Advertisement

Paralympics; ಅಂಗವೈಕಲ್ಯಕ್ಕೆ ಸವಾಲೊಡ್ಡಿ ಗೆದ್ದ ಶ್ರೀಹರ್ಷ

10:29 PM Aug 20, 2024 | Team Udayavani |

ಬೆಂಗಳೂರು: ಛಲವೊಂದಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಹುಬ್ಬಳ್ಳಿಯ ಪ್ಯಾರಾ ಶೂಟರ್‌ ಶ್ರೀಹರ್ಷ ದೇವರೆಡ್ಡಿ ಉತ್ತಮ ಉದಾಹರಣೆ. 11 ವರ್ಷಗಳಿಗೆ ಹಿಂದೆ ಅಪಘಾತವೊಂದರಲ್ಲಿ ಕೈಕಾಲುಗಳು ಸ್ವಾಧೀನ ಕಳೆದುಕೊಂಡು, ಕನಸು ಗಳು ಮಣ್ಣುಪಾಲಾದರೂ ಎದೆ ಗುಂದದೆ, ಮತ್ತೂಂದು ಕನಸನ್ನು ಬೆನ್ನು ಹತ್ತಿದ್ದಾರೆ. ಅವರೀಗ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ವರೆಗೆ ತಲುಪಿದ್ದಾರೆ. ಪ್ಯಾರಾ ಶೂಟಿಂಗ್‌ನಲ್ಲಿ ಪದಕ ಗೆಲ್ಲಲು ಸಜ್ಜಾಗಿದ್ದಾರೆ.

Advertisement

ರಸ್ತೆ ಅಪಘಾತದಲ್ಲಿ ಬೆನ್ನುಮೂಳೆಗೆ ಗಾಯ

44 ವರ್ಷದ ಶ್ರೀಹರ್ಷ ದೇವರೆಡ್ಡಿಯ ಮೂಲ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರಂಜಿಣಿಗಿ. ಹೆಂಡತಿ, ಮಗ, ಅಪ್ಪ-ಅಮ್ಮನೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಇನ್ಶೂರೆನ್ಸ್‌ ಕಂಪೆನಿಯಲ್ಲಿ ಏರಿಯಾ ಮ್ಯಾಜೇಜರ್‌ ಆಗಿ ಕೆಲಸ ಮಾಡುತ್ತಿದ್ದ ಶ್ರೀಹರ್ಷ, ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ಜಲ್ಲಿಕಲ್ಲಿನ ರಸ್ತೆಯಲ್ಲಿ ಬೈಕ್‌ ಮಗುಚಿ ಬಿತ್ತು. ಬೆನ್ನುಮೂಳೆ, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಯಿತು. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರಿಗೆ ಧಾರವಾಡದ ಎಸ್‌ಡಿಎಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು. ಆದರೆ ಅಷ್ಟರಲ್ಲಿ ಎರಡೂ ಕೈ ಮತ್ತು ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡವು. ಚೇತರಿಸಿಕೊಳ್ಳಲು ಒಂದು ವರ್ಷ ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು. ಶೇ.75ರಷ್ಟು ಡಿಸೇಬಲ್ಡ್‌ ಎಂದು ವೈದ್ಯರು ಘೋಷಣೆ ಕೂಡ ಮಾಡಿದರು.

ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಯಿತು. ಹಳೆ ಕಂಪೆನಿಯಲ್ಲಿ ಮತ್ತೆ ಉದ್ಯೋಗ ಕೊಡುವುದಾಗಿ ಹೇಳಿದರು. ಆದರೆ ಕಂಪ್ಯೂಟರ್‌ ವಿಭಾಗದಲ್ಲಿ ಕೆಲಸ ಮಾಡಲು ಕೈ ಬೆರಳುಗಳು ಶಕ್ತವಾಗಿರಲಿಲ್ಲ. ಹೀಗಾಗಿ ಶ್ರೀಹರ್ಷ ಕಂಪೆನಿ ತೊರೆಯಬೇಕಾಯಿತು.

