Advertisement
ಅದೆಷ್ಟೋ ಮಂದಿಯನ್ನು ಇಹಲೋಕದಿಂದ ಅನಿರೀಕ್ಷಿತವಾಗಿ ಬೇರ್ಪಡಿಸಿದ ಕೋವಿಡ್ ಸೋಂಕು,ಮನೆ,ಮಠ, ಮಂದಿ, ಮನಸ್ಸಿನ ನೆಮ್ಮದಿಯನ್ನು ಕಸಿದುಕೊಂಡದ್ದು ಸುಳ್ಳಲ್ಲ. ಈ ವರ್ಷ ಅದನ್ನು ಮಾಡಬೇಕು, ಇದನ್ನು ಸಾಧಿಸಬೇಕು ,ಮದುವೆಗೆ ಹಣ ಜೋಡಿಸಿಡ ಬೇಕು, ಮನೆಯ ಸಾಲ ತೀರಿಸಬೇಕು..ಹೀಗೆ ಕನಸನ್ನು, ಕಷ್ಟವನ್ನು ನಿಧಾನವಾಗಿಯಾದರೂ ಸಾಕಾರಗೊಳಿಸಬೇಕು, ದೂರ ಮಾಡಬೇಕೆಂದು ಅಂದುಕೊಂಡ ಜನರಿಗೆ ಕೆಲಸ ಕಳೆದುಕೊಂಡು ಕುಗ್ಗಿದ ಮನಸ್ಸು, ಹೇಗೂ ಉಳಿದುಕೊಂಡ ಕೆಲಸದಲ್ಲಿ ಸಂಬಳವೇ ಕೈಗೆ ಸಿಕ್ಕದೇ ಯಂತ್ರದಂತೆ ದುಡಿದು ದಣಿಯುವ ದೇಹ,ಇದ್ದ ಕೆಲಸ ಕಮರಿ ಹೋಗಿ, ಊರಿಗೆ ಬಂದು ಆಕಾಶ ನೋಡುತ್ತಾ, ಎಂಟು – ಹತ್ತು ಗಂಟೆ ನಿದ್ದೆಗೆ ಜಾರುವ ಜೀವನ. ಎಷ್ಟೆಲ್ಲಾ ಬದಲಾಯಿತು ಈ ಕೋವಿಡ್ ಯಿಂದ. ಕೋವಿಡ್ ಹಲವರ ಜೀವನದ ಉತ್ಸಾಹವನ್ನು, ಕನಸಿನ ಹುಮ್ಮಸ್ಸನ್ನು ಕಿತ್ತುಕೊಂಡದ್ದು ನಿಜ. ಆದರೆ ಕೋವಿಡ್ ಕಾರಣದಿಂದ ಬದುಕನ್ನು ಶೂನ್ಯದಿಂದ ನೂರಕ್ಕೇರಿಸಿ ಸಾಧನೆಗೈದವರು ನಮ್ಮ ನಡುವೆಯೇ ಇದ್ದಾರೆ.ನಮ್ಮ ವ್ಯವಹಾರದಿಂದ ಅಂಥವರನ್ನು ಗುರುತಿಸುವ ಒಂದು ಸಣ್ಣ ಸಾಧ್ಯತೆಗೆ ನಾವು ಮುಂದಾಗುತ್ತಿಲ್ಲ ಅಷ್ಟೇ.
Related Articles
Advertisement
ಕೈಕೊಟ್ಟ ಕೆಲಸ,ನೆಮ್ಮದಿ ಕಸಿದ ಬದುಕು ಮತ್ತು ಕನಸಿಲ್ಲದ ನಿದ್ದೆ .! :
2020 ಪ್ರಾರಂಭದಿಂದಲೇ ಕಾಡಿದ ಕ್ರೂರಿ ಕೋವಿಡ್ ವೈರಸ್, ದಿನ ಕಳೆಯುತ್ತಾ ಹೋದಂತೆ ಜನರ ಆರೋಗ್ಯದ ಮೇಲೆ ಭೀತಿ, ಬದುಕಿನ ಮೇಲೆ ಒತ್ತಡ, ಜೀವನದಲ್ಲಿ ಖಿನ್ನತೆಯನ್ನು ತಂದಿಟ್ಟಿತು. ಆ ಸಮಯದಲ್ಲಿ ಹಡಗಿನಲ್ಲಿ ಬಾಣಸಿಗನಾಗಿದ್ದ ಅಕ್ಷಯ್ ಪಾರ್ಕರ್ ಜೀವನಕ್ಕೆ ಕೋವಿಡ್ ಕೊಳ್ಳಿ ಇಟ್ಟಿತು. ಕೋವಿಡ್ ಕಾರಣದಿಂದ ಆರ್ಥಿಕ ಮುಗ್ಗಟ್ಟು ಉಂಟಾಗಿ, ಅಕ್ಷಯ್ ಸೇರಿದಂತೆ ಹಲವು ಬಾಣಸಿಗರೊಂದಿಗೆ ಕಂಪನಿ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿ,ಕೆಲಸಗಾರರನ್ನು ಮನೆಗೆ ಕಳುಹಿಸಿ,ಕೈತೊಳೆದು ಬಿಡುತ್ತದೆ.
ಇದ್ದಕ್ಕಿದ್ದಂತೆ ಈ ಅನಿರೀಕ್ಷಿತ ಆಘಾತದಿಂದ ಕುಗ್ಗಿ ಹೋದ ಅಕ್ಷಯ್ ಮತ್ತೆ ಹಳೆಯ ದಾರಿಗೆ,ಬಾಲ್ಯ ಕಳೆದ ಮನೆಗೆ ಬರುತ್ತಾರೆ. ಏಳು ವರ್ಷ ಇದ್ದ ಕೆಲಸ, ಏಕಾಏಕಿ ಕಳೆದು ಹೋದ ನೋವಿನಿಂದ, ನೆಮ್ಮದಿ,ಹಸಿವು,ನಿದ್ದೆ ಯಾವುದರ ಅರಿವಿಲ್ಲದ ಒಂದು ಬಗೆಯ ಖಿನ್ನತೆಯಲ್ಲಿ ದಿನ ದೂಡುತ್ತಾರೆ. ಇದರ ನಡುವೆ ಒಂದೆರೆಡು ಬಾರಿ 3 ಸ್ಟಾರ್ ಹಾಗೂ 5 ಸ್ಟಾರ್ ಹೊಟೇಲ್ ನಲ್ಲಿ ಕೆಲಸದ ನಿರೀಕ್ಷೆಯೊಂದಿಗೆ ತೆರಳುತ್ತಾರೆ. ನಿರೀಕ್ಷೆಯಿಂದ ಮುಂದಿಟ್ಟ ಹೆಜ್ಜೆ ನಿರಾಶೆಯ ಮುಖ ಹೊತ್ತು ಮನೆಗೆ ಬಂದು ಮೌನಕ್ಕೆ ಜಾರುತ್ತಾರೆ. ಎಂದಿನಂತೆ ಉದಯಿಸುವ ಸೂರ್ಯ, ಮುಳುಗುವ ಸೂರ್ಯ,ಹಗಲು ರಾತ್ರಿಯ ಬದಲಾವಣೆ ಜಗದ ನಿಯಮವಾಗಿ ಸಾಗುತ್ತದೆ. ಅಕ್ಷಯ್ ಮಾತ್ರ ಶೂನ್ಯದಂತೆ ಕಮರಿ ಕೂರುತ್ತಾರೆ.
ಅಮ್ಮ ಕೊಟ್ಟ ಸಲಹೆ : ಸಾಧಕನಿಗೆ ಇದು ಗೆಲುವೇ..!
ದಿನಗಳು ಹೋದಂತೆ, ಅಕ್ಷಯ್ ಮನೆಯ ಪರಿಸ್ಥಿತಿ ಬಿಗಡಾಯಿಸುತ್ತದೆ. ಮನೆಯಲ್ಲಿ ಅನ್ನದ ಪಾತ್ರೆಗೆ, ಬೆಂಕಿಯ ಶಾಖೆ ತಾಗಲು ಹಣದ ಅನಿವಾರ್ಯತೆ ಅಗತ್ಯವಾಗಿತ್ತು. ಅಕ್ಷಯ್ ತಾಯಿ, ಇದ್ದ ಬದ್ದ ಚಿನ್ನ,ಒಡವೆಗಳನ್ನು ಅಡವಿಟ್ಟು ದಿನದೂಡುತ್ತಾರೆ. ಇದೆಲ್ಲಾ ಪರಿಸ್ಥಿತಿಯನ್ನು ಕಂಡ ಅಕ್ಷಯ್ ಅವರ ತಾಯಿ ಒಂದು ಸಲಹೆ ನೀಡುತ್ತಾರೆ.”ನೀನು ಶೂನ್ಯದಿಂದ ಆರಂಭ ಮಾಡಿದ್ದನ್ನು, ಮತ್ತೆ ಶೂನ್ಯದಿಂದಲೇ ಆರಂಭಿಸಿ”. ಅಕ್ಷಯ್ ಗೆ ಇದು ಬರಿ ಮಾತಾಗಿ ಉಳಿಯಲಿಲ್ಲ. ಸೋತವನ ಬೆನ್ನಿಗೆ ನಿಂತ ವೇದ ವಾಕ್ಯಗಳಾಗಿತ್ತು.
ಉಳಿಸಿಟ್ಟದ್ದ ಒಂದಿಷ್ಟು ಹಣದಲ್ಲಿ ಅಕ್ಷಯ್ ಮನೆಯ ಪಕ್ಕದಲ್ಲೇ ಇದ್ದ ಒಂದು ಸಣ್ಣ ಸ್ಟಾಲ್ ವೊಂದರಲ್ಲಿ, ಭರವಸೆ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಾರೆ.ಒಂದು ಸಣ್ಣ ಸ್ಟಾಲ್ ಹಾಕಿ, 7 ಸ್ಟಾರ್ ಹೊಟೇಲ್ ನಲ್ಲಿ ಕಲಿತು ಬಂದ ಬಿರಿಯಾನಿಯನ್ನು ತಯಾರಿಸಿ,ಮಾರುವ ವ್ಯಾಪಾರಕ್ಕೆ ಕೈ ಹಾಕುತ್ತಾರೆ. ದಿನಕ್ಕೆ 2 ಕೆ.ಜಿ ಬಿರಿಯಾನಿಯನ್ನು ಮಾಡಿದರೆ,ಅದರಲ್ಲಿ ಅರ್ಧವೇ ಮಾರಾಟವಾಗಿ,ಇನ್ನರ್ಧ ಉಳಿಯುತ್ತಿತ್ತು. ಇದು ನಿತ್ಯದ ಜಂಜಾಟವಾಯಿತು. ಉಳಿದ ಬಿರಿಯಾನಿಯನ್ನು ಅಕ್ಷಯ್ ಅಕ್ಕಪಕ್ಕದವರಿಗೆ ಉಚಿತವಾಗಿ ಹಂಚುತ್ತಾರೆ. ಎರಡು ತಿಂಗಳು ಅಕ್ಷಯ್ ಬಿರಿಯಾನಿ ವಹಿವಾಟು ಹೀಗೆಯೇ ಸಾಗುತ್ತದೆ.