Advertisement
ದೀಪಿಕಾ ಕುಮಾರಿ ಬಿಹಾರ ರಾಜ್ಯದ (ಈಗ ಜಾರ್ಖಂಡ್) ರಾಂಚಿ ಬಳಿಯ ರಚುಚತಿ ಗ್ರಾಮದವರು. ದೀಪಿಕಾ ಕುಮಾರಿ ಜನಿಸಿದ್ದು 1994ರ ಜೂನ್ 13ರಂದು. ದೀಪಿಕಾ ತಂದೆ ಶಿವ ನಾರಾಯಣ್ ಮೆಹತೋ ಓರ್ವ ಆಟೋ ರಿಕ್ಷಾ ಚಾಲಕ. ತಾಯಿ ಗೀತಾ ಮೆಹತೋ ರಾಂಚಿಯ ಆಸ್ಪತ್ರೆಯಲ್ಲಿ ನರ್ಸ್.
Advertisement
2009ರಲ್ಲಿ ಅಮೆರಿಕಾದ ಉತಾಹ್ ನಲ್ಲಿ ನಡೆದ 11ನೇ ವಿಶ್ವ ಯುವ ಆರ್ಚರಿ ಸ್ಪರ್ಧೆಯಲ್ಲಿ ದೀಪಿಕಾ ಜಯ ಗಳಿಸುತ್ತಾರೆ. ಅದೇ ಕೂಟದ ತಂಡ ಸ್ಪರ್ಧೆಯಲ್ಲೂ ಚಿನ್ನದ ಪದಕ ಜಯಿಸಿದ್ದರು. 2010ರ ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ದೀಪಿಕಾ ಎರಡು ಚಿನ್ನದ ಪದಕಕ್ಕೆ ಗುರಿ ಇಡುತ್ತಾರೆ. 2012ರಲ್ಲಿ ದೀಪಿಕಾ ಮೊದಲ ಬಾರಿಗೆ ವಿಶ್ವಕಪ್ ಚಿನ್ನ ಗೆದ್ದುಕೊಂಡಿದ್ದರು. ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಲಿ ಸಂಗ್ ಜಿನ್ ರನ್ನು ದೀಪಿಕಾ ಫೈನಲ್ ನಲ್ಲಿ ಸೋಲಿಸಿದ್ದರು. ಇದರ ಬಳಿಕ ದೀಪಿಕಾ ವಿಶ್ವ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನಕ್ಕೆ ಏರಿದ್ದರು.
2016ರ ಶಾಂಘಾಯ್ ವಿಶ್ವಕಪ್ ನ ಮೊದಲ ಹಂತದಲ್ಲಿ ದೀಪಿಕಾ ಕುಮಾರಿ ಮಹಿಳೆಯರ ರಿಕರ್ವ್ ಸ್ಪರ್ಧೆಯಲ್ಲಿ ದೀಪಿಕಾ, ಕಿ ಬೊ ಬೇ ಅವರ ವಿಶ್ವದಾಖಲೆಯ (686/720) ಅಂಕವನ್ನು ಸರಿದೂಗಿಸಿದ್ದರು. 2016ರ ರಿಯೋ ಒಲಿಂಪಿಕ್ಸ್ ಗೆ ಭಾರತದ ತಂಡದಲ್ಲಿ ಅರ್ಹತೆ ಪಡೆದ ದೀಪಿಕಾ ಕ್ವಾರ್ಟರ್ ಫೈನಲ್ ಸೋಲನುಭವಿಸಿದ್ದರು. 2021ರ ಪ್ಯಾರಿಸ್ ವಿಶ್ವಕಪ್ ಮೂರನೇ ಹಂತದ ಕೂಟದಲ್ಲಿ ದೀಪಿಕಾ ಕುಮಾರಿ ಮೂರು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. 2021ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಆರಂಭ ಮಾಡಿದ್ದರೂ, ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.
ಅತನು ದಾಸ್ ಜೊತೆ ಪ್ರೇಮ ವಿವಾಹ: ಭಾರತ ಪುರುಷರ ವಿಭಾಗದ ಸ್ಟಾರ್ ಆರ್ಚರ್ ಅತನು ದಾಸ್ ಜೊತೆ ದೀಪಿಕಾ ಕುಮಾರಿ 2020ರಲ್ಲಿ ವಿವಾಹವಾಗಿದ್ದರು. 2008ರಲ್ಲೇ ಅತನು ದಾಸ್ ಮತ್ತು ದೀಪಿಕಾ ಪರಿಚಯವಾಗಿತ್ತು. ಜಮ್ಶೆಡ್ ಪುರದ ಟಾಟಾ ಅಕಾಡಮೆಯಲ್ಲಿ ಇವರಿಬ್ಬರೂ ಒಟ್ಟಿಗೆ ಅಭ್ಯಾಸ ನಡೆಸಿದ್ದರು.
ಪರಿಚಯವಿದ್ದರೂ ಇಬ್ಬರ ನಡುವೆ ಅನ್ಯೋನ್ಯತೆ ಇರಲಿಲ್ಲ. ಆತನಿಗೆ ಆರಂಭದಲ್ಲಿ ಹಿಂದಿ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ನಾವು ಹೆಚ್ಚು ಮಾತನಾಡುತ್ತಿರಲಿಲ್ಲ ಎನ್ನುತ್ತಾರೆ ದೀಪಿಕಾ. ಸಂವಹನ ಅಂತರಗಳು, ದೊಡ್ಡ ಅಹಂಗಳು ಮತ್ತು ತಪ್ಪುಗ್ರಹಿಕೆಗಳಿಂದ ಅವರ ಒಡನಾಟ ತುಸು ಕಡಿಮೆಯೇ ಇತ್ತು. ಅಹಂ ಕಾರಣಗಳಿಂದ ಸಣ್ಣ ಸಣ್ಣ ವಿಚಾರಗಳಿಗೂ ಅವರು ಜಗಳವಾಡುತ್ತಿದ್ದರು.
2016ರಲ್ಲಿ ಒಟ್ಟಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದರೂ ಪ್ರೀತಿ ಹುಟ್ಟಿರಲಿಲ್ಲ. 2017ರಲ್ಲಿ ಅಂದರೆ ಪರಿಚಯವಾಗಿ ಬಹುತೇಕ ಒಂದು ದಶಕದ ಬಳಿಕ ಅತನು ಮತ್ತು ದೀಪಿಕಾ ನಡುವೆ ಪ್ರೇಮಾಂಕುರವಾಗಿತ್ತು. ಅದಕ್ಕೆ ಕಾರಣವಾಗಿದ್ದು ಮೆಕ್ಸಿಕೋ ವಿಶ್ವ ಚಾಂಪಿಯನ್ ಶಿಪ್ ಸೋಲು!