Advertisement
“”ಹೇಗಿರುವುದು ಮಹಾರಾಯ, ಕಾಲಿನದ್ದೊದು ಪಿರಾಬುಲಮು ಸುರುವಾಗಿದೆ” ತನ್ನ ಹಳ್ಳಿಯ ಭಾಷೆಗೆ ಇಂಗ್ಲೀಷ್ ಪದ ಸೇರಿಸುವ ಕಮಲತ್ತೆಯ ಖಯಾಲಿಯಿಂದ ಪ್ರಾಬ್ಲಿಮ್ ಅಪಭ್ರಂಶಗೊಂಡು ಪಿರಾಬುಲಮ್ ಆಗಿತ್ತು. ಒಂದು ಕ್ಷಣ ನನ್ನೆದೆ ಧಸಕ್ಕೆಂದಿತು. ಕಮಲತ್ತೆಗೆ ಏನಾದರೂ ದೈಹಿಕ ಅಸೌಖ್ಯ ಪ್ರಾರಂಭವಾಯಿತು ಅಂದ್ರೆ ಅವರಿಗಿಂತ ಇಮ್ಮಡಿ ಬಾಧೆಯನ್ನು ಉಳಿದವರು ಅನುಭವಿಸಬೇಕು; ಆ ರೀತಿಯಲ್ಲಿರುತ್ತದೆ, ಅವರ ಗೋಳಾಟ ! ಸಣ್ಣ ತಲೆನೋವು ಬಂದರೂ ಸರಿ, ಪ್ರಪಂಚದ ನೋವು-ಸಿಡಿತಗಳೆಲ್ಲ ತನ್ನ ತಲೆಯೊಳಗೇ ವಕ್ಕರಿಸಿದೆಯೋ ಎಂಬಂತೆ ವರ್ತಿಸುತ್ತಾರೆ. ಮನೆಯೊಳಗೆ ಮಲಗಿದಲ್ಲಿಂದ, “ಅಯ್ಯೋ… ಅಮ್ಮಾ… ಯಪ್ಪಾ…’ ಎಂಬ ನರಳಾಟ ಫರ್ಲಾಂಗು ದೂರದ ಗೇಟಿನವರೆಗೂ ಕೇಳುತ್ತಿರುತ್ತದೆ. ಅವರ ಹಣೆಗೆ ಉಜ್ಜಿ ಉಜ್ಜಿ ಮನೆಯಲ್ಲಿರುವ ಅಮೃತಾಂಜನದ ಡಬ್ಬ ಖಾಲಿಯಾಗಿರುತ್ತದೆ. ಉಜ್ಜಿದವರ ಬೆರಳಿಗೆ ಅಯೋಡೆಕ್ಸ್ ಹುಡುಕಬೇಕಾಗುತ್ತದೆ!
Related Articles
Advertisement
“”ಏಕೆ ಸುಮ್ನೆ ಹಣ ಖರ್ಚು ಮಾಡುತ್ತಿ? ಮನೆಗೆ ಕರೆದೊಯ್ದು ಕಡೆಂಜದ ಎಣ್ಣೆ (ಹಳ್ಳಿ ವೈದ್ಯರ ನೋವು ನಿವಾರಕ ಎಣ್ಣೆ) ಹಚ್ಚು . ಸರಿ ಹೋಗ್ತದೆ” ಎಂದ. ಹೀಗೆ ಸ್ನೇಹಿತನ ಮುಂದೆ ನನ್ನನ್ನು ಕುಬ್ಜನನ್ನಾಗಿಸಿದ ಕಮಲತ್ತೆಯ ಆರೋಗ್ಯ ಪ್ರಾಬ್ಲಿಂ ಶುರುವಾದಾಗಲೆಲ್ಲ ನನ್ನ ಎದೆ ಢವಗುಟ್ಟುತ್ತದೆ. ಅದಕ್ಕೆ ನಾನು ದೇವರೆದುರು ನಿಂತು ನನ್ನ ಆರೋಗ್ಯಕ್ಕಿಂತ ಮೊದಲು ಅವರ ಆರೋಗ್ಯ ಚೆನ್ನಾಗಿರಲೆಂದು ಬೇಡಿಕೊಳ್ಳುತ್ತೇನೆ. ಆದರೆ, ಈ ಸಲ ದೇವರು ನನ್ನ ಮೊರೆಯನ್ನು ಕೇಳಿಸಿಕೊಂಡಂತಿಲ್ಲ.
