Advertisement

ರೈತರಲ್ಲಿ ಸ್ವಾಭಿಮಾನ ಉಕ್ಕಿಸಿದ್ದ ಪಾಟೀಲ ಬಾಬಾ

08:49 PM May 22, 2021 | Team Udayavani |

ವರದಿ : ಬಸವರಾಜ ಹೊಂಗಲ್‌

Advertisement

ಧಾರವಾಡ: ಹಳ್ಳಿಗಳಲ್ಲಿ ಭ್ರಷ್ಟ ರಾಜಕಾರಣಿಗಳಿಗೆ ರೈತ ಸಂಘದ ಒಪ್ಪಿಗೆ ಇಲ್ಲದೇ ಪ್ರವೇಶವಿಲ್ಲ, ರೈತರು ಒಪ್ಪಿದರೆ ಮಾತ್ರ ಹಳ್ಳಿಯಲ್ಲಿ ಚುನಾವಣೆ ಪ್ರಚಾರಕ್ಕೆ ಅವಕಾಶ, ಅಧಿಕಾರಿಗಳು ಯಾರೇ ಆದರೂ ಸರಿ ಮೊದಲು ಸರ್ಕಾರಿ ಕಚೇರಿಗಳಲ್ಲಿ ರೈತರಿಗೆ ತಮ್ಮ ಖುರ್ಚಿಗಳನ್ನಾದರೂ ಸರಿ ಬಿಟ್ಟುಕೊಟ್ಟು ಆಮೇಲೆ ಸಮಸ್ಯೆ ಆಲಿಸಬೇಕು. ನಾವು ಸಾಲ ತುಂಬುವುದಿಲ್ಲ, ಬ್ಯಾಂಕ್‌ ನಮ್ಮದೇ. ನೀವು ಅಲ್ಲಿ ಕಾರ್ಮಿಕರು ಅಷ್ಟೇ.. ಅಧಿಕಾರಶಾಹಿ ಮತ್ತು ರಾಜಕಾರಣಿಗಳ ಎದುರು ಕೈ ಕಟ್ಟಿ ಕುಳಿತುಕೊಳ್ಳುತ್ತಿದ್ದ ರೈತ ಸಮುದಾಯ ಬಡಿದೆಬ್ಬಿಸಿ ಅವರಿಗೆ ಸ್ವಾಭಿಮಾನದ ಬದುಕನ್ನು ಮೊಟ್ಟಮೊದಲ ಬಾರಿಗೆ ಹೇಳಿಕೊಟ್ಟವರು ರೈತ ನಾಯಕ ಅಪ್ಪಟ ಮಣ್ಣಿನ ಮಗ ಬಾಗೇವಾಡಿಯ ಬಾಬಾಗೌಡ ಪಾಟೀಲರು.

ಹೌದು, ಅದು ನವಲಗುಂದ ಮತ್ತು ನರಗುಂದ ಬಂಡಾಯ. ಇನ್ನೂ ಎಲ್ಲ ರೈತರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಅಚ್ಚೊತ್ತಿ ನಿಂತಿತ್ತು. ಹೆಚ್ಚು ಬೆಳೆ ಬೆಳೆಯುವ ತವಕದಲ್ಲಿದ್ದ ರೈತರು ಹೊಲಗಳಲ್ಲಿ ಬೋರ್‌ವೆಲ್‌ ಕೊರೆಸಿ ಸಾಲ ಮಾಡಿಕೊಂಡಿದ್ದರು. ಬೆಳೆ ಬೆಳೆಯಲು ಸಾಲ ಮಾಡಿದ್ದರು. ಬರಗಾಲ ಬಿದ್ದಾಗ ಸಾಲ ಮರುಪಾವತಿಸದೇ ಒದ್ದಾಡುತ್ತಿದ್ದರು. ಒಟ್ಟಿನಲ್ಲಿ ರೈತರು ಸಂಕಷ್ಟದಲ್ಲಿದ್ದರು. ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಹಳ್ಳಿ ಹಳ್ಳಿಗಳನ್ನು ಸುತ್ತಾಡಿ ರೈತರಲ್ಲಿ ಒಗ್ಗಟ್ಟು ಮೂಡಿಸಿ ಅವರೆಲ್ಲರಿಗೂ ಆತ್ಮವಿಶ್ವಾಸ ತುಂಬಿ ಮುನ್ನಡೆಸುವುದಕ್ಕೆ ಒಂದು ಸಂಘಟನೆ ಬೇಕಾಗಿತ್ತು. ಇದನ್ನೇ ಬಳಸಿಕೊಂಡು ರೈತ ಸಂಕುಲದ ಪ್ರತಿನಿಧಿಯಾಗಿ ಮೇಲೆದ್ದು ಬಂದವರು ಬಾಬಾಗೌಡ.

