ಕೆಲವೊಂದು ಹಾಡುಗಳು ಕೇಳಲು ತುಂಬಾ ಮಜಾವಾಗಿರುತ್ತವೆ. ಮತ್ತೆ ಮತ್ತೆ ಪ್ಲೇ ಮಾಡಿ ಕೇಳಿಸಿಕೊಳ್ಳುವಷ್ಟು ಇಂಪಾಗಿಯೂ ಟಪ್ಪಂಗುಚ್ಚಿಯಾಗಿಯೂ ಇರುತ್ತವೆ. ಆದರೆ ಹಾಡನ್ನು ಕೇಳುವ ಭರದಲ್ಲಿ ನಾವು ಅದರ ಸಾಹಿತ್ಯದ ಒಳಾರ್ಥವನ್ನು ಅರಿತುಕೊಳ್ಳಲು ಹೋಗುವುದೇ ಇಲ್ಲ. ಬರೀ ಹಾಡನ್ನು ಕೇಳುತ್ತಾ ಅರೆ ಕಣ್ಣು ಮುಚ್ಚಿ ಅದರ ಮಾಂತ್ರಿಕತೆಯಲ್ಲೇ ಕಳೆದು ಹೋಗುತ್ತೇವೆ.
‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ’.. ಈ ಹಾಡು ಯಾರು ಕೇಳಿಲ್ಲ ಹೇಳಿ ? ವ್ಯಾಟ್ಯಾಪ್ / ಇನ್ಸ್ಟಾ ಸ್ಟೇಟಸ್ ನಿಂದ ಹಿಡಿದು, ಶಾರ್ಟ್ ವೀಡಿಯೋಗಳ ಮೋಜಿನಿಂದಿಡಿದು, ಮನರಂಜನೆಗೆ ಡಿಜೆ ಆಗಿಯೂ ಹಾಡು ವೈರಲ್ ಆಗಿದೆ. ಹಾಗಿದೆ ಈ ಹಾಡಿನ ಕಿಕ್.
ಅಂದ ಹಾಗೆ ಇದೊಂದು ತಮಿಳು ಹಾಡು. ಇದನ್ನು ಬರೆದು ಹಾಡಿನ ಧ್ವನಿಗೆ ಜತೆ ಆದವರು 27 ವರ್ಷದ ಚೆನ್ನೈ ಮೂಲದ ಅರಿವು. ಇವರೊಂದಿಗೆ ಹಾಡಿಗೆ ಭಾವ ತುಂಬಿರುವವರು ಶ್ರೀಲಂಕಾ – ಆಸ್ಟ್ರೇಲಿಯಾ ಮೂಲದ ಹಿನ್ನೆಲೆ ಗಾಯಕಿ ಧೀ. (ಧೀಕ್ಷಿತ ವೆಂಕಟೇಶನ್)
ಹಾಡು ಮಾತ್ರವಲ್ಲ ಕಳೆದುಕೊಂಡಿರುವ ಪಾಡು ! :
ಎಂಜಾಯ್ ಎಂಜಾಮಿ ಕೇಳುತ್ತಾ ಇದ್ದರೆ ಇದೊಂದು ಪಕ್ಕಾ ಡ್ಯಾನ್ಸ್ ಸಾಂಗ್ ಅಂಥ ಅನ್ನಿಸಬಹುದು. ಆದರೆ ಈ ಸಾಂಗ್ ನ ಹಿಂದಿರುವ ನೋವು – ನಲಿವಿನ ಕಥೆ ಎಂಥವವರ ಮನಸ್ಸನ್ನೂ ಕಲುಕಬಹುದು.
