Advertisement

ಇತಿಹಾಸ ನಿರ್ಮಾಣದ ಹಿಂದಿದೆ ಅವಿರತ ಪರಿಶ್ರಮ

07:43 PM Jul 10, 2020 | mahesh |

“ನನಗೆ ತಿಳಿದಷ್ಟು ಮಾತ್ರ ಕೆಲಸ ಮಾಡುತ್ತೇನೆ ಎಂಬ ಮನೋಭಾವದಿಂದ ನೀವು ಕೆಲಸಕ್ಕೆ ಹೋದರೆ, ನಿಮ್ಮ ಕೈಯಲ್ಲಿರುವ ಅದೆಷ್ಟೋ  ಅವಕಾಶಗಳನ್ನು ಬಿಟ್ಟು ಬರುತ್ತೀರಿ. ಹಾಗಾಗಿ ಕೆಲಸ ಮಾಡುತ್ತೇನೆ ಎಂದು ಹೊರಟಾಗ ಬೇಕಾದಷ್ಟು ಅವಕಾಶಗಳನ್ನು ನೀವು ಸೃಷ್ಟಿಸಿಕೊಳ್ಳುವಿರಿ’ ಇಂತಹದ್ದೊಂದು ಯಶಸ್ಸಿನ ಗುಟ್ಟಿನ ಅನುಭವದ ಮಾತನ್ನು ಹೇಳಿದವರು “ಅಮೆಜಾನ್‌’ ದೈತ್ಯ ಕಂಪೆನಿಯ ಸ್ಥಾಪಕ ಜೆಫ್ ಬಿಜೋಸ್‌.

Advertisement

ಪ್ರಪಂಚದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಜೆಫ್ ಬಿಜೋಸ್‌ ಹೆಸರು ಮುಂಚೂಣಿಯಲ್ಲಿದೆ. ಅಮೆಜಾನ್‌ ಕಂಪೆನಿಯನ್ನು ಕಟ್ಟಿ ಬೆಳೆಸಿದ ಅಸಾಮಾನ್ಯ ಉದ್ಯಮಿ. ಬೆರಳತುದಿಯಲ್ಲಿಯೇ ಬೇಕಾದ ಎಲ್ಲ ವಸ್ತುಗಳನ್ನು ಸಿಗುವಂತೆ ಮಾಡಿ, ಹೊಸ ಬಗೆಯ ಡಿಜಿಟಲ್‌ ವ್ಯಾಪಾರಕ್ಕೆ ನಾಂದಿ ಹಾಡಿದವರು. ಅಂಗಡಿ ಮಳಿಗೆಗಳಿಗೆ ಹೋಗಿ ಖರೀದಿ ಮಾಡುವ ಕಾಲದಲ್ಲಿ ಇವರು ಅಂತರ್ಜಾಲದಲ್ಲಿಯೇ ತಮ್ಮ ಅಮೆಜಾನ್‌ ಕಂಪೆನಿಯ ಮುಖಾಂತರ ಎಲ್ಲ ಮಾದರಿಯ ವಸ್ತುಗಳನ್ನು ಸಿಗುವಂತೆ ಮಾಡಿದ ವಿಶಿಷ್ಟ ಉದ್ಯಮಿ.

ಜೆಫ್ ಬಿಜೋಸ್‌ ಅಥವಾ ಜೆಫ್ರಿ ಪ್ರಸ್ಟನ್‌ ಬಿಜೋಸ್‌ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ಜನವರಿ 12, 1964ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಸೃಜನಶೀಲನಾಗಿದ್ದ ಇವರು, ಹೊಸದನ್ನು ಅನ್ವೇಷಿಸುವುದರಲ್ಲಿ ಎತ್ತಿದ ಕೈ. ಇದೇ ಇವರನ್ನು ಮುಂದೆ ದೊಡ್ಡ ಕಂಪೆನಿ ಆರಂಭಿಸಲು ಪ್ರೇರೇಪಿಸಿತು. ತನ್ನ ಹೈಸ್ಕೂಲ್‌ ದಿನಗಳಲ್ಲಿಯೇ ಮಕ್ಕಳಲ್ಲಿ ಕ್ರಿಯೇಟಿವ್‌ ಆಲೋಚನೆಗಳನ್ನು ಹುಟ್ಟು ಹಾಕುವ ಸಂಸ್ಥೆಯೊಂದನ್ನು ಆರಂಭಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ.

