಂತ್ರೀಕೃತ ಬದುಕು ಆಧುನಿಕತೆಗೆ ಒಗ್ಗಿಕೊಂಡು ಬಿಟ್ಟಿದೆ. ಆಟೋ ರಿಕ್ಷಾಗಳೇ ರಸ್ತೆಯ ರಾಜನಾಗಿ ಮೆರೆಯುವ ಈ ಘಟ್ಟದಲ್ಲಿ ಸ್ನೇಹಿತರಿಬ್ಬರು ಬಾಡಿಗೆ ಕೈಗಟಕುವ ದರದಲ್ಲಿ ಪಾವತಿಸುವ ಸುಲಭವಾದ ಯೋಜನೆಯೊಂದನ್ನು ಅನುಷ್ಠಾನ ಮಾಡಿದ ಕತೆಯಿದು. ಇಂದು ದೊಡ್ಡ ದೊಡ್ಡ ನಗರದಲ್ಲಿ ಜನಪ್ರಿಯವಾಗಿರುವ ‘ ಓಲಾ’ ಸ್ಥಾಪನೆ ಹಿಂದಿನ ರೂವಾರಿಗಳ ಯಶೋಗಾಥೆಯಿದು.
ಶುರುವಾಗುವ ಮುನ್ನ.. : ಭಾವೀಶ್ ಅಗರ್ವಾಲ್ ಮುಂಬಯಿಯ ಐಐಟಿಯಲ್ಲಿ ತಮ್ಮ ಪದವಿಯನ್ನು ಪೂರ್ತಿಗೊಳಿಸಿ ಮೈಕ್ರೋಸಾಫ್ಟ್ ಇಂಡಿಯಾ ಸಂಸ್ಥೆಯಲ್ಲಿ ಎರಡು ವರ್ಷ ಕೆಲಸವನ್ನು ಮಾಡುತ್ತಾರೆ. ನಿತ್ಯದ ಜಂಜಾಟ ಟ್ರಾಫಿಕ್ ನಲ್ಲಿ ಸಿಲುಕುತ್ತಾ ದಿನವಿಡೀ ಕಂಪ್ಯೂಟರ್ ಮುಂದೆ ಕಣ್ಣು ಮಿಟುಕುಸುತ್ತಾ ಕೆಲಸವನ್ನು ಮಾಡುವ ಭಾವೀಶ್ ಮನೆಗೆ ಹೋಗಲು ಆಟೋ ಅಥವಾ ಕ್ಯಾಬ್ ಬಳಸೋದು ಅನಿವಾರ್ಯವಾಗಿತ್ತು. ಎರಡು ವರ್ಷ ತಮ್ಮ ಕೆಲಸದ ಅನುಭವದಲ್ಲಿ ಭಾವೀಶ್ ಒಂದು ದಿನ ತಮ್ಮ ಜೀವನದಲ್ಲಿ ಕೆಟ್ಟ ಅನುಭವವನ್ನು ಎದುರಿಸುತ್ತಾರೆ.
2010 ರಲ್ಲಿ ಭಾವೀಶ್ ಅದೊಂದು ದಿನ ಕ್ಯಾಬ್ ವೊಂದನ್ನು ಬುಕ್ ಮಾಡಿ ಬೆಂಗಳೂರಿನಿಂದ – ಬಂಡೀಪುರಕ್ಕೆ ಪಯಣ ಬೆಳೆಸುತ್ತಾರೆ. ಈ ನಡುವೆ ಟ್ಯಾಕ್ಸಿ ಚಾಲಕ ದಾರಿ ಮಧ್ಯದಲ್ಲಿ ನಿಗದಿತ ಬಾಡಿಗೆಗಿಂತ ಹೆಚ್ಚು ಬಾಡಿಗೆ ಕೇಳಲು ಆರಂಭಿಸುತ್ತಾನೆ. ಇದನ್ನು ತಿರಸ್ಕರಿಸುವ ಭಾವೀಶ್ ರನ್ನು ಟ್ಯಾಕ್ಸಿ ಚಾಲಕ ದಾರಿ ಮಧ್ಯದಲ್ಲಿ ಇಳಿಸಿ ಮುಂದೆ ಹೋಗುತ್ತಾನೆ. ಇದು ಭಾವೀಶ್ ರಲ್ಲಿ ಅವಮಾನದ ಬೇಗೆಯನ್ನು ಹುಟ್ಟಿಸುತ್ತದೆ. ಜತೆಗೆ ಇಂಥ ಘಟನೆ ನಮ್ಮ ದೇಶದಲ್ಲಿ ದಿನ ನಿತ್ಯದ ಎಷ್ಟೋ ಆಗುತ್ತಿರಬಹುದು, ಇದಕ್ಕಾಗಿ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಕ್ಯಾಬ್ ಸೇವೆಯನ್ನು ದೂರಕುವಂತೆ ಏನಾದ್ರು ಮಾಡಬೇಕೆನ್ನುವ ನಿರ್ಧಾರವನ್ನು ಮನಸ್ಸಿನಲ್ಲಿ ಹಣೆಯಲು ಶುರು ಮಾಡುತ್ತಾರೆ. ಆಗ ಹಣೆದ ಯೋಜನೆಯೇ ‘ ಓಲಾ ಕ್ಯಾಬ್ ‘.
