ಒಂದು ಬಾರಿ ಶಿವನು ಕೈಲಾಸದಿಂದ ಹೊರಗೆ ಹೋಗಿದ್ದಾಗ ಮನೆಯಲ್ಲಿ ಏಕಾಂಗಿ ಯಾಗಿ ಕುಳಿತಿದ್ದ ಪಾರ್ವತಿ ದೇವಿಗೆ ಸ್ನಾನಕ್ಕೆ ತೆರಳಲು ಮನಸ್ಸಾಗುತ್ತದೆ. ಆದರೆ ಮನೆಯನ್ನು ಕಾಯಲು ಯಾರೂ ಇಲ್ಲದೇ ಇರುವ ಸಂದರ್ಭದಲ್ಲಿ ಸ್ನಾನಕ್ಕೆ ತೆರಳುವುದಾದರೂ ಹೇಗೆ ಎಂಬ ಯೋಚನೆಯಲ್ಲಿ ಮುಳುಗಿದ್ದ ಆಕೆಗೆ ತತ್‌ಕ್ಷಣವೇ ಒಂದು ಉಪಾಯ ಹೊಳೆಯುತ್ತದೆ. ಆಕೆ ತನ್ನ ದೇಹದಲ್ಲಿನ ಮಣ್ಣಿನಿಂದಲೇ ಒಂದು ಮೂರ್ತಿಯನ್ನು ತಯಾರಿಸಿ, ಅದಕ್ಕೆ ಜೀವ ನೀಡುತ್ತಾಳೆ ಮತ್ತು ಆ ಬಾಲಕನಿಗೆ ತಾನು ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯೊಳಕ್ಕೆ ಯಾರನ್ನೂ ಪ್ರವೇಶಿಸದಂತೆ ನೋಡಿಕೊಳ್ಳಲು ತಿಳಿಸಿ ಪಾರ್ವತಿ ಸ್ನಾನಕ್ಕೆ ತೆರಳುತ್ತಾಳೆ. ಅದೇ ಸಂದರ್ಭದಲ್ಲಿ ಹೊರ ಹೋಗಿದ್ದ ಶಿವ ಮನೆಗೆ ಬರುತ್ತಾನೆ. ಆದರೆ, ಶಿವನ ಪರಿಚಯವೇ ಇಲ್ಲದ ಬಾಲಕ ಆತನ್ನು ಒಳ ಪ್ರವೇಶಿಸದಂತೆ ತಿಳಿಸುತ್ತಾನೆ. ಪರಿ ಪರಿಯಾಗಿ ಕೇಳಿಕೊಂಡ ಈಶ್ವರನ ಯಾವ ಮಾತಿಗೂ ಮರುಳಾಗದ ಬಾಲಕನ ಮೇಲೆ ಕುಪಿತನಾದ ಶಿವ ಆತನ ತಲೆಯನ್ನೇ ಕತ್ತರಿಸಿ ಬಿಡುತ್ತಾನೆ. ಆ ಸಮಯಕ್ಕೆ ಸರಿಯಾಗಿ ಸ್ನಾನ ಮುಗಿಸಿ ಪಾರ್ವತಿ ದೇವಿ ಹೊರ ಬಂದಾಗ ತನ್ನ ಮಗನ ದುಸ್ಥಿತಿಯನ್ನು ಕಂಡು ಮರುಗುತ್ತಾಳೆ, ಅಳುತ್ತಾಳೆ. ಹೇಗಾದರೂ ಮಾಡಿ ತನ್ನ ಪುತ್ರನನ್ನು ಮತ್ತೆ ಬದುಕಿಸಿ ಕೊಡುವಂತೆ ಬೇಡಿಕೊಳ್ಳುತ್ತಾಳೆ. ಮಡದಿಯ ದುಃ ಖದಿಂದ ಕಂಗೆಟ್ಟ ಶಿವ, ತನ್ನ ಗಣಗಳಿಗೆ ಉತ್ತರ ದಿಕ್ಕಿಗೆ ಮಲಗಿರುವ ಜೀವಿಯ ತಲೆಯನ್ನು ತರುವಂತೆ ಆಜ್ಞಾಪಿಸುತ್ತಾನೆ. ಅದರಂತೆ ಉತ್ತರ ದಿಕ್ಕಿಗೆ ಮಲಗಿದ್ದ ಆನೆಯ ತಲೆಯನ್ನು ತಂದು ಶಿವನಿಗೆ ಒಪ್ಪಿಸುತ್ತಾರೆ. ಆ ತಲೆಯನ್ನು ರುಂಡ ಕಳೆದುಕೊಂಡು ಬಿದ್ದಿದ್ದ ಮುಂಡಕ್ಕೆ ಜೋಡಿಸಿ ಮತ್ತೆ ಆ ಬಾಲಕನಿಗೆ ಜೀವದಾನ ಮಾಡುತ್ತಾನೆ. ಅಂದಿನಿಂದ ಗಣಪತಿಗೆ ಗಜಮುಖ ಎಂಬ ಹೆಸರು ಬರುತ್ತದೆ.