ಮಾತಿನ ಚಾಟಿ: ಬಾಬಾಗೌಡ ಪಾಟೀಲರು ಹೆಸರಾಗಿದ್ದೇ ಅವರಲ್ಲಿನ ಮಾತಿನ ಚಾಟಿಯ ಏಟುಗಳಿಂದ. ಹಳ್ಳಿಗರ ಮನಸ್ಸಿನಲ್ಲಿ ಅವರು ಮನೆ ಮಾಡಿದ್ದೇ ಅವರ ಮಾತಿನ ಕಲೆಯಿಂದ. 1980ರ ದಶಕದಲ್ಲಿ ಯಾವುದೇ ಮಾಧ್ಯಮಗಳೇ ಇಲ್ಲದ ಸಂದರ್ಭದಲ್ಲಿ ದಟ್ಟ ದರಿದ್ರ ಹಳ್ಳಿಯ ಸ್ಥಿತಿಗಳ ಮಧ್ಯೆ ನಿಂತು ಭಾಷಣ ಮಾಡಿ ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಕಲೆ ಅವರಿಗೆ ಕರಗತವಾಗಿ ಬಿಟ್ಟಿತ್ತು. ಸರ್ಕಾರಗಳ ಬಗ್ಗೆ ಹೇಳುತ್ತಿದ್ದ ಜೋಕುಗಳು ಮತ್ತು ವ್ಯಂಗ್ಯಭರಿತ ಭಾಷಣಗಳೇ ಆಳುವ ಸರ್ಕಾರ ಮತ್ತು ಅಧಿಕಾರಶಾಹಿ ವಿರುದ್ಧ ರೈತರು ಹುಚ್ಚೆದ್ದು ಸಂಘಟಿತರಾಗುವಂತೆ ಮಾಡಿತು. ಕಾಂಗ್ರೆಸ್‌, ಬಿಜೆಪಿ, ಜನತಾದಳ ಸೇರಿದಂತೆ ಎಲ್ಲ ಪಕ್ಷಗಳ ವಿರುದ್ಧ ನಿರರ್ಗಳವಾಗಿ ಬಾಬಾಗೌಡ ಪಾಟೀಲ ಅವರು ಮಾತನಾಡುವ ಶೈಲಿಯೇ ರೈತರನ್ನು ರೈತ ಸಂಘದತ್ತ ಸೆಳೆದುಕೊಂಡಿತ್ತು. ಅವರು ಮಾತಿಗೆ ನಿಂತರೆ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಯೇ ಆಗುತ್ತಿತ್ತು.

ಧಾರವಾಡದ ತಕ್ಕಡಿ ನಂಟು: ಬಾಬಾಗೌಡ ಪಾಟೀಲರು 1989ರ ವಿಧಾನಸಭಾ ಚುನಾವಣೆಯಲ್ಲಿ ಮೊದಲು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿದರು. ಜೊತೆಗೆ ಕಿತ್ತೂರು ಕ್ಷೇತ್ರದಿಂದಲೂ ಕಣದಲ್ಲಿದ್ದರು. ಎರಡೂ ಕ್ಷೇತ್ರಗಳಲ್ಲಿಯೂ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದರು.ಆಗ ಅವರ ಗುರುತು ತಕ್ಕಡಿ. ಹೈಕಮಾಂಡ್‌ ಸಂಸ್ಕೃತಿ, ಹಳ್ಳಿಹಳ್ಳಿಗಳಲ್ಲಿ ಕಟ್ಟರ್‌ ಅಭಿಮಾನಿಗಳು ಇರುವ ಅತೀ ದೊಡ್ಡ ಪಕ್ಷ ಕಾಂಗ್ರೆಸ್‌ ಅನ್ನು ಅತ್ಯಂತ ಹೆಚ್ಚಿನ ಮತಗಳ ಅಂತರರಿಂದ ಸೋಲಿಸಿದ ಕೀರ್ತಿ ಬಾಬಾಗೌಡರಿಗೆ ಸಲ್ಲುತ್ತದೆ. ಕೊನೆಗೆ ಅವರು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಪ್ರೊ| ಎಂ.ಡಿ. ನಂಜುಂಡಸ್ವಾಮಿ ಅವರನ್ನು ನಿಲ್ಲಿಸಿ ಉಪ ಚುನಾವಣೆಯಲ್ಲಿ ಅವರನ್ನೇ ಗೆಲ್ಲಿಸಿಕೊಂಡು ಬಂದರು.

