ಗ್ಯಾಸ್ ಸಿಲಿಂಡರ್ ವಿಲೇವಾರಿ ಮಾಡುವ ವ್ಯಕ್ತಿ ಬೆಲ್ ಹಾಕಿದಾಗ ಹಣ ಇರಲಿಲ್ಲ. ಅನುರಾಗನಿಗೆ ಬೆಳಗ್ಗೆ ಆಫೀಸ್ ಹೊರಡುವ ಮೊದಲೇ ನೆನಪಿಸಿದ್ದೆ. “”ಗ್ಯಾಸ್ ಸಿಲಿಂಡರ್, ಟಿ.ವಿ. ಕೇಬಲಿನ ಹುಡುಗ ಯಾವತ್ತೂ ಬರಬಹುದು, ಹಣ ಇಟ್ಟು ಹೋಗಿ” ಎಂದು. ಆದರೆ ಮರೆತರೋ, ಇಲ್ಲವೋ, ಗೊತ್ತಿಲ್ಲ, ಹಣ ಇಟ್ಟು ಹೋಗಲಿಲ್ಲ, ಗಡಿಬಿಡಿಯಲ್ಲಿ ಏನೂ ತೋಚದೆ ಸಿಟ್ಟು ಬಂತು. ಏನು ಮಾಡುವುದು? ಗ್ಯಾಸ್ ಸಿಲಿಂಡರ್ ಈಗ ತೆಗೆದುಕೊಳ್ಳದಿದ್ದರೆ ಮತ್ತೆ ಗೋಡೌನ್‌ಗೆ ಹೋಗಿ ತರಬೇಕು. ಅದಕ್ಕೆ ಅರ್ಧ ದಿನ ತಗಲುತ್ತದೆ. ಹಾಗೆ ಒಂದು ಸಲ ಮಾಡಿದರೆ ಇವರಿಗೆ ಬುದ್ಧಿ ಬರುತ್ತದೆ. ಆದರೂ ಮನಸ್ಸು ಕೇಳಬೇಕಲ್ಲ? ಕೊನೆಗೆ ಉಪಾಯ ಕಾಣದೆ, ನೆರೆಮನೆಯವಳಿಂದ ಹಣ ಕೇಳಿ ಪಡೆದೆ. ನನಗಂತೂ ಈ ರೀತಿ ಹಣ ಕೇಳುವುದೆಂದರೆ ಬಹಳ ಮುಜುಗರವಾಗುತ್ತದೆ. ಹೇಗಾದರೂ ಮಾಡಿ ಮನೆಯನ್ನು ನಿಭಾಯಿಸಬೇಕಲ್ಲ. ಇದೆಲ್ಲಾ ಅನುರಾಗನಿಗೆ ಹೇಗೆ ಅರ್ಥವಾಗುತ್ತದೆ! ಕೋಪದಿಂದಲೇ ಗಂಡನ ಮೊಬೈಲಲ್ಲಿ ರಿಂಗ್ ಮಾಡಿ, “”ನಾನೇನು ಹಣ ತಿಂದು ಹಾಕುತ್ತೇನಾ? ನನ್ನ ಮೇಲೆ ವಿಶ್ವಾಸ ಇಲ್ಲವೇ, ಶಾಲೆಗೆ ಹೋಗುವ ಮಕ್ಕಳಿದ್ದಾರೆ, ತುರ್ತು ಪರಿಸ್ಥಿತಿಯಲ್ಲಿ ಹಣದ ಅಗತ್ಯ ಬಂದರೆ ಏನು ಮಾಡುವುದು, ಇನ್ನೊಬ್ಬರ ಎದುರು ನಾನು ಕೈ ಚಾಚಬೇಕಾ?” ಅನುರಾಗ್‌ನ ಮಾತಿಗೂ ಅವಕಾಶ ಕೊಡದೆ ಫೋನನ್ನು ಕಟ್ ಮಾಡಿಬಿಟ್ಟೆ.