ಪ್ರಿನ್ಸ್‌ಟನ್‌ ವಿವಿಯಲ್ಲಿ ಪದವಿ ಮುಗಿಸಿ ಡಿ.ಇ. ಶಾ ಆ್ಯಂಡ್‌ ಕಂಪೆನಿಯಲ್ಲಿ ಇವರು ಉದ್ಯೋಗ ಆರಂಭಿಸಿದ್ದರು. ಬಳಿಕ ಅಲ್ಲಿನ ಉದ್ಯೋಗಕ್ಕೆ ಗುಡ್‌ಬೈ ಹೇಳಿ, ವಾಷಿಂಗ್ಟನ್‌ ನಗರದ ಗ್ಯಾರೇಜ್‌ವೊಂದರಲ್ಲಿ 1995ರಲ್ಲಿ ಬುಕ್‌ ಸ್ಟಾಲ್‌ವೊಂದನ್ನು ತೆರೆದು ಸ್ವ ಉದ್ಯೋಗದತ್ತ ಮುಖ ಮಾಡಿದ್ದರು.

ಅದೃಷ್ಟದ‌ ಬಾಗಿಲು
ವಾಷಿಂಗ್ಟನ್‌ನ ಗ್ಯಾರೇಜ್‌ನಲ್ಲಿ ಆರಂಭಿಸಿದ ಬುಕ್‌ಸ್ಟಾಲ್‌ಗೆ ಜೆಫ್ “ಅಮೆಜಾನ್‌’ ಎಂದು ಹೆಸರಿಟ್ಟರು. ಅನಂತರ ಬುಕ್‌, ಸಿಡಿ, ಡಿವಿಡಿ ಸಹಿತ ವಿವಿಧ ಸ್ಟೇಶನರಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಒಂದು ಹಂತದಲ್ಲಿ ಉದ್ಯಮ ಗಟ್ಟಿಗೊಂಡಾಗ ಜೆಫ್ ಆನ್‌ಲೈನ್‌ನಲ್ಲಿ ನೆಲೆಕಾಣಲು ಮುಂದಾಗಿ ಅಂಗಡಿಯ ಹೆಸರಿನ ಮೇಲೆ ವೆಬ್‌ಸೈಟ್‌ ಆರಂಭಿಸಿದರು. ಇದು ಅವರ ಅದೃಷ್ಟದ ಬಾಗಿಲನ್ನು ತೆರೆಸಿತು. ಉದ್ಯಮದಲ್ಲಿ ವಿಶ್ವಾಸಾರ್ಹತೆ, ಗುಣಮಟ್ಟ ಕಾಯ್ದಕೊಂಡಂತೆ ಉದ್ಯಮ ಹಂತ ಹಂತವಾಗಿ ಬೆಳವಣಿಗೆ ಕಂಡಿತು. ಮುಂದೆ ಈ ಉದ್ಯಮ ಅಮೆರಿಕ ಮಾತ್ರವಲ್ಲದೆ ಸಾಗರದಾಚೆಗೂ ಬೆಳೆದು ನಿಂತು, ವಿಶ್ವಾದ್ಯಂತ ತನ್ನ ಕಬಂಧ ಬಾಹು ಚಾಚಿತು. ಇದೀಗ ಪ್ರತಿ ಹಳ್ಳಿಗೂ ಅಮೆಜಾನ್‌ ಸೇವೆ ತಲುಪುತ್ತಿದೆ.

Advertisement

ವ್ಯವಹಾರದ ಅರಿವು ಇರಲಿ
ಉದ್ಯಮವಾಗಲಿ ಅಥವಾ ಜೀವನವಾಗಲಿ ಯಶಸ್ವಿಯಾಗಬೇಕಾದರೆ ಮೊದಲು ನಮ್ಮನ್ನು ನಾವು ಅರಿಯಬೇಕು. ಈ ಕಾರಣಕ್ಕೆ ಜೆಫ್ ಸ್ಪಷ್ಟ ಉದಾಹರಣೆ. ಆತ ಯಶಸ್ವಿ ಉದ್ಯಮಿಯಾಗುವ ಮುನ್ನ ತನ್ನ ಉದ್ಯಮ, ವ್ಯವಹಾರಗಳ ಬಗ್ಗೆ ತಳ
ಸ್ಪರ್ಶಿಯಾಗಿ ಅಧ್ಯಯನ ಮಾಡಿ ಜ್ಞಾನ ಪಡೆದುಕೊಂಡಿದ್ದರು. ಹೀಗಾಗಿ ಅವರಿಗೆ ಉದ್ಯಮದಲ್ಲಿ ಯಶಸ್ಸು ಸುಲಭವಾಯಿತು. ಈ ವಿಚಾರವನ್ನು ಸ್ವತಃ ಬಿಜೋಸ್‌ ಅವರೇ ಹೇಳಿಕೊಂಡಿದ್ದಾರೆ.

