Advertisement
1. ಹಾರ್ಡ್‌ವರ್ಕ್‌ಗೂ, ಶ್ರಮದ ಕೆಲಸಕ್ಕೂ ವ್ಯತ್ಯಾಸವೇನು?– ಕಿರಣ್, ಹೊಳೆನರಸೀಪುರ
ಹಾರ್ಡ್‌ವರ್ಕ್‌ಗೆ ಕನ್ನಡದಲ್ಲಿ “ಕಷ್ಟದ ಕೆಲಸ’ ಅನ್ನುತ್ತಾರೆ. ಕೆಲವರು “ಶ್ರಮ’ದ ಕೆಲಸ ಎಂದೂ ಹೇಳುತ್ತಾರೆ. ಆದರೆ, “ಶ್ರಮ’ದಲ್ಲಿ ಆಸಕ್ತಿ ಇರುತ್ತದೆ, ಮಾಡಬೇಕೆಂಬ ತುಡಿತವಿರುತ್ತದೆ. ಕಷ್ಟದ ಕೆಲಸದಲ್ಲಿ ಅದು ಇರುವುದಿಲ್ಲ. ಆದ್ದರಿಂದ “ಹಾರ್ಡ್‌ವರ್ಕ್ ಮಾಡಿ ಓದುತ್ತಿದ್ದೇವೆ’ ಎಂಬ ವಿದ್ಯಾರ್ಥಿಗಳ ಭಾವನೆಯನ್ನು ಕಡಿಮೆ ಮಾಡಬೇಕು.
Related Articles
– – –
2. ಜಾnನ ಎಂದರೇನು? ನಾಲೆಡ್ಜ್ ಮತ್ತು ಬುದ್ಧಿಶಕ್ತಿ ಬೇರೆ ಬೇರೆಯೇನು? ಅವುಗಳ ನಡುವಿನ ಸಂಬಂಧವೇನು?
– ಅನನ್ಯಾ ಭಟ್, ಸಾಗರ
ಈ ಹೊತ್ತು ನಮಗೆ ಯಾವುದು ಜ್ಞಾಪಕ ಇರುತ್ತದೆಯೋ ಅದು ನಮ್ಮ ನಾಲೆಡ್ಜ್. ಅದನ್ನು ಸೂಕ್ತವಾಗಿ ಬಳಸುವುದು “ಬುದ್ಧಿಶಕ್ತಿ’. ಮಗನ ಮಗನನ್ನು ಮೊಮ್ಮಗ ಅನ್ನುತ್ತಾರೆ, ತಂದೆಯ ತಂದೆಯನ್ನು ತಾತ ಅನ್ನುತ್ತಾರೆ ಎಂದು ತಿಳಿದಿರುವುದು ನಾಲೆಡ್ಜ್. “ನಿಮ್ಮ ತಂದೆಯ ತಂದೆಗೆ ನಿಮ್ಮ ತಾತನ ಮಗ ಏನಾಗುತ್ತಾನೆ?’ ಎಂದು ಕೇಳಿದರೆ ಉತ್ತರಿಸುವುದು ಬುದ್ಧಿವಂತಿಕೆ. ಪಾಂಡಿತ್ಯ, ಅನುಭವ ಬೆರೆತು ಪಕ್ವವಾದರೆ ಅದು ಜ್ಞಾನ. ಇವುಗಳೊಂದಿಗೆ ಪ್ರತಿಸ್ಪಂದನೆ, ಸಮಯಸ್ಫೂರ್ತಿ, ತರ್ಕ (ಲಾಜಿಕ್), ಪರಿಶೀಲನೆ, ಹಾಗೂ ಹೊಸ ರೀತಿಯ ಆಲೋಚನೆ ಇವೆಲ್ಲ ಜ್ಞಾನ ಎಂಬ ಮಹಾವೃಕ್ಷದ ಭಾಗಗಳೇ. ಬಿಡಿಯಾಗಿದ್ದರೆ ಯಾವುದಕ್ಕೂ ಬೆಲೆ ಇರುವುದಿಲ್ಲ.
– – –
3. ಓದುವಾಗ ಏಕಾಗ್ರತೆಯೇ ಇರುವುದಿಲ್ಲ. ಏಕಾಗ್ರತೆ ಬರಲು ಏನು ಮಾಡಬೇಕು?
– ರಿಜ್ವಾನ್, ಉಳ್ಳಾಲ
ಓದಿನ ಕಡೆ ಗಮನ ಇಲ್ಲದಿರುವುದಕ್ಕೆ ಅನೇಕ ಕಾರಣಗಳಿರುತ್ತವೆ. ಬಡತನ, ಪ್ರೇಮ ವೈಫಲ್ಯ, ಮನೆಯ ಜಗಳಗಳು… ಇಂಥ ಅನೇಕ ಕಾರಣಗಳನ್ನು ಹುಡುಕಿಕೊಳ್ಳಬಹುದು. ಆದರೆ, ಅಂಥವರ ಪಟ್ಟಿಗೆ ನೀವು ಸೇರಬೇಡಿ. ಏಕೆಂದರೆ, ಸಾಧನೆ ಸಾಧ್ಯವಾಗದಿದ್ದುದಕ್ಕೆ ನೆಪಗಳನ್ನು ಹುಡುಕಿಕೊಂಡು ನಮಗೆ ನಾವೇ ಸಮಜಾಯಿಷಿ ಕೊಟ್ಟುಕೊಳ್ಳಬಾರದು. ನೆಪಗಳನ್ನು ಹೊರತುಪಡಿಸಿ ಏಕಾಗ್ರತೆ ಇಲ್ಲದಿರುವುದಕ್ಕೆ ಎರಡು ಕಾರಣಗಳನ್ನು ಗಮನಿಸಬಹುದು.
Advertisement
ಅ) ನೋ ಇಂಟರೆಸ್ಟ್: ಇಂಟರೆಸ್ಟ್ ಇಲ್ಲದ ಜಾಗದಲ್ಲಿ ಏಕಾಗ್ರತೆ ಇರುವುದಿಲ್ಲ. ಪ್ರಾಥಮಿಕ ಹಂತದಲ್ಲಿಯೇ ಪಾಠಗಳನ್ನು ಕೇಳದಿದ್ದರೆ ಮುಂದಿನ ತರಗತಿಗಳೆಲ್ಲವೂ ಅರ್ಥವಾಗದೇ ಹೋಗುತ್ತದೆ. ತಳಪಾಯವೇ ಸರಿ ಇಲ್ಲದಿದ್ದರೆ ಕಟ್ಟಡ ಉರುಳದೇ ಇದ್ದೀತೇ? ಹೀಗಾಗಿ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಕಳೆದುಕೊಳ್ಳುತ್ತಾರೆ. ಅದಕ್ಕಾಗಿ ತರಗತಿಯ ಪ್ರಾರಂಭದಲ್ಲಿ ಗುರುಗಳು ಹೇಳಿಕೊಡುವ ಫಂಡಮೆಂಟಲ್‌ಗಳನ್ನು ಕಲಿತುಕೊಂಡರೆ ಆಸಕ್ತಿ ಬೆಳೆಯುವುದಷ್ಟೇ ಅಲ್ಲ, ಏಕಾಗ್ರತೆಯೂ ಸಾಧ್ಯವಾಗುತ್ತದೆ.
ಆ) ಅದರ್ ಇಂಟರೆಸ್ಟ್: ಓದಿನ ಕಡೆಗೆ ಇಂಟೆರೆಸ್ಟ್ ಇದ್ದರೂ, ಅದಕ್ಕಿಂತ ಹೆಚ್ಚಿನ ಆಸಕ್ತಿ ಇತರೆ ಸಂಗತಿಗಳ ಮೇಲಿದ್ದಾಗ ಓದಿನಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳುತ್ತಾರೆ. ಅದರಲ್ಲೂ ಈಗಿನ ಕಾಲದಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಚಂಚಲಗೊಳಿಸಲು ಬಹಳಷ್ಟು ವಿಷಯಗಳಿವೆ. ಟಿ.ವಿ., ಸ್ಮಾರ್ಟ್‌ಫೋನುಗಳು, ಕಂಪ್ಯೂಟರ್, ವಿಡಿಯೋಗೇಮುಗಳು ಇತ್ಯಾದಿ. ಇವು ನಮ್ಮ ಗುರಿಯತ್ತ ಸಾಗಲು ಅಡ್ಡಿಯಾಗುತ್ತವೆ. ದುರಾದೃಷ್ಟವೆಂದರೆ “ಉಪಯುಕ್ತ’ ವಿಚಾರಗಳಿಗಿಂತ ಹಾನಿ ಮಾಡುವ “ಪ್ರಲೋಭನೆ’ಗಳು ಮನಸ್ಸಿಗೆ ಹೆಚ್ಚು ಸಂತೋಷವನ್ನು ಕೊಡುತ್ತವೆ. ವಿದ್ಯೆ ಬದಲು ಟಿ.ವಿ., ಮನೆ ಅಡುಗೆಯ ಬದಲು ಕುರುಕಲು ತಿಂಡಿ, ಎಳನೀರಿನ ಬದಲು ಸೋಡಾ. ಹೀಗೆ ಎಷ್ಟು ಉದಾಹರಣೆಗಳನ್ನು ಬೇಕಾದರೂ ಕೊಡುತ್ತಾ ಹೋಗಬಹುದು. ಕ್ಷಣಿಕ ಆನಂದವನ್ನು ಕೊಡುವ ವಿಷಯಗಳತ್ತ ಗಮನ ಕಡಿಮೆ ಮಾಡಿದರೆ, ತನ್ನಿಂದ ತಾನೇ ಅಗತ್ಯ ವಿಷಯಗಳ ಕುರಿತು ಆಸಕ್ತಿ ಬೆಳೆಯುತ್ತದೆ.– – –
4. ನಾನು ಶ್ರದ್ಧೆಯಿಂದಲೇ ಓದುತ್ತೇನೆ. ಆದರೆ, ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ. ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯಾವುದಾದರೂ ಮಾರ್ಗವನ್ನು ಸೂಚಿಸಿ.
– ಶರಣಪ್ಪ ತಂಗಡಗಿ, ಯಾದಗಿರಿ
ದೈಹಿಕವಾಗಿ ನೆನಪಿಗೆ ಶಕ್ತಿಗೆ ಸಂಬಂಧಿಸಿದ ಕಾಯಿಲೆಗಳು ಇಲ್ಲದಿದ್ದರೆ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವೇ ಇಲ್ಲ. ಏಕೆಂದರೆ, ಸಾಮಾನ್ಯವಾಗಿ ನೆನಪಿನ ಶಕ್ತಿ ಅನ್ನೋದು ಒಬ್ಬರಲ್ಲಿ ಹೆಚ್ಚು, ಇನ್ನೊಬ್ಬರಲ್ಲಿ ಕಡಿಮೆ ಅಂತ ಇರುವುದಿಲ್ಲ. ಸಮಪ್ರಮಾಣದಲ್ಲಿಯೇ ಇರುತ್ತೆ. ಸಮಸ್ಯೆ ಎಂದರೆ ಯಾವೆಲ್ಲಾ ವಿಚಾರಗಳಿಗೆ ಆ ನೆನಪಿನ ಶಕ್ತಿ ಬಳಕೆಯಾಗುತ್ತಿದೆ ಎಂಬುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಯನ್ನು ಪಠ್ಯವನ್ನು ಹೊರತುಪಡಿಸಿ ಆತನಿಗೆ ಆಸಕ್ತಿಯಿರುವ ಕ್ಷೇತ್ರದ ಪ್ರಶ್ನೆಗಳನ್ನು ಕೇಳಿ. ಯಾವ ಸಿನಿಮಾ ತಾರೆ ಯಾರನ್ನು ಮದುವೆಯಾದಳು? ಮುಂದಿನ ವಾರ ಯಾವ ಸಿನಿಮಾ ಬಿಡುಗಡೆಯಾಗುತ್ತಿದೆ? ಹಿಂದಿನ ದಿನದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎಷ್ಟು ರನ್ನುಗಳನ್ನು ಹೊಡೆದ? ಯಾವ ಮಂತ್ರಿ ಯಾವ ಹಗರಣದಲ್ಲಿ ಸಿಕ್ಕಿಬಿದ್ದರು? ಇಂಥ ಪ್ರಶ್ನೆಗಳಿಗೆ ಆತ ಆರಾಮಾಗಿ ಉತ್ತರ ಕೊಡಬಲ್ಲ. ಆದರೆ, ತರಗತಿಯಲ್ಲಿ ನೆನ್ನೆ ಯಾವ ಪಾಠ ಮಾಡಿದರು? ನೆನ್ನೆ ತರಗತಿಯಲ್ಲಿ ಟೀಚರ್ ಹೇಳಿಕೊಟ್ಟ ಗಣಿತದ ಲೆಕ್ಕವನ್ನು ಬಿಡಿಸುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಆತನಲ್ಲಿ ಉತ್ತರ ಸಿಗಲಿಕ್ಕಿಲ್ಲ. ಇದರರ್ಥ ಆತನಿಗೆ ನೆನಪಿನ ಶಕ್ತಿ ಇಲ್ಲ ಎಂದಲ್ಲ. ಆತನಿಗೆ “ಅನಾಲಿಸಿಸ್ ಆಫ್ ಆಟಂ’ ನೆನಪಿಲ್ಲದೇ ಇರಬಹುದು, ಆದರೆ ಭಾರತ ಕ್ರಿಕೆಟ್ ತಂಡದ ಸ್ಕೋರ್ ಶೀಟ್ ಬಾಯಿಪಾಠವಿರುತ್ತದೆ. ಇದು ಹೇಗೆ ಸಾಧ್ಯ? ಇತರೆ ವಿಷಯಗಳತ್ತ ಗಮನಹರಿಸುವುದನ್ನು ಕಡಿಮೆ ಮಾಡಿದರೆ, ಪಠ್ಯಪುಸ್ತಕದ ವಿಚಾರಗಳು ನೆನಪಿನಲ್ಲಿ ಉಳಿಯುತ್ತವೆ. ಸಿನಿಮಾ- ಟಿ.ವಿ. ನೋಡುವುದನ್ನು ಕಡಿಮೆ ಮಾಡಿರಿ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿದಿನ ರಾತ್ರಿ ಮಲಗುವ ಮೊದಲು ಹತ್ತು ನಿಮಿಷ ಬೆಳಗ್ಗಿಂದ ಅಭ್ಯಾಸ ಮಾಡಿದ್ದನ್ನು ನೆನಪು ಮಾಡಿಕೊಳ್ಳಿ. ಮಲಗುವ ಮುನ್ನ ಯಾರೊಂದಿಗೂ ಹೆಚ್ಚಿಗೆ ಮಾತಾಡಬೇಡಿ. ಓದಿನ ಗುಂಗಿನಲ್ಲಿಯೇ ಮಲಗಿ. ಬೆಳಗ್ಗೆ ಐದು ಗಂಟೆಗೆ ಎದ್ದು ಓದಿರಿ. ಸ್ನೇಹಿತರೊಂದಿಗೆ ಪಠ್ಯೇತರ ವಿಚಾರಗಳ ಕುರಿತು ಹರಟೆ ಹೊಡೆಯುವುದನ್ನು ಕಡಿಮೆ ಮಾಡಿ.