Advertisement

ದಟ್ಟ ಕಾನನದೊಳಗೊಂದು ವಿಭೂತಿ ಜಲಪಾತ

10:13 PM Jun 12, 2021 | Team Udayavani |

ಕರ್ನಾಟಕದ ಕಾಶ್ಮೀರ, ಜಲಪಾತಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಶುರುವಾಯಿತು ಎಂದರೆ ಮುಗಿಯಿತು. ಅಲ್ಲಲ್ಲಿ ಸಣ್ಣ-ಪುಟ್ಟ ಜಲಧಾರೆಗಳು ಹುಟ್ಟಿಕೊಳ್ಳುತ್ತವೆ. ಹಾಗೂ ವರ್ಷದ ಹನ್ನೆರಡು ತಿಂಗಳು ಧುಮ್ಮುಕ್ಕುವ ದೊಡ್ಡ ಜಲಪಾತಗಳು ಜೀವ ಕಳೆ ಪಡೆದುಕೊಳ್ಳುತ್ತವೆ.

Advertisement

ಪ್ರಕೃತಿ ಸೌಂದರ್ಯವನ್ನು ಮಡಿಲಲ್ಲಿ ತುಂಬಿಕೊಂಡಿರುವ ಈ ಜಿಲ್ಲೆಯಲ್ಲಿ ಮಳೆಗಾಲ ಕಳೆಯುವುದೇ ಒಂದು ಅದ್ಬುತ ಅನುಭವ. ಇಲ್ಲಿಯ ಮಳೆಯಲಿ ನೆನೆಯುವುದೇ ಒಂದು ತಹರದ ಖುಷಿ. ಅದರಲ್ಲೂ ಚಿಕ್ಕ ಪುಟ್ಟ ನದಿ ತೊರೆಗಳಿದ್ದರಂತು ಮುಗಿದೇ ಹೋಯಿತು ಅದರ ಸೌಂದರ್ಯ ಸೊಬಗು ವೈಯ್ಯಾರಗಳನ್ನು ನೋಡುತ್ತಾ ದಿನ ಕಳೆಯುವುದೇ ನಮಗೆ ತಿಳಿಯುವುದಿಲ್ಲ ಅದರಲ್ಲೂ ತುಂಬಿ ಹರಿಯುವ ಜಲಪಾತಗಳಿದ್ದರೆ ನಮಗೆ ಇನ್ನಷ್ಟು ಆನಂದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಉತ್ತರ ಕನ್ನಡ (ಕಾರವಾರ) ಜಿಲ್ಲೆಯು ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಒಂದು ಕೊಂಕಣ ಜಿಲ್ಲೆಯಾಗಿದ್ದು ಮಲೆನಾಡು ಮತ್ತು ಸಹ್ಯಾದ್ರಿಗಳಿಗೆ ಹೊಂದಿಕೊಂಡು ತನ್ನ ಕಲೆ ಸಂಸ್ಕೃತಿ ಹಾಗೂ ಪ್ರವಾಸೋದ್ಯಮಗಳಿಂದ ಹೆಸರುವಾಸಿಯಾಗಿರುವ ಪ್ರದೇಶವಾಗಿದೆ. ಈ ಜಿಲ್ಲೆಯು ಕರ್ನಾಟಕದ ಕಾಶ್ಮೀರ ಎನ್ನುವ ಬಿರುದನ್ನು ಹೊಂದಿರುವುದರ ಜೊತೆಗೆ ಜಲಪಾತಗಳ ತವರು ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಪಶ್ಚಿಮ ಘಟ್ಟಗಳ ನಡುವೆ ಭವ್ಯ ಪರ್ವತ ಸಿರಿಗಳಲ್ಲಿ ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯು ಪ್ರವಾಸೋದ್ಯಮದ ದೃಷ್ಟಿಯಿಂದ ಹೆಚ್ಚಿನ ಮಹತ್ವವನ್ನು ಪಡೆದಿದ್ದು ಹಲವಾರು ಗಮ್ಯವಾದಂತಹ ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ನೋಡಬಹುದಾಗಿದೆ.  ಅದರಲ್ಲೂ ಮಳೆಗಾಲದಲ್ಲಿ ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೆ ಒಂದು ಹಬ್ಬ.  ಇಂದು ನಾವು ಪ್ರಸಿದ್ಧ ವಿಭೂತಿ ಫಾಲ್ಸ್ ಬಗ್ಗೆ ತಿಳಿದುಕೊಳ್ಳೋಣ.

