ಕರಾವಳಿಯ ಜಾನಪದ ಕ್ರೀಡೆ ಕಂಬಳದ ಅಲ್ಪ ಪರಿಚಯ ಇದ್ದವರೂ ಕುಟ್ಟಿ, ಚೆನ್ನ, ಬೊಳ್ಳ, ಮುಕೇಶ ಮುಂತಾದ ಕೋಣಗಳ ಹೆಸರನ್ನು ಕೇಳಿರಬಹುದು. ಇತ್ತೀಚಿನ ದಿನಗಳಲ್ಲಿ ಕೋಣಗಳಿಗೆ ವಿವಿಧ ಹೆಸರಿಡುವ ಪದ್ದತಿ ಚಾಲ್ತಿಯಲ್ಲಿದೆ. ಹಾಗಾದರೆ ಕೋಣಗಳಿಗೆ ಹೆಸರಿಡುವ ಸಂಪ್ರದಾಯ ಯಾವಾಗ ಆರಂಭವಾಯಿತು? ಹೆಸರಿನ ಹಿಂದಿನ ಕಥೆಯೇನು ಎನ್ನವುದರ ವಿವರ ಇಲ್ಲಿದೆ.
ಕೋಣಗಳನ್ನು ಗುರುತಿಸುವುದು ಅವುಗಳ ಜಾತಿಯಿಂದ. ಅಂದರೆ ಕಾಲ, ಬೊಳ್ಳ, ಕೆಂಚ, ಕೊಕ್ಕೆ ಇತ್ಯಾದಿ. ಕಪ್ಪು ಬಣ್ಣದ ಕೋಣಕ್ಕೆ ಕಾಲ, ಬಿಳಿ ಚರ್ಮದ ಕೋಣವನ್ನು ಬೊಳ್ಳ, ಸ್ವಲ್ಪ ಕೆಂಪು ಬಣ್ಣದ ಚರ್ಮ ಹೊಂದಿರುವುದನ್ನು ಕೆಂಚ, ಕೊಂಬು ಕೆಳಗಿರುವ ಕೋಣವನ್ನು ಮೋಡ, ಸಣ್ಣ ಕೊಂಬಿನ ಕೋಣವನ್ನು ಕುಟ್ಟಿ ಎಂದು ಕರೆಯುವುದು ವಾಡಿಕೆ. ಮನೆತನದ ಹೆಸರಿನೊಂದಿಗೆ ಕೋಣದ ಜಾತಿಯ ಹೆಸರನ್ನು ಸೇರಿಸಿ ಕರೆಯಲಾಗುತ್ತದೆ. ಉದಾಹರಣೆಗೆ ಕರಿಕಲ್ಲ ಬೊಳ್ಳ, ತಜಂಕೂರು ಬೊಳ್ಳ ಇತ್ಯಾದಿ. ನಂತರದ ದಿನಗಳಲ್ಲಿ ಹೊಸ ಬಗೆಯ ಹೆಸರುಗಳು ಚಾಲ್ತಿಗೆ ಬಂದವು. ಅವುಗಳೇ ನಾಗರಾಜ, ರಾಜ, ಮುಕೇಶ ಇತ್ಯಾದಿ.
ಕೋಣಗಳಿಗೆ ಜಾತಿಯನ್ನು ಹೊರತು ಪಡಿಸಿ ಮನುಷ್ಯರಂತೆ ಹೆಸರಿಡಲು ಆರಂಭಿಸಿದ್ದು 60ರ ದಶಕದಲ್ಲಿ. ನೀಡ್ಪಳ್ಳಿ ಜೀವಂಧರ ಆರಿಗರು ತಮ್ಮ ಕೋಣಗಳಿಗೆ ‘ಜಯ’ ಮತ್ತು ‘ಗೋಪಾಲ’ ಎಂದು ಹೆಸರಿಟ್ಟಿದ್ದರು. ಇದರ ನಂತರವೇ ಕೋಣಗಳ ನಾಮಕರಣದ ಸಂಪ್ರದಾಯ ಆರಂಭವಾಗಿದ್ದು. ವಿಶೇಷವೆಂದರೆ 1965-66ರಲ್ಲಿ ಪುತ್ತೂರಿನಲ್ಲಿ ‘ಜಯ- ಗೋಪಾಲ’ ಹೆಸರಿನಲ್ಲಿ ಕಂಬಳವೂ ನಡೆದಿತ್ತು. ಕಂಬಳದ ಕರೆಗೆ ಕೋಣಗಳ ಹೆಸರಿಟ್ಟು ನಡೆದ ಏಕೈಕ ಕಂಬಳವಿದು.