ಬ್ಯಾಡ್ಮಿಂಟನ್‌ ಬದಲು ಕೈ ಹಿಡಿದ ಶೂಟಿಂಗ್‌

Advertisement

“ಜೆಎಸ್‌ಎಸ್‌ ಕಾಲೇಜಿನಲ್ಲಿ ಪದವಿ ಕಲಿಯುತ್ತಿದ್ದಾಗ ನಾನು ಕರ್ನಾಟಕ ವಿವಿ ಮಟ್ಟದ ಬ್ಯಾಡ್ಮಿಂಟನ್‌ ಆಟಗಾರ. ಆದರೆ ಅಪಘಾತದ ಬಳಿಕವೂ ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡು ಪ್ಯಾರಾ ಕ್ರೀಡಾಕೂಟಗಳ ಬಗ್ಗೆ ಯೂಟ್ಯೂಬ್‌, ಅಲ್ಲಿಲ್ಲಿಂದ ಮಾಹಿತಿ ಕಲೆಹಾಕಿದೆ. ಆರಂಭದಲ್ಲಿ ಬ್ಯಾಡ್ಮಿಂಟನ್‌ಗೆ ಯತ್ನಿಸಿದೆ. ಆದರೆ ಶಕ್ತಿ ಇರಲಿಲ್ಲ. ಬಳಿಕ ಹುಬ್ಬಳ್ಳಿ ಶೂಟಿಂಗ್‌ ರೇಂಜ್‌ನಲ್ಲಿ ಶೂಟಿಂಗ್‌ ಅಭ್ಯಾಸ ನಡೆಸಿದೆ. ಅಮ್ಮ ಸಾಲ ಮಾಡಿ ರೈಫ‌ಲ್‌ ಕೊಡಿಸಿದರು. 2017ರಲ್ಲಿ ನಾನು ಕ್ರೀಡೆಗೆ ಬಂದೆ. 2019ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಅಲ್ಲಿಂದ ರಾಷ್ಟ್ರೀಯ ತಂಡದಲ್ಲೇ ಇದ್ದೇನೆ’ ಎಂದು ಶ್ರೀಹರ್ಷ ತನ್ನ ಬದುಕಿನ ಕ್ಷಣಗಳನ್ನು ಹರವಿಕೊಂಡರು.

0.3 ಅಂಕ ಅಂತರದಲ್ಲಿ ಟೋಕಿಯೊ ಅವಕಾಶ ತಪ್ಪಿತು

ದೇವರೆಡ್ಡಿಗೆ 2019ರಿಂದಲೂ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಲಭಿಸಿದೆ. 2020ರಲ್ಲಿ ಅಮೆರಿಕದ ಲಿಮಾ ವಿಶ್ವಕಪ್‌ನಲ್ಲಿ ಕಂಚು ಲಭಿಸಿತು. ಆದರೆ 0.3 ಅಂತರದಲ್ಲಿ ಪ್ಯಾರಾಲಿಂಪಿಕ್ಸ್‌ ಅವಕಾಶ ತಪ್ಪಿತು. 2020ರಲ್ಲಿ ದುಬಾೖ ವಿಶ್ವಪ್‌ನಲ್ಲಿ ಕಂಚು ಗೆದ್ದರು. ಆದರೆ ಟೋಕಿಯೊ ಅವಕಾಶ ತಪ್ಪಿದ್ದನ್ನೇ ಸವಾಲಾಗಿ ಸ್ವೀಕರಿಸಿ ಅಭ್ಯಾಸ ನಡೆಸಿದರು. 2022ರಲ್ಲಿ ಫ್ರಾನ್ಸ್‌ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ ಬಂಗಾರ ಗೆದ್ದು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡರು.

ಪತ್ನಿಯೇ ನನಗೆ ಬೆನ್ನುಮೂಳೆ

ವೀಲ್‌ ಚೇರ್‌ನಲ್ಲಿ ಕುಳಿತೇ ಸ್ಪರ್ಧಿಸುವ ಬಗ್ಗೆಯೂ ಶ್ರೀಹರ್ಷ ವಿಚಾರಗಳನ್ನು ಹಂಚಿಕೊಂಡರು. ನಮ್ಮ ಅಂಗವೈಕಲ್ಯಕ್ಕೆ ತಕ್ಕಂಕೆ ಸ್ಪರ್ಧೆಗೆ ಅವಕಾಶವಿರುತ್ತದೆ. ಅಂದರೆ ಅವಶ್ಯವಿದ್ದರೆ ನಮಗೆ ಕೈ, ಕಾಲುಗಳಿಗೆ ಸಪೋರ್ಟ್‌ ಬಳಸಹುದು. ನಮಗೆ ಒಬ್ಬರು ಲೋಡರ್‌ ಇರುತ್ತಾರೆ. ಸದ್ಯ ನನಗೆ ನನ್ನ ಪತ್ನಿ ಶೋಭಾ ದೇವರೆಡ್ಡಿಯೇ ಲೋಡರ್‌, ಎಸ್ಕಾರ್ಟ್‌ ಆಗಿ ಜತೆಗಿದ್ದು ಬೆಂಬಸುತ್ತಾರೆ. ಕೋಚ್‌ ಜೆ.ಪಿ. ನೌಟಿಯಾಲ್‌, ಪ್ರಜಕ್ತ ಹೊಸೂರ್‌ ತರಬೇತುದಾರರಾಗಿ ಸದಾ ಬೆಂಬಲಿಸುತ್ತಿದ್ದಾರೆ ಎಂದು ಶ್ರೀಹರ್ಷ ತನಗೆ ನೆರವು ನೀಡುವ ಕೈಗಳನ್ನು ಸ್ಮರಿಸಿಕೊಂಡರು.

ಎಸ್‌. ಸದಾಶಿವ

Advertisement

Udayavani is now on Telegram. Click here to join our channel and stay updated with the latest news.

Next