Advertisement

ಕೃಷ್ಣ ಟಾಕೀಸ್‌ನಲ್ಲಿ ಹಾರರ್‌ ಸೌಂಡ್‌!

02:00 PM Mar 12, 2021 | Team Udayavani |

ಇಲ್ಲಿಯವರೆಗೆ ಸ್ಯಾಂಡಲ್‌ವುಡ್‌ನ‌ಲ್ಲಿ ಲವರ್‌ ಬಾಯ್‌ ಇಮೇಜ್‌ನಲ್ಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಟ ಅಜೇಯ್‌ ರಾವ್‌, ಮೊದಲ ಬಾರಿಗೆ ಸಸ್ಪೆನ್ಸ್‌ – ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ತುಂಬ ಸೀರಿಯಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಇತ್ತೀಚೆಗೆ “ಕೃಷ್ಣ ಟಾಕೀಸ್‌’ ಚಿತ್ರದ ಟ್ರೇಲರ್‌ ಬಿಡು ಗಡೆಯಾಗಿದ್ದು, ಮೊದಲ ನೋಟದಲ್ಲೇ ಅಜೇಯ್‌ ರಾವ್‌ ನೋಡುಗರನ್ನು ಬೆಚ್ಚಿ ಬೀಳಿಸಲು ಯಶಸ್ವಿಯಾಗಿದ್ದಾರೆ. “ಗೋಕುಲ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಗೋವಿಂದರಾಜು ಆಲೂರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಂದಷ್ಟು ನೈಜಘಟನೆಗಳನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವಿಜಯಾನಂದ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

“ಕೃಷ್ಣ ಟಾಕೀಸ್‌’ ಚಿತ್ರ ಮತ್ತು ಟ್ರೇಲರ್‌ ಬಗ್ಗೆ ಮಾತನಾಡಿರುವ ನಿರ್ದೇಶಕ ವಿಜಯಾನಂದ್‌, “ಇಡೀ ಟೀಮ್‌ ಎಫ‌ರ್ಟ್‌ನಿಂದ ಈ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಸುಮಾರು 3 ವರ್ಷಗಳ ಪರಿಶ್ರಮ, ಈಗ ಆಡಿಯನ್ಸ್‌ ಮುಂದೆ ಬರುತ್ತಿದೆ. ಸಸ್ಪೆನ್ಸ್‌ – ಥ್ರಿಲ್ಲರ್‌ ಶೈಲಿಯಲ್ಲೇ ಇದೊಂದು ಹೊಸ ಪ್ರಯತ್ನ. ಸಿನಿಮಾದಲ್ಲಿ ಹಾರರ್‌, ಫ್ಯಾಮಿಲಿ ಸೆಂಟಿಮೆಂಟ್‌, ಎಮೋಷನ್‌, ಆ್ಯಕ್ಷನ್‌ ಎಲ್ಲವೂ ಇದೆ. ಅಜೇಯ್‌ ರಾವ್‌ ತಮ್ಮ ಸಿನಿಮಾ ಕೆರಿಯರ್‌ನಲ್ಲೇ ಫ‌ಸ್ಟ್‌ ಟೈಮ್‌ ಇಂಥದ್ದೊಂದು ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ.

ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅಜೇಯ್‌ ರಾವ್‌, “ಮೊದಲ ಬಾರಿಗೆ ಈ ಸಿನಿಮಾದಲ್ಲಿ ಜರ್ನಲಿಸ್ಟ್‌ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಸಿನಿ ಕೆರಿಯರ್‌ನ 26ನೇ ಸಿನಿಮಾ. ಈ ಥರದ ಕ್ಯಾರೆಕ್ಟರ್‌ ಹಿಂದೆಂದೂ ಮಾಡಿರಲಿಲ್ಲ. ಸಿನಿಮಾ ಮತ್ತು ನನ್ನ ಪಾತ್ರ ಎರಡೂ ಆಡಿಯನ್ಸ್‌ಗೆ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ. “ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂಥ ಕಂಟೆಂಟ್‌ ಸಿನಿಮಾದಲ್ಲಿದೆ. ಸಿನಿಮಾ ಆಡಿಯನ್ಸ್‌ಗೂ ಇಷ್ಟವಾಗಲಿದೆ’ ಎನ್ನುವ ವಿಶ್ವಾಸದ ಮಾತುಗಳನ್ನಾಡುತ್ತಾರೆ  ನಿರ್ಮಾಪಕ ಗೋವಿಂದರಾಜು ಆಲೂರ್‌.

“ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ಅಪೂರ್ವ ಮತ್ತು ಸಿಂಧೂ ಲೋಕನಾಥ್‌ ನಾಯಕಿ ಯರಾಗಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ಸಿಟಿ ಲೈಫ್ನಲ್ಲಿರೋ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಿಂಧೂ  ಲೋಕನಾಥ್‌ ಮುಗ್ಧ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಪಾತ್ರವೊಂದರಲ್ಲಿ  ಚಿಕ್ಕಣ್ಣ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಶೋಭರಾಜ್‌, ಶ್ರೀನಿವಾಸ ಪ್ರಭು, ಪ್ರಮೋದ್‌ ಶೆಟ್ಟಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next