ಕಮಲತ್ತೆಗೆ ಆರೋಗ್ಯ ಹಾಳಾದರೆ ಅವರಿಗೆ ಊರಿನ ಡಾಕ್ಟರ್‌ಗಳಿಗಿಂತ “ಶೀಟಿ ಹುಡುಗ’ನಾದ ನನ್ನ ಮೇಲೆ ಹೆಚ್ಚಿನ ವಿಶ್ವಾಸ. ಇದೇ ಕಾರಣಕ್ಕೆ ವಿಷಯ ತಿಳಿದು ನಾನೇನಾದರೂ ಪ್ರತಿಕ್ರಿಯೆ ನೀಡದೆ ಸುಮ್ಮನಾದರೆ ಮನೆಯವರಿಂದ ಅಲ್ಲದೆ ಇತರ ಬಂಧುಬಳಗದವರಿಂದಲೂ ನೂರೆಂಟು ಫೋನ್ ಕರೆಗಳಿಗೆ ಕಿವಿಯಾಗಬೇಕಾಗುತ್ತದೆ. ಇದೀಗ ಕಾಲಿನ ಪ್ರಾಬ್ಲಿಂ ಬಗ್ಗೆ ಸ್ವತಃ ಕಮಲತ್ತೆಯ ಬಾಯಿಯಿಂದ ತಿಳಿದಾಯಿತು. ಏನಿದ್ದರೂ ಸುಮ್ಮನಿರುವಂತಿಲ್ಲ. ಒಮ್ಮೆ ಊರಿಗೆ ಹೋಗಿ ಅವರನ್ನು ನೋಡಿಕೊಂಡು ಬರೋಣ ಅಂತ ತೀರ್ಮಾನಿಸಿದೆ.
ಹಳ್ಳಿ ಮನೆಗೆ ಬಸ್ಸಿನಲ್ಲಿ ನಾಲ್ಕು ಗಂಟೆಗಳ ಪ್ರಯಾಣವಿದೆ. ಈ ಪ್ರಯಾಣದುದ್ದಕ್ಕೂ ಕಮಲತ್ತೆಯ ಕಾಲಿನ ಪ್ರಾಬ್ಲಿಮ್ಮೇ ನನ್ನ ತಲೆ ತುಂಬಿಕೊಂಡಿತ್ತು. ಅದರ ಪರಿಹಾರಕ್ಕೆ ಮಾಡುವುದೇನು ಎಂಬುದು ನನ್ನ ಚಿಂತೆ. ಸ್ಪೆಷಲಿಸ್ಟ್‌ನನ್ನು ಹಿಡಿದು ಮುಖ ಮುಚ್ಚಿಕೊಂಡದ್ದಾಯಿತು. ಆಯುರ್ವೇದಕ್ಕೆ ಮೊರೆ ಹೋಗುವುದೇ ? ಹೋಮಿಯೋಪತಿ ನೋಡುವುದೆ? ಅಥವಾ ಅತ್ತೆಯ ಮನಸ್ಸಿಗೆ ಧೈರ್ಯ ಬರುವ ಹಾಗೆ ಮಾಡಲು ಮನಃಶಾಸ್ತ್ರಜ್ಞನ ಹತ್ತಿರ ಕರೆದೊಯ್ಯುವುದೇ… ಹೀಗೆ ನಾನಾ ಆಲೋಚನೆಗಳಿಂದ ಊರಿನ ದಾರಿ ಸವೆದದ್ದೇ ತಿಳಿಯಲಿಲ್ಲ.