ಇದನ್ನೂ ಓದಿ:ಕಂಬಳ ಕರೆಗೆ ಇಳಿದ ಬಾಲಕಿ : ಆರನೇ ತರಗತಿ ವಿದ್ಯಾರ್ಥಿನಿ ಚೈತ್ರಾಳ ಚಿತ್ತ ಕಂಬಳದತ್ತ!
ರಾಜ: 80ರ ದಶಕದಲ್ಲಿ ಕಾಡಬೆಟ್ಟುವಿನ ಕೋಣ ತನ್ನ ಓಟದ ಗೈರತ್ತಿನಿಂದ ಪ್ರಸಿದ್ಧಿ ಪಡೆದಿತ್ತು. ತಲೆಯನ್ನು ಒಂಚೂರು ಅಲುಗಾಡಿಸದೆ ಕಿರೀಟ ಹೊತ್ತಂತೆ ಓಡುವುದು ಇದರ ವಿಶೇಷತೆ. ಇದಕ್ಕಾಗಿ ಆ ಕೋಣಕ್ಕೆ ‘ರಾಜ’ ಎಂದು ಹೆಸರಿಡಲಾಯಿತು. 1980-84ರ ಸಮಯದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಹಲವಾರು ಪ್ರಶಸ್ತಿ ಗೆದ್ದುಕೊಂಡಿತ್ತು ಕಾಡಬೆಟ್ಟು ರಾಜ.
ನಾಗರಾಜ-ಚೆನ್ನ- ಮುಕೇಶ
ಕಂಬಳದ ಲೆಜಿಂಡ್ ಕೋಣಗಳ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ಬರುವ ಹೆಸರುಗಳು ನಾಗರಾಜ-ಚೆನ್ನ- ಮುಕೇಶ. ಇವುಗಳ ಹೆಸರಿನ ಹಿಂದೆಯೂ ಕಥೆಯಿದೆ. ನಾಗರ ಪಂಚಮಿಯ ದಿನ ಜನಿಸಿದ ಕೋಣಕ್ಕೆ ನಾಗರಾಜ ಎಂದು ಹೆಸರಿಡಲಾಯಿತು. ದಿ. ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಅವರ ಈ ನಾಗರಾಜನ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಂಚೆ ಚೀಟಿಯನ್ನೂ ಹೊರತಂದಿತ್ತು.
ವಿಡಿಯೋ ನೋಡಿ:‘ಕಾಲನ ಕರೆ’ಗೆ ಓಗೊಟ್ಟು ‘ಕಂಬಳದ ಕರೆ’ಯಿಂದ ಮರೆಯಾದ ‘ರಾಕೆಟ್ ಮೋಡ
ಕಂಬಳದ ಇತಿಹಾಸದಲ್ಲಿ ಅತೀ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡ ಕೋಣವೆಂದರೆ ಅದು ‘ಚೆನ್ನ’ ಆ ಹೆಸರು ಬರಲು ಕಾರಣ ಅದರ ಕೊಂಬು. ಅಗಲವಾಗಿ ಕಹಳೆ ಆಕೃತಿಯಲ್ಲಿರುವ ಕೊಂಬಿನ ಕೋಣಗಳು ಜಾಸ್ತಿ ವೇಗದಲ್ಲಿ ಓಡುವುದಿಲ್ಲ ಎಂಬ ಮಾತಿದೆ. ಆದರೆ ಇದೇ ಶೈಲಿಯ ಕೊಂಬು ಹೊಂದಿದ್ದ ಚೆನ್ನ ಈ ಮಾತುಗಳನ್ನು ಸುಳ್ಳಾಗಿಸಿದ್ದ. ಚೆನ್ನನಿಗೆ ಈ ಹೆಸರಿಟ್ಟಿದ್ದು ಕಡಂದಲೆ ಕಾಳು ಪಾಣರ.
