Advertisement
ತುಸುಸಮಯದ ನಂತರ ಸಣ್ಣ ಆತಂಕ ಶುರುವಾಯಿತು. ಓ ನಾ ಹೀಗೆ ಬರೆಯಬಾರದಿತ್ತು. ತಮಗೆ ಶೀಕಾಗಿದ್ದು ಆಚೆಈಚಿನ ಮನೆಯವರಿಗೆ ಗೊತ್ತಾಗಬಾರದು ಎಂದಿದೆಯಂತೆ ನಾರಾಯಣರಿಗೆ. ಈ ರವಿಗೆ ಅವನ ಹೆಂಡತಿ ಹೇಳಿದ್ದಳು, ಅದೂ ಅವರ ಹೆಂಡತಿ ಹೇಳಿ ಗೊತ್ತಾದದ್ದು ! ಅವರಿಬ್ಬರ ಹೆಂಡಂದಿರು ತೀರ ಹತ್ತಿರವಾಗಿದ್ದರು. ಈಗ ತಮಗೆ ಶೀಕಾಗಿದ್ದು ರವಿಗೆ ಹೇಗೆ ಗೊತ್ತಾಯಿತು ಎಂದು ಸ್ವಂತ ಹೆಂಡತಿಯ ಮೇಲೆ ಅನುಮಾನ ಬರುತ್ತದೆ. ಅವರು ಅವಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹಿಂದೊಮ್ಮೆ ಹೀಗೇ ಆಗಿತ್ತು; ಅವರಿಗೆ ಶೀಕು ಜೋರಾಗಿ ಹುಬ್ಬಳ್ಳಿಗೆ ಒಯ್ದಿದ್ದರು. ಆಗ ಇದನ್ನು ತಿಳಿದ ಹೆಂಡತಿ ಎಲ್ಲ ವಿವರಗಳನ್ನು ಹೇಳಿ, “ನೀವು ನಿಮ್ಮ ಆಫೀಸಿನಲ್ಲಿ ಯಾರಿಗೂ ಹೇಳ್ಬೆಡಿ ಮತ್ತೆ’ ಎಂದಿದ್ದಳು. ರವಿ, “ನಾ ಎಂಥ ಹೇಳೆ°, ಅಲ್ಲಿ ಯಾರಿಗೂ ಆ ಸುದ್ದಿ ಬೇಕಾಯ್ದಿಲ್ಲೆ’ ಎಂದಿದ್ದ. ತಾನು ಹಾಗೆ ಮಸೇಜ್ ಕಳಿಸಬಾರದಿತ್ತು ಎಂದು ಮತ್ತೆ ಮತ್ತೆ ಅನಿಸುತ್ತಿದ್ದಂತೆ, ನಾರಾಯಣರಾದರೂ ನನಗೆ ಋಣ ಇಲ್ಲ ಎಂದು ಯಾಕೆ ಹೇಳಬೇಕಿತ್ತು, ಬರಲಾಗಲಿಲ್ಲ ಬೇರೆ ಕೆಲಸವಿತ್ತು ಎಂದು ಬರೆಯಬಹುದಿತ್ತಲ್ಲವೆ? ಋಣ ಇಲ್ಲ ಎಂದೆಲ್ಲ ಹೇಳಿದ್ದಾರೆ ಎಂದರೆ, ಅವರಿಗೆ ಶೀಕಾಗಿದ್ದು ನನಗೆ ಗೊತ್ತಾಗಿದೆ ಎಂದು ಅವರಿಗೆ ಗೊತ್ತಾಗಿದೆ, ನಾ ತಲೆ ಕೆಡಿಸಿಕೊಳ್ಳುವ ಕಾರಣವಿಲ್ಲ ಎಂದು ಸಮಾಧಾನ ಮಾಡಿಕೊಂಡ.
Related Articles
Advertisement
ಆಗಲೇ ನಾರಾಯಣರು ನಿವೃತ್ತಿಗೆ ಬಂದಿದ್ದರು. ಅಜಾನುಬಾಹುವಿನ ಹಾಗಿದ್ದರೂ ಮೈಯಲ್ಲಿ ಶಕ್ತಿ ಇದ್ದಂತಿರಲಿಲ್ಲ. ಒಂದು ಕಾಲದಲ್ಲಿ ಕಬಡ್ಡಿ ಗಿಬಡ್ಡಿಯನ್ನೆಲ್ಲ ಆಡುತ್ತಿದ್ದವರು. ಏನು ತಿಂದರೂ ದಕ್ಕಿಸಿಕೊಳ್ಳುವ ಹಾಗಿದ್ದವರು ಈಗ ನಾಲ್ಕು ಹೆಜ್ಜೆ ನಡೆಯಲಾರದಷ್ಟು ದುರ್ಬಲರಾಗಿದ್ದರು. ಅವರ ಕುಡಿತ ಗಿಡಿತ ವಿಪರೀತವಾಗಿದೆಯೆಂದು ರವಿಗೆ ಹೆಂಡತಿ ಹೇಳಿದ್ದಳು. ಆದರೆ ಅವರ ನೋಡಿದರೆ ಹಾಗೇನೂ ಕಾಣಿಸುತ್ತಿರಲಿಲ್ಲ ಅವನಿಗೆ. ಒಮ್ಮೆ ಇಲೆಕ್ಷನ್ ಕೆಲಸಕ್ಕೆಂದು ಜೋಯ್ಡಾ ಬದಿಗೆ ಹೋಗಿ ಬಂದಾಗ ಪೂರ್ತಿ ಅಪ್ಸೆಟ್ ಆಗಿದ್ದರು. ಅಲ್ಲಿ ಊಟ ಸರಿ ಇರಲಿಲ್ಲ, ನೀರು ಸರಿ ಇರಲಿಲ್ಲ…. ಎಂದು ಹೇಳಿದರು. ನಂತರ ಗೊತ್ತಾದದ್ದು, ಅಲ್ಲಿ ಅವರು ಸಿಕ್ಕಾಪಟ್ಟೆ ಡ್ರಿಂಕ್ಸು, ನಾನ್‌ವೆಜ್ಜು ಎಲ್ಲ ತಿಂದು ಹೀಗಾಗಿದೆ ಎಂದು. ಇದೂ ಅವರು ಹೇಳಿ ಗೊತ್ತಾಗಿದ್ದಲ್ಲ.
ಅವರ ಹೆಂಡತಿ ಇರಲಿಲ್ಲ. ತವರು ಮನೆಗೆಲ್ಲೋ ಹೋಗಿದ್ದರು. ನಾರಾಯಣರು ಬಾಡಿದ ಮುಖ ಮಾಡಿಕೊಂಡು ಬಾಗಿಲ ಮೆಟ್ಟಿಲ ಮೇಲೆ ಕುಳಿತಿದ್ದನ್ನು ನೋಡಿ, “ಏನಾಗಿದೆ?’ ಎಂದು ರವಿ ಕೇಳಿದ. “ಏನೋ ತ್ರಾಸಾಗ್ತಿದೆ…. ಆಸ್ಪತ್ರೆಗೆ ಹೋಗಲು ಒಂದು ಆಟೊ ತಕಂಡ್ ಬತ್ರಾ?’ ಎಂದು ಕೇಳಿದರು. ಅವನಿಗೆ ಅವರ ಅನಾರೋಗ್ಯದ ತೀವ್ರತೆ ತುಸು ಗೊತ್ತಾದಂತಾಗಿ ಕೂಡಲೇ ಗಾಡಿ ತಂದು ಆಸ್ಪತ್ರೆಗೆ ಒಯ್ದು ಎಡ್ಮಿಟ್ ಮಾಡಿದ. ಅಲ್ಲಿ ಅವರಿಗೆ ಐ.ಸಿ.ಯು.ನಲ್ಲಿಟ್ಟು ಚೆಕ್ ಮಾಡಲು ತೊಡಗಿದರು. ಆಗ, ಬೇಕಾದ ಔಷಧಿ ಗುಳಿಗೆಯನ್ನೆಲ್ಲ ರವಿ ಹೋಗಿ ತಂದುಕೊಟ್ಟ. ಒಂದೆರಡು ತಾಸಿನ ಮೇಲೆ ಹೆಂಡತಿ ಬಂದಳು. ಮಗ ಮನೆಯಿಂದ ಬರುವಾಗ ಹೆದರಿಸುವ ಸುದ್ದಿ ತಂದಿದ್ದ, ಅವರು ವಾಂತಿ ಮಾಡಿದ ಬಾತ್‌ರೂಮಿನಲ್ಲಿ ರಕ್ತ ಎಂದು. ರವಿಗೆ ಇನ್ನೂ ಆತಂಕವಾಯಿತು, “ಓ ಇದು ರಾಶಿ ಸೀರಿಯಸ್ಸು’ ಎಂದು. ಆಮೇಲೆ ಗೊತ್ತಾಯಿತು, ಹೀಗೇ ಅವರಿಗೆ ಆಗಾಗ ಆಗುತ್ತಿತ್ತು ಎಂದು.
ಕೆಲವು ದಿನಗಳ ಮೇಲೆ ಚೇತರಿಸಿಕೊಂಡರು. ಅವರ ಹೆಂಡತಿಯೇನೊ ಕೇಳಿದ್ದಳಂತೆ, “ಆಸ್ಪತ್ರೆಯಲ್ಲಿ ತಂದ ಔಷಧಿಯದ್ದೆಲ್ಲ ಎಷ್ಟಾಯಿತು?’ ಎಂದು. ಅವನು, “ಅದೆಲ್ಲ ಇರಲಿ, ಕಡೆಗೆ ನೋಡ್ವ’ ಎಂದು ತೇಲಿಸಿದ್ದ. ಅವರು ಮತ್ತೆ ಕೇಳಲು ಹೋಗಲಿಲ್ಲ. ಇದು ಸಾಯಲಿ! ಮನೆಗೆ ಕರೆದುಕೊಂಡು ಬಂದಮೇಲೆ ಬಹಳ ಆದರದಿಂದ ಮಾತಾಡಿಸಬಹುದು ಎಂದುಕೊಂಡಿದ್ದ. ಹಾಗೇನೂ ಇರಲಿಲ್ಲ. ನೋಡಲು ಬಂದ ಬೇರೆಯವರನ್ನು ಮಾತಾಡಿಸುವ ಹಾಗೇ ಮಾತಾಡಿಸಿದರು. ಅವರ ಸಂಬಂಧಿಗಳಲ್ಲೊಬ್ಬರು ಮಾತ್ರ, “ನೀವೊಂದು ಇಲ್ಲದಿದ್ದರೆ ಕಷ್ಟ ಆಗ್ತಿತ್ತು…’ ಎಂದು ಹೇಳಿದರು.
ಇದಾದ ಮೇಲೆ ಆಗಾಗ ಸುದ್ದಿ ಬರುತ್ತಿತ್ತು; ಈಗ ಕುಡಿಯುವುದನ್ನು ಬಿಟ್ಟಿದ್ದಾರಂತೆ, ಮತ್ತೆ ತೆಗೆದುಕೊಳ್ಳಲು ಶುರು ಮಾಡಿದ್ದಾರಂತೆ ಎಂದೆಲ್ಲ. ಇದೆಲ್ಲ ಕುಡುಕರ ಚರಿತ್ರೆಯಲ್ಲಿ ಸಾಮಾನ್ಯವಾದವುಗಳೇ! ನಂತರ, ಎರಡು ಮೂರು ಬಾರಿ ಹುಬ್ಬಳ್ಳಿ, ಮಣಿಪಾಲ ಮೊದಲಾದ ಆಸ್ಪತ್ರೆಗೆ ಒಯ್ದು ವಾರ, ಹದಿನೈದು ದಿನ ಇಟ್ಟುಕೊಂಡು ಸರಿಯಾದ ಮೇಲೆ ಕರೆದುಕೊಂಡು ಬಂದಿರುವುದು, ಬೆಳಿಗ್ಗೆ ಸಿಟ್‌ಔಟ್‌ನಲ್ಲಿ ಕುಳಿತು ಪೇಪರ್ ಓದುತ್ತಿರುವಾಗ ಕಾಣುತ್ತಿತ್ತು. ತಮ್ಮ ಆರೋಗ್ಯದ್ದಾಗಲಿ, ಇತರ ವಿಷಯವನ್ನಾಗಲಿ ರವಿಯಲ್ಲಿ ಬಾಯಿ ಬಿಡುತ್ತಿರಲಿಲ್ಲ. “ಎಲಾ! ನಾವು ಇಷ್ಟು ಹಚ್ಚಿಕೊಂಡರೂ ಅವರು ಮಾತ್ರ ಹೀಗಿರುತ್ತಾರಲ್ಲ’ ಎಂದು ಅನಿಸುತ್ತಿತ್ತು. ಸತ್ತಕಂಡ್ ಹೋಗ್ಲಿ! ಎಂದು ಸುಮ್ಮನಿದ್ದ.
ಇತ್ತೀಚೆಗೆ ರವಿ ಪ್ರತಿವರ್ಷದಂತೆ ಸತ್ಯನಾರಾಯಣ ಕತೆ ಇಟ್ಟುಕೊಂಡಿದ್ದ. ಆ ದಿನ ಅಕ್ಕ ಪಕ್ಕದವರನ್ನೂ ಸ್ನೇಹಿತರನ್ನೂ ಕರೆಯುವುದು. ಅವನ ಆಫೀಸಿನ ಎಲ್ಲರನ್ನು ಅಲ್ಲದಿದ್ದರೂ ಕೆಲವರನ್ನು ಬರಹೇಳುತ್ತಿದ್ದ. ಆದರೆ ಪ್ರತೀ ವರ್ಷವೂ ಯಾವುದಾದರೂ ಗಡಿಬಿಡಿ ಬಂದು ಅರ್ಜಂಟ್ ಅರ್ಜಂಟಾಗಿ ಎಲ್ಲರನ್ನೂ ಕರೆಯಲಾಗುತ್ತಿರಲಿಲ್ಲ. ಈ ಸಲವೂ ಹೀಗೇ ಆಯಿತು. ಕೇವಲ ನೆರೆಹೊರೆಯವರನ್ನು ಮತ್ತು ತೀರಾ ಹತ್ತಿರದವರನ್ನು ಮಾತ್ರ ಕರೆದಿದ್ದ. ಕರೆದಿದ್ದ ಎಂದರೆ, ಅವನೇನು ಎಲ್ಲರಿಗೂ ಹೇಳುತ್ತಿರಲಿಲ್ಲ, ಹೆಂಡತಿ ಹೇಳುತ್ತಿದ್ದಳು! ಯಥಾಪ್ರಕಾರ ನಾರಾಯಣರ ಮನೆಯವರಿಗೂ ಹೇಳಿದ್ದರು. ಅವರು ಮನೆಯಲ್ಲಿದ್ದರೂ ಬಂದಿದ್ದು ಬಹಳ ಕಡಿಮೆ. ಎಲ್ಲೋ ಒಂದೆರಡು ಸಲ ಮಾತ್ರ ಬಂದಿದ್ದರು. ಈ ಸಲ ಹೆಂಡತಿ ಹೋದಾಗ, “ನಾಳೆ ನಾನು ಮಗ ನಿಮ್ಮನೆಗೆ ಬರ್ತೇವೆ’ ಎಂದಿದ್ದರಂತೆ. ಆದರೆ ಬಂದಿರಲಿಲ್ಲ. ರವಿಗೆ ಗಡಿಬಿಡಿಯಲ್ಲಿ ಗಮನಕ್ಕೂ ಬಂದಿರಲಿಲ್ಲ. ಸಂಜೆ ಹೆಂಡತಿ ಹೇಳಿದಳು; “ಅವರಿಗೆ ಶೀಕು ಜೋರಾಗಿ ಆ್ಯಂಬ್ಯುಲೆನ್ಸ್‌ನಲ್ಲಿ ಮಣಿಪಾಲಿಗೆ ಕರ್ಕಂಡ್ ಹೋಯ್ದವಡ. ಅವರ ಮನೆಯಲ್ಲಿರುವ ಕೆಲಸದವಳು ಹೇಳಿದಳು, ಯಾರಿಗೂ ಹೇಳ್ಬೇಡಿ ಮತ್ತೆ’ ಎಂದು.
ರವಿ ಗೊತ್ತೇ ಇಲ್ಲದವರ ಹಾಗೆ ಅವರ ಮನೆಯೆದುರು ಅಡ್ಡಾಡುತ್ತಿದ್ದ. ಆದರೆ, ನಿನ್ನೆ ಬಂದ ಮೆಸೇಜು ಅವನ ಅಲ್ಲಾಡಿಸಿತ್ತು. ಕೆಲವು ದಿನಗಳಾದವು. ಅವರು ಹೇಗಿದ್ದಾರೆ ಎಂದು ಕೇಳ್ಳೋಣವೆಂದರೆ, ಯಾರಿಗೂ ಹೇಳ್ಬೇಡಿ ಎನ್ನುವುದು ತಡೆಯಾಗಿತ್ತು! ಏನಾಗುವುದಿಲ್ಲ ಅವರಿಗೆ, ಹಿಂದೆಲ್ಲ ಹೀಗಾದಾಗ ಆರಾಮಾಗಿ ಬಂದಿದ್ದಾರೆ ಎಂದು ಕುತೂಹಲ ಬೆಳೆಸಿರಲಿಲ್ಲ. ಇದ್ದಕ್ಕಿದ್ದಂತೆ ಹೆಂಡತಿಯಿಂದ ರವಿಗೆ ಫೋನು; ಅವರು ಹೋಗಬುಟ್ರಂತೆ…. ಎಂದು.
ನಿನ್ನೆ ಬಂದ ಮೆಸೇಜು ಅವನ ಕಾಡತೊಡಗಿತು. ರಾಜು ಹೆಗಡೆ