ಪ್ರಕೃತಿಯೇ ಹಾಗೆ ನಮಗೆ ಅರಿವಿಲ್ಲದೇ ನಮ್ಮೊಳಗೆ ಬೆರೆತಿರುತ್ತದೆ. ತನ್ನ ಮಡಿಲಲ್ಲಿ ಅನೇಕ ಕೌತುಕುತೆಗಳನ್ನು ಇರಿಸಿ ಹೆಜ್ಜೆಹೆಜ್ಜೆಗೂ ವಿಸ್ಮಯವನ್ನು ಸೃಷ್ಟಿಸುತ್ತಾ ಅದರ ನಡುವೆಯೇ ನಮಗೆ ಬೇಕಾದ ಎಲ್ಲವನ್ನು ನೀಡಿ ನಮ್ಮನ್ನು ಪೋಷಿಸುವುದಲ್ಲದೇ ತನ್ನದೇ ಸೃಷ್ಟಿಯಿಂದ ನಮ್ಮನ್ನು ಇನ್ನಷ್ಟು ಚಕಿತಗೊಳಿಸುತ್ತದೆ. ಅದರಲ್ಲಿ ಈ ಜಲಪಾತಗಳು ಒಂದು. ಪ್ರವಾಸಿಗರಿಗೆ ರಸದೌತಣ ನೀಡುವ ಈ ಜಲಪಾತಗಳು ನೋಡುಗರನ್ನು ರೋಮಾಂಚನಗೊಳಿಸುವುದಂತೂ ಸುಳ್ಳಲ್ಲ.

ವಿಭೂತಿ ಜಲಪಾತ

Advertisement

ಉತ್ತರ ಕನ್ನಡ ಜಿಲ್ಲೆಯ ವಿಶೇಷವಾದ ಜಲಪಾತಗಳಲ್ಲಿ ಇದು ಒಂದು. ಇದು ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿದ್ದು ಇದನ್ನು ಸರ್ವಋತು ಜಲಪಾತ ಎಂತಲೂ ಕರೆಯುತ್ತಾರೆ. ವರ್ಷಪೂರ್ತಿ ಹರಿಯುವ ಈ ಜಲಪಾತವು ನಿಸರ್ಗದ ನಿಗೂಡತೆಯನ್ನು ತನ್ನಲ್ಲಿ ಇರಿಸಿಕೊಂಡಿದೆ. ಇಲ್ಲಿ ಅಪರೂಪದ ಸಸ್ಯಗಳು ಮತ್ತು ವಿಶೇಷ ಜೀವ ವೈವಿಧ್ಯತೆಯನ್ನು ನಾವು ಕಾಣಬಹುದಾಗಿದೆ. ಇದು ದಟ್ಟವಾದ ಕಾಡಾಗಿದ್ದು, ಇಲ್ಲಿ ಕೇವಲ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ, ಔಷಧಿ ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇದು ಯಾಣದಿಂದ ಸೂಮಾರು 10 ರಿಂದ 12 ಕಿಮೀ ದೂರದಲ್ಲಿದೆ.

ಜಲಪಾತವು ೩೦ ಅಡಿ ಎತ್ತರದಲ್ಲಿದ್ದು, ಹಚ್ಚಹಸಿರಿನ ಕಾಡು, ಬಿದಿರಿನ ತೋಪು ಹಾಗು ಕಾಡುಹೂವುಗಳು ಎಲ್ಲೆಡೆ ಇವೆ. ಇದಕ್ಕೆ ಹತ್ತಿರವಿರುವ ಸುಣ್ಣದ ಕಲ್ಲಿನ ಬಂಡೆಯಿಂದಾಗಿ ಈ ಜಲಪಾತಕ್ಕೆ ಅದರ ಹೆಸರು ಬಂದಿದೆ ಎಂಬುದು ಸ್ಥಳೀಯರ ನಂಬಿಕೆ. ಸುಣ್ಣದ ಕಲ್ಲಿನ ಬಂಡೆಯಲ್ಲದೆ ಇನ್ನೂ ಎರಡು ಬೃಹದಾಕಾರದ ಬಂಡೆಗಳು ಈ ಜಲಪಾತದ ಸಾನಿಧ್ಯದಲ್ಲಿವೆ. ಈ ಜಲಪಾತವನ್ನು  ತಲುಪಲು ಮುಖ್ಯ ಜಲಪಾತದಿಂದ ಸುಮಾರು 2 ಕಿಮೀ ಗಳಷ್ಟು  ಉದ್ದದ ಕಾಲುದಾರಿ ಇದೆ. ಅಲ್ಲದೆ ಪ್ರವಾಸಿಗರಿಗಾಗಿ ಕಾಡುದಾರಿ ಇದ್ದು,ಈ ಮಾರ್ಗದ  ಬಲಕ್ಕೆ ಹೊಲ ಹಾಗೂ ಎಡಕ್ಕೆ ಅರಣ್ಯವನ್ನು ಕಾಣಬಹುದು.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇನ್ನೂ ಹಲವಾರು ಚಿಕ್ಕ ಚಿಕ್ಕ ಜಲಪಾತಗಳಿದ್ದು ಮಳೆಗಾಲದಲ್ಲಿ ಮಾತ್ರ ಕೆಲವೊಂದು ಕಾಣಸಿಗುತ್ತವೆ. ಸಾಮಾನ್ಯವಾಗಿ ಈ ಎಲ್ಲಾ ಜಲಪಾತಗಳು ಕಾನನದೊಳಗಿರುವ ಕಾರಣ ಮಳೆಗಾಲದಲ್ಲಿ ಉಂಬಳದ ಕಾಟವಿರುತ್ತದೆ ಆದ ಕಾರಣ ತುಸು ಜಾಗರೂಕತೆಯಿಂದ ತೆರಳುವುದು ಒಳಿತು.

 

Advertisement

Udayavani is now on Telegram. Click here to join our channel and stay updated with the latest news.

Next