ಬಿಸಿ ಮಾಡದೆ ಬೆಣ್ಣೆ ಕರಗುವುದಿಲ್ಲ ತಾನೆ! ಇವರಿಗೆ, ನಾನು ಹೇಗಾದರೂ ಮನೆಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇನೆಂದು ಅಭ್ಯಾಸವಾಗಿ ಬಿಟ್ಟಿದೆ. ಈ ಮೊದಲು ಮನೆಯ ಖರ್ಚಿಗೆ ಬೇಕಾದ ತಿಂಗಳ ಹಣವನ್ನು ಒಮ್ಮೆಲೇ ಕೊಡುತ್ತಿದ್ದರು. ಪದೇ ಪದೇ ಕೇಳಿ ಪಡೆಯುತ್ತಿದ್ದ ಅಭ್ಯಾಸ ಇರಲಿಲ್ಲ. ಆವಾಗ ನಾನೂ ಇವರಿಗೆ ಸಹಾಯವಾಗಲೆಂದು ಕೆಲಸಕ್ಕೆ ಹೋಗುತ್ತಿ¨ªೆ. ಮನೆಯ ಸಾಲ ಕಟ್ಟಬೇಕು, ಮಕ್ಕಳ ಶಾಲೆಯ ಫೀಸ್, ಡ್ರೆಸ್, ಪುಸ್ತಕ, ಟ್ಯೂಶನ್ ಫೀ, ಸ್ಕೂಲ್ ಬಸ್ ಫೀಸ್ ಅಲ್ಲದೆ ಊರಿನ ಆಗು-ಹೋಗು, ಪ್ರತಿ ತಿಂಗಳು ತಪ್ಪದೆ ಹಣ ಕಳಿಸಬೇಕು.
ಇಬ್ಬರೂ ದುಡಿಯುತ್ತಿದ್ದರೂ ಜೀವನದಲ್ಲಿ ನೆಮ್ಮದಿ ಇರಲಿಲ್ಲ. ಬೆಳಗ್ಗೆ ಬೇಗ ಎದ್ದು ಸಮಯಕ್ಕೆ ಬರುವ ನಳ್ಳಿಯ ನೀರನ್ನು ತುಂಬಿಸಿಡಬೇಕು. ಬೇಗ ಬೇಗ ಉಪಹಾರ, ಊಟ ತಯಾರು ಮಾಡಿ ಎಲ್ಲರ ಟಿಫಿನ್ ತುಂಬಿಸಿಡಬೇಕು. ಮಕ್ಕಳನ್ನು ಎಬ್ಬಿಸಿ ಸ್ನಾನ ಮಾಡಿಸಿ ಬೇಬಿ ಸಿಟ್ಟಿಂಗ್‌ಗೆ ತಯಾರು ಮಾಡಬೇಕು. ಅನುರಾಗ್ ಎಂಟೂವರೆಗೆ ಆಫೀಸಿಗೆ ಹೊರಡುತ್ತಾರೆ. ಅಲ್ಲಿಯವರೆಗೆ ಮನೆಯ ಎಲ್ಲಾ ಕೆಲಸದಲ್ಲಿ ನನ್ನೊಡನೆ ಸಹಕರಿಸುತ್ತಾರೆ. ಅದರ ಬಳಿಕ ನನ್ನ ಕೈಕಾಲು ಕಟ್ಟಿದಂತಾಗುತ್ತದೆ. ಕೆಲವೊಮ್ಮೆ ಒಂದು ಚಪಾತಿ ಕೂಡ ತಿನ್ನಲು ಸಮಯ ಇರುವುದಿಲ್ಲ. ಗಡಿಬಿಡಿಯಲ್ಲಿ ಮನೆಗೆ ಬೀಗ ಹಾಕಿ ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್‌ನಲ್ಲಿ ಬಿಟ್ಟು ಆಫೀಸ್ ತಲುಪುವಾಗ ಸಾಕು ಸಾಕಾಗಿ ಹೋಗುತ್ತದೆ. ಕೆಲವೊಮ್ಮೆ ರಸ್ತೆಯಲ್ಲಿ ವಿಪರೀತ ಟ್ರಾಫಿಕ್, ಇನ್ನು ಕೆಲವೊಮ್ಮೆ ಕಿಕ್ಕಿರಿದ ಟ್ರೈನ್ ಹತ್ತಲಾಗದೆ ಆಫೀಸ್ ತಲುಪುವಾಗ ತಡವಾಗುತ್ತದೆ. ಒಂದು ನಿಮಿಷ ತಡವಾದರೂ ಪ್ರತಿ ಲೇಟ್ ಮಾರ್ಕಿಗೆ ಐವತ್ತು ರೂಪಾಯಿ ಸಂಬಳದಿಂದ ಕಡಿತ ಮಾಡುತ್ತಾರೆ. ಸಣ್ಣ ಮಕ್ಕಳು, ಹೊಂದಿಸಿಕೊಂಡು ಹೋಗುವಲ್ಲಿ ಸಮಯ ತಗಲುತ್ತದೆ, ಸಮಯದಲ್ಲಿ ವಿನಾಯತಿ ಕೊಡಿ ಎಂದರೂ, ಇದು ನಮ್ಮ ಸಮಸ್ಯೆ ಅಲ್ಲ ಎನ್ನುತ್ತಾರೆ ಸೀನಿಯರ್ಸ್.
