ಸದ್ಯ ವಿಶ್ವದೆಲ್ಲೆಡೆ ಸದ್ದು ಮಾಡಿರುವುದು ಅಹಮದಾಬಾದ್ ನ ಮೊಟೆರಾ ಕ್ರೀಡಾಂಗಣ. ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣದ ಉದ್ಘಾಟನೆಗೆ ಆಗಮಿಸುತ್ತಿರುವುದು ವಿಶ್ವದ ದೊಡ್ದಣ್ಣ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಈ ಎಲ್ಲಾ ಕಾರಣಗಳಿಗೆ ಸದ್ದು ಮಾಡುತ್ತಿರುವ ಮೊಟೆರಾ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರೀಡಾಂಗಣದ ವಿಶೇಷತೆಗಳು ಇನ್ನೂ ಹಲವು.
ಮೊಟೆರಾ ಕ್ರೀಡಾಂಗಣ ನಿರ್ಮಾಣವಾಗಿದ್ದು 1982ರಲ್ಲಿ. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ನಿರ್ಮಾಣಗೊಂಡ ಈ ಸ್ಟೇಡಿಯಂನ ಆಗಿನ ಹೆಸರು ಸರ್ದಾರ್ ಪಟೇಲ್ ಸ್ಟೇಡಿಯಂ. ಸುಮಾರು 49 ಸಾವಿರ ಜನರು ಏಕಕಾಲದಲ್ಲಿ ಕುಳಿತು ನೋಡಬಹುದಾಗಿದ್ದ ಮೊಟೆರಾ ಕ್ರೀಡಾಂಗಣ ಕೆಲವು ಮಹತ್ವದ ಪಂದ್ಯಗಳಿಗೆ ಸಾಕ್ಷಿಯಾಗಿದೆ.
1984ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಈ ಅಂಗಳದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿತ್ತು. ಆದರೆ ಆ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.
ಹಲವು ಐತಿಹಾಸಿಕ ಘಟನೆಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ. ಹಲವು ‘ಪ್ರಥಮ’ಗಳು ಈ ಮೊಟೆರಾ ಮೈದಾನದಲ್ಲಿ ದಾಖಲಾಗಿದೆ. 1987ರಲ್ಲಿ ಇದೇ ಮೈದಾನದಲ್ಲಿ ಭಾರತದ ಸುನೀಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಸಾಧಕನಾಗಿ ಮೂಡಿ ಬಂದಿದ್ದರು. ಏಳು ವರ್ಷದ ನಂತರ ಇದೇ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಕಪಿಲ್ ದೇವ್ ಮಾಡಿದ್ದರು. ಅಂದು 432ನೇ ವಿಕೆಟ್ ಪಡೆದು ಸರ್ ರಿಚರ್ಡ್ ಹ್ಯಾಡ್ಲಿ ದಾಖಲೆಯನ್ನು ಮುರಿದಿದ್ದರು. 2011ರಲ್ಲಿ ಇದೇ ಮೊಟೆರಾ ಅಂಗಳದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 18 ಸಾವಿರ ರನ್ ಬಾರಿಸಿದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದರು.
2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಯಾವ ಭಾರತೀಯ ಅಭಿಮಾನಿಯೂ ಮರೆಯಲು ಅಸಾಧ್ಯ. ಆಸ್ಟ್ರೇಲಿಯಾ ವಿರುದ್ಧದ ಆ ಪಂದ್ಯದಲ್ಲಿ ವೀರೋಚಿತವಾಗಿ ಹೋರಾಡಿದ್ದ ಯುವರಾಜ್ ಸಿಂಗ್ ಭಾರತಕ್ಕೆ ಜಯ ತಂದಿತ್ತಿದ್ದರು.
ಪುನರ್ ನಿರ್ಮಾಣ
2015ರವರೆಗೆ ಮೊಟೆರಾ ಸರ್ದಾರ್ ಪಟೇಲ್ ಮೈದಾನದಲ್ಲಿ 12 ಟೆಸ್ಟ್, 23 ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ. 2015ರಲ್ಲಿ ಈ ಮೈದಾನವನ್ನು ಸಂಪೂರ್ಣವಾಗಿ ಕೆಡವಲಾಯಿತು. ಹೊಸ ಮಾದರಿಯಲ್ಲಿ, ಹೊಸ ಯೋಜನೆಗಳೊಂದಿಗೆ ಹೊಸದಾಗಿ ಕಟ್ಟುವ ಯೋಜನೆ ರೂಪಿಸಲಾಯಿತು. ಸುಮಾರು 700 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಸದ್ಯ 800 ಕೋಟಿ ಖರ್ಚಾಗಿದೆ ಎನ್ನಲಾಗಿದೆ.
ಮೋದಿ ಕನಸಿನ ಕೂಸು
ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗುಜರಾತ್ ಕ್ರಿಕೆಟ್ ನ ಅಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಕ್ರೀಡಾಂಗಣದ ರಿಪೇರಿ ಮಾಡುವ ಯೋಜನೆ ಹಾಕಿದ್ದರು. ಆದರೆ ಮೋದಿಯವರು ಪ್ರಧಾನಿಯಾದ ನಂತರ ಮೆಲ್ಬೋರ್ನ್ ಕ್ರೀಡಾಂಗಣಕ್ಕಿಂತ ದೊಡ್ಡದಾಗಿರುವ ಕ್ರೀಡಾಂಗಣ ನಿರ್ಮಿಸುವ ಇರಾದೆಯಿಂದ ಸಂಪೂರ್ಣ ಕ್ರೀಡಾಂಗಣ ನಿರ್ಮಿಸಲು ಯೋಜನೆ ಮಾಡಲಾಯಿತು ಎನ್ನಲಾಗಿದೆ. ಇದು ಮೋದಿಯವರ ಕನಸಿನ ಕೂಸು ಎಂದೇ ಬಿಂಬಿಸಲಾಗಿದೆ.
ಏನಿದರ ವಿಶೇಷತೆಗಳು
* ಸರ್ದಾರ್ ಪಟೇಲ್ ಕ್ರೀಡಾಂಗಣ ಎಂಬ ಹೆಸರನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣ ಎಂದು ಬದಲಾಯಿಸಲಾಗಿದೆ. ವಿಶ್ವದ ಅತೀ ಎತ್ತರದ ಸರ್ದಾರ್ ಪ್ರತಿಮೆಯನ್ನು ನಿರ್ಮಿಸಿದ ಎಲ್ ಆಂಡ್ ಟಿ ಕಂಪನಿಯೇ ಇದರ ನಿರ್ಮಾಣದ ಹೊಣೆಹೊತ್ತಿದೆ.
* ಇದು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ. ಇಲ್ಲಿ 1,10,000 ಜನರು ಕುಳಿತುಕೊಳ್ಳಬಹುದು. ಪ್ರೇಕ್ಷಕ ಯಾವ ಸೀಟಲ್ಲಿ ಕುಳಿತರೂ ಆತನಿಗೆ ಸರಿಯಾಗಿ ಮೈದಾನ ಕಾಣಿಸುವಂತೆ ನಿರ್ಮಿಸಲಾಗಿದೆ. ಒಂದು ಲಕ್ಷ ಜನ ಸಾಮರ್ಥ್ಯದ ಮೆಲ್ಬೋರ್ನ್ ಕ್ರೀಡಾಂಗಣಕ್ಕೆ ಇನ್ನು ಎರಡನೇ ಸ್ಥಾನ.
* ಪಂದ್ಯ ನೋಡಲು ಬರುವ ಪ್ರೇಕ್ಷಕರಿಗೆ ಪಾರ್ಕಿಂಗ್ ಸಮಸ್ಯೆ ಕಾಡದಂತೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 3 ಸಾವಿರ ಕಾರು ಮತ್ತು 10 ಸಾವಿರ ಬೈಕ್ ಗಳನ್ನು ಪಾರ್ಕ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
* ಈ ಮೈದಾನದಲ್ಲಿ ಒಟ್ಟು 11 ಪಿಚ್ ಗಳನ್ನು ರಚಿಸಲಾಗಿದೆ. ವೇಗ, ಬೌನ್ಸ್, ಸ್ಪಿನ್ ಹೀಗೆ ಎಲ್ಲಾ ಮಾದರಿಗೆ ಅನುಕೂಲವಾಗುವ ಪಿಚ್ ಇಲ್ಲಿದೆ.
* ಕ್ರೀಡಾಂಗಣದಲ್ಲಿ ಒಟ್ಟು ನಾಲ್ಕು ಡ್ರೆಸ್ಸಿಂಗ್ ರೂಮ್ ಗಳಿವೆ. 76 ಕಾರ್ಪೋರೇಟ್ ಬಾಕ್ಸ್ ಗಳಿವೆ. ಒಂದು ಒಲಿಂಪಿಕ್ ಗಾತ್ರದ ಸುಸಜ್ಜಿತ ಈಜುಕೊಳವಿದೆ. ಮತ್ತು ಒಳಾಂಗಣ ಕ್ರಿಕೆಟ್ ಅಕಾಡಮೆಯಿದ್ದು, 40 ಕ್ರೀಡಾಪಟುಗಳಿಗೆ ಬೇಕಾಗುವ ವ್ಯವಸ್ಥೆ ಇರುವ ಹಾಸ್ಟೆಲ್ ವ್ಯವಸ್ಥೆಯೂ ಇಲ್ಲಿದೆ.
ಫೆಬ್ರವರಿ 24ರಂದು ಉದ್ಘಾಟನೆಯಾಗಲಿರುವ ಕ್ರೀಡಾಂಗಣದಲ್ಲಿ ಈ ವರ್ಷಾಂತ್ಯದಲ್ಲಿ ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಮುಂದಿನ ವರ್ಷ ಇದೇ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಹೊನಲು ಬೆಳಕಿನ ಪಿಂಕ್ ಟೆಸ್ಟ್ ನಡೆಯುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಕ್ರಿಕೆಟ್ ಆಟವನ್ನು ಧರ್ಮದಂತೆ ಪ್ರೀತಿಸುವ ಭಾರತದ ಕೀರ್ತಿಗೆ ಮೊಟೆರಾದ ಈ ನೂತನ ಮೈದಾನ ಕಲಶವಾಗಲಿದೆ.
ಕೀರ್ತನ್ ಶೆಟ್ಟಿ ಬೋಳ