ಅದು ಬಡ ವರ್ಗದ ಕುಟುಂಬಗಳು. ತಾವು ಕಷ್ಟ ಪಟ್ಟಾದ್ದರೂ ತಮ್ಮ ಮುಂದಿನ ಜನಾಂಗ, ತನ್ನ ಮನೆಯ ಕಿರಿಯ ಸದಸ್ಯರು ತಮ್ಮಂತೆ ಬದುಕನ್ನೂ ಕಷ್ಟದ ಕತ್ತಲಾ ಕೂಪದೊಳಗೆ ಸಾಗಿಸಬಾರದು, ಒಂದೊಳ್ಳೆ ಬದುಕನ್ನು ರೂಪಿಸಿಕೊಳ್ಳಬೇಕೆಂದು, ಉಳ್ಳವರ ಮಾತಿಗೆ, ದುಡಿಯಲು 19 ನೇ ಶತಮಾನದಲ್ಲಿ ಸಿಲೋನ್ ಗೆ ವಲಸೆ ಹೋಗುತ್ತಾರೆ. ವರ್ಷಾನುಗಟ್ಟಲೆ ಬೆಟ್ಟ – ಗುಡ್ಡವನ್ನು ತನ್ನ ಶ್ರಮದಿಂದ, ಬೆವರು ರಕ್ತವನ್ನು ಒಂದಾಗಿಸಿ ರಬ್ಬರ್ ಹಾಗೂ ಕಾಫಿ ತೋಟವನ್ನಾಗಿ ಪರಿವರ್ತಿಸಿದ ಎಷ್ಟೋ ಮಂದಿಗೆ ಫಲದ ರೂಪದಲ್ಲಿ ದಕ್ಕಿದ್ದು ಬರೀ ಹತಾಶೆಯಷ್ಟೇ. ನಿರೀಕ್ಷೆ ಮಾಡಿದ ಭೂಮಿಯೂ ದಕ್ಕಿಲ್ಲ, ಕನಸು ತುಂಬಿ ಭರವಸೆ ಮೂಡಿಸಿದ ಹಣವೂ ದಕ್ಕಿಲ್ಲ. ರಾತ್ರೋ ರಾತ್ರಿ ದುಡಿದು, ದಣಿದ ದೇಹಗಳು, ಹೆಜ್ಜೆ ಹಾಕುತ್ತಾ ಊರ ಗ್ರಾಮಕ್ಕೆ ಬಂದು ತಲುಪಿದರು.
ಹಾಡು ಅನ್ಯರ ಕಥೆಯಲ್ಲ ; ನಮ್ಮದೇ ಮಣ್ಣಿನವರ ವ್ಯಥೆ :
ಹಾಡನ್ನು ನೋಡುವಾಗ, ಆಫ್ರಿಕಾದ ಕಾಡು ಜನಾಂಗ ತನ್ನ ಸಂಪ್ರದಾಯವನ್ನು ಹೇಳುವ ಹಾಗೆ ಇದೆ. ಆದರೆ ಇದು ತಮಿಳು ಕಾರ್ಮಿಕರ ಬದುಕಿನ ಚಿತ್ರಣ. ಹಾಡಿನಲ್ಲಿ ಬರುವ ಎಂಜಾಮಿ ಪದದ ಅರ್ಥ ತಮಿಳಿನಲ್ಲಿ ‘ಎನ್ನಸಾಮಿ’. ಕೆಲಸದಾಳುಗಳು ಒಡೆಯರನ್ನು ಕೈಮುಗಿದು ಹೀಗೆಯೇ ಕರೆಯುತ್ತಿದ್ದರು. ಇಲ್ಲಿ ‘ ಎಂಜಾಯ್’ ಎಂದರೆ ಇಂಗ್ಲಿಷಿನ ಅರ್ಥವಲ್ಲ, ಇದರ ಅರ್ಥ ‘ಎನ್ನ ತಾಯಿ’ ಎನ್ನುವುದು.
ಹಾಡಿನಲ್ಲಿ ಆಕ್ರೋಶವಿಲ್ಲ ದಮನಿತರ ಅಕ್ರಂದನದ ಭಾವವಿದೆ : ಹಾಡು ಪ್ರಾರಂಭವಾಗುವುದು ಭೂಮಿಯನ್ನು ಸ್ಪರ್ಶಿಸುವ ಮೂಲಕ. ಹಾಡಿನ ರೂಪ ಹೊಸ ಕಾಲದ ಮೊಮ್ಮಗನಿಗೆ ಗತ ಕಾಲದ ಅಜ್ಜಿಯೊಬ್ಬಳು ಕಳೆದು ಹೋದ ಪೂರ್ವಜರು, ಕಳೆದು ಹೋದ ಭೂಮಿ, ಈ ಭೂಮಿಯ ಮಹತ್ವ, ಜಾತಿ, ಉಳ್ಳವರು, ಸಮಾನತೆ, ತಾರತಮ್ಯದ ಎಳೆಯನ್ನು ಹೇಳುವ ಹಾಗೆ ಚಿತ್ರಿತವಾಗಿದೆ. ತಾವು ದುಡಿದು ಮೋಸ ಹೋಗಿದ್ದೇವೆ, ಬೆಂದ ಬೆವರು ಭುವಿಗಿಳಿದು ತೋಟಗಳಾಗಿ ಬೆಳೆದು ನಿಂತರೂ ತಮಗೆ ನ್ಯಾಯ ಸಿಕ್ಕಿಲ್ಲ, ಅನ್ಯಾಯ ಎಸಗಿದವರನ್ನು ನೇರವಾಗಿ ಎಲ್ಲೂ ತರಾಟೆಗೆ ತೆಗೆದುಕೊಳ್ಳಲಿಲ್ಲ, ಬದಲಾಗಿ ಹಾಡಿನ ರಾಗವೇ ಅನ್ಯಾಯದ ವಿರುದ್ಧ ಚಾಟಿ ಬೀಸಿದಂತೆ ಇದೆ.
ಹಾಡಿನಲ್ಲಿ ಕಾಫಿ ತೋಟದಲ್ಲಿ ದುಡಿದು ದಣಿದ ಅರಿವು ಅವರ ಅಜ್ಜಿ ದಣಿದವರ ಜನಾಂಗದ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ.
ಹಾಡಿಗೆ ಸಿಕ್ಕ ಜನಪ್ರಿಯತೆ ಜನಮಾನ ಮುಟ್ಟಿತು : ಈ ಹಿಂದೆ ಮಾರಿ -2 ಚಿತ್ರದ ರೌಡಿ ಬೇಬಿ ಹಾಡಿನಲ್ಲಿ ಧನುಷ್ ಜತೆ ಧ್ವನಿಯಾಗಿದ್ದ ಧೀ. ಮೊದಲ ಬಾರಿ ಸ್ವತಂತ್ರ ಕಲಾವಿದೆ ಆಗಿ ಈ ಹಾಡಿನಲ್ಲಿ ಹಾಡಿ ನಟಿಸಿದ್ದಾರೆ. ತಮಿಳಿನ ಸಂಗೀತ ನಿರ್ಮಾಪಕ ಸಂತೋಷ್ ನಾರಾಯಣ್ ತುಂಬಾ ಗ್ರ್ಯಾಂಡ್ ಆಗಿ ಹಾಡನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಣದ ಯೋಜನೆಗೆ ತಕ್ಕಂತೆ ನಿರ್ದೇಶನ ಮಾಡಿದ್ದಾರೆ ಅಮಿತ್ ಕೃಷ್ಣನ್.
ಈ ಹಿಂದೆ ಸಿಎಎ – ಎನ್ ಆರ್ ಸಿ ಪ್ರತಿಭಟನೆಯ ಸಂದರ್ಭದಲ್ಲಿ “Sanda Seivom” ಹಾಡು ಬರೆದು ಪ್ರತಿಭಟನೆಗೆ ಸಾಥ್ ನೀಡಿ ಗಮನ ಸೆಳೆದಿದ್ದ ಅರಿವು. ಎಂಜಾಯ್ ಎಂಜಾಮಿ ಹಾಡಿನ ರೂವಾರಿ.
ಈಗಾಗಲೇ ಈ ಹಾಡು ಎಲ್ಲೆಡೆ ವೂರಲ್ ಆಗಿದ್ದು, ಎ.ಆರ್ ರೆಹಮಾನ್, ನಟ ಸೂರ್ಯ,ವಿಜಯ್ ಸೇರಿದಂತೆ ಹಲವಾರು ಮಂದಿ ಸ್ಟಾರ್ಸ್ – ಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡನ್ನು 13 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
–ಸುಹಾನ್ ಶೇಕ್