Advertisement
ಮದುವೆ ಒಂದು ಭಾವನಾತ್ಮಕ ಸಂಬಂಧ ಎನ್ನುವುದನ್ನೇ ಮರೆತ ಕೆಲವರಿರುತ್ತಾರೆ. ಗಂಡ- ಹೆಂಡತಿ, ಸಂಸಾರ- ದಾಂಪತ್ಯ, ಪ್ರೀತಿ- ಸಹಬಾಳ್ವೆ… ಇವುಗಳ ಅರ್ಥವೇ ಅವರಿಗೆ ಗೊತ್ತಿರುವುದಿಲ್ಲ. ಮಹಿಳೆಯನ್ನು ಸರಕಾಗಿ ಕಂಡು, ಮದುವೆಯನ್ನು ವ್ಯಾಪಾರವಾಗಿ ನೋಡುವ ಜನ. ವರದಕ್ಷಿಣೆ ಪಿಡುಗು ಹುಟ್ಟುವುದೂ ಇಂಥವರಿಂದಲೇ. ಮದುವೆ ಆದ ಮೇಲೆ ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಮದುಮಗಳನ್ನು ಮನೆಯಿಂದ ಹೊರದಬ್ಬಿದ ಹಾಗೂ ಹತ್ಯೆಗೈದ ಉದಾಹರಣೆಗಳು ಇಂದಿಗೂ ಸುದ್ದಿಯಾಗುತ್ತಲೇ ಇವೆ.
Related Articles
Advertisement
ಮದುವೆಯಾಗಿ ಕೇವಲ 15 ದಿನಗಳಲ್ಲಿಯೇ ವರದಕ್ಷಿಣೆಯ ನೆಪವೊಡ್ಡಿ ಶೈಲೇಶ್, ಪತ್ನಿಯನ್ನು ಬಿಟ್ಟು, ನ್ಯೂಜಿಲೆಂಡ್ ಸೇರಿಬಿಟ್ಟ. ಕೋಮಲ್‌ಗೆ ದಿಕ್ಕಿನ ಬಾಗಿಲುಗಳೆಲ್ಲ ಮುಚ್ಚಿದ ಹಾಗಾಯಿತು. ಪತಿಯನ್ನು ಹುಡುಕಿಕೊಂಡು ಕೋಮಲ ನ್ಯೂಜಿಲೆಂಡ್‌ಗೂ ಹೋದಳು. ಆದರೆ, ಪ್ರಯೋಜನವಾಗಲಿಲ್ಲ. ಬೀದಿ ಬೀದಿ ಹುಡುಕಿದರೂ ಗಂಡ ಸಿಗಲಿಲ್ಲ. ಕೊನೆಗೂ ಸಿಕ್ಕನಾದರೂ, ಆ ಭೇಟಿಯಲ್ಲಿ ಪ್ರೀತಿಯಾಗಲೀ, ಕರುಣೆಯಾಗಲೀ, ಗಂಡನ ಕಣ್ಣಿನಲ್ಲಿ ಕಾಣಲೇ ಇಲ್ಲ.
ನೂರಾರು ಸಮಸ್ಯೆಗಳನ್ನು ಎದುರಿಸಿ ನ್ಯೂಜಿಲ್ಯಾಂಡ್‌ನಿಂದ ಭಾರತಕ್ಕೆ ಮರಳಿದಳು. ಒಂದೆಡೆ ಕಡು ಬಡತನ, ಮತ್ತೂಂದೆಡೆ ಸಮಾಜದ ಚುಚ್ಚು ಮಾತುಗಳಿಂದ ಕೋಮಲ ಜರ್ಜರಿತಳಾದಳು. ಅವಳು ತನ್ನ ಸಂಬಂಧಿಕರಿಂದ ಹಾಗೂ ನೆರೆಹೊರೆಯವರಿಂದ ಅವಮಾನದ ಮಾತು ಗಳನ್ನು ಕೇಳಬೇಕಾಯಿತು.
ಕೋಮಲ, ಧೃತಿಗೆಡಲಿಲ್ಲ. ತನ್ನ ತಂದೆ, ತಾಯಿ ಸಹೋದರರನ್ನು ಕರಕೊಂಡು 40 ಕಿ.ಮೀ. ದೂರದಲ್ಲಿರುವ ಭಾವನಗರ ಜಿಲ್ಲೆಯ ಒಂದು ಸಣ್ಣ ಹಳ್ಳಿಗೆ ಬಂದು ನೆಲೆಸಿದಳು. ತಿಂಗಳಿಗೆ ಕೇವಲ 5 ಸಾವಿರ ರೂ.ಗಳ ವೇತನದಲ್ಲಿ ಶಿಕ್ಷಕಿಯಾಗಿ ಪ್ರಾಥಮಿಕ ಶಾಲೆಗೆ ಸೇರಿದಳು. ಅವಳಿಗೆ ಕುಟುಂಬದ ನಿರ್ವಹಣೆ ಮುಖ್ಯವಾಗಿತ್ತು.
ಕೋಮಲ ತನಗಾದ ಅನ್ಯಾಯಕ್ಕಾಗಿ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಭೇಟಿಯಿತ್ತಳು. ಅರ್ಜಿಗಳನ್ನು ಕೊಟ್ಟಳು. ಆದರೆ, ಸರಕಾರದಿಂದ ಯಾವುದೇ ಉತ್ತರ ಸಿಗಲಿಲ್ಲ. ಯಾರಿಂದಲೂ ಸಹಾಯ ಸಿಗಲಿಲ್ಲ. ಈ ಎಲ್ಲ ಸ್ಥಿತಿಗಳು ಕೋಮಲಳನ್ನು ಗಟ್ಟಿ ಮಾಡಿದವು. ಈಕೆ, ಒಂದು ಅಚಲ ನಿರ್ಧಾರಕ್ಕೆ ಬಂದಳು: ಶಿಕ್ಷಣವನ್ನು ಮುಂದುವರಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು. ಹಾಗೆಯೇ ಕೋಮಲ, ಬಿ.ಎ. ಪದವಿಯನ್ನು ಇಂಗ್ಲಿಷಿನಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಮುಕ್ತ ವಿವಿಯಿಂದ ತೇರ್ಗಡೆಯಾದಳು ವಿಚಿತ್ರವೆಂದರೆ, ಆ ಪುಟ್ಟ ಗ್ರಾಮದಲ್ಲಿ ಇಂಗ್ಲಿಷ್ ದೈನಿಕ ಪತ್ರಿಕೆಗಳೇ ಸಿಗುತ್ತಿರಲಿಲ್ಲ.
ಕರೆಂಟ್ ಅಂತೂ ಅಪರೂಪದ ಅತಿಥಿ. ಇಂಥ ಸ್ಥಿತಿಯಲ್ಲೂ ಕೋಮಲ ಧೈರ್ಯಗೆಡದೆ, ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾದಳು. ದೂರದ ಅಹಮದಾಬಾದ್‌ನಲ್ಲಿ “ಸರ್ದಾರ್ ಪಟೇಲ್ ಸಾರ್ವಜನಿಕ ಆಡಳಿತ ತರಬೇತಿ ಸಂಸ್ಥೆ’ಯಲ್ಲಿ ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಸೇರಿಕೊಂಡಳು. ನಿತ್ಯವೂ ಬಸ್ಸಿನಲ್ಲಿ ಅಲೆದಾಡಿ, ಎರಡು ಹೊತ್ತು ಉಪವಾಸವಿದ್ದು, ಪರೀಕ್ಷೆಗೆ ಹಾಜರಾದಳು. ಆದರೆ, ಯಶಸ್ಸು ಸಿಗಲಿಲ್ಲ.
“ಸೋಲೆಂಬುದು ಗೆಲುವಿನ ಸೋಪಾನ’, “ಮರಳಿ ಯತ್ನವ ಮಾಡು’ ಎಂಬ ನುಡಿಗಟ್ಟಿನಂತೆ ಕೋಮಲ ಮತ್ತೂಮ್ಮೆ ಪರೀಕ್ಷೆಗೆ ಕುಳಿತಳು. ಆದರೆ, ಆಕೆ ಆಗಲೂ ಸೋಲನ್ನು ಅನುಭವಿಸಬೇಕಾಯಿತು. ಕೋಮಲ ನಿರಾಶಳಾಗಲಿಲ್ಲ. ಉತ್ಸಾಹದಿಂದ ಮತ್ತೆ ಪ್ರಯತ್ನಿಸಿದಳು. ತಂದೆ, ಸಹೋದರ ಬೆನ್ನಿಗೆ ನಿಂತು, ಧೈರ್ಯ ತುಂಬಿದರು. ಅವರೆಲ್ಲರ ಪ್ರೇರಣೆಯಿಂದ 2013ರಲ್ಲಿ ಕೋಮಲ, 4ನೇ ಸಲದ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 591ನೇ ರ್‍ಯಾಂಕ್‌ನಿಂದ ತೇರ್ಗಡೆಯಾದರು. ಕೋಮಲಳ ಕನಸು ಕೊನೆಗೂ ನನಸಾಯಿತು.
ಅಂದಹಾಗೆ, ಕೋಮಲ ಯುಪಿಎಸ್ಸಿ ಪರೀಕ್ಷೆಯಲ್ಲಿ “ಗುಜರಾತಿ ಸಾಹಿತ್ಯ ಮತ್ತು ಇತಿಹಾಸ’ ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೆ, ಸಂದರ್ಶನವನ್ನು ಗುಜರಾತಿ ಭಾಷೆಯಲ್ಲಿ ಎದುರಿಸಿ, ಯಶಸ್ಸು ಕಂಡಿರುವುದೂ ವಿಶೇಷವೇ. ನಿಜಕ್ಕೂ ಈಕೆ ಗ್ರೇಟ್ ಅಲ್ವಾ?ಟೀಕೆ ಮಾಡಿದವರೆಲ್ಲ, ಚಪ್ಪಾಳೆ ಹೊಡೆದರು…
ಪ್ರಸ್ತುತ ದೆಹಲಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಮೊದಲ ಮದುವೆಯ ಕಹಿ ನೆನಪನ್ನು ಮರೆತು, ಎರಡನೇ ಮದುವೆಯಾಗಿದ್ದಾರೆ. ಅವರಿಗೆ ಎರಡೂವರೆ ವರುಷದ ಮುದ್ದು ಪಾಪು ಇದೆ. ಕೈಯಲ್ಲಿ ಹಣವಿಲ್ಲದಿದ್ದಾಗ, ಹೊಟ್ಟೆಗೆ ರೊಟ್ಟಿ ಇಲ್ಲದ ದಿನಗಳಲ್ಲಿ ಯಾರು ಕೋಮಲಳನ್ನು ನೋಡಿ ಕುಹಕ ಆಡಿದ್ದರೋ, ಅವರೆಲ್ಲ ಈಗ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ತಾನು ಹುಟ್ಟಿದ ಊರಿಗೆ ಆಕೆ ಹೋದಾಗ, ಅಲ್ಲಿ ಸಿಕ್ಕಿದ್ದು ಚಪ್ಪಾಳೆ, ಹಾರ, ಸನ್ಮಾನ. ಕಷ್ಟ ಬಂದಾಗ, ಮಹಿಳೆ ಧೃತಿಗೆಡಬಾರದು. ಪ್ರಯತ್ನ, ಏಕಾಗ್ರತೆ, ಛಲ, ಕ್ರಿಯಾಶೀಲತೆ ಮತ್ತು ಕಠಿಣ ಪರಿಶ್ರಮವನ್ನು ಅಸ್ತ್ರ ಮಾಡಿಕೊಂಡು, ಮುನ್ನುಗ್ಗಬೇಕು. ಯುಪಿಎಸ್ಸಿಯಲ್ಲಿ ನಾನು ಪ್ರಯೋಗಿಸಿದ್ದೂ ಇದೇ ಅಸ್ತ್ರಗಳನ್ನೇ.
— ಕೋಮಲ ಗನತ್ರಾ, ಐಎಎಸ್ ಅಧಿಕಾರಿ — ಸುರೇಶ ಗುದಗನವರ