ಒಂದು ಕಡೆ ಆಫೀಸ್‌ನಲ್ಲಿ ಕೆಲಸದ ಒತ್ತಡ. ನಿರ್ಧಾರಿತ ಸಮಯದಲ್ಲಿ ಊಟ ಬಿಡಿ, ಬಾತ್‌ರೂಮಿಗೆ ಹೋಗಲೂ ಸಾಧ್ಯವಾಗದೆ, ಕೆಲವು ಸಲ ಹೊಟ್ಟೆ ಉಬ್ಬಿಸಿಕೊಂಡದ್ದೂ ಇದೆ. ಇನ್ನೊಂದು ಕಡೆ ಮನೆ, ಮಕ್ಕಳ ಟೆನ್ಶನ್. ಮಕ್ಕಳು ಸರಿಯಾಗಿ ತಿಂದಿದ್ದಾರೋ ಇಲ್ಲವೋ; ಬೇಬಿ ಸಿಟ್ಟಿಂಗ್‌ನವರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೋ ಇಲ್ಲವೋ; ಮಕ್ಕಳು ಶಾಲೆಗೆ ಹೋಗುವಾಗ ಪುಸ್ತಕ, ಪೆನ್ಸಿಲ್ ತೆಗೆದುಕೊಂಡು ಹೋಗಿದ್ದಾರೋ ಇಲ್ಲವೋ; ಮನೆಯ ಗ್ಯಾಸ್ ಸಿಲಿಂಡರ್ ಬರುವುದಿದೆ, ನೆರೆಮನೆಯವಳು ತೆಗೆದುಕೊಂಡಿದ್ದಾಳ್ಳೋ ಇಲ್ಲವೋ; ಮನೆಯ ಕೆಲಸದವಳು ಬಂದಿದ್ದಾಳ್ಳೋ ಇಲ್ಲವೋ. ಹೀಗೆ ಹತ್ತುಹಲವು ವಿಚಾರಗಳಿಂದ ಮನಸ್ಸು ಗೊಂದಲದಲ್ಲೇ ಮುಳುಗಿರುತ್ತದೆ. ಸಂಜೆಯಾಗುತ್ತಿದ್ದಂತೆ ಬಾಕಿಯಿರುವ ಕೆಲಸವನ್ನೆಲ್ಲಾ ಬೇಗ ಬೇಗನೇ ಮುಗಿಸಿ ಯಾವಾಗ ಬೇಬಿ ಸಿಟ್ಟಿಂಗ್‌ಗೆ ಹೋಗಿ ಮಕ್ಕಳ ಮುಖವನ್ನು ನೋಡುವುದೆಂದು ಮನಸ್ಸು ತವಕಿಸುತ್ತಿರುತ್ತದೆ. ಕೆಲವೊಮ್ಮೆ ಅಲ್ಲಿ ತಡವಾದರೂ ಅವರ ವ್ಯಂಗ್ಯ ಮಾತಿಗೂ ಗುರಿಯಾಗಬೇಕಾಗುತ್ತದೆ. ಬೇಬಿ ಸಿಟ್ಟಿಂಗ್‌ನಲ್ಲಿ ಮಕ್ಕಳ ಪೇಲವ ಮುಖವನ್ನು ಗಮನಿಸಿದಾಗ ನಮ್ಮ ಮಕ್ಕಳು ಯಾರದೋ ಕೈಯೊಳಗೆ ಅಸಹಾಯಕ ಬಂಧಿಗಳಾಗಿದ್ದಾರಲ್ಲಾ ಎಂದು ಮರುಕ ಹುಟ್ಟುತ್ತದೆ. ನನ್ನ ಕಂಡ ತಕ್ಷಣ ಮಕ್ಕಳು ಓಡೋಡಿ ಬಂದು ನನ್ನ ಅಪ್ಪುಗೆಯಲ್ಲಿ ಬಲ ಪಡೆದವರಂತಾಗುತ್ತಾರೆ. ಬಳಿಕ ಅವರ ಪ್ರತಿ ದೂರಿಗೂ ಕಿವಿ ಕೊಡಬೇಕಾಗುತ್ತದೆ, “”ಮಮ್ಮಿ, ಬೇಬಿ ಸಿಟ್ಟಿಂಗ್ ಆಂಟಿ ಬಹಳ ಜೋರು, ದಿನವಿಡೀ ಗದರಿಸುತ್ತಿರುತ್ತಾರೆ. ಗೆಳೆಯರೊಡನೆ ಆಟವಾಡಲು ಬಿಡುವುದಿಲ್ಲ, ಟಿ.ವಿ.ಯಲ್ಲಿ ಕಾಟೂìನ್ ನೋಡಿದರೆ ಎಲೆಕ್ಟ್ರಿಕ್ ಬಿಲ್ ಹೆಚ್ಚು ಬರುವುದಂತೆ”. ಹಾಗೂ ಹೀಗೂ ಮಕ್ಕಳನ್ನು ಸಮಾಧಾನಿಸಿ ಮನೆ ತಲುಪುವಾಗ ರಾತ್ರಿ ಎಂಟು ಗಂಟೆಯಾಗುತ್ತದೆ. ಬಳಿಕ ಮಕ್ಕಳಿಗೆ ಏನಾದರೂ ತಿನ್ನಲು ಕೊಟ್ಟು, ರಾತ್ರಿ ಊಟದ ತಯಾರು ಮಾಡಬೇಕು. ಆ ಬಳಿಕ, ಮಕ್ಕಳ ಓದು, ಬರವಣಿಗೆ ಬಗ್ಗೆಯೂ ಧ್ಯಾನ ಕೊಡಬೇಕು. ಗಂಡನಿಗೆ ಮಕ್ಕಳ ಬಗ್ಗೆ ಧ್ಯಾನ ಕೊಡಲು ಸಮಯ ಇಲ್ಲ. ಅವರು ಮನೆ ತಲುಪುವಾಗ ರಾತ್ರಿ ಹತ್ತರ ಮೇಲಾಗುತ್ತದೆ. ನನಗೆ ಮನೆಯ ಮತ್ತು ಆಫೀಸಿನ ಕೆಲಸದ ಒತ್ತಡದಿಂದ ಶರೀರ ಬಹಳ ದಣಿದು ಹೋಗಿರುತ್ತದೆ.