ಕಠಿನ ಶ್ರಮಪಡಿ
ಜೆಫ್ ಬಿಜೋಸ್‌ ಅವರೂ ಕಷ್ಟದಿಂದಲೇ ಮೇಲೆ ಬಂದವರು. ಅಮೆಜಾನ್‌ ಕಂಪೆನಿಯ ಆರಂಭದಿಂದಲೂ ಜೆಫ್ ಅವಿರತ ಶ್ರಮವಹಿಸಿದ್ದಾರೆ. “ನೀವು ಜಯ ಕಾಣಬೇಕಾದರೆ, ಕಠಿನ ಪರಿಶ್ರಮ ಪಡಲೇಬೇಕು. ಆಗ ಮಾತ್ರ ನಿಮ್ಮಿಂದ ಇತಿಹಾಸ ನಿರ್ಮಿಸಲು ಸಾಧ್ಯ’ ಎಂಬುದು ಜೆಫ್ ಅವರ ಖಚಿತ ನುಡಿ.

ಕಾಳ್ಗಿಚ್ಚಿಗೆ ಮಿಡಿದ ಮನ
ಜೆಫ್ ಕೇವಲ ಉದ್ಯಮಿಯಷ್ಟೇ ಅಲ್ಲ, ಮಾನವೀಯ ಅಂತಃಕರಣದ ಮನುಷ್ಯ. ಇತ್ತೀಚೆಗಷ್ಟೇ ಅಮೆಜಾನ್‌ ಕಾಡಿನಲ್ಲಿ ಕಾಳಿYಚ್ಚಿನಿಂದಾದ ಅಪಾರ ಹಾನಿಗೆ ಮಿಡಿದು, ಸಂಸ್ಥೆಯಿಂದ ಸಹಾಯಹಸ್ತವನ್ನು ಸರಕಾರಕ್ಕೆ ನೀಡಿದ್ದರು. ಕೇವಲ ಉದ್ಯಮಿಯಾಗಿ ಮಾತ್ರವಲ್ಲದೆ ಹತ್ತು ಹಲವು ಕಾರಣಗಳಿಂದಾಗಿ ಯುವ ಜನತೆಗೆ ಇವರು ಆದರ್ಶರು.

ಪ್ರಯೋಗ ದ್ವಿಗುಣಗೊಳ್ಳಲಿ
ಬಿಜೋಸ್‌ ಅವರ ಪ್ರಕಾರ “ಹೊಸತು’ ಎನ್ನುವುದು ನಿರಂತರ. ದಿನದಿಂದ ದಿನಕ್ಕೆ ಏನೆಲ್ಲ ಹೊಸತು ಹುಟ್ಟಿಕೊಳ್ಳುತ್ತವೆ. ಹೀಗಾಗಿ ನಾವು ನಮ್ಮ ಪ್ರಯೋಗಗಳಲ್ಲಿ ಹೊಸತನ ಕಾಣಬೇಕು. ಒಂದೇ ರೀತಿಯಾದ ಪ್ರಯೋಗಕ್ಕಿಂತ ವಿಭಿನ್ನವಾಗಿರಬೇಕು. ನಿಮ್ಮ ಆವಿಷ್ಕಾರ, ಹೊಸತನದ ಪ್ರಯೋಗಗಳನ್ನು ದ್ವಿಗುಣಗೊಳಿಸಿದಾಗ ನಿಮ್ಮ ಮಾರುಕಟ್ಟೆ ಕೂಡ ದ್ವಿಗುಣಗೊಳ್ಳುತ್ತದೆ.

ಅಭಿಮನ್ಯು ಯಾದವ್‌ ವಿಟ್ಲ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next