Advertisement
ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಜಿಲ್ಲೆಯ ಇಬ್ಬರು ನಾಯಕರಿಗೆ ಬಂಪರ್ ಖಾತೆ ದೊರೆತಿವೆ. ಮುಖ್ಯವಾಗಿ ಜಿಲ್ಲೆಗೆ ಆಗಲೇಬೇಕಾದ ಪ್ರಮುಖ ಯೋಜನೆಗಳಿಗೆ ವೇಗ ದೊರೆಯಲಿದೆ ಎಂಬ ಆಶಾಭಾವನೆ ಇಮ್ಮಡಿಗೊಳಿಸಿದೆ.
Related Articles
Advertisement
ಅನುದಾನದ ಲಭ್ಯತೆ ಸಿಗಲಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ, ಪುನರ್‌ವಸತಿ ಕೇಂದ್ರ ಹಾಗೂ 9 ನೀರಾವರಿ ಉಪ ಯೋಜನೆಗಳು ಪೂರ್ಣಗೊಳ್ಳಲು ಕನಿಷ್ಠ 1 ಲಕ್ಷ ಕೋಟಿ ಅನುದಾನ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ರಾಜ್ಯ ಸರ್ಕಾರದ ಒಂದು ವರ್ಷದ ಬಜೆಟ್ ಹಣ, ಈ ಯೋಜನೆಗೆ ತೆಗೆದಿಡಬೇಕು. ಆದರೆ, ಅದು ಒಂದೇ ವರ್ಷದಲ್ಲಿ ಸಾಧ್ಯವಿಲ್ಲ. ಹೀಗಾಗಿ ಕನಿಷ್ಠ 5 ವರ್ಷಗಳ ನಿಗದಿತ ಕಾರ್ಯ ಯೋಜನೆ ರೂಪಿಸಿ, ಪ್ರತಿವರ್ಷವೂ 25 ಸಾವಿರ ಕೋಟಿ ಅನುದಾನ ನೀಡಿದರೆ, ಈ ಯೋಜನೆ ಪೂರ್ಣಗೊಳ್ಳಲು ಸಾಧ್ಯ ಎಂಬ ಒತ್ತಾಯ ಕೇಳಿ ಬಂದಿದೆ.
ಕಳೆದ 2019ರಿಂದ ಇಲ್ಲಿಯ ವರೆಗೆ ಕೊರೊನಾ, ಪ್ರವಾಹದಿಂದ ಆರ್ಥಿಕ ಸ್ಥಿತಿಗತಿ ಸರಿಯಾಗಿಲ್ಲ. ಹೀಗಾಗಿ ಯಾವುದೇ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರ ಆದೇಶಗಳ ಪಾಲನೆಯಾಗಿಲ್ಲ. ಹೀಗಾಗಿ ಸರ್ಕಾರವೇ, ಭೂಸ್ವಾಧೀನ ಪ್ರಕ್ರಿಯೆ ನಿಧಾನಗೊಳಿಸಿದೆ. ಕೋರ್ಟ ಮೆಟ್ಟಿಲೇರಿದ ಕೇಸ್‌ಗಳನ್ನು ಇನ್ನೂ ಕೆಲ ತಿಂಗಳು ಕಾಲ ಮುಂದೂಡಲು ಮನವಿ ಮಾಡಿದೆ. ಹೀಗಾಗಿ ಸಧ್ಯದ ಪರಿಸ್ಥಿತಿಯಲ್ಲಿ ರೈತರಿಗೆ ಭೂ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಸರ್ಕಾರ, ಈ ವರ್ಷ ರೈತರಿಗೆ ನೀಡಲಿರುವ ಪರಿಹಾರಧನ ಅನುದಾನ ಒದಗಿಸಬೇಕಿದೆ.
ಸೂಕ್ತ ದರ ನಿಗದಿಯಾಗಲಿ: ಆಲಮಟ್ಟಿ ಜಲಾಶಯದ ಎತ್ತರದಿಂದ ಮುಳುಗಡೆಯಾಗುವ, ಕಾಲುವೆ, ಇತರೆ ಯೋಜನೆಗೆ ಭೂಸ್ವಾಧೀನಗೊಳ್ಳುವ ಭೂಮಿಗೆ ಇನ್ನೂ ಪರಿಹಾರ ನಿಗದಿಯಾಗಿಲ್ಲ. ಹೊಸ ಭೂಸ್ವಾಧೀನ ಕಾಯ್ದೆಯಡಿ ನಗರ ಮತ್ತು ಗ್ರಾಮೀಣ ಭಾಗಕ್ಕೆ 2 ಮತ್ತು ನಾಲ್ಕು ಪಟ್ಟು ಪರಿಹಾರ ನೀಡಿದರೂ, ಅದು ಎಕರೆಗೆ 10 ಲಕ್ಷ ದಾಟುವುದಿಲ್ಲ. ಇದಕ್ಕೆ ಕಾರಣ, ಭೂ ನೊಂದಣಿ ಬೆಲೆ ಏರಿಕೆ ಮಾಡದೇ ಇರುವುದು, ಇನ್ನೊಂದೆಡೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಾಯಿಸಿದ ಬೆಲೆಗೆ ಎರಡು ಪಟ್ಟು ಪರಿಹಾರ ನೀಡಲಾಗುತ್ತಿದೆ. ಯಾವುದೇ ಭಾಗದಲ್ಲಿ ಖರೀದಿ ಮಾಡಿದ ವಾಸ್ತವ ಬೆಲೆಗಿಂತ ಕಡಿಮೆ ಹಣ ನಮೂದಿಸಲಾಗುತ್ತದೆ ಎಂಬುದು ಸ್ವತಃ ಸಚಿವರು, ಅಧಿಕಾರಿಗಳಿಗೂ ಗೊತ್ತು. ಹೀಗಾಗಿ ಯುಕೆಪಿ ವಿಶೇಷ ಪ್ರಕರಣವೆಂದು ಪರಿಗಣಿಸಿ, ನೀರಾವರಿ ಮತ್ತು ಖುಷ್ಕಿ ಭೂಮಿಗೆ ಬೆಲೆ ನಿಗದಿ ಮಾಡಬೇಕು ಎಂಬ ಕೂಗು ಇನ್ನೂ ಹಾಗೆಯೇ ಉಳಿದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯವರೇ ಆದ ಗೋವಿಂದ ಕಾರಜೋಳರು, ಜಲ ಸಂಪನ್ಮೂಲ ಖಾತೆ ವಹಿಸಿಕೊಂಡಿದ್ದು, ಅವರಿಂದಲೇ ಈ ಬೆಲೆ ನಿಗದಿ ಕಾರ್ಯವಾಗಲಿ ಎಂಬುದು ಜಿಲ್ಲೆಯ ರೈತರ ಒಕ್ಕೋರಲ ಒತ್ತಾಯ.
ನಿರಾಣಿಗೆ ಕೈಗಾರಿಕೆ: ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ, ವಿಶ್ವ ಬಂಡವಾಳ ಹೂಡಿಕೆ ಸಮಾವೇಶದ ಮೂಲಕ ಇಡೀ ವಿಶ್ವದ ಬಂಡವಾಳ ಹೂಡಿಕೆದಾರರನ್ನು ಕರ್ನಾಟಕದತ್ತ ಕರೆಸಿ, ಗಮನಾರ್ಹ ಕೆಲಸ ಮಾಡಿದ್ದ ಮುರುಗೇಶ ನಿರಾಣಿ ಅವರಿಗೆ ಈಗ ಮತ್ತೆ ಅದೇ ಖಾತೆ ದೊರೆತಿದೆ. ಹಿಂದೆ ಅವರು ಕೈಗಾರಿಕೆ ಸಚಿವರಾಗಿದ್ದ ವೇಳೆ ಜಿಲ್ಲೆ ಹಾಗೂ ಉತ್ತರಕರ್ನಾಟಕಕ್ಕೆ ಹಲವು ಕಾರ್ಖಾನೆ ತರುವ ಪ್ರಯತ್ನ ಮಾಡಿದ್ದರು. ಕೆಲವರು ವಿರೋಧ ಮಾಡಿದರೆ ಹೊರತು, ರೈತರ ಮನವೊಲಿಸಿ, ಜಿಲ್ಲೆಗೆ ಬೃಹತ್ ಕೈಗಾರಿಕೆ ತರುವ ನಿಟ್ಟಿನಲ್ಲಿ ಪಕ್ಷಾತೀತ ಕೆಲಸವಾಗಲಿಲ್ಲ. ಈಗಲಾದರೂ ಕೊರೊನಾ- ಪ್ರವಾಹದಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ಜನರಿಗೆ ಉದ್ಯೋಗ-ಆರ್ಥಿಕ ಭದ್ರತೆ ದೊರೆಯುವ ನಿಟ್ಟಿನಲ್ಲಿ ಜಿಲ್ಲೆಗೆ ಅಗತ್ಯ ಹಾಗೂ ಸೂಕ್ತ ಕೈಗಾರಿಕೆಗಳು ಬರಲಿ ಎಂಬುದು ಪ್ರಜ್ಞಾವಂತರ ಒತ್ತಾಯ.
ಒಟ್ಟಾರೆ, ಜಿಲ್ಲೆಗೆ ಬೊಮ್ಮಾಯಿ ಸರ್ಕಾರದಲ್ಲಿ ಎರಡು ಪ್ರಮುಖ ಖಾತೆಗಳು ದೊರೆತಿವೆ. ವಿರೋಧ ಪಕ್ಷದಲ್ಲೂ ಎರಡೂ ಸದನದ ನಾಯಕರ ಸ್ಥಾನ ಇದೇ ಜಿಲ್ಲೆಗೆ ಒದಗಿವೆ. ಇದೀಗ ಜಿಲ್ಲೆಯ ನಾಯಕರು, ಸಮಗ್ರ ಅಭಿವೃದ್ಧಿ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತ ಕೆಲಸ ಮಾಡಿ, ರಾಜ್ಯಕ್ಕೆ ಮಾದರಿಯಾಗಬೇಕಿದೆ.