ಗಣೇಶ ಮತ್ತು ಕಾವೇರಿ ನದಿ:
ಒಂದಾನೊಂದು ಕಾಲದಲ್ಲಿ ಅಗಸ್ತ್ಯಮುನಿಗಳು ದಕ್ಷಿಣ ದಿಕ್ಕಿನ ಸೂಕ್ತ ಸ್ಥಳದಲ್ಲಿ ನದಿ ಸೃಷ್ಟಿಸಬೇಕೆಂಬ ಉದ್ದೇಶದಿಂದ ತನ್ನ ಪವಿತ್ರ ಜಲ ತುಂಬಿದ ಕಮಂಡಲದೊಂದಿಗೆ ತಪ್ಪಿಸ್ಸಿಗೆ ಕುಳಿತುಕೊಳ್ಳುತ್ತಾರೆ. ಮುನಿಗಳ ತಪ್ಪಸ್ಸಿಗೆ ಮೆಚ್ಚಿದ ಬ್ರಹ್ಮ ಮತ್ತು ಶಿವ ಮುನಿಗಳ ಬೇಡಿ ಕೆಗೆ ಅಸ್ತು ಎನ್ನುತ್ತಾರೆ. ಹೀಗೆ ಪವಿತ್ರ ಜಲ ತುಂಬಿದ ಕಮಂಡಲವನ್ನು ಹಿಡಿದುಕೊಂಡು ಪರ್ವತದ ಕಡೆ ಬರುತ್ತಿದ್ದಾಗ ಅಲ್ಲಿದ್ದ ಬಾಲಕನ್ನು ನೋಡುತ್ತಾರೆ. ಆ ಬಾಲಕನಲ್ಲಿ “ಈ ಕಮಂಡಲವನ್ನು ಜೋಪಾನವಾಗಿ ಹಿಡಿದುಕೋ ನಾನೀಗ ಬರುವೆ’ ಎಂದು ತಿಳಿಸುತ್ತಾರೆ. ನದಿಯ ಉದ್ಭವಕ್ಕೆ ಇದೇ ಸೂಕ್ತ ಸ್ಥಳ ಎಂದು ಅರಿತ ಬಾಲಕ ಕಮಂಡಲವನ್ನು ನೆಲದಲ್ಲಿಡುತ್ತಾನೆ. ಹೀಗೆ ಕಮಂಡಲವನ್ನು ನೆಲದಲ್ಲಿಟ್ಟ ಬಾಲಕ ಬೇರಾರು ಅಲ್ಲ ಗಣೇಶ. ಆ ಸಂದರ್ಭದಲ್ಲಿಕಾಗೆಯೊಂದು ಕಮಂಡಲದಲ್ಲಿದ್ದ ನೀರನ್ನು ಕುಡಿಯಲು ಆಗಮಿಸುತ್ತದೆ. ಅಲ್ಲಿಗೆ ಬಂದ ಮುನಿಗಳು ಆ ಕಾಗೆಯನ್ನು ಓಡಿಸುವ ಸಂದರ್ಭದಲ್ಲಿ ಕಮಂಡಲದಲ್ಲಿದ್ದ ನೀರಿನ ಹನಿ ಗಳು ಭೂಮಿಗೆ ಬೀಳುತ್ತವೆ. ಈ ಮೂಲಕ ಕಾವೇರಿ ನದಿಯ ಸೃಷ್ಟಿಯಾಗುತ್ತದೆ. ಹಾಗಾಗಿ ಕಾವೇರಿ ನದಿಯನ್ನು ಪವಿತ್ರ ನದಿ ಎಂದು ಪರಿಗಣಿಸಲಾಗಿದೆ.