ಕ್ಯಾಬ್ ಸೇವೆಯನ್ನು ಶುರು ಮಾಡುವ ತಮ್ಮ ಯೋಜನೆಯ ಬಗ್ಗೆ ಭಾವೀಶ್ ತಮ್ಮ ಸ್ನೇಹಿತ ಅಂಕಿತ್ ಭಾಟಿಯ ಬಳಿ ಹೇಳಿಕೊಳ್ಳುತ್ತಾರೆ. ಅಂಕಿತ್ ಭಾಟಿಯೂ ಈ ಯೋಚನೆಗೆ ಜೈ ಎಂದು ಇದರ ಬಗ್ಗೆ ಹಲವು ಸಂಶೋಧನೆಯನ್ನು ಮಾಡಲಾರಂಭಿಸುತ್ತಾರೆ. ಭಾವೀಶ್ ಅಂದುಕೊಂಡ ಕ್ಯಾಬ್ ಸೇವೆಯನ್ನು ಮುಂದುವರೆಸುವ ಯೋಚನೆಗೆ ತ್ಯಾಗ ಅನಿವಾರ್ಯವಾಗಿತ್ತು. ಒಳ್ಳೆ ಸಂಬಳ ಮತ್ತು ನೆಮ್ಮದಿ ನೀಡುತ್ತಿದ್ದ ತಮ್ಮ ಕೆಲಸವನ್ನು ಭಾವೀಶ್ ಬಿಟ್ಟು ಹೊರ ಬರುತ್ತಾರೆ. ಈ ನಿರ್ಧಾರದಿಂದ ಅವರ ತಂದೆ- ತಾಯಿ ನಿರಾಶರಾಗುತ್ತಾರೆ. ಆದರೆ ಅದೇನೋ ಹೇಳ್ತಾರೆ ಅಲ್ವಾ ಒಳಿತು ಮಾಡಲು ಹೋದ ಕಡೆ ದೇವರು ಕಾಣದ ಕೈಗಳನ್ನು ಅನಿರೀಕ್ಷಿತವಾಗಿ ಆದರೂ ಸಹಾಯಕ್ಕೆ ಕಳುಹಿಸುತ್ತಾನೆ ಅಂಥ ಅದೇ ರೀತಿ ಭಾವೀಶ್ ಅವರಿಗೂ ಅನುಭವವಾಯಿತು. ಸ್ನ್ಯಾಪ್ ಡೀಲ್ ಸ್ಥಾಪಕ್ ಕುನಾಲ್ ಪೆಹೆಲ್ ಅವರಿಂದ ಹಣಕಾಸು ಸಹಾಯ ದೊರಕುತ್ತದೆ. ಆ ನಂತರ ಭಾವೀಶ್ ತಂದೆ – ತಾಯಿಯೂ ಸ್ವಲ್ಪ ನೆಮ್ಮದಿ ಕಾಣುತ್ತಾರೆ.
ಬೀದಿಗಿ
ಳಿದ ‘ಓಲಾ ಕ್ಯಾಬ್ ‘ .. : ಭಾವೀಶ್ ಹಾಗೂ ಗೆಳೆಯ ಅಂಕಿತ್ ಮೊದಲು ಓಲಾ ಕ್ಯಾಬ್ ಗಳನ್ನು ಶೂನ್ಯದಿಂದ ಆರಂಭಿಸುತ್ತಾರೆ. ಅಂದರೆ ಈಗಾಗಲೇ ಬಾಡಿಗೆಯಲ್ಲಿರುವ ಕಾರುಗಳನ್ನು ಪಡೆದುಕೊಂಡು ಬಳಸುತ್ತಾರೆ. ‘ ಓಲಾ’ ಮೊಬೈಲ್ ಆ್ಯಪ್ ನ್ನು ಸಹ ಬಳಕೆಗೆ ತರುತ್ತದೆ. ಇದರಲ್ಲಿ ನಾವು – ನೀವು ಮನೆಯಲ್ಲೇ ಕೂತು ಹೋಗುವ ಜಾಗವನ್ನು ಆಯ್ಕೆ ಮಾಡಿಕೊಳ್ಳ ಬಹುದು. ಓಲಾದಲ್ಲಿ ಹಣ ಲೂಟಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಹಣವೆಷ್ಟೆಂದು ಗ್ರಾಹಕ ಹಾಗೂ ಚಾಲಕನ ಮೊಬೈಲ್ ನಲ್ಲಿ ನಮೂದಿತವಾಗುತ್ತದೆ. ಕ್ಯಾಬ್ ಸೇವೆಯ ಶೇ. 60 ರಷ್ಟು ಸೇವೆಗಳನ್ನು ಓಲಾ ಪಡೆದುಕೊಂಡಿದೆ. ‘ ಫುಡ್ ಪಾಂಡ’ ಸಂಸ್ಥೆಯನ್ನು ತನ್ನ ಅಸ್ತಿತ್ವಕ್ಕೆ ಪಡೆದುಕೊಂಡಿದೆ.
ಭಾರತದಲ್ಲಿ ಓಲಾ 250 ಕ್ಕೂ ಹೆಚ್ಚು ನಗರದಲ್ಲಿ ಸೇವೆಯನ್ನು ನೀಡುತ್ತದೆ. ವರ್ಷದಲ್ಲಿ 1 ಬಿಲಿಯನ್ ಗೂ ಹೆಚ್ಚು ಸೇವೆಯನ್ನು ನೀಡುತ್ತಿದೆ. 7 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಲಂಡನ್ ನಲ್ಲೂ ಓಲಾ ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಓಲಾ ಕ್ಯಾಬ್, ಆಟೋ ಹಾಗೂ ಬೈಕ್ ಸೇವೆಯೂ ಇದೆ.
– ಸುಹಾನ್ ಶೇಕ್