ಬಸ್ಸಿನಿಂದ ಇಳಿದು ಕಾಲುದಾರಿಯಲ್ಲಿ ನಡೆದುಬರುತ್ತಿರಬೇಕಾದರೆ ಮೊದಲಿಗೆ ಎದುರಾದವನೇ ವಾಸು. ಯತಾರ್ಥವಾಗಿ ವಾ. ಸು. ಅಂದರೆ ವಾರ್ತೆ ಸುಬ್ರಾಯ. ಊರಿನ ವಾರ್ತೆಯನ್ನು ಮೂಲೆಯಿಂದ ಮೂಲೆಗೆ ಬಿತ್ತರಿಸುವುದರಲ್ಲಿ ಈ ಸುಬ್ರಾಯ ಎತ್ತಿದ ಕೈ. ಬಿತ್ತರಿಸುವುದು ಅಂದರೆ ಅವನ ಶೈಲಿಗೆ ಈಗಿನ ಖಾಸಗಿ ಸುದ್ದಿವಾಹಿನಿಯವರೂ ನಾಚಿಕೊಳ್ಳಬೇಕು. ಇಲಿ ಹೋದ ಕಡೆ ಹುಲಿಯೇ ಹೋಯಿತೆಂದು ಕೇಳುಗರನ್ನು ನಂಬಿಸಿಬಿಡುವವ. ಇಂತಿಪ್ಪ ಸುಬ್ರಾಯನ ಹೆಸರಿನಲ್ಲಿ ಮೊದಲು, “ವಾರ್ತೆ’ ಅನ್ವರ್ಥನಾಮವಾಗಿ ಸೇರಿಕೊಂಡದ್ದು ಉತ್ಪ್ರೇಕ್ಷೆಯೇನೂ ಆಗಿರಲಿಲ್ಲ.
ಮನೆಗೆ ಹೊರಟ ನನಗೆ ವಾಸು ಎದುರಿಗೆ ಸಿಕ್ಕಿದ್ದು ಒಳ್ಳೆಯದ್ದೇ ಆಯಿತು. ಮನೆಯ ದಾರಿಯಲ್ಲೇ ಅವನು ಬರುತ್ತಿರುವ ಕಾರಣ ಖಂಡಿತವಾಗಿಯೂ ಮನೆಯ ಬ್ರೇಕಿಂಗ್ ನ್ಯೂಸ್ ಆಗಿ ಕಮಲತ್ತೆಯ ಕಾಲಿನ ಪ್ರಾಬ್ಲಿಂಗೆ ಮಸಾಲೆ ಅರೆದು ಒಪ್ಪಿಸಿಯೇ ಬಿಡುತ್ತಾನೆ ಎಂದುಕೊಂಡೆ.
“”ನಮಸ್ಕಾರ ಅಣ್ಣ , ಪೇಟೆಯಿಂದ ಬರ್ತಾ ಇದ್ದೀರಾ? ಅಲ್ಲ, ಮನೆಯವರಿಗೆ ನೀವು ಬರುವ ವಿಚಾರ ತಿಳಿದೇ ಇಲ್ವಾ? ನಾನು ಇಷ್ಟೊತ್ತು ಅಲ್ಲೇ ಇದ್ದೆ , ಏನೂ ಹೇಳಲೇ ಇಲ್ಲ” ಎಂದು ಹೇಳುತ್ತ ನನ್ನನ್ನು ಇದಿರ್ಗೊಂಡ ವಾಸು. “”ಹೌದು” ನಾನಂದೆ. ಮನೆಯ ಸಮಸ್ಯೆ ಇವನಿಗೆ ತಿಳಿದಂತಿಲ್ಲ. ನಾನಾಗಿ ಹೇಳುವುದು ಬೇಡವೆಂದುಕೊಂಡು ಔಪಚಾರಿಕವಾಗಿ ಮಾತನಾಡಿ ಅವನ್ನು ಸಾಗಹಾಕಿದೆ.ಮನೆ ಗೇಟಿನ ಸಮೀಪಕ್ಕೆ ತಲುಪುವಾಗ ಅತ್ತೆಯ ನರಳಾಟವೇನಾದರೂ ಕೇಳುವುದೋ ಎಂಬ ಕುತೂಹಲದಿಂದ ನನ್ನ ಕಿವಿ ನೆಟ್ಟಗಾಯಿತು. ಆದರೆ, ಹಾಗೇನೂ ಕೇಳಲಿಲ್ಲ. ಬದಲಾಗಿ ಅಂಗಳಕ್ಕೆ ಪ್ರವೇಶಿಸಿದ ನನ್ನನ್ನು ಹೊರಜಗಲಿಯಲ್ಲಿ ಆರಾಮದಲ್ಲಿ ಕುಳಿತುಕೊಂಡ ಕಮಲತ್ತೆಯೇ ಸ್ವಾಗತಿಸಿದರು! ನನಗೋ ನನ್ನ ಕಣ್ಣುಗಳನ್ನೇ ನಂಬಲಾಗದ ಪರಿಸ್ಥಿತಿ. ನನ್ನನ್ನು ಕಂಡವರೇ, “”ಹಾ… ಇದ್ಯಾರೂ…. ಇಕಾ… ನಾಗವೇಣೀ ಶೀಟಿ ಹುಡುಗ ಬಂದಿದ್ದಾನೆ ನೋಡು” ಎಂದು ಕುಳಿತಲ್ಲಿಂದಲೇ ಚಿಕ್ಕಮ್ಮನಿಗೆ ನನ್ನ ಆಗಮನದ ಬಗ್ಗೆ ತಿಳಿಸುತ್ತ ಬಾಯಗಲಿಸಿ ನಕ್ಕು ಸ್ವಾಗತ ಕೋರಿದರು. ನನಗೋ ಎಲ್ಲವೂ ಆಯೋಮಯವೆನಿಸಿತು. ಕಾಲಿನ ನೋವನ್ನು ಇಟ್ಟುಕೊಂಡ ಕಮಲತ್ತೆ ಹೀಗಿರಲು ಸಾಧ್ಯವೇ ಇಲ್ಲ ಎಂಬುದು ನಾನು ಅನುಭವ ಮುಖೇನ ತಿಳಿದುಕೊಂಡ ವಿಚಾರ. ಇದೀಗ ಅತ್ತೆಯ ಪರಿಸ್ಥಿತಿ ಬರುವಾಗ ನಾನು ನಿರೀಕ್ಷಿಸಿದಂತಿಲ್ಲ. ದೈಹಿಕವಾದ ನೋವಿನ ಯಾವುದೇ ಚಿಹ್ನೆ ಕಮಲತ್ತೆಯ ವರ್ತನೆಯಲ್ಲಿ ಕಾಣುತ್ತಿಲ್ಲ. ಅವರದ್ದೋದು ಸ್ವಭಾವವಿದೆ. ಮುಖತಃ ಮಾತನಾಡುವಾಗ ಆರೋಗ್ಯ ಹೇಗುಂಟು ಎಂದು ಅವರಲ್ಲಿ ವಿಚಾರಿಸಲು ಹೋಗುವುದು ಸ್ವಲ್ಪ ಅಪಾಯ. ಆಗ ಇವರಿಗೆ ಇಲ್ಲದ ನೋವೆಲ್ಲ ಶುರುವಾಗುವುದುಂಟು. ಆದುದರಿಂದ ನಾನಾಗಿಯೇ ಹೋಗಿ ಹೊಂಡಕ್ಕೆ ಬೀಳುವುದು ಬೇಡವೆಂದು ಸುಮ್ಮನಾದೆ. ಕೈಕಾಲು ತೊಳೆದು ಆಸರು ಕುಡಿದು ಪ್ರಯಾಣದ ಸುಸ್ತನ್ನು ಪರಿಹರಿಸಲು ಜಗಲಿಯ ಸೋಫಾದಲ್ಲಿ ಒರಗಿಕೊಂಡೆ. ಕಮಲತ್ತೆ ಕಾಲಿನ ಪ್ರಾಬ್ಲಿಂ ಅವರ ಬದಲು ನನ್ನನ್ನು ಹಿಂಸಿಸುತ್ತಿತ್ತು. ಮನೆ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅತ್ತೆಯ ಅನಾರೋಗ್ಯವೆಂದರೆ ಹಿಂದೆಲ್ಲ ಬೆಟ್ಟ ಹೊತ್ತವರಂತೆ ವರ್ತಿಸುತ್ತಿದ್ದ ಮನೆಮಂದಿ ಈ ಸಲ ನಿರಾಳರಾಗಿದ್ದರು. ಹೀಗೆ ಎಲ್ಲವೂ ವಿಚಿತ್ರವಾಗಿ ಒಗಟಾಗಿ ಗೋಚರಿಸುತ್ತಿರುವಾಗ ಕಮಲತ್ತೆಯೇ ಹತ್ತಿರಕ್ಕೆ ಬಂದು ಕುಳಿತುಕೊಂಡರು. ತನ್ನ ಕಾಲಿನ ಪ್ರಾಬ್ಲಿಂ ಪ್ರಸ್ತಾಪ ಮಾಡಲು ಬಂದಿರಬಹುದು ಎಂಬ ನನ್ನ ಊಹೆ ಸುಳ್ಳಾಗಲಿಲ್ಲ. “”ನೀ ಬಂದಿದ್ದು ಬಾಳ ಚಲೋದಾಯ್ತು ಮಗಾ… ನಂದೊಂದು ಕಾಲಿನ ಪಿರಾಬುಲಮು ಸರಿ ಆಗಿಲ್ಲ ನೋಡು” “”ಯಾವ ಕಾಲು ಎಡದ್ದೋ ಬಲದ್ದೋ? ಏನಾಗಿದ್ದು? ಗಾಯದ ನೋವಾ… ಉಳುಕಾ? ಅಲ್ಲತ್ತೆ ನಡೆಯುವಾಗ ಏನೂ ನೋವು ಗೊತ್ತಾಗೋದಿಲ್ವಾ?” ನಾನು ಮನಸ್ಸಿನ ಗೊಂದಲವನ್ನು ಒಮ್ಮೆಲೇ ಹೊರಗೆಡಹಿದೆ.
“”ನನ್ನ ಕಾಲು ಅಲ್ಲ ಮಗಾ” ಎಂದು ಸಾವಕಾಶದಿಂದ ಹೇಳುತ್ತ ಅತ್ತೆ ತನ್ನ ಸೊಂಟದಿಂದ ಒಂದು ಮೊಬೈಲನ್ನು ತೆಗೆದರು. “”ಇದರ ಕಾಲು ನೋಡು. ಹಿಂದೆಲ್ಲ ಇದರ ಮೈ ನಡುಗುವಾಗ ಹಸುರು ಬಟಾಣಿ (ಬಟನ್) ಒತ್ತಿದ್ರೆ ಕಾಲು ಬಂದು ಒಳಗಿಂದ ಮಾತು ಕೇಳ್ತಾ ಇತ್ತು. ರಮೇಸ, ಹನುಮಂತು, ರೇಣುಕಾ ಎಲ್ಲರೂ ಮಾತಾಡ್ತಿದ್ರೂಂತ. ಈಗ ಅದರ ಮೈ ನಡುಗುತ್ತೆ. ಹಸುರು ಬಟಾಣಿ ಒತ್ತಿದ್ರೆ ಮಾತು ಕೇಳಲ್ಲ. ಯಾರೋ ಅಂದ್ರಪ್ಪ , ಇದರ ಕಾಲು ಸರಿಯಿಲ್ಲ ಅಂತ” ಕಮಲತ್ತೆಯ ಈ ಕಾಲಿನ ಪ್ರಾಬ್ಲಿಂಗೆ ನನಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ. ವಾಸ್ತವಾಂಶ ಏನು ಅಂತ ತಿಳಿಯಿತು ನಮ್ಮ ಚಿಕ್ಕಮ್ಮನ ಮಗ ರಮೇಶ ಮೈಸೂರಿನಲ್ಲಿರುವವ ಬರುವಾಗ ಅತ್ತೆಗೊಂದು ಮೊಬೈಲ್ ತಂದು ಅದಕ್ಕೆ ಸಿಮ್ ಎಲ್ಲ ಹೊಂದಿಸಿಕೊಟ್ಟಿದ್ದ. ಅತ್ತೆಯವರು ತಿಳಿಯದೆ ಅದನ್ನು ಒತ್ತಿ ಅದರ ಒಳಬರುವ ಕರೆ ಮ್ಯೂಟ್ ಆದುದರಿಂದ ಮಾತನಾಡುವವರ ಧ್ವನಿ ಕೇಳಿಸುತ್ತಿರಲಿಲ್ಲ. ಯಾರೋ ಅದರಲ್ಲಿ ಕಾಲ್‌ನ ಪ್ರಾಬ್ಲಿಂ ಇದೆ ಅಂದಿದ್ರು. ಅದು ಅತ್ತೆಯ ಬಾಯಿಯಿಂದ ನನ್ನ ಕಿವಿಗೆ ಬಿದ್ದು ನನ್ನಲ್ಲಿ ಒಟ್ಟು ಗೊಂದಲ ಸೃಷ್ಟಿಯಾಯಿತು. “”ಇದರ ಕಾಲನ್ನು ಸರಿ ಮಾಡ್ತಿಯಾ ಮಗ?” ಅತ್ತೆ ಮತ್ತೆ ಕೇಳಿದರು. ಭಾಸ್ಕರ ಕೆ.