ಕಾರ್ಕಳ ಎಕ್ಸ್ ಪ್ರೆಸ್ ಮುಕೇಶನ ಹೆಸರು ಬರಲು ಕಾರಣ ಅದರ ಮೂಗು. ಬಾಲ್ಯದಲ್ಲಿ ಅದರ ಮೂಗಿನ ಹೊಳ್ಳೆಯಲ್ಲಿ ಸಮಸ್ಯೆಯಿದ್ದ ಕಾರಣ ಪರಿಚಾರಕರು ಮೂಂಕೇಶ (ತುಳುವಿನಲ್ಲಿ ಮೂಂಕು ಎಂದರೆ ಮೂಗು) ಎಂದು ಕರೆಯುತ್ತಿದ್ದರು. ಅದೇ ಮುಂದೆ ಮುಕೇಶ ಎಂದಾಯಿತು.
ವಿಡಿಯೋ ನೋಡಿ: ಕಂಬಳದ ಕೋಣಗಳು ಓಟಕ್ಕೆ ಶೃಂಗಾರವಾಗಿ ಸಿದ್ಧಗೊಳ್ಳುವುದು ಹೇಗೆ ?
ರಾಕೆಟ್ ಬೊಳ್ಳ: ಕೋಣದ ವೇಗಕ್ಕಾಗಿ ಬಂದ ಹೆಸರಿದು. 1979ರ ಬಜಗೋಳಿ ದಶಮಾನೋತ್ಸವ ಕಂಬಳ ಕೂಟದಲ್ಲಿ ಮುಂಡ್ಕೂರು ಜಯರಾಮ ಶೆಟ್ಟಿಯವರ ಬೊಳ್ಳ ಕೋಣದ ವೇಗ ಕಂಡು ಅದಕ್ಕೆ ರಾಕೆಟ್ ಎಂದು ಕರೆಯಲಾಯಿತು. ಮುಂದೆ ಹಲವು ಕೋಣಗಳಿಗೆ ರಾಕೆಟ್ ಎಂದು ಕರೆದರೂ, ಮೊದಲು ಈ ಬಿರುದು ಪಡೆದಿದ್ದು ಮುಂಡ್ಕೂರಿನ ಬೊಳ್ಳ.
ಮನೆತನದ ಹೆಸರು: ಮನೆತನದ ಹೆಸರನ್ನೇ ಕೋಣಗಳಿಗೆ ಇಟ್ಟ ಎರಡು ಉದಾಹರಣೆಯಿದೆ. ಧೋನಿಮನೆಯಿಂದ ತಂದ ಕೋಣಕ್ಕೆ ಧೋನಿ ಎಂದು ಹೆಸರಿಟ್ಟರು. ಅದೇ ರೀತಿ ರೆಂಜಾಳ ಕುದ್ರಾಡಿಯಿಂದ ತಂದ ಕೋಣ ಕುದ್ರಾಡಿ ಎಂದೇ ಹೆಸರಾಯಿತು. ಸದ್ಯ ಇವೆರಡೂ ನೇಗಿಲು ಹಿರಿಯ ವಿಭಾಗದಲ್ಲಿ ಮಿಂಚುತ್ತಿವೆ.
ಕೀರ್ತನ್ ಶೆಟ್ಟಿ ಬೋಳ