ಯಾವಾಗ ಆದಿತ್ಯವಾರ ಬರುತ್ತದೆಂದು ಕಾಯ್ದು ಕುಳಿತು ಕೊಳ್ಳಬೇಕಾಗುತ್ತದೆ. ಅದರಲ್ಲೂ, ಆ ದಿನ ಕುಟುಂಬದ ಅಥವಾ ಸಾಮಾಜಿಕ ಕಾರ್ಯಕ್ರಮಕ್ಕೆ ಹೋಗಲೇ ಬೇಕಾದ ಪ್ರಮೇಯ ಬಂದಾಗ ಮಾತ್ರ ಮನಸ್ಸಿಲ್ಲದ ಮನಸ್ಸಿಂದ ಹೊರಡಬೇಕಾಗುತ್ತದೆ. ಸುಸ್ತಾದ ಮೈ-ಮನದಿಂದ ಕೆಲವೊಮ್ಮೆ ಕುಳಿತಲ್ಲಿಯೇ ನಿ¨ªೆ ಹೋಗುತ್ತೇನೆ, ಗಂಡ ಮನೆ ತಲುಪಿದ್ದೇ ತಿಳಿಯುವುದಿಲ್ಲ. ಮತ್ತೆ ಎಲ್ಲರೂ ಊಟ ಮಾಡಿ, ಪಾತ್ರೆ ತೊಳೆದು ಮಲಗುವಾಗ ರಾತ್ರಿ ಹನ್ನೆರಡು ಗಂಟೆಯ ಮೇಲಾಗುತ್ತದೆ. ಗಂಡನೂ ಬಹಳಷ್ಟು ದಣಿದಿರುತ್ತಾರೆ, ಹಾಗಾಗಿ ಮಾತಿನ ಬದಲು ನಾವಿಬ್ಬರೂ ನಿ¨ªೆಯನ್ನೇ ಹೆಚ್ಚಾಗಿ ಆಲಂಗಿಸಿಕೊಳ್ಳುತ್ತೇವೆ.
ನನ್ನಂತೆ ನನ್ನ ಗಂಡನ ಪಾಡು ಅದೇ ರೀತಿಯಾಗಿತ್ತು, ಕೆಲವೊಮ್ಮೆ ಬೇಸರದಲ್ಲೇ ಹೇಳುತ್ತಿದ್ದರು, “”ಅಕ್ಷತಾ ಬದುಕಿಗೆ ಹಣ ಬೇಕು ನಿಜ. ಆದರೆ ಹಣವೇ ಬದುಕಲ್ಲವಲ್ಲ. ಇಬ್ಬರೂ ದುಡಿಯುವುದರಿಂದ ನಮಗೆ ಅನುಕೂಲವಾಗುವುದು ನಿಜ, ಆದರೆ ಇದರೊಟ್ಟಿಗೆ ನಾವು ನಮ್ಮ ನೈಜ ಬದುಕನ್ನು ಕಳೆದುಕೊಳ್ಳುತ್ತಿದ್ದೇವಲ್ಲಾ. ಹಾಗೆ ನೋಡಿದರೆ ಹಣ ಎಷ್ಟಿದ್ದರೂ ಸಾಕಾಗುವುದಿಲ್ಲ. ಹಣ ಹೆಚ್ಚಾದಂತೆಲ್ಲಾ ಬೇಡಿಕೆಗಳೂ ಹೆಚ್ಚಾಗತೊಡಗುತ್ತದೆ. ಇಂತಹ ಒತ್ತಡದ ಬದುಕಿಂದ ನಮಗಿಬ್ಬರಿಗೂ ಸುಖ ಇಲ್ಲ. ಪರಿಣಾಮವಾಗಿ ಮಕ್ಕಳೂ ಬಳಲುತ್ತಿದ್ದಾರೆ. ಮಕ್ಕಳನ್ನು ಬೇಬಿ ಸಿಟ್ಟಿಂಗ್‌ನಲ್ಲಿಡುವುದರಿಂದ, ಅವರನ್ನು ನಮ್ಮ ಭಾವನಾತ್ಮಕ ಸಂಬಂಧ, ಸಂಸ್ಕಾರ, ಸಂಸ್ಕೃತಿಗಳಿಂದಲೂ ವಂಚಿತರನ್ನಾಗಿ ಮಾಡುತ್ತಿದ್ದೇವೆಂದು ಅನಿಸುತ್ತದೆ. ಹೇಗೂ ನಿನ್ನ ಸಂಬಳ ಬೇಬಿ ಸಿಟ್ಟಿಂಗ್, ಟ್ಯೂಶನ್ ಫೀಸ್, ಸ್ಕೂಲ್ ಬಸ್, ಮನೆಯ ಕೆಲಸದವಳ ಖರ್ಚಿಗೇ ವ್ಯಯವಾಗುತ್ತದೆ. ಒಟ್ಟಾರೆ ಜೀವನದಲ್ಲಿ ಹೋರಾಟ, ರಸ ಇಲ್ಲ. ಬಾಯಿ ಬಿಟ್ಟು ಹೇಳದಿದ್ದರೂ ಪರೋಕ್ಷವಾಗಿ ನಾನು ಮನೆಯ ವ್ಯವಹಾರ ನೋಡಿಕೊಳ್ಳ ಬೇಕೆಂಬುದು ಅವರ ಇಂಗಿತವಾಗಿತ್ತು. ನಾನು ಸಾಧ್ಯವಾದಷ್ಟು ದಿನ ಕೆಲಸ ಮಾಡುವೆನೆಂದು ಸುಮ್ಮನಿದ್ದೆ. ಆದರೆ ಗಂಡನ ಬದಲಾದ ಮಾತಿನ ದಾಟಿಗೆ ಆಶ್ಚರ್ಯವಾಯ್ತು. ಏಕೆಂದರೆ ಮೊದಲು ಅವರು ಕೆಲಸಕ್ಕೆ ಹೋಗುವ ಹುಡುಗಿಯೇ ಬೇಕೆಂದು ಹಟ ಹಿಡಿದಿದ್ದರು.
ಕೆಲವೇ ದಿನಗಳಲ್ಲಿ ನಮ್ಮ ಆಫೀಸ್ ಬೇರೆ ಕಡೆಗೆ ವರ್ಗಾವಣೆಯಾಯ್ತು. ಅಷ್ಟು ದೂರ ಹೋಗಿ ಬರಲು ಸಾಧ್ಯವಾಗದ ಕಾರಣ ನಾನು ಕೆಲಸಕ್ಕೆ ರಾಜೀನಾಮೆ ಕೊಡಬೇಕಾಯ್ತು. ಮತ್ತೆ ಬೇರೆಲ್ಲಿಯಾದರೂ ಕೆಲಸ ಮಾಡುವೆನೆಂದರೂ ಗಂಡ ಕಿವಿಗೊಡಲಿಲ್ಲ. ಹಾಗಾಗಿ ಮನೆಯ ವ್ಯವಹಾರದಲ್ಲಿ ತೊಡಗಿದೆ. ಆಫೀಸ್ ಕೆಲಸದಲ್ಲಿ ಒಗ್ಗಿದ್ದ ನನಗೆ ಮೊದ ಮೊದಲು ಮನೆಯಲ್ಲಿ ಸಮಯ ಕಳೆಯಲು ಕಷ್ಟವಾಗತೊಡಗಿತು. ಕ್ರಮೇಣ ಮನೆಯ ಜವಾಬ್ದಾರಿ ಹೆಚ್ಚಿದಂತೆ ಸಮಯ ಸಾಕಾಗುತ್ತಿರಲಿಲ್ಲ. ಇವರ ಆರ್ಥಿಕ ಭಾರವನ್ನು ಕಡಿಮೆ ಮಾಡಲು, ಮನೆಯ ಕೆಲಸದವಳನ್ನು ಬಿಡಿಸಿದೆ, ಮಕ್ಕಳಿಗೆ ನಾನೇ ಟ್ಯೂಶನ್ ಕೊಡತೊಡಗಿದೆ, ಮಕ್ಕಳ ಸ್ಕೂಲ್‌ಬಸ್ ಬಿಡಿಸಿ ಕಾಲ್ನಡಿಗೆಯಲ್ಲೇ ಸ್ಕೂಲ್ ಬಿಟ್ಟು ಬರತೊಡಗಿದೆ. ಆಗಲೂ ಎಂದಿನಂತೆ, ಮನೆಗೆ ಬೇಕಾದ ತಿಂಗಳ ಖರ್ಚನ್ನು ಒಂದೇ ಸಲ ತಿಂಗಳ ಮೊದಲ ವಾರವೇ ಕೊಡುತ್ತಿದ್ದರು. ಅದನ್ನು ಸೂಕ್ಷ್ಮವಾಗಿ ಖರ್ಚು ಮಾಡುತ್ತಿದ್ದೆ. ಮೇಲಾಗಿ, ನನಗೆ ಯಾವ ಸಿನೆಮಾ ನೋಡುವ, ಮಾಲ್‌ನಲ್ಲಿ ಖರೀದಿಸುವ, ತಿರುಗಾಡುವ, ಹೊಟೇಲಿನಲ್ಲಿ ಊಟಮಾಡುವ ಅಲ್ಲದೆ ಹೊಸ ಹೊಸ ಬಟ್ಟೆ ಧರಿಸುವ ಆಸಕ್ತಿ ಮೊದಲಿಂದಲೂ ಇರಲಿಲ್ಲ. ಇದು ಗಂಡನಿಗೆ ವರದಾನವಾಗಿತ್ತು. ಆದರೆ ಬರ ಬರುತ್ತಾ ಗಂಡ ಮನೆಯ ಖರ್ಚಿನ ಹಣವನ್ನು ಸ್ವಲ್ಪ ಸ್ವಲ್ಪವಾಗಿ ಕೊಡತೊಡಗಿದರು. ಇದರಿಂದ ನನಗೆ ಮನೆಯ ವ್ಯವಹಾರ ನೋಡಿಕೊಳ್ಳಲು ಕೈಕಟ್ಟಿದಂತಾಗುತ್ತಿತ್ತು. ಕೇಳಿದರೆ, “ಇಷ್ಟು ಬೇಗ ಖರ್ಚಾಯ್ತ’ ಎನ್ನುವಾಗ ತಲೆಗೆ ಮತ್ತಷ್ಟು ಕಿರಿಕಿರಿಯಾಗುತ್ತಿತ್ತು.
ಅನುರಾಗ್ ಮನೆಗೆ ಬರಲಿ, ಇವತ್ತು, ಹೇಳಿಯೇ ಬಿಡಬೇಕು. “”ಮನೆ ಖರ್ಚಿಗೆ ಹಣ ಕೊಡುವುದಾದರೆ ಒಟ್ಟಿಗೇ ಕೊಡಿ, ಇಲ್ಲದಿದ್ದರೆ ಮನೆಯ ವ್ಯವಹಾರ ನೀವೇ ನೋಡಿ ಕೊಳ್ಳಿ” ಎಂದು. ಅಷ್ಟರಲ್ಲಿಯೇ ಮನೆಯ ಕಾಲಿಂಗ್ ಬೆಲ್ ರಿಂಗುಣಿಸಿತು. ಬಾಗಿಲು ತೆರೆದರೆ ಅನುರಾಗ್. ಹತ್ತು ಗಂಟೆ ರಾತ್ರಿ ಬರುವ ವ್ಯಕ್ತಿ ಇಂದು ಐದು ಗಂಟೆಗೇ ಬಂದಿದ್ದಾರಲ್ಲಾ. ಏನು ಸೌಖ್ಯ ಇಲ್ಲವೇ ಎಂದು ನನ್ನ ಸಿಟ್ಟನ್ನು ಪ್ರದರ್ಶಿಸಲು ಹೋಗಲಿಲ್ಲ. ಮಕ್ಕಳಿಬ್ಬರೂ “ಡ್ಯಾಡಿ… ಡ್ಯಾಡಿ’ ಎಂದು ಖುಶಿಯಿಂದ ಓಡಿಬಂದು ಅನುರಾಗ್‌ನನ್ನು ಅಪ್ಪಿಹಿಡಿದರು. ಅನುರಾಗ್ ತಂದಿದ್ದ ಐಸ್‌ಕ್ರೀಮ್ ಪ್ಯಾಕೆಟನ್ನು ಮಕ್ಕಳ ಮುಂದೆ ತೆರೆದಾಗ ಅವರ ಖುಷಿಗೆ ಮೇರೆಯೇ ಇರಲಿಲ್ಲ. ಗಂಡ, ನನ್ನ ನೆಚ್ಚಿನ ಬಾದಾಮ್ ಕುಲ್ಫಿಯನ್ನು ನನ್ನ ಮುಂದೆ ಹಿಡಿದು, “”ನನಗೆ ನನ್ನ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿದೆ. ಇನ್ನು ಮನೆಯ ಬಜೆಟ್ ಒಂದೇ ಸಲ ರಿಲೀಸ್” ಎಂದು ಹಾಸ್ಯ ಚಟಾಕಿ ಹಾರಿಸಿದಾಗ, ನನ್ನ ಸಿಟ್ಟು ಕರಗಿ ನೀರಾಯ್ತು !
ಮೋಹನ ಕುಂದರ್