Advertisement

ಹಸಿರು ಟವಲ್‌: ರೈತರಿಗೆ ಒಂದು ಸಾಮಾಜಿಕ ಒಗ್ಗಟ್ಟಿನ ಸಂಕೇತ ರೂಪಿಸಲು ಬಾಬಾಗೌಡ ಪಾಟೀಲರು ಬಳಸಿಕೊಂಡಿದ್ದ ಒಂದು ದೊಡ್ಡ ಅಸ್ತ್ರ ನಿಜಕ್ಕೂ ಅವರಲ್ಲಿನ ಸಂವಹನ ಕಲೆಗೆ ಸಾಕ್ಷಿಯಾಗಿ ನಿಂತಿದೆ. ಇಂದಿಗೂ ಹಳ್ಳಿಗಳಲ್ಲಿ ರೈತರ ಸಂಕೇತವಾಗಿ ನಿಂತಿದ್ದು ಹಸಿರು ಟವೆಲ್‌. ಒಂದು ಹಸಿರು ಟವೆಲ್‌ ನ್ನು ಮೇಲೆತ್ತಿ ತಿರುಗಿಸಿದರೆ ಸೇರಿದ್ದ ಸಹಸ್ರ ಸಹಸ್ರ ರೈತರ ಮೈಯಲ್ಲಿ ರೋಮಾಂಚನವಾಗುತ್ತಿತ್ತು. ಅದೂ ಅಲ್ಲದೇ ಅಧಿಕಾರಿಗಳಿಂದ ಕೆಲಸ ಮಾಡಿದಲು ಹಸಿರು ಟವೆಲ್‌ ಅಸ್ತ್ರವಾಗಿತ್ತು. ರೈತ ಸ್ವಾಭಿಮಾನದ ಸಂಕೇತವಾಗಿ ಇಂದಿಗೂ ಉಳಿದುಕೊಂಡಿದೆ. ರೈತ ಸಂಘದ ಫಲಕ: ಬಾಬಾಗೌಡರು ರೈತ ಸಂಘಟನೆ ಸಂದರ್ಭದಲ್ಲಿ ಪ್ರತಿಹಳ್ಳಿಯ ಅಗಸಿ ಬಾಗಿಲಿಗೂ ಒಂದೊಂದು ರೈತ ಸಂಘದ ಹಸಿರು ಫಲಕ ನೆಡುವ ಸಂಪ್ರದಾಯ ಆರಂಭಿಸಿದರು. ಅದರಲ್ಲಿ ಹಳ್ಳಿಗೆ ಬರುವ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಬ್ಯಾಂಕ್‌ ಅಧಿಕಾರಿಗಳಿಗೆ ಕೆಲವು ಖಡಕ್‌ ಎಚ್ಚರಿಕೆಗಳನ್ನು ಕೊಟ್ಟಿದ್ದರು. ರೈತ ಸಂಘದ ಅನುಮತಿ ಇಲ್ಲದೇ ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ನೋಟಿಸ್‌ ಕೊಡುವಂತಿಲ್ಲ, ಸಾಲ ಮರುಪಾವತಿಗೆ ರೈತರ ಆಸ್ತಿ ಹರಾಜು ಮಾಡುವಂತಿಲ್ಲ ಎಂಬೆಲ್ಲ ಸಂದೇಶಗಳು ಅದರಲ್ಲಿದ್ದವು. ಇವು ಸಹಜವಾಗಿಯೇ ಸಂಕಷ್ಟದಲ್ಲಿದ್ದ ರೈತರನ್ನು ಕಟ್ಟರ್‌ ರೈತ ಸಂಘದ ಅಭಿಮಾನಿಗಳಾಗಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next