Advertisement

ಇಂಜಿನಿಯರಿಂಗ್ ಯುವಕ ಶೂ ಪಾಲಿಶ್ ಮಾಡಿ ಕೋಟ್ಯಧಿಪತಿಯಾದ..

09:51 AM Dec 05, 2019 | Suhan S |

ಜೀವನ ಹಾಗೆಯೇ ನಾವು ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು ಕೊನೆಗೆ ನಾವು ಮಾಡೋದೇ ಬೇರೊಂದು. ಕೆಲ ವ್ಯಕ್ತಿಗಳಿಗೆ ತಾನು ಕಲಿತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು, ಒಂದೊಳ್ಳೆ ಕೆಲಸ ಹುಡುಕಿ‌ ಜೀವನದಲ್ಲಿ ಸೆಟಲ್ ಆಗಬೇಕು ಎನ್ನುವ ಆಸೆ ಹಾಗೂ ಆಕಾಂಕ್ಷೆ ಇರುತ್ತದೆ. ಕೆಲವೊಬ್ಬರಿಗೆ ಸಾಧಿಸುವ ಅವಕಾಶ ಇದ್ದರೂ, ಭವಿಷ್ಯ ರೂಪಿಸಿಕೊಳ್ಳುವ ಕ್ಷೇತ್ರವಿದ್ದರೂ ಅವೆಲ್ಲವನ್ನೂ ‌ಮೀರಿ ತನ್ನದೇ ಆದ ಇರಾದೆಯನ್ನು ಇಟ್ಟುಕೊಂಡು ಹೊಸತನ್ನು ಮಾಡುವ ಪಯಣದಲ್ಲಿ‌ ನಡೆಯುತ್ತಾರೆ. ಇಂಥ ‌ಹೊಸತನದ ಹಾದಿಯಲ್ಲಿ ನಡೆದವರು‌ ಮುಂಬಯಿನ ಸಂದೀಪ್ ಗಜ್ಕಾಸ್.

Advertisement

ಸಂದೀಪ್ ಮಧ್ಯಮ ವರ್ಗದ ಯುವಕ. ಕಲಿಕೆಯಲ್ಲಿ ‌ಮುಂದು, ಯೋಚನೆಯಲ್ಲಿ ಇನ್ನೂ ‌ಮುಂದು. ಮುಂಬಯಿಯ ಖಾಸಗಿ ಶಾಲೆಯಲ್ಲಿ ಕಲಿತ ಸಂದೀಪ್ ಮುಂದೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲರ ಹಾಗೆ ಸಂದೀಪ್ ಕೂಡ ಒಂದೊಳ್ಳೆ ಭವಿಷ್ಯ ರೂಪಿಸಿಕೊಳ್ಳುವ ಯೋಜನೆಯಲ್ಲಿ ಇದ್ದರು.

ಪ್ರತಿದಿನ ಕಾಲೇಜಿನಲ್ಲಿ ಸಿಗುವ ಗೆಳೆಯರು ಯಾವಾಗಲೂ ಶಿಸ್ತಿನ‌‌ ಸಿಪಾಯಿಯಂತೆ ಇರುತ್ತಿದ್ದರು. ಪ್ರತಿ ಸಲ ತಾವು ಹಾಕುವ ಶೂವಿಗೆ ಸ್ವಲ್ಪ ಕಲೆಯಾದರೂ ಅಥವಾ ಏನೋ ಆಗಿ ಹರಿದು ಹೋದರು ಅದರ ಬಗ್ಗೆ ಗೆಳೆಯರು ನಿರಾಶರಾಗಿರುತ್ತಿದ್ದರು. ಅದೊಂದು ದಿನ ಸಂದೀಪ್ ಗೆಳೆಯರ ಜೊತೆ ‌ಮಾತಾನಾಡುತ್ತ ನಿಮ್ಮ ಕಲೆಯಾದ ಶೂಗಳನ್ನು ನಾನು ಸಂಪೂರ್ಣ ಹೊಸತರಂತೆ ಮಾಡಿ ತರುತ್ತೇನೆ ಎನ್ನುವ ವಾಗ್ದಾನವನ್ನು ಮಾಡಿ ಮನೆಗೆ ತನ್ನ ಗೆಳೆಯರ ಶೂಗಳನ್ನು ತೆಗೆದುಕೊಂಡು ಹೋಗುತ್ತಾನೆ. ಮರುದಿನ ಹೇಳಿದಂತೆ ಎಲ್ಲರ ಶೂಗಳನ್ನು ಹೊಚ್ಚ ಹೊಸತರಂತೆ ಹೊಳೆಯುವಂತೆ ಮಾಡಿ ತರುತ್ತಾರೆ.

ಇಂಜಿನಿಯರಿಂಗ್ ಮುಗಿದ ಬಳಿಕ ಸಂದೀಪ್ ವಿದೇಶಕ್ಕೆ ಹೋಗುವ ಯೋಜನೆಯಲ್ಲಿ ಇದ್ದಾಗ ಅದೇ ಅಮೇರಿಕಾದ ಯುದ್ಧ ಭೀತಿಯಿಂದ ಗಲ್ಫ್ ರಾಷ್ಟ್ರಕ್ಕೆ ಹೋಗಲು ಸಾಧ್ಯವಾಗಲ್ಲ. ಇಂಥ ವೇಳೆಯಲ್ಲಿ ಸಂದೀಪ್ ಅವರಿಗೆ ತಾನೊಂದು ಶೂ ಪಾಲಿಶ್ ಹಾಗೂ ರಿಪೇರಿ ಮಾಡುವ ಕಂಪೆನಿಯನ್ನು ಶುರು ಮಾಡಬೇಕು ಎನ್ನುವ ಇರಾದೆ ಹುಟ್ಟುತ್ತದೆ. ಈ ಯೋಜನೆಯ ವಿಷಯ ತಿಳಿದ ಅಪ್ಪ ಅಮ್ಮ ಇಂಜಿನಿಯರಿಂಗ್ ಮಾಡಿ ಮಗ ಇಂಥ ಕೆಲಸ ಮಾಡುವುದು ಸರಿಯಲ್ಲ ಎನ್ನುವ ಅಸಮಾಧಾನವನ್ನು ಹೊರ ಹಾಕುತ್ತಾರೆ. ಜೊತೆಗಿದ್ದ ಸ್ನೇಹಿತರಲ್ಲಿ ಕೆಲವರು ಇದನ್ನು ಕೇಳಿ ನಗೆಯಾಡುತ್ತಾರೆ.

ಬಾತ್ ರೂಮ್ ವರ್ಕ್ ಶಾಪ್ ಆಯಿತು!:  ಸಂದೀಪ್ ತಾನೊಂದು ಶೂ ಪಾಲಿಶ್ ಹಾಗೂ ರಿಪೇರಿ ಮಾಡುವ ಸಂಸ್ಥೆಯನ್ನು ಪ್ರಾರಂಭಿಸಬೇಕು ಎನ್ನುವ ಇರಾದೆಯನ್ನು ಇಟ್ಟುಕೊಂಡು ಮೊದಲ ಹಂತವಾಗಿ ತನ್ನ ಸ್ನೇಹಿತರ ಹಾಗೂ ಕುಟುಂಬದವರ ಶೂಗಳನ್ನು ಪಡೆದುಕೊಂಡು, ಮನೆಯ ಬಾತ್ ರೂಮ್ ಅನ್ನೇ ವರ್ಕ್ ಶಾಪ್ ಯನ್ನಾಗಿ ಪರಿವರ್ತಿಸಿಕೊಳ್ಳುತ್ತಾನೆ.ತಾನೆಲ್ಲಾ ಶೂ ಪಾಲಿಶ್ ಹಾಗೂ ರಿಪೇರಿಂಗ್ ಕೆಲಸಗಳನ್ನು ಬಾತ್ ರೂಮ್ ಅಲ್ಲಿ ಮಾಡಿಕೊಂಡು ತನ್ನ ಯೋಜನೆ ಮೊದಲ ಹಂತದಲ್ಲಿ ಸಾಗುತ್ತಾನೆ.

Advertisement

ಗಾಢ ಯೋಚನೆಯೇ ಯೋಜನೆಗೆ ಪೂರಕವಾಯಿತು : ತಾನು ಇದನ್ನು ಮಾಡಬಲ್ಲೆ ಎನ್ನುವ ಅಚಲ ವಿಶ್ವಾಸ ಹೊಂದಿದ್ದ ಸಂದೀಪ್ ಶೂ ಪಾಲಿಶ್ ಹಾಗೂ ರಿಪೇರಿಯ ಬಗ್ಗೆ ದೀರ್ಘ ಸಮಯ ಹಲವು ಬಗೆಯಲ್ಲಿ ಸಂಶೋಧನೆಯನ್ನು‌ ಮಾಡುತ್ತಾನೆ.

ಇದೇ ಸಂಶೋಧನೆ ಸಂದೀಪ್ ಒಂದು ಕಂಪೆನಿಯನ್ನು ಸ್ಥಾಪಿಸುವುದಕ್ಕೆ ಸಹಕಾರಿ ಆಗುತ್ತದೆ. 2003 ರಲ್ಲಿ ಶೂ ಲಾಂಡ್ರಿಯನ್ನು ಸ್ಥಾಪಿಸುತ್ತಾರೆ. ಇದು ದೇಶದ ಮೊದಲ ಶೂ ಪಾಲಿಶ್ ಹಾಗೂ ರಿಪೇರಿಂಗ್ ಸಂಸ್ಥೆ ಆಗುತ್ತದೆ.

ಮುಂದೆ ಬಂದ ಕೈಗಳು :ಶೂ ಲಾಂಡ್ರಿಯ ಯಶಸ್ಸಿಗಾಗಿ ಸಂದೀಪ್ ಎಷ್ಟು ಶ್ರಮವಹಿಸುತ್ತಾನೆ ಅಂದರೆ ಗ್ರಾಹಕರ ಶೂಗಳನ್ನು ತಾನೇ ಪಾಲಿಶ್ ಹಾಗೂ ರಿಪೇರಿ ಮಾಡಿ ಗ್ರಾಹಕರ ಮನೆ ಬಾಗಿಲಿಗೆ ಸ್ವತಃ ಹೋಗಿ ಗ್ರಾಹಕರ ಮನಸ್ಥಿತಿಯನ್ನು ತಿಳಿಯುವ ಪ್ರಯತ್ನ ಮಾಡುತ್ತಾರೆ. ಬೆಳೆಯುತ್ತಿದ್ದಂತೆ ಕಂಪೆನಿಯ ಜೊತೆ ಹಲವಾರು ಮಂದಿ ಹೂಡಿಕೆಗಳನ್ನು ಮಾಡಲು ಆರಂಭಿಸುತ್ತಾರೆ. ಆದರೆ ಯಾವ ಕಂಪೆನಿಯೂ ಹೆಚ್ಚು ಕಾಲ ಶೂ ಲಾಂಡ್ರಿ‌ ಜೊತೆ‌ ನಿಲ್ಲದೆ ನಡುದಾರಿಯಲ್ಲಿ ಕೈ ಬಿಡುತ್ತಾರೆ. ಇದರ ಪರಿಣಾಮವಾಗಿ ಸಂದೀಪ್ ಲಕ್ಷಾಂತರ ರೂಪಾಯಿಯ ನಷ್ಟವನ್ನು ಅನುಭವಿಸುತ್ತಾರೆ.

ಅದೇನೋ ಹೇಳುತ್ತಾರೆ ಅಲ್ವಾ ದೇವರು ಒಂದು ಕಡೆಯಿಂದ ಕಿತ್ತುಕೊಂಡರೆ ಬೇರೊಂದು ಕಡೆಯಿಂದ ಕೊಡುತ್ತಾನೆ ಎನ್ನುವ ಹಾಗೆ ಸಂದೀಪ್ ಅವರ ಈ ಹೊಸ ಕಲ್ಪನೆಯಲ್ಲಿ ಮೂಡಿ ಬಂದ ಕಂಪೆನಿಯ ಜೊತೆ ವಿಶ್ವ ಪ್ರಸಿದ್ಧ ಕ್ರೀಡಾ ಬ್ರ್ಯಾಂಡ್ ಗಳಾದ ನೈಕಿ, ಅಡಿಡಾಸ್, ಫೀಲಾ, ರೀಬಾಕ್ ಹೀಗೆ ಹಲವಾರು ಕಂಪೆನಿಗಳು ಕೈ ಜೋಡಿಸುತ್ತವೆ. ಇದು ಶೂ ಲಾಂಡ್ರಿಯ ಬೆಳವಣಿಗೆಗೆ ಸಹಕಾರಿ ಆಗುತ್ತದೆ.

ಇಂದು ಶೂ ಲಾಂಡ್ರಿ ದೇಶಾದ್ಯಂತ 10 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.ವಿದೇಶದಲ್ಲೂ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದೆ. ವರ್ಷಕ್ಕೆ ಕೋಟ್ಯಾಂತರ ಲಾಭವನ್ನು ಗಳಿಸುತ್ತಿದೆ.

 

ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next