Advertisement
ಮೆತ್ತಿನ ಬೆಚ್ಚನೆಯ ಖಾನೆಯಲ್ಲಿ ನನ್ನಂತೆಯೇ ಹೊರ ಜಗತ್ತನ್ನು ನೋಡಿಯೂ ನೋಡದಿರುವ ಬರಹಗಳನ್ನು ಯಾರು ತಾನೇ ಓದುತ್ತಾರೆ. ಎಲ್ಲರಿಗೂ ಜೀವಂತಿಕೆ ತುಂಬಬೇಕು, ತುಳುಕಿದರೂ ನಡೆಯುತ್ತದೆ. ಸಂತೆಯಂತೆ ಪದಃಪುಂಜಗಳು ಗಡಿಬಿಡಿಯಿಂದ ಓಡಾಡಬೇಕು. ಇಲ್ಲದಿದ್ದರೆ ಯಾವುದೋ ಇಂಗ್ಲಿಶು ಭಾಷೆಯ ಬರಹವನ್ನು ನಕಲು ಮಾಡಿದ್ದು ಗೊತ್ತಾಗದಂತೆ ತರ್ಜುಮೆ ಮಾಡಬೇಕು. ದೈನಂದಿನ ವಿದ್ಯಮಾನಗಳನ್ನು ಕರಾರುವಕ್ಕಾಗಿ ವಿಮರ್ಶಿಸಬೇಕು. ಆದರೆ, ನನ್ನ ಜೊತೆಯೇ ಕಪ್ಪನ್ನು ಹೊದ್ದುಕೊಂಡು ಮಲಗಿದ ಈ ಬರಹಗಳಿಗೆ ಯಾವ ಗಿರಾಕಿ ಸಿಗುತ್ತಾನೆ. ಈ ಬರಹಗಳ ಬಿಳಿ ಹಾಳೆಗಳನ್ನು ಸರಿಸುಮಾರು ಎಲ್ಲ ಪತ್ರಿಕೆಗಳಿಗೆ ಕಳಿಸಿದ ನೆನಪಿದೆ. ಕೊನೆಯಲ್ಲಿ, “ದಯಮಾಡಿ ಪ್ರಕಟಿಸಬೇಡಿ’ ಎಂದು ದಪ್ಪಕ್ಷರದಲ್ಲಿಯೇ ಬರೆದಿದ್ದೆ ಸಹ. ನನ್ನ ಕೋರಿಕೆಯನ್ನು ಸಂಪಾದಕರು ಎಷ್ಟು ಗೌರವಪೂರ್ವಕವಾಗಿ ಮನ್ನಿಸಿದರೆಂದರೆ ಯಾವ ಬರಹವನ್ನೂ ಪ್ರಕಟಿಸಲಿಲ್ಲ.
Related Articles
“”ಇಲ್ಲ ಇವನು ಬರೀ ಬಿ.ಎ ಮಾಡಿದ್ದಾನಷ್ಟೆ” ಆಮಂತ್ರಣ ಪತ್ರವನ್ನು ಕಣ್ಣಿಗೆ ತಾಗಿಸಿಕೊಂಡು ಓದುತ್ತಿದ್ದ ಅಮ್ಮ ಹೇಳಿದಳು.
“”ಓಹೋ, ಅಷ್ಟೇಯಾ! ನನ್ನ ಅಳಿಯನಾಗಬೇಕಾದರೆ ಸಿ.ಎ ಅಥವಾ ಇಂಜಿನಿಯರ್ ಮಾಡಿರಬೇಕು. ಕಂಪೆನಿ, ಕಂಪೆನಿಯಲ್ಲಿರಬೇಕು” ಎನ್ನುತ್ತ ನನ್ನನ್ನು ವ್ಯಂಗ್ಯದಿಂದ ನುಂಗಿ ಹೊರಡಲನುವಾದರು.
ಹೊಳೆಯುವ ಶೂಗಳಿಗೆ ಅಂಗಳದ ಮಣ್ಣು ಹಿಡಿದುಬಿಡಬಹುದೆಂಬ ಕಳವಳದಲ್ಲೇ ಹೆಜ್ಜೆಹಾಕುತ್ತಿದ್ದರು. “”ಏನ್ಮಾಡೋದು, ನಾವು ಬೇಡ ಬೇಡವೆಂದರೂ ಆರ್ಟ್ಸ್ ತೆಗೆದುಕೊಂಡು ಮಳ್ಳು ಮಾಡಿದ. ಈಗ ಇಡೀ ದಿನ ಉಪ್ಪರಿಗೆ ಕೋಣೆ ಹೊಕ್ಕಿಕೊಂಡು ಕಾಲ ಕಳೆಯುತ್ತಾನೆ” ಎಂದು ಅಮ್ಮ ಕೂಗಿದ್ದು ಕೇಳಿಸಿತು ಎಂಬಂತೆ ಅವರು ಹಿಂತಿರುಗಿ ನನ್ನೆಡೆ ನೋಡಿ ನಕ್ಕಾಗ ಸುಖ ನನ್ನಲ್ಲೇ ಇದೆ ಎಂದು ಹೇಳಿದಂತಾಯಿತು. ಹಾಗಾದರೆ, ನಾನು ಗೋಡೆಯ ಮೇಲೆ ಸೃಜನ ಎಂದು ಗೀಚಿದ್ದನ್ನು ಅವರು ನೋಡಿದರೆ? ಹೋಗುವಾಗ ಅಪ್ಪ ಆರಿಸಿಟ್ಟಿದ್ದ ಸಾಣೆಕಲ್ಲಿಗೆ ತಮ್ಮ ಮನಸ್ಸನ್ನು ಗಸಗಸನೇ ಉಜ್ಜಿಕೊಂಡು ಹೋಗಿರಬಹುದು ಎಂದುಕೊಂಡೆ.
ಹನ್ನೆರಡು ಗಂಟೆ ಆತು. “”ಸ್ನಾನ ಮಾಡಿ ದೇವರ ಪೂಜೆ ಮಾಡು. ಅಪ್ಪ ಬಪ್ಪೂದು ತಡಾ ಆವ್¤. ನಾ ನಿನ್ನಂಗಲ್ಲ. ನನಗೆ ಹಸಿವು-ಗಿಸಿವು ಆವ್¤.” ಎಂದು ಅಮ್ಮ ಕೂಗಿದಾಗ ತಡಮಾಡದೇ ಬಚ್ಚಲು ಮನೆ ಹೊಕ್ಕೆ. ಸೆಕೆೆ, ತಣ್ಣೀರನ್ನೇ ಮೈಮೇಲೆ ಹೊಯ್ದುಕೊಂಡಿತು. ಇನ್ನೂ ಆಗದ ಮದುವೆ, ಯಾರೂ ಕೊಡದ ಕೂಸು ಎರಡೂ ಒಟ್ಟಿಗೆ ಬಾಗಿಲು ಬಡಿದಂತಾಯಿತು. ಒದ್ದೆ ಪಂಜಿ ಉಟ್ಟುಕೊಂಡು ಸೆಕೆೆಗೆ ಬೆವರಿದ್ದ ದೇವರಿಗೂ ತಣ್ಣೀರು ಮೀಯಿಸಿದೆ. ಬಿಸಿಬಿಸಿ ಅನ್ನವನ್ನು ನೈವೇದ್ಯ ಮಾಡಿ ದೊಗಳೆ ಚಡ್ಡಿ ಸಿಕ್ಕಿಸಿದೆ.
“”ಬಾ ಊಟ ಮಾಡುವ” ಅಮ್ಮ ಕರೆದಳು.
Advertisement
“”ನನಗೆ ಊಟ ಬೇಡ” ಹಸಿವಾಗಿ ಕಂಗೆಟ್ಟವರ ಹಾಗೆ ಸಣ್ಣ ಧ್ವನಿಯಲ್ಲಿ ಹೇಳುತ್ತ ಉಪ್ಪರಿಗೆಯ ಏಣಿಯ ಮೆಟ್ಟಿಲೇರಿದೆ.“”ನನ್ನ ಓದುಗರು ಎಲ್ಲ ಬಿಳಿ ಹಾಳೆಗಳನ್ನು ಓದಿ ಮುಗಿಸಿ ಹೊಸ ಬರಹಕ್ಕಾಗಿ ಕಾಯುತ್ತಿರಬಹುದು. ಇನ್ನು ತಡಮಾಡಬಾರದು” ಎನ್ನುತ್ತ ಮತ್ತೆ ಕಪ್ಪುಬೆಳಕಿನ ಕೋಣೆಗೆ ಹೋಗಿ ಕುಳಿತೆ. ಅರ್ಧ ತೆರೆದಿದ್ದ ಕಿಟಕಿ ಪೂರ್ಣ ತೆರೆದಂತೆ ಕಂಡಿತು. ಗೋಡೆ ಕಪಾಟಿನ ಮೊದಲೆರಡು ಖಾನೆಗಳು ಖಾಲಿಯಾಗಿದ್ದವು. ಜಿರಲೆಗಳು ಬಿಳಿ ಹಾಳೆಗಳನ್ನು ಕಿಟಕಿಯಿಂದ ಹೊರಗೆಸೆದಿದ್ದವು. ಅಕ್ಷರಗಳು ಆಕಾಶದಲ್ಲಿ ಹಕ್ಕಿಗಳ ಜೊತೆ ಸ್ವತ್ಛಂದವಾಗಿ ವಿಹರಿಸುತ್ತಿರುವುದು ಕಾಣಿಸಿತು. ನನ್ನ ಮೊದಲ ಓದುಗರಾದ ಜಿರಲೆಗಳು ನಾನು ಬರೆದದ್ದನ್ನು ಅಕ್ಷರಶಃ ಪಾಲಿಸಿದ್ದವು. ಎಂದೂ ಮಾತನಾಡದ ಲ್ಯಾಂಡ್‌ಲೈನ್ ಫೋನಿಗೆ ಯಾರೋ ಕರೆ ಮಾಡಿದಂತೆ ಕೇಳಿಸಿತು. ಗಡಿಬಿಡಿಯಲ್ಲಿ ಏಣಿ ಹತ್ತಿ ಬಂದ ಅಮ್ಮ ಖುಷಿಯಿಂದ, “”ಮಾವನ ಮಗಳಿಗೆ ನೀನು ಒಪ್ಪಿಗೆಯಂತೆ, ಮಾವ ಫೋನ್ ಮಾಡಿದಿದ್ದ” ಎಂದಳು.
“”ಎಲ್ಲ ಬಿಳಿ ಹಾಳೆಗಳನ್ನೂ ಓದಿ ಆಕಾಶಕ್ಕೆಸೆಯಿರಿ”ಎಂದಷ್ಟೇ ಬರೆದಿದ್ದು ನೆನಪಾಯಿತು! ಗುರುಗಣೇಶ